Friday 18 November 2011

ಕವಿ ಅಬ್ದುಲ್ ಸತ್ತಾರ್ ಕೊಡಗು ಅವರ " ಬರೀ ಮಣ್ಣು ಗುಡ್ಡೆ" ಕವನದ ಬಗ್ಗೆ.

"ಇಡೀ ಕವನ ಚಿಂತನೆಗೆ ಗ್ರಾಸವೊದಗಿಸಿ ಜಾಗೃತಿಯ ಸಂದೇಶವನ್ನು ಮೈದೋರಿ ನಿಂತಿದೆ.ಒಂದು ಅವಿಸ್ಮರಣೀಯ ಹೆಮ್ಮೆಯ ಜಾಗೃತ ಸ್ಥಳವನ್ನು ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಕೋಮು ಧ್ವೇಷದ ಬೀಜ ಬಿತ್ತಿದ ಖಾದಿಧಾರಿಯ ಕರಾಮತ್ತಿಗೆ,ಮಸಲತ್ತಿಗೆ ಮರುಳಾದ ಅಮಾಯಕ ಜನರ ಅಸಹಾಯಕತೆಯ ಅನಾವರಣ ಮಾಡಿರುವ ಈ ಕವಿತೆ ಸಾರ್ವಕಾಲಿಕವಾಗಿದೆ.ಕವಿಯ ಅಂತರಾಳದಲ್ಲಿ ಹುದುಗಿದ್ದ ಅವ್ಯಕ್ತವಾದ ನೋವೊಂದು ಕವನದ ರೂಪತಾಳಿ ಮನಸಿನ ದುಗುಡವನ್ನು ಹಗುರವಾಗಿಸಿಕೊಳ್ಳುವ ಪ್ರಯತ್ನವೂ ಕವನದಲ್ಲಿ ಅಚ್ಚೊತ್ತಿದೆ.ಜನಮರುಳೋ ಜಾತ್ರೆಮರುಳೋ ತುಂಬಿತ್ತು ತಲೆ ತುಂಬಾ ರದ್ದಿ ಬಿಡಲಿಲ್ಲ ಚಾಳಿ ಮೂಢಮಂದಿ.ಎನ್ನುವ ನುಡಿಯು ಇಂದಿನ ಮೂಢ ಮಂದಿಯ ಅವಿವೇಕಕ್ಕೆ ಚಾಟೀ ಏಟು ನೀಡಿದೆ.ಹಿಂದೇ ಮುಂದೆ ನೋಡದೇ ಹತ್ತರ ಕೂಡ ಹನ್ನೊಂದರಂತೆ ತಮ್ಮ ಸಾರ್ವಭೌಮ ಪರಮಾಧಿಕಾರವನ್ನು ವ್ಯರ್ಥವಾಗಿ ಚಲಾಯಿಸಿ ಕೊನೆಗೆ ಪಶ್ಚಾತ್ತಾಪ ಪಡುವ ಆದರೂ ವಿಚಾರ ಹೀನರಾಗಿ ಕುರಿಮಂದೆಗಳಂತೆ ಜೀವನ ಸಾಗಿಸುವ ಕಟು ವಾಸ್ತವ ಸತ್ಯವನ್ನು ಕವನವು ಕಕ್ಕಿ ತನ್ನ ಆಕ್ರೋಷವನ್ನು ಹೊರಹಾಕಿದೆ.ಜನರ ನಂಬಿಕೆಯ ಶ್ರದ್ಧಾ ಭಕ್ತಿಯ ಕೇಂದ್ರವು ಹೇಗೆ ಪಟ್ಟಬದ್ಧ ಹಿತಾಸಕ್ತರ ಆಶೋತ್ತರವನ್ನು ಈಡೇರಿಸುವ ಶಕ್ತಿ ಸ್ಥಳವಾಗಿ ಮಾರ್ಪಾಡು ಹೊಂದುತ್ತದೆ ಎಂಬುದನ್ನೂ ಕವಿ ಇಲ್ಲಿ ಅರ್ಥಪೂರ್ಣವಾಗಿ ತಮ್ಮದೇ ಶೈಲಿಯಲ್ಲಿ ಪ್ರತಿಬಿಂಬಿಸಿರುವರು.ಜೊತೆಗೆ ಇಡೀ ಕವನದ ಆಶಯ ನೂರು ದಿಕ್ಕನ್ನು ಪಡೆದು ವಿಚಾರದ ಓಘಕ್ಕೆ ಮುನ್ನುಡಿ ಬರೆದಿದೆ.ನನಗೆ ತುಂಬಾ ಇಷ್ಟವಾದ ಕವನವಿದು."'
"=http://banavasimaatu.blogspot.com/
ಕವನ ಹೀಗಿದೆ ನೋಡಿ.


ಅದೊಂದು ಮಣ್ಣು ಗುಡ್ಡೆ
ಮಾಡದ ತಪ್ಪಿಗೆ ಹೊಣೆಯಾಗಿ
ಮಣ್ಣು ಹೊದ್ದು ಮಲಗಿದ್ದ
ಒಳಗೊಬ್ಬ ನಿರ್ಜೀವ ಸಂತ.

... ಹಸಿರು ಕಾವಿಧಾರಿ
ಒಂದಾಗಿ ಸೇರಿ
ಆಗಿತ್ತು ಭಾವೈಕ್ಯದಾ ಬಿಂದು

ಅವಳ ಕೊರಳಿಗೊಂದು ದಾರ
ಇವನ ಕೈಗೊಂದು ಉರುಕು
ಕೂತರೂ ಪವಾಡ ನಿಂತರೂ ಪವಾಡ

ಅಲ್ಲೊಬ್ಬ ಜನನಾಯಕ
ಅದು ತಮ್ಮದೆಂದ, ನಿಮ್ಮದಲ್ಲವೆಂದ
ಬಿತ್ತಿದ್ದ ಕೋಮು ಬೀಜ

ಬಡಿದಾಡಿ ಸೋತರು, ಸತ್ತರು ಕೆಲವರು
ಅವನು ಇಷ್ಟು ನಕ್ಕಿದ್ದ
ಬೆಂದಿತ್ತು ಬಿತ್ತಿದಾ ಬೀಜ

ಜನಮರುಳೋ ಜಾತ್ರೆಮರುಳೋ
ತುಂಬಿತ್ತು ತಲೆ ತುಂಬಾ ರದ್ದಿ
ಬಿಡಲಿಲ್ಲ ಚಾಳಿ ಮೂಢಮಂದಿ.

ಅದೊಂದು ಮಣ್ಣು ಗುಡ್ಡೆ
ಮಾಡದ ತಪ್ಪಿಗೆ ಹೊಣೆಯಾಗಿ
ಮಣ್ಣು ಹೊದ್ದು ಮಲಗಿದ್ದ
ಒಳಗೊಬ್ಬ ನಿರ್ಜೀವ ಸಂತ.
=abdulsatthar.wordpress.com/
 

1 comment:

  1. ಧನ್ಯವಾದಗಳು ಸೋಮಶೇಕರ್ ಸರ್. ನನ್ನ ಮನಸ್ಸಲ್ಲಿದ್ದ ವಿಷಯವಸ್ತುವನ್ನು ಮನೋಜ್ನವಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete