Wednesday 28 December 2011

ನೆನಪಿನ ಬುತ್ತಿಯಿಂದ:ಬನವಾಸಿಯ ಕೊಟ್ರೇಶಪ್ಪ ಗುರು ಬಸಪ್ಪ ದಾವಣಗೆರೆ.

ನಮ್ಮೂರ ಹಿರಿಯ ಜೀವಗಳಲ್ಲಿ ಒಂದಾಗಿದ್ದ ಶ್ರೀ ಕೊಟ್ರಪ್ಪ ಗುರು ಬಸಪ್ಪ ದಾವಣಗರೆ ಇವರು ಇಂದು ಬೆಳಗಿನ ಜಾವ 4:40 ರ ಹೊತ್ತಿನಲ್ಲಿ ಇನ್ನಿಲ್ಲವಾದರೆಂಬ ಸುದ್ಧಿ ಅವರ ಮಗ ಮಹೇಶ ಅವರ ಮೊಬೈಲ್ ಸಂದೇಶದ ಮೂಲಕ ಗೊತ್ತಾದಾಗ ಒಂದು ಕ್ಷಣ ಮೂಕನಾದೆ!ಕೆ.ಜಿ.ದಾವಣಗೆರೆಯವರು ನನ್ನ ಮನಸ್ಸಲ್ಲಿ ಸದಾಕಾಲ ಇರುವ ವ್ಯಕ್ತಿಯಾಗಿದ್ದರು.ನನ್ನ ಬದುಕಿನ ಹಲವು ಸಾಧನೆಗಳ ಮುನ್ನೋಟಕ್ಕೆ ಅವರು ಮಾರ್ಗದರ್ಶಿಯಾಗಿದ್ದರು.ಒಂದು ಕಾಲದಲ್ಲಿ ಬನವಾಸಿ ಸೀಮೆಯಲ್ಲಿ ವ್ಯಾಪಾರ- ವಹಿವಾಟು,ವಾಣಿಜ್ಯೋದ್ಯಮ ಮುಂತಾದ ವ್ಯವಹಾರಗಳಲ್ಲಿ ಶ್ರೀಯುತರು ಎತ್ತಿದ ಕೈಯಾಗಿದ್ದರು.ತುಂಬಾ ಬುದ್ಧಿವಂತರೂ ತೀಕ್ಷ್ಣ ದೃಷ್ಠಿಯುಳ್ಳವರೂ ಉತ್ತಮ ಸಂವಹನಶೀಲರೂ ಆಗಿದ್ದ ಅವರು ಬನವಾಸಿಯಲ್ಲಿ ತಮ್ಮದೇ ಆದ ಒಂದು ವ್ಯಕ್ತಿತ್ವದ ಛಾಪನ್ನು ಮೂಡಿಸಿಕೊಂಡಿದ್ದರು.ನನಗೆ ಗೊತ್ತಿದ್ದಂತೆ ಬನವಾಸಿಯಲ್ಲಿ ಪ್ರಥಮ ಬಾರಿಗೆ ಅವಲಕ್ಕಿ ಮತ್ತು ಶೇಂಗಾ ಎಣ್ಣೆಯ ಗಿರಣಿಯನ್ನು ಪ್ರಾರಂಭಿಸಿ ಬನವಾಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಶ್ರೇಯಸ್ಸು ಅವರದು.ಚುರುಕುತನದ ಬುದ್ಧಿವಂತಿಕೆಯ ವ್ಯಾಪಾರ ಜಾಣ್ಮೆಯು ಅವರ ಕುಟುಂಬವನ್ನು ಉನ್ನತಿಗೆ ತಂದಿತ್ತು.ಒಬ್ಬ ಯಶಸ್ವಿ ವ್ಯಾಪಾರೋದ್ಯಮಿಯಾಗಿದ್ದ ಅವರು ಕಾಲಬದಲಾದಂತೆ ಹಿನ್ನಡೆ ಅನುಭವಿಸಿದ್ದರು.ಅವರ ಚಿನ್ನದಂತ ಮಗ ಮಧು ಅಕಾಲಿಕ ಮರಣಕ್ಕೆ ತುತ್ತಾದ ಮೇಲಂತೂ ಅವರ ಇಡೀ ಕುಟುಂಬದ ಜಂಘಾಬಲವೇ ಉಡುಗಿ ಹೋಗಿತ್ತು.ಆತ 9ನೇ ತರಗತಿಯಲ್ಲಿದ್ದಾಗ ಶಿವರಾತ್ರಿಯ ಸಂದರ್ಭದಲ್ಲಿ ನಮ್ಮೂರ ವರದಾ ನದಿಯಲ್ಲಿ ಓರಿಗೆಯವರೊಂದಿಗೆ ಈಜಾಟಕ್ಕೆ ಹೋಗಿ ನೀರುಪಾಲಾದ ಸನ್ನಿವೇಷವನ್ನು ನೆನಸಿಕೊಂಡರೆ ಕರುಳು ಕಿತ್ತು ಬರುತ್ತದೆ.ಅತ್ಯಂತ ಬುದ್ಧಿವಂತ, ಚುರುಕಾದ ಮಧು ಸ್ವಭಾವತಃ ಸ್ನೇಹಶೀಲ,ಉದಾರ ಮನೋಭಾವನೆಯ ಸುರದೃಪಿ ಹುಡುಗನಾಗಿದ್ದ.ಅವನ ಸ್ಮರಣೆಗಾಗಿ ಗುಡ್ನಾಪುರದಲ್ಲಿನ ಪ್ರೌಢ ಶಾಲೆಗೆ  ಆತನ ಹೆಸರನ್ನು ಇಡಲಾಗಿದೆ.ಮಧು ಅಗಲಿದ ನಂತರ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಹೆಸರುವಾಸಿಯಾಗಿದ್ದ ಅವರ ಅಮ್ಮ ಮಂಗಳಾ ಅವರು ಸಾರ್ವಜನಿಕ ಜೀವನದಿಂದ ದೂರವಾದರು.ತಮ್ಮ ಉಳಿದ ಒಬ್ಬನೇ ಹಿರಿಮಗ ಮಹೇಶನ ಉತ್ಕರ್ಷೆಗೆ ಟೊಂಕಕಟ್ಟಿ ನಿಲ್ಲಬೇಕಾಯಿತು.ಮನೆತನದ ಹೊಣೆಗಾರಿಕೆ ಹಾಗೂ ಮಗನ ಭವಿಷ್ಯ ರೂಪಿಸುವುದಕ್ಕಾಗಿ ಮಂಗಳಮ್ಮನವರು ತಮ್ಮನ್ನು ಮುಡಿಪಾಗಿಸಿಕೊಂಡರು.ಅದಕ್ಕಾಗಿ ಅವರು ಕೆಲಕಾಲ ತಮ್ಮ ತವರು ಮನೆಯತ್ತ ಹೋಗಿ ಮಹೇಶನ ವಿದ್ಯಾಭ್ಯಾಸವೆಲ್ಲ ಮುಗಿದ ನಂತರ ವಿವಾಹ ನೆರವೇರಿಸಿ ಮಗನೊಂದಿಗೆ ವಾಸವಾಗಿದ್ದು ಬನವಾಸಿಗೆ ಬಂದು-ಹೋಗಿ ಮಾಡುತ್ತಿದ್ದರು.

ಇತ್ತ ಕೊಟ್ರೇಶಣ್ಣನವರು ಬನವಾಸಿಯಲ್ಲಿಯೇ ಉಳಿದು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.ಮೊದಲಿನಿಂದಲೂ ನಾನು ಶ್ರೀಯುತರ ಕುಟುಂಬದೊಂದಿಗೆ ಸ್ನೇಹ-ಸಂಪರ್ಕಹೊಂದಿದ್ದೆ.ನನ್ನ ಬಗ್ಗೆ ಇಡೀ ಕುಟುಂಬಕ್ಕೆ ಒಲವಿತ್ತು.ನನಗಾದರೋ ಅವರ ಬಗ್ಗೆ ವಿಶೇಷ ಅಭಿಮಾನ ಮತ್ತು ಖಾಳಜಿ ಇದ್ದುದೇಕೋ ನನಗೆ ತಿಳಿಯದು.ಯಾವ ಜನ್ಮದ ಸಂಬಂಧವೋ ಅದು! ಮಧು ಮತ್ತು ಕಿರಿ ಗೆಳೆಯ ಮಹೇಶ ಇಬ್ಬರಿಗೂ ನಾನು ಹತ್ತಿರದವನಾಗಿದ್ದೆ.ಬಾಲ್ಯದಲ್ಲಿ ನಾ ಮಧುಗೆ ಸೈಕಲ್ ಕಲಿಸಿದ ನೆನಪೂ ಇನ್ನೂ ಮಾಸಿಲ್ಲ.

ಅಗಲಿರುವ ಕೊಟ್ರೇಶಣ್ಣನವರು ನನ್ನ ಜೀವನದಲ್ಲಿ ಎಂದಿಗೂ ನೆನಪಾಗಿ ಉಳಿಯುವ ವ್ಯಕ್ತಿಯಾಗಿದ್ದಾರೆ.ಹತ್ತಾರು ವಿಷಯ,ವಿಚಾರಗಳಲ್ಲಿ ಅವರು ನನಗೆ ಮಾರ್ಗದರ್ಶಿಯಾಗಿ ಸ್ಪೂರ್ಥಿ ತುಂಬಿದ್ದರೆಂದು ಹೆಮ್ಮೆಯಿಂದ ಹೇಳಿಕೊಳ್ಳ ಬಲ್ಲೆ.ನನ್ನಲ್ಲಿನ ಛಲ,ಧೈರ್ಯ,ಬುದ್ಧಿವಂತಿಕೆ,ಸಾಹಸ ಪ್ರವೃತ್ತಿ,ಹೋರಾಟದ ಮನೋಭಾವ,ವಿಧೇಯತೆ ಇತ್ಯಾದಿ ಗುಣಗಳನ್ನು ಗುರುತಿಸಿದ್ದ ಅವರು ನನ್ನ ಏಳ್ಗೆ ಬಯಸುತ್ತಿದ್ದರು.ನನ್ನ ವಿದ್ಯಾ ಶ್ರಮವನ್ನು ಕೊಂಡಾಡುತ್ತಿದ್ದರು.ನೀನು ಬನವಾಸಿಯಲ್ಲಿದ್ದು ಸಾಧಿಸುವುದೇನಿದೆ?ಅಭಿಶಂಕರ್ ಅವರಂತೆ ಏನಾದರೂ ಮಾಡುವ ಶಕ್ತಿ ನಿನ್ನಲ್ಲುಂಟು.ಹೀಗಾಗಿಯೇ ನಿನ್ನನ್ನು ಅವರು ಗುರುತಿಸಿ ಜತನದಿಂದ ಕಾಪಾಡುತ್ತಿರುವರು.ಊರಿಗೆ ಉಪಕಾರ ಮಾಡೋದು ಹೆಣಕ್ಕೆ ಶೃಂಗಾರ ಮಾಡಿದಂತೆ.ಇಲ್ಲಿದ್ದು ಪುಡಾರಿ(ರಾಜಕಾರಣಿ)ಯಾಗುವುದಕ್ಕಿಂತ ಸರ್ಕಾರದ ಉನ್ನತ ಹುದ್ದೆಗೆ ಸೇರಿ ಆಗ ಊರ ಸೇವೆ ಮಾಡುವುದರಲ್ಲಿ ನಿನ್ನ ಶ್ರೇಯಸ್ಸಿದೆ ಎನ್ನುತ್ತಿದ್ದರು.

ನಾನು ಮತ್ತು ನನ್ನ ಆತ್ಮೀಯ ಗೆಳೆಯ ಪ್ರಕಾಶ ಹೆಗಡೆ ಇಬ್ಬರೂ ಕೊಟ್ರೇಶಣ್ಣನವರ ಮನೆಗೆ ಪ್ರತಿ ದಿನ ಸಂಜೆ ತಪ್ಪದೇ ಭೇಟಿ ನೀಡುತ್ತಿದ್ದೆವು.ಹಿರಿಯರಾದ ಅವರು ಅಪಾರ ಜೀವನಾನುಭವ ಹೊಂದಿದ್ದರು.ನಾನು ಯಾವುದೇ ವಿಷಯದೊಂದಿಗೆ ಚರ್ಚೆ ಮಾಡಿ ಮಹತ್ತರವಾದುದನ್ನು ಹೆಕ್ಕಿ ತೆಗೆಯುವ ಸ್ವಭಾವದವನು.ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ-ಕೆದಕುತ್ತಿದ್ದೆ.ಅವರು ನೀಡುವ ಉತ್ತರ,ಜಾಣ್ಮೆಯ ಮಾತುಗಳು ನಮ್ಮನ್ನು ಆಕರ್ಷಿಸುತ್ತಿತ್ತು.ಅದು 1993-94ನೇ ಇಸ್ವಿಯಾಗಿರಬೇಕು,ಊರಲ್ಲಿ ಶ್ರೀಮಂತರು-ಬಡವರು,ಕೊಟ್ರೇಶಣ್ಣ ಎಲ್ಲರೂ ಸೇರಿ 4-5 ಕುಟುಂಬಗಳಲ್ಲಿ ಮಾತ್ರ ದೂರವಾಣಿ ಸಂಪರ್ಕವಿತ್ತೆಂಬುದು ತಿಳಿದಿತ್ತು.ಅಂಥ ಸಂದರ್ಭದಲ್ಲಿ ಸೋಮು,ಪ್ರಕಾಶ ನೀವೇಕೆ ನಿಮ್ಮ ನಿಮ್ಮ ಮನೆಗೆ ದೂರವಾಣಿ ಸಂಪರ್ಕ ಪಡೆದುಕೊಳ್ಳಬಾರದು?ನಿಮ್ಮ ಬುದ್ಧಿ ವಿಕಾಸಗೊಳ್ಳಲು,ಸಂಪರ್ಕ ಬೆಳೆಯಲು ಅದು ಅವಶ್ಯಕ.ದುಡ್ಡು ಬರುತ್ತೆ ಹೋಗುತ್ತೆ.ಬಿಲ್ಲನ್ನು ಕಟ್ಟುವ ಜಾಣ್ಮೆ ನಿಮಗಿದೆ.ಸೋಮು ಬಡತನವೆಂದು ಕೊರಗಬೇಡ.ಮೆಟ್ಟಿ ನಿಲ್ಲುವ ಶಕ್ತಿ ನಿನಗುಂಟು.ನಾಳೆಯೇ ಅರ್ಜಿ ಸಲ್ಲಿಸಿ ಮನೆಗೊಂದು ದೂರವಾಣಿ ಹಾಕಿಸಿಕೊಳ್ಳಿ ಎಂದರು.ನಾವು ಹಿಂದೆ-ಮುಂದೆ ನೋಡದೇ ಹಾಗೆಯೇ ಮಾಡಿದೆವು.ಇಂದಿಗೂ ಆ ದೂರವಾಣಿಯು ಕೊಟ್ರೇಶಣ್ಣನವರನ್ನು ನೆನಪು ಮಾಡುತ್ತದೆ.

ನನ್ನ ವಿದ್ಯಾಭ್ಯಾಸ ಎಲ್ಲಾ ಮುಗಿದು ಸರ್ಕಾರಿ ಸೇವೆಗೆ ಸೇರಿ ವಿವಾಹಯೋಗವೂ ಒದಗಿ ಬಂದು ಅವರಿಗೂ ಆಮಂತ್ರಣ ನೀಡಿದ್ದೆ.ಅವರು ಸೊರಬದ ಉಳವಿಯಲ್ಲಿ ನಡೆದ ವಿವಾಹಕ್ಕೆ ಬಂದಿರಲಿಲ್ಲ.2-3ದಿನ ಬಿಟ್ಟು ಮನೆಗೆ ಬಂದು ಹರಸಿದರು.ಆಗ ನಮ್ಮ ಸಣ್ಣ ಹಂಚಿನ ಮನೆಯನ್ನೆಲ್ಲಾ ಒಮ್ಮೆ ಕಣ್ಣಾಡಿಸಿ ಸೋಮು ಏನು ನೀನು,ಈ ಮನೆಯಲ್ಲಿ ಗಾಳಿ-ಬೆಳಕು ಸರಿಯಾಗಿ ಬರುತ್ತಿಲ್ಲ.ಗಾಳಿ ಬೆಳಕು ಇಲ್ಲದ ಮನೆ ಸಮಸ್ಯೆಗಳ ಆಗರವಾಗುವುದು.ತಡಮಾಡದೇ ಈ ಮನೆಯನ್ನು ಕೆಡವಿ ಯೋಗ್ಯತೆಯನುಸಾರ ಹೊಸ ಮನೆ ಕಟ್ಟು ಅಂದರು.ನಾನು ನೀವು ಹೇಳಿದ್ದು ಏನು ಮಾಡಿಲ್ಲ ಹೇಳಿ ಎಂದೆ.ಅಷ್ಟೇ ಮದುವೆಯಾಗಿ ಮೂರು ವರ್ಷಕ್ಕೇ ಗುಡಿಸಲನ್ನು ನೆಲಸಮ ಮಾಡಿ ಬ್ಯಾಂಕ್ ಸಾಲ ಪಡೆದು ಹಂತ ಹಂತವಾಗಿ ಕಟ್ಟುತ್ತಾ ಪುಟ್ಟದೊಂದು ಮನೆ ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.ಗೃಹ ಪ್ರವೇಶ ಮಾಡಿ ವಾಸವಾಗಿರಬೇಕು ಅನ್ನುವಷ್ಟರಲ್ಲಿ ಮಗ ಮಹೇಶನಿಂದ ಇಂದು ಅವರ ಸಾವಿನ ಸುದ್ಧಿ ಕೇಳಿದೆ.ಈಗಲೂ ಮನೆಯನ್ನು ನೋಡಿದಾಕ್ಷಣ ಈ ಮನೆ ಕಟ್ಟಲು ಕೊಟ್ರೇಶಣ್ಣನವರೇ ಸ್ಪೂರ್ಥಿಯೆಂದು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ.
ನಮಗೂ ಮತ್ತು ಎಲ್ಲ ಮಾನವರಲ್ಲೂ ಇರುವಂತೆ ಕೊಟ್ರೇಶಣ್ಣನವರಲ್ಲೂ ಹಲವು ದೌರ್ಭಲ್ಯಗಳಿದ್ದವು.ಆ ದೌರ್ಭಲ್ಯಗಳೇ ಅವರ ಕೊನೆಗಾಲದಲ್ಲಿ ಅವರನ್ನು ಚಿಂತೆಗೀಡುಮಾಡಿರುವುದಂತೂ ಸತ್ಯ.ಅಂತ ಕೆಲ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು.ಅದೇನೇ ಇದ್ದರೂ ನಾವು ಅವರನ್ನು ಮರೆಯಲು ಸಾಧ್ಯವಿಲ್ಲ.ನಾನು ಮತ್ತು ಗೆಳೆಯಾ ಪ್ರಕಾಶ ಭೇಟಿಯಾದಾಗಲೆಲ್ಲ ಅವರೊಡನೆ ಆಳವಾದ ಚಿಂತನ-ಮಂಥನ ನಡೆಸುತ್ತಿದ್ದೇವು.ನನ್ನ ಬಡತನವಾಗಲೀ ಅವರ ಸಿರಿತನ-ವ್ಯಥೆಯಾಗಲೀ ಯಾವುದೂ ನಮ್ಮ ಬಾಂದವ್ಯಕ್ಕೆ ಅಡ್ಡಿಯಾಗಿರಲಿಲ್ಲ.ಜೀವನದಲ್ಲಿ ಒಮ್ಮೆಯೂ ಅವರಿಂದ ನಾ ಯಾವುದೇ  ಸಂಪನ್ಮೂಲ ಸಹಾಯ ಪಡೆದಿಲ್ಲ.ಅವರ ಜ್ಙಾನ ಮತ್ತು ಮಾರ್ಗದರ್ಶನದಿಂದ ಮಾತ್ರ ನಾ ವಂಚಿತನಾಗಿಲ್ಲ. ಜೋತಿಷ್ಯ,ತತ್ವಜ್ಙಾನ,ಧರ್ಮಶಾಸ್ತ್ರಗಳಲ್ಲಿ  ಅವರಿಗೆ ಜ್ಙಾನವಿತ್ತು. ಹುಟ್ಟು ಸಾವು,ಜೀವನ,ಮದುವೆ,ಹೆಂಡತಿ,ಮಕ್ಕಳು ಇತ್ಯಾದಿ ಮನೋವೈಜ್ಙಾನಿಕ ಅಂಶಗಳ ಮೇಲೆ ಅವರು ಬೆಳಕು ಚೆಲ್ಲುತ್ತಿದ್ದರು.ಸರ್ವಜ್ಙನ ತತ್ವ ನುಡಿಗಳು ಅವರ ಬಾಯಲ್ಲಿ ನಲಿದಾಡುತ್ತಿದ್ದವು.
ಸೇವೆಗೆ ಸೇರಿ ಬನವಾಸಿ ಬಿಟ್ಟ ನಂತರ ಅವರೊಡನಿದ್ದ ಸಂಪರ್ಕ ಕಡಿಮೆಯಾಗುತ್ತಾ ಹೋಯಿತು.ಊರಿಗೆ ಹೋದಾಗ ಒಮ್ಮೊಮ್ಮೆ ಭೇಟಿ ನೀಡಿ ಆರೊಗ್ಯ ವಿಚಾರಿಸುತ್ತಿದ್ದೆ.ಮಂಗಳೂರಿಗೆ ಬಂದ ನಂತರ ಬನವಾಸಿ ಬಹಳ ದೂರವೆನಿಸಿದೆ.ಅವರು ಇನ್ನಿಲ್ಲವೆಂಬ ವಾರ್ತೆ ತಿಳಿದ ನಂತರ ತೇವಗೊಂಡೆ.ನನ್ನ ಮತ್ತು ಅವರೊಡನಿದ್ದ  ಆ ಸಂಪರ್ಕದಲ್ಲಿನ ಒಡನಾಟದ ಅನುಭವದ ಮಾತುಗಳ ಮೂಲಕ ಆ ಹಿರಿಯ  ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.
  
= ಬನವಾಸಿ ಸೋಮಶೇಖರ್,ಮಂಗಳೂರು.
   28-12-2011

Monday 26 December 2011

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ.

"1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು,ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು.ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು.ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ.ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ.ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ.ನನ್ನ ಪಾಳಿ ಬಂದಾಗ ಅವರೊಡನೆ ನನ್ನ ತಾಪತ್ರಯ ಹೇಳಿಕೊಳ್ಳಬೇಕೆಂಬಷ್ಟರಲ್ಲಿ ದುಃಖ ಉಮ್ಮಳಿಸಿ ಬಿಕ್ಕಿ ಬಕ್ಕಿ ಅತ್ತು ಬಿಟ್ಟೆ.ಯಾರು ನೀನು? ಎಲ್ಲಿಂದ ಬಂದಿದ್ದಿ? ಏನು ನಿನ್ನ ವಿಷಯ? ಎಂದೆಲ್ಲ ಜೋರು ಧ್ವನಿಯಲ್ಲಿ ಪ್ರಶ್ನಿಸಿದಾಗ ನಾ ದಂಗಾಗಿ ಹೋಗಿದ್ದೆ! ನಾನು ಬನವಾಸಿಯಿಂದ ಮನೆ ಬಿಟ್ಟು ಬಂದ ವಿಷಯವನ್ನೂ ನನ್ನ ವೃತ್ತಾಂತವನ್ನೂ ತಿಳಿಸಿ ನನಗೊಂದು ಕೆಲಸ ಕೊಡಿಸಬೇಕೆಂಬ ಬೇಡಿಕೆ ಇಟ್ಟಿದ್ದೆ. ಓದುವುದು ಬಿಟ್ಟು ಇಲ್ಲಿಗೇಕೆ ಬಂದೇ? ಬೆಂಗಳೂರಲ್ಲೇನಿದೆ? ಇತ್ಯಾದಿಯಾಗಿ ಮೇಲಿಂದ ಮೇಲೆ ನನ್ನ ಪ್ರಶ್ನಿಸಿದ್ದರು.ಯಾವುದೇ ಕಾರಣಕ್ಕೂ ಓದುವುದನ್ನು ನಿಲ್ಲಿಸಕೂಡದು,ಸೀದಾ ಬನವಾಸಿಗೆ ಬಸ್ ಹತ್ತಬೇಕೆಂದು ತಾಕೀತು ಮಾಡಿದರು.ನನ್ನ ಬಗ್ಗೆ ಅತೀವ ಕಾಳಜಿ ವಹಿಸಿ ಪಕ್ಕದಲ್ಲಿಯೆ ಇದ್ದ ಆಪ್ತ ಕಾರ್ಯದರ್ಶಿ ವಿಜಯ ಪ್ರಕಾಶ (ಈಗವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿ.ಇ.ಓ.)ಅವರಿಗೆ ಕಿವಿಯಲ್ಲಿ ಏನೇನೋ ಹೇಳಿದರು.ನನ್ನನ್ನು ಒಳಗೆ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ಸೂಚಿಸಿ ಚಹಾ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು.ನಂತರ ವಿಜಯ ಪ್ರಕಾಶ್ ಅವರು ನನ್ನ ಕೈಗೆ ಆಗ ಎರಡು ಸಾವಿರ ಇತ್ತು ಯಾವುದೇ ಕಾರಣಕ್ಕೂ ಮತ್ತೆ ಬೆಂಗಳೂರಿಗೆ ಬರಬೇಡ,ಸಾಹೇಬರು ನಿನ್ನ ಬಗ್ಗೆ ತುಂಬಾ ಅನುಕಂಪಿತರಾಗಿರುವರು.ಅವರ ಮಾತನ್ನು ನಡೆಸಬೇಕೆಂದರೆ ನೀನು ಎಷ್ಟೇ ಕಷ್ಟ ಬಂದರೂ ಓದುವುದನ್ನು ಬಿಡಬೇಡ ಎಂದು ಹೇಳಿ ಬನವಾಸಿ ಬಸ್ ಅನ್ನು ಹತ್ತಿಸಿದ್ದರು.ನಂತರ ನನ್ನ ಬದುಕಿನ ದಿಕ್ಕೇ ಬದಲಾಯಿತು.ಮತ್ತೆಂದಿಗೂ ಅವರ ಬಳಿ ಸಹಾಯಕ್ಕಾಗಿ ನಾ ಹೋಗಲಿಲ್ಲ.ಅಂದು ಅವರು ಹಾಗೆ ನಡೆದು ಕೊಳ್ಳದೇ ಹೋಗಿದ್ದರೆ ನಾನು ಎಮ್.ಎ.,ಬಿ.ಇಡಿ ಸ್ನಾತಕೋತ್ತರನಾಗಲು ಸಾಧ್ಯವಿರಲಿಲ್ಲ.ನನ್ನ ವ್ಯಕ್ತಿತ್ವ ಅರಳುತ್ತಿರಲಿಲ್ಲ.ನಾನ್ಯಾವುದೋ ಬಾರಲ್ಲೋ ಹೋಟೇಲಿನಲ್ಲೋ ಒಂದು ಚಾಕರಿ ಮಾಡಿಕೊಂಡಿರಬಹುದಿತ್ತು ಅಷ್ಟೇ.ಅವರ ಖಾಳಜೀ ತುಂಬಿದ ಹಾರೈಕೆ ನನ್ನನ್ನು ಓದಿಗೆ ಪ್ರೇರೇಪಿಸಿತು,ಸ್ಪೂರ್ಥಿ ತುಂಬಿತು.ಎಂಥ ಕಷ್ಟ ಬಂದರೂ ವಿದ್ಯೆಯಿಂದ ಹಿಂದೆ ಸರಿಯಬಾರದೆಂದು ನಿರ್ಧರಿಸಿದೆ.ಬೆಟ್ಟದಂಥ ಕಷ್ಟಗಳನ್ನು ಎದುರಿಸಿದೆ.ಓದಿ ನೌಕರಿ ಪಡೆಯುವಂತಾಯಿತು.ಕರ್ನಾಟಕದ ಮುಖ್ಯಮಂತ್ರಿಯಿಂದ ಪ್ರೇರಣೆ ಹೊಂದಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿರುವೆ.ನನ್ನ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಸಂಸಾರಿಯಾಗಿದ್ದುಕೊಂಡು ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇನೆ.ಬಂಗಾರಪ್ಪಾಜೀ ನಾ ನಿಮ್ಮನ್ನು ಮರೆಯಲುಂಟೇ?ನನ್ನೀ ನುಡಿ ನಮನದ ಮೂಲಕ ತಮ್ಮ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ."
= ಬನವಾಸಿ ಸೋಮಶೇಖರ್,ಮಂಗಳೂರು.

Tuesday 20 December 2011

‎'ಕದಂಬ ವೈಭವ"

ವೈಜಯಂತಿ ಪುರದರಸ ಮಯೂರ ವರ್ಮನೆ
ಸಿರಿಗನ್ನಡಾಧಿಪತ್ಯ ಕಟ್ಟಿದ ಓ ದೊರೆಯೇ....
ಪಲ್ಲವರ ಸದೆಬಡಿದ ಕದಂಬ ಕುಲತಿಲಕ

ನೀ ಕರುನಾಡ ವೈಭವದ ವರಧಾತ!

ಛಪ್ಪನ್ನೈವತ್ತಾರು ದೇಶಗಳಲ್ಲೂ
ಹಬ್ಬಿತ್ತು ನಿನ್ನಯ ಕೀರ್ತಿ ಪತಾಕೆ
ಕರ್ನುಡಿಯ ತೊಟ್ಟಿಲ ತೂಗಿದ ಕಂದ ನೀ
ಜೋಗುಳದ ಹರಕೆಯನು ಮೆರೆಸಿದ ರಾಯನು.!!

ಹೂತು ಹೋಗಿದ್ದ ಕದಂಬ ವೈಭವದ
ಇತಿಹಾಸ ಕೆದಕಿದರು ಅಭಿಶಂಕರರು
ಹತ್ತೋಲೆ ಬರೆದರು ಹಗಲಿರುಳು ದುಡಿದರು
'ಲೋಕ ಧ್ವನಿ'ಯಾಗಿ ನಾಡನ್ನು ಬೆಳಗಿದರು.!!!

ವರದಾ ತೀರದಲಿ ನೆಲೆಸಿರುವ ಈಶ
ಪಾರ್ವತಿಯ ಪ್ರಾಣ ನೀ ಮಧುಕೇಶ
ಸಂಪನ್ನಗೊಂಡಿತು ಅಷ್ಟಬಂಧದಲಿ
ಮಧುಕೇಶ್ವರ ನಿನ ಮಹಿಮೆ ಬಲು ಹಿರಿಮೆ!!!

ಅಲ್ಲಮ್ಮ ಪ್ರಭುಗಳು ಮೆಟ್ಟಿದ ನಾಡು
ಹರ್ಡೇಕರ ಮಂಜಪ್ಪನವರು ಹುಟ್ಟಿದ ಊರು
ಚಾಮರಸರು ಪ್ರಭುಲೀಲೆ ಬರೆದರು
ಪಂಪಕಾವ್ಯ ಹಾಡಿತು-ಪಾಡಿತು!!!

ಕನ್ನಡ ಸಂಸ್ಕೃತಿಯ ತೊಟ್ಟಿಲು ಬನವಾಸಿ
ಪ್ರಾಚೀನ ಪ್ರಖ್ಯಾತಿ ಹೊಂದಿಹುದು ವೈಜಯಂತಿ
ಮಧು ಮಹೋತ್ಸವವು ಕದಂಬೋತ್ಸವವಾಗಿ
ಸಾಗುತಿಹುದು ನುಡಿತೇರು ಈ ಪರಿಯಾಗಿ!!!

ದತ್ತರಾಜ ಯೋಗೀಂದ್ರರು ತಪವ ಗೈದಿಹರು
ಸಿದ್ಧಲಿಂಗ ಸ್ವಾಮಿಗಳು ಶತಾಯುಷಿಗಳಾದರು
ಹಕ್ಕಲು ಮಾರಿಕಾಂಬೆ ನಾಡಲ್ಲಿ ನೆಲೆಸಿಹಳು
ಬನವಾಸಿ ಭಾಗ್ಯದಾ ಬನಸಿರಿಯೇ!!!!

   = ಬನವಾಸಿ ಸೋಮಶೇಖರ್.

Sunday 11 December 2011

ಸಾಹಿತ್ಯ ಸಮ್ಮೇಳನ ಸಂಘಟಕರು,ಪರಿಷತ್ತು ಹೊಣೆಗಾರರು ಅಚಾತುರ್ಯದಿಂದ ಮುಕ್ತವಾಗಿರಲಿ.

"ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸುಳ್ಳಲ್ಲ.ಎಲ್ಲ ಕಡೆ ಇರುವಂತದ್ದೇ ಈ ಪ್ರಲಾಪ.ಆದಾಗ್ಯೂ ನಮ್ಮ ಸಾಹಿತ್ಯ ಸಮ್ಮೇಳನ ಸಂಘಟಕರಲ್ಲಿ ಇಂಥ ಲೋಪವಾಗಿರುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಮೂಡಿಸುವುದು.ರಾಜಕೀಯ ಯಾವ ಕ್ಷೇತ್ರವನ್ನೂ ಬಿಡದೇ ನುಂಗಿ ಹಾಕಿರುವುದು ವಿಪರ್ಯಾಸ.ನೋಡಿ ಈ ದಿನ ಕೇಂದ್ರ ಸಚಿವರಾದ ಶ್ರೀ ವೀರಪ್ಪ ಮೊಯಿಲಿ ಅವರ ಮಾತನ್ನು ಪ್ರಜಾವಾಣಿಯಲ್ಲಿ ಅವಲೋಕಿಸಿದೆ.ಅದನ್ನು ನೀವೇ ಓದಿ"ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನಗೆ ಆಹ್ವಾನ ನೀಡಿಲ್ಲ.ಖುದ್ದಾಗಿ ಆಹ್ವಾನಿಸುವುದು ಬೇಡ,ಆಹ್ವಾನ ಪತ್ರಿಕೆ ಬಂದಿದ್ದರೂ ಹೋಗದೇ ಉಳಿಯುತ್ತಿರಲಿಲ್ಲ"ಇದಕ್ಕೇನೆನ್ನಬೇಕು ನೀವೇ ಹೇಳಿ!ಆಮಂತ್ರಣ ಕಳಿಸುವ ವ್ಯವಧಾನವೂ ಇಲ್ಲದ ಸಮ್ಮೇಳನ ಸಂಘಟಕರು,ಸಾಹಿತ್ಯ ಪರಿಷತ್ತಿನ ರುವಾರಿಗಳು ಅದೇನು ಮಾಡುತ್ತಿದ್ದರು?ಇಂಥ ಅದೆಷ್ಟು ಮಹನೀಯರಿಗೆ ಆಮಂತ್ರಣ ಕಳಿಸಿಲ್ಲವೋ ಗೊತ್ತಿಲ್ಲ.ಸರ್ಕಾರದ ದುಡ್ಡಿನಿಂದ ನಡೆವ ಜಾತ್ರೆಗೇ ಈ ಗತಿಯಾದರೆ? ಛೇ! ನಿಜಕ್ಕೂ ಬೇಸರ ಬರುತ್ತದೆ.ಕನ್ನಡ ಸರಸ್ವತಿಯ ಮಕ್ಕಳು ರಾಜ್ಯ,ಅಂತರಾಜ್ಯ,ದೇಶ ವಿದೇಶಗಳೆಲೆಲ್ಲ ಹಬ್ಬಿಕೊಂಡಿದ್ದಾರೆ.ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿದ್ದಾರೆ.ಸಮ್ಮೇಳನ ಇಡೀ ನಾಡ ಮಕ್ಕಳದು.ಯಾರದೋ ಸ್ವಂತದ್ದಲ್ಲ.ಕೊನೇ ಪಕ್ಷ ಆಮಂತ್ರಣ ಪತ್ರ ಹೋದರೂ ಸಾಕು ವಾಗ್ದೇವಿಯ ಮಕ್ಕಳು ಪುಳಕಿತರಾಗುವರು.ಅಂತ ಇಚ್ಛಾಶಕ್ತಿ,ನಿಷ್ಪಕ್ಷಪಾತ ಮನೋಭಾವ,ಸಹೃದಯಿ ಚಿಂತನೆ ಅಗತ್ಯ ಅಷ್ಟೇ.ಮುಂದಿನ ದಿನಗಳಲ್ಲಿ ಇಂಥ ಅಚಾತುರ್ಯಗಳಾಗದಿರಲಿ ಎಂಬುದೇ ಆಶಯ."
= ಬನವಾಸಿ ಸೋಮಶೇಖರ್.

Wednesday 7 December 2011

"ಉರಿವ ನಾಲಿಗೆಯಾಗಬೇಡ" ವೆನ್ನುವ ಮೂರ್ನಾಡರ ಗಾಳಿಗೆ ಪ್ರಾರ್ಥನೆ ಎಂಬ ಕವಿತೆ.

"ಅದ್ಭುತವಾದ ಗಾಳಿಯ ಅಮೂರ್ತ ಪ್ರತಿಮೆಯನ್ನೇ ಒಂದು ಸುಂದರ ಕವನಕ್ಕೆ ವಿಷಯವಸ್ತುವಾಗಿ ಸಮರ್ಥವಾಗಿ ಬಳಸಿಕೊಂಡಿರುವ ಕವಿ ಮನಸ್ಸು ಘಾಸಿಗೊಂಡಂತೆ ಭಾಸವಾಗಿದೆ.ಅಂತಃಕರಣದಲ್ಲಿ ಅವ್ಯಕ್ತವಾಗಿ ಹೃದಯದಾಳಕ್ಕೆ ಲಗ್ಗೆ ಇಟ್ಟ ನೋವಿನ ಯಾತನೆ,ಆ ಮೂಲಕ ತನ್ನನ್ನೇ ಸಂತೈಸಿಕೊಳ್ಳುವ ರೀತಿಯಲ್ಲಿ ಉರಿವ ನಾಲಿಗೆಯಾಗಬೇಡವೆನ್ನುವ ಪರಿ ಹೃದಯ ಕಲುಕುತ್ತದೆ.ಕಪ್ಪಿಟ್ಟ ಮೋಡದ ಎದೆ ಸವರಿ ಚುಂಬಿಸು ಸುರಿಯಲಿ ಒಂದು ಹನಿ ಇಳೆಗೆ ಎನ್ನುವ ಕವಿಯ ಕೋರಿಕೆ ಭಾವವಂತೂ ಅತೀ ಮಧುರವಾಗಿದೆ.ಉರಿಯುತ್ತಿರುವ ಮನೋಜ್ವಾಲೆಗೆ ತಂಪೆರೆಯುವ ತಂಗಾಳಿಯಾಗಿ ಹೃದಯ ಸ್ಪರ್ಷಿಸಿ ವೇದನೆ ಅಳಿಯಲಿ ಎಂಬ ಮನದಿಂಗಿತ ಕವಿಯದಾಗಿದೆ.ದ್ವೇಷ,ಅಸೂಯೇ ಯಾವುದೂ ಮನಸ್ಸನ್ನು ಹಗುರಾಗಿಸದು,ಅಹಂಕಾರ,ಸೊಕ್ಕಿನಿಂದ ಏನನ್ನೂ ಸಾಧಿಸಲಾಗುವುದಿಲ್ಲ ಆದ್ದರಿಂದ ಎಲೆ ಗಾಳಿಯೇ ಇವೆಲ್ಲವನ್ನೂ ಇನ್ನಿಲ್ಲವಾಗುವಂತೆ ಮನವಪ್ಪಳಿಸಿ ಸ್ನೇಹ ಮಾಧುರ್ಯದ ಸವಿ ನೆನಪು ಸದಾ ಇರುವಂತೆ ಚುಂಬಿಸು,ಆಲಂಗಿಸು ಬಂಧುತ್ವದ ನಿರಂತರ ಸಾಂಗತ್ಯ ಉಳಿಯುವ ಹಾಗೆ ಮನವ ಸ್ಪರ್ಷಿಸು ಎನ್ನುವ ಕವಿ ಮನಸು ಕೋಮಲವಾಗಿದೆ.ಯಾರ ವೈರತ್ವವೂ ಬೇಡ,ಸ್ನೇಹವೇ ಸದಾ ಬೆಳಗಲಿ ಎಂಬ ಆಶಯ ಕವಿಯದಾಗಿದೆ.ಸುಂದರ ಮತ್ತು ಅರ್ಥಪೂರ್ಣ ಕವನ.ತುಂಬಾ ಇಷ್ಟವಾಯಿತು."


ಕವನ ಹೀಗಿದೆ
========
 
ಗಾಳಿಯೇ ಬೇಡ
ಬಿರುಗಾಳಿಯಾಗಬೇಡ  !
ಉಸಿರಾಡೋ ಎದೆಗೆ ನುಗ್ಗಿ
ಭುಸುಗುಟ್ಟಬೇಡ  !
ಬೇಗುದಿ ಬೆಂಕಿಗೆ
ಜೊತೆ ಸೇರಬೇಡ !

ಕಪ್ಪಿಟ್ಟ ಮೋಡದ
ಎದೆ ಸವರಿ ಚುಂಬಿಸು
ಸುರಿಯಲಿ ಒಂದು ಹನಿ ಇಳೆಗೆ !
ಆಗಸದ ಮೊಗಕೆ
ತಿಳಿ ಬಂದು ಅರಳಲಿ
ಸದಾ ಬೀಸು ನಿನ್ನ ತಂಪು !

ಶಾಂತಿಯ ಹೆಜ್ಜೆಗಳು
ಬೀದಿಗೆ ನಡೆಯಲಿ
ತೆರೆಯಲಿ ನಿನ್ನ ಸ್ನೇಹದ ಭಾಹು !
ಬೀದಿಯ ದೀಪಗಳು
ದಾರಿಯ ತೆರೆಯಲಿ
ಕಾಪಿಡಲಿ ನಿನ್ನದೇ ಉಸಿರು !

ಲೋಕದ ಮಾತಿಗೆ
ಭುಗಿಲೆದ್ದ ಜ್ವಾಲೆಗೆ
ಮೋಡಗಳ ಗುಡುಗಿಸಿ ಕರೆಯೇ !
ನಗುವಾಗಿ ಮಿಂಚಿಗೆ
ಮಳೆಯಾಗಿ ಜೊತೆಗೆ
ಉರಿ ಬೆಂಕಿ ಎದೆಗಳ ತಣಿಸೆ !

ಅಹಂ ಗೋಡೆಗಳ
ಮೇಲೊಂದು ದೀಪ
ಆರದಿರಲಿ ನಿನ್ನ ಬಿರುಸು ನುಡಿಗೆ !
ಬಿರುಕಿಟ್ಟ ಗೋಡೆಗಳ
ಬಿರುಕೊಳಗೆ ನುಗ್ಗಿ ಬಾ
ಬೆಸೆಯಲಿ ಬಂಧಗಳು ಜಗಕೆ !

ಗಾಳಿಯೇ ಬೇಡ
ಬೇಡವೇ ಬೇಡ
ಕಿಚ್ಚುಗಳ ಘರ್ಷಿಸಬೇಡ
ನೋವುಗಳ ತುಂಬಿಸಿ
ದ್ವೇಷಗಳ ಎಬ್ಬಿಸಿ
ಬೆಂಕಿಗೆ ನಾಲಗೆಯಾಗಬೇಡ..!
-ರವಿ ಮೂರ್ನಾಡು

Tuesday 6 December 2011

ರಾಜನೀತಿ ಕುರಿತು.

" ಯಾವುದೇ ಪಕ್ಷಮೋಹವಿಲ್ಲ.ಪ್ರಜಾಪ್ರಭುತ್ವ,ಸಮಾನತೆ,ಜಾತ್ಯಾತೀತ ತತ್ವಗಳಲ್ಲಿ ನಂಬಿಕೆ.ಪ್ರತಿಯೊಬ್ಬ ದೇಶವಾಸಿಗೂ ರಾಜಕೀಯ ಬದ್ಧತೆ,ಇಚ್ಛಾಶಕ್ತಿ ಇರಲೇಬೇಕು.ಪ್ರಜಾಪ್ರಭುತ್ವಕ್ಕೆ ನಾಗರೀಕನೇ ಬೇರು,ಉಸಿರು,ಜೀವಾಳ.ಸಾರ್ವಭೌಮ ಪರಮಾಧಿಕಾರ ಹೊಂದಿರುವ ಪ್ರತಿಯೊಬ್ಬ ಪೌರನೂ ರಾಜನೀತಿಯ ವಾರಸುದಾರ.ಜವಾಬ್ದಾರಿಯಿಂದ ನುಣುಚಿಕೊಂಡರೆ ನಮ್ಮನ್ನು ನಾವೇ ಅಧಃಪತನಕ್ಕೆ ಈಡುಮಾಡಿಕೊಂಡಂತೆ.ಮೌಲ್ಯಾಧಾರಿತ,ತತ್ವಾಧಾರಿತ,ಸಾಮಾಜಿಕ ಬದ್ಧತೆಯನ್ನು ಹೊಂದಿರುವ ಯಾವುದೇ ಸಂಸ್ಥೆ,ವ್ಯಕ್ತಿಗಳನ್ನು ಬೆಂಬಲಿಸುವುದು,ಪರಮಾಧಿಕಾರ ಚಲಾಯಿಸುವುದು ನಾಗರೀಕ ಹಕ್ಕು ಮತ್ತು ಕರ್ತವ್ಯವೆಂಬುದು ನನ್ನ ಭಾವನೆ.ಆದ್ದರಿಂದ ರಾಜಕೀಯ ನಮಗೇಕೆ ಎಂದು ಮೂಗುಮುರಿದು, ದೂರಸರಿದು ಪ್ರಜಾಪ್ರಭುತ್ವ ಯಾರದೋ ಪಟ್ಟಭದ್ರರ ಪಾಲಾಗಲು ಬಿಡಬೇಡಿ.ನಾಗರೀಕ ಹಕ್ಕು ಮತ್ತು ಕರ್ತವ್ಯಪಾಲನೇ ನಮ್ಮ ಉಸಿರಾಗಿರಲಿ."

Saturday 3 December 2011

ಮಡೆ ಸ್ನಾನ

"ಮಂಡೆ ಬಿಸಿ ಬಿಸಿಯಾಗುವ ವಾತಾವರಣವೇ ನಿತ್ಯ ಸೃಸ್ಟಿಯಾಗುತ್ತಿರುವಾಗ ಯಾರಿಗೇಕೆ ಎಂದು ಪ್ರಶ್ನಿಸುವ ಮೂಲಭೂತವಾದದ ಮಾತೇ ಮನಸಿಗೆ ಘಾಸಿ ಮೂಡಿಸುತ್ತಿದೆ.ನಿತ್ಯ ಜೀವನದಲ್ಲಿನ ಹತ್ತಾರು ವೇಷಗಳು,ನೂರಾರು ಸಂಪ್ರದಾಯ,ನಂಬಿಕೆ ಎಂದೆಲ್ಲಾ ಬಿಂಬಿಸಿ ಸಮಾಜವನ್ನು ಅಜ್ಙಾನ,ಅಂಧಕಾರ,ಮೌಡ್ಯತೆಯತ್ತ ಮತ್ತಷ್ಟು ಕೊಂಡೊಯ್ಯುವಂತೆ ಆ ಮೂಲಕ ಪಟ್ಟ ಭದ್ರರ ಸಿದ್ಧಾಂತ,ತತ್ವಗಳ ಬೇರುಗಳು ಗಟ್ಟಿಯಾಗುವಂತೆ ಮಾಡುತ್ತಿರುವ ವ್ಯವಸ್ಥಿತ ಹುನ್ನಾರುಗಳನ್ನು ನೋಡಿಯೂ ನೋಡದವರಂತೆ ಕಣ್ಮುಚ್ಚಿಕುಳಿತು ಕೊಳ್ಳಬೇಕೆ?ಇನ್ನೂ ಬಹಳ ಕಾಲ ಇದೇ ವ್ಯವಸ್ಥೆ ಇರುವುದೆಂಬ ಭರವಸೆ ಬೇಡ.ವೈಚಾರಿಕ ತಿಳುವಳಿಕೆ,ಸಂಶೋಧನಾ ಮನೋಭಾವ,ವೈಜ್ಞಾನಿಕತೆಗಳೆಲ್ಲದರ ಪರಿಣಾಮ ಕಟ್ಟಕಡೆಯ ಮನುಷ್ಯನೂ ಜಾಗೃತನಾಗುವಂತೆ ಆಗಿದೆ.ಕಾಲವೂ ಬದಲಾಗುತ್ತಿದೆ.ಅಪ್ಪ ನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳಬೇಕಿದ್ದ ವ್ಯವಸ್ಥೆಯ ಅಟ್ಟಹಾಸಕ್ಕೆ ಕೊನೆಮೊಳೆ ಹೊಡೆಯುವ ಕಾಲ ಬಂದಿದೆ"
('ಕೆಲವರಿಗೇಕೆ ಮಡೆ ಸ್ನಾನದ ಮಂಡೆ ಬಿಸಿ' ಎಂದು ಪ್ರಶ್ನಿಸಿ ಬರಹಗಾರರೋರ್ವರು ಕನ್ನಡ ಬ್ಲಾಗಿನಲ್ಲಿ ಬಿತ್ತರಿಸಿದ ಲೇಖನಕ್ಕೆ ನೀಡಿದ ಪ್ರತಿಕ್ರಿಯೆ ಇದು.)