Monday 26 December 2011

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ.

"1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು,ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು.ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು.ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ.ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ.ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ.ನನ್ನ ಪಾಳಿ ಬಂದಾಗ ಅವರೊಡನೆ ನನ್ನ ತಾಪತ್ರಯ ಹೇಳಿಕೊಳ್ಳಬೇಕೆಂಬಷ್ಟರಲ್ಲಿ ದುಃಖ ಉಮ್ಮಳಿಸಿ ಬಿಕ್ಕಿ ಬಕ್ಕಿ ಅತ್ತು ಬಿಟ್ಟೆ.ಯಾರು ನೀನು? ಎಲ್ಲಿಂದ ಬಂದಿದ್ದಿ? ಏನು ನಿನ್ನ ವಿಷಯ? ಎಂದೆಲ್ಲ ಜೋರು ಧ್ವನಿಯಲ್ಲಿ ಪ್ರಶ್ನಿಸಿದಾಗ ನಾ ದಂಗಾಗಿ ಹೋಗಿದ್ದೆ! ನಾನು ಬನವಾಸಿಯಿಂದ ಮನೆ ಬಿಟ್ಟು ಬಂದ ವಿಷಯವನ್ನೂ ನನ್ನ ವೃತ್ತಾಂತವನ್ನೂ ತಿಳಿಸಿ ನನಗೊಂದು ಕೆಲಸ ಕೊಡಿಸಬೇಕೆಂಬ ಬೇಡಿಕೆ ಇಟ್ಟಿದ್ದೆ. ಓದುವುದು ಬಿಟ್ಟು ಇಲ್ಲಿಗೇಕೆ ಬಂದೇ? ಬೆಂಗಳೂರಲ್ಲೇನಿದೆ? ಇತ್ಯಾದಿಯಾಗಿ ಮೇಲಿಂದ ಮೇಲೆ ನನ್ನ ಪ್ರಶ್ನಿಸಿದ್ದರು.ಯಾವುದೇ ಕಾರಣಕ್ಕೂ ಓದುವುದನ್ನು ನಿಲ್ಲಿಸಕೂಡದು,ಸೀದಾ ಬನವಾಸಿಗೆ ಬಸ್ ಹತ್ತಬೇಕೆಂದು ತಾಕೀತು ಮಾಡಿದರು.ನನ್ನ ಬಗ್ಗೆ ಅತೀವ ಕಾಳಜಿ ವಹಿಸಿ ಪಕ್ಕದಲ್ಲಿಯೆ ಇದ್ದ ಆಪ್ತ ಕಾರ್ಯದರ್ಶಿ ವಿಜಯ ಪ್ರಕಾಶ (ಈಗವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿ.ಇ.ಓ.)ಅವರಿಗೆ ಕಿವಿಯಲ್ಲಿ ಏನೇನೋ ಹೇಳಿದರು.ನನ್ನನ್ನು ಒಳಗೆ ಪ್ರತ್ಯೇಕ ಕೋಣೆಯಲ್ಲಿ ಇರುವಂತೆ ಸೂಚಿಸಿ ಚಹಾ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು.ನಂತರ ವಿಜಯ ಪ್ರಕಾಶ್ ಅವರು ನನ್ನ ಕೈಗೆ ಆಗ ಎರಡು ಸಾವಿರ ಇತ್ತು ಯಾವುದೇ ಕಾರಣಕ್ಕೂ ಮತ್ತೆ ಬೆಂಗಳೂರಿಗೆ ಬರಬೇಡ,ಸಾಹೇಬರು ನಿನ್ನ ಬಗ್ಗೆ ತುಂಬಾ ಅನುಕಂಪಿತರಾಗಿರುವರು.ಅವರ ಮಾತನ್ನು ನಡೆಸಬೇಕೆಂದರೆ ನೀನು ಎಷ್ಟೇ ಕಷ್ಟ ಬಂದರೂ ಓದುವುದನ್ನು ಬಿಡಬೇಡ ಎಂದು ಹೇಳಿ ಬನವಾಸಿ ಬಸ್ ಅನ್ನು ಹತ್ತಿಸಿದ್ದರು.ನಂತರ ನನ್ನ ಬದುಕಿನ ದಿಕ್ಕೇ ಬದಲಾಯಿತು.ಮತ್ತೆಂದಿಗೂ ಅವರ ಬಳಿ ಸಹಾಯಕ್ಕಾಗಿ ನಾ ಹೋಗಲಿಲ್ಲ.ಅಂದು ಅವರು ಹಾಗೆ ನಡೆದು ಕೊಳ್ಳದೇ ಹೋಗಿದ್ದರೆ ನಾನು ಎಮ್.ಎ.,ಬಿ.ಇಡಿ ಸ್ನಾತಕೋತ್ತರನಾಗಲು ಸಾಧ್ಯವಿರಲಿಲ್ಲ.ನನ್ನ ವ್ಯಕ್ತಿತ್ವ ಅರಳುತ್ತಿರಲಿಲ್ಲ.ನಾನ್ಯಾವುದೋ ಬಾರಲ್ಲೋ ಹೋಟೇಲಿನಲ್ಲೋ ಒಂದು ಚಾಕರಿ ಮಾಡಿಕೊಂಡಿರಬಹುದಿತ್ತು ಅಷ್ಟೇ.ಅವರ ಖಾಳಜೀ ತುಂಬಿದ ಹಾರೈಕೆ ನನ್ನನ್ನು ಓದಿಗೆ ಪ್ರೇರೇಪಿಸಿತು,ಸ್ಪೂರ್ಥಿ ತುಂಬಿತು.ಎಂಥ ಕಷ್ಟ ಬಂದರೂ ವಿದ್ಯೆಯಿಂದ ಹಿಂದೆ ಸರಿಯಬಾರದೆಂದು ನಿರ್ಧರಿಸಿದೆ.ಬೆಟ್ಟದಂಥ ಕಷ್ಟಗಳನ್ನು ಎದುರಿಸಿದೆ.ಓದಿ ನೌಕರಿ ಪಡೆಯುವಂತಾಯಿತು.ಕರ್ನಾಟಕದ ಮುಖ್ಯಮಂತ್ರಿಯಿಂದ ಪ್ರೇರಣೆ ಹೊಂದಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿರುವೆ.ನನ್ನ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಸಂಸಾರಿಯಾಗಿದ್ದುಕೊಂಡು ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದೇನೆ.ಬಂಗಾರಪ್ಪಾಜೀ ನಾ ನಿಮ್ಮನ್ನು ಮರೆಯಲುಂಟೇ?ನನ್ನೀ ನುಡಿ ನಮನದ ಮೂಲಕ ತಮ್ಮ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ."
= ಬನವಾಸಿ ಸೋಮಶೇಖರ್,ಮಂಗಳೂರು.

4 comments:

  1. This comment has been removed by the author.

    ReplyDelete
  2. ಸೋಮಣ್ಣ ಎಷ್ಟೋ ಜನರಿಗೆ ಗೊತ್ತಿರದ ಬಂಗಾರಪ್ಪನವರ ಅಂತಃಕರಣದ ವ್ಯಕ್ತಿತ್ವ ಪರಿಚಯ ಮಾಡಿತು ನಿಮ್ಮ ಈ ಲೇಖನ.. ಕಷ್ಟದಲ್ಲಿ ವಿದ್ಯಾರ್ಜನೆ ಮಾಡಿ ಕಷ್ಟಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡ ಹೊರಾಟವೇ ಬದುಕೆಂದು ಪಾಠ ಹೇಳಿದ ವರ್ಣಮಯ ವ್ಯಕ್ತಿತ್ವದ ಬಂಗಾರಪ್ಪನವರನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದೆ ನಿಮ್ಮ ಲೇಖನ.. ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಆ ದೇವರು.. ನಿಮ್ಮ ನುಡಿನಮನ ನಮ್ಮೆಲ್ಲರ ಮನಸ್ಸನ್ನು ತೇವಗೊಳಿಸಿ ಬಂಗಾರಪ್ಪನವರಿಗೆ ನನ್ನ ಅಶ್ರುತರ್ಪಣ ಸಲ್ಲಿಸಲು ಪ್ರೇರೇಪಿಸುತ್ತದೆ.. ಅವರ ಮನೆಯವರಿಗೆ ಈ ದುಃಖವನ್ನು ಬರಿಸಲು ಶಕ್ತಿ ಕೊಡಲಿ..

    ReplyDelete
  3. ವರ್ಣರಂಜಿತ ರಾಜಕಾರಣಿಯ ಮಾನವೀಯ ಮುಖ ತೋರಿಸಿಕೊಟ್ಟಿದ್ದೀರಿ.

    ನೀವು ಪಟ್ಟ ಕಷ್ಟ, ಸಂಸಾರ ತಾಪತ್ರಯ ಮತ್ತು ಬೆಂಗಳೂರಿಗೆ ಓಡಿಬಂದದ್ದು ಮನ ಕರಗಿಸಿತು. ಅವರು ಹಣ ನೀಡಿದ ಮೇಲೆ, ಅದನ್ನು ಪೋಲು ಮಾಡದೆ ವಿದ್ಯಾಭ್ಯಾಸವನ್ನು ಮುಂದುವರೆಸಿ ಈಗಿನ ಸುಸ್ಥಿತಿಗೆ ಬಂದದ್ದು ಎಲ್ಲರಿಗೂ ಪಾಠವಾಗಲಿ.

    ReplyDelete
  4. ನಿಮ್ಮ ಕುಟು೦ಬದ ಅ೦ದಿನ ಶೋಚನೀಯ ಸ್ಥಿತಿ, ಆಗ ದಾರಿ ಕಾಣದೆ ಓಡಿ ಬ೦ದ ಹುಡುಗನಿಗೆ ಮಾರ್ಗದರ್ಶನ ನೀಡಿದ ಬ೦ಗಾರಪ್ಪನವರ ಹೃದಯವ೦ತಿಕೆ, ಅ೦ದಿನ ಮಾರ್ಗದರ್ಶನವನ್ನು ಸರಿಯಾಗಿ ಪಾಲಿಸಿ ಈಗ ಉತ್ತಮ ಜೀವನವನ್ನು ನಡೆಸುತ್ತಿರುವ ರೀತಿ, ಇವುಗಳನ್ನು ತೆರೆದಿಟ್ಟಿರುವ ನಿಮ್ಮ ಲೇಖನವನ್ನು ಸಕಾಲದಲ್ಲಿ ನೀಡಿದ್ದೀರಿ. ನಮ್ಮೊಡನೆ ಹ೦ಚಿಕೊ೦ಡಿದ್ದಕ್ಕಾಗಿ ಧನ್ಯವಾದಗಳು.

    ReplyDelete