Monday 13 February 2012

ನೆನಪಿನ ಬುತ್ತಿಯಿಂದ:ಅಮರ ಚೇತನ ಬನವಾಸಿಯ ಸೇನಾಪತಿ ಪಾಟೀಲರು.

ಸೇನಾಪತಿ ಶಿವನಗೌಡ ಪಾಟೀಲರು ನಮ್ಮ ಊರು ಬನವಾಸಿಯ ಹೆಮ್ಮೆಯ ಮಗನಾಗಿದ್ದರು.ಹೆಸರಿಗೆ ತಕ್ಕಂತೆಯೇ ಇದ್ದರು.ಮುಂದಾಳ್ತನಕ್ಕೆ ಹೇಳಿ ಮಾಡಿಸಿದಂತಿದ್ದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಮಾತಾಗಿದ್ದರು.ಒಬ್ಬ ಅಪರೂಪದ ನೇತಾರನಾಗಿದ್ದು ಸದಾಕಾಲವೂ ಬಡವರು,ದೀನ ದಲಿತರು,ಹಿಂದುಳಿದವರು,ಅಲ್ಪಸಂಖ್ಯಾತರು ಮತ್ತು ಸಮಾಜದ ಎಲ್ಲಾ ವರ್ಗದ ಜನರ ನೋವು,ಭವಣೆಗಳಿಗೆ ಸ್ಪಂದಿಸುತ್ತಿದ್ದರಲ್ಲದೇ ಅವರ  ಧ್ವನಿಯೂ ಆಗಿದ್ದರು.ಹೀಗೆ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿಕೊಂಡಿದ್ದರಲ್ಲದೇ  ಜನಮಾನಸದಲ್ಲಿ ಹಚ್ಚಹಸಿರಾಗಿದ್ದರು.

ಕೂಲಿ ಕಾರ್ಮಿಕರು ಮತ್ತು ಹಮಾಲಿ ಶ್ರಮ ಜೀವಿಗಳ ಮಧ್ಯೆಯೇ ಇದ್ದು ಅವರನ್ನೆಲ್ಲ ಒಂದುಗೂಡಿಸಿ ಅವರ ಕಷ್ಟ ಕಾರ್ಪಣ್ಯಗಳ ಬದುಕಿಗೆ ಆಸರೆಯೊದಗಿಸುವ ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದರು.ತನ್ಮೂಲಕ ಬನವಾಸಿ ಎಂದರೆ 'ಸೇನಾಪತಿ' ಎನ್ನುವಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದರು.

ಬನವಾಸಿಯ ಅತ್ಯಂತ ಪ್ರತಿಷ್ಠಿತ ಕುಟುಂಬಗಳಲ್ಲಿ ಶಿವನಗೌಡ ಪಾಟೀಲರ ಮನೆತನವೂ ಒಂದಾಗಿದೆ.ಶಿವನಗೌಡರು ವ್ಯಾಪಾರಿಯಾಗಿದ್ದು ಕಿರುಕುಳ ಅಂಗಡಿಯೊಂದನ್ನು ನಡೆಸುತಿದ್ದರು.ಅವರ ಅಂಗಡಿಯಲ್ಲಿ ಇಂಥ ವಸ್ತು ಸಿಗುವುದಿಲ್ಲ ಎಂಬ ಮಾತೇ ಇಲ್ಲ! ಮಳೆಯೊಡನೆ ಬೀಳುವ ಆಲಿಕಲ್ಲು ನೀರಿನಿಂದ ಹಿಡಿದು ಮತ್ತೆಲ್ಲೂ ದೊರಕದ ಅಪರೂಪದ ವಸ್ತುಗಳು ಅವರ ಅಂಗಡಿಯಲ್ಲಿ ಈಗಲೂ ಲಭ್ಯ.ಹೀಗಾಗಿ ಇವರ ಅಂಗಡಿ ಈಗಿಗಿಂತಲೂ ಆಗ ಬಹು ಪ್ರಸಿದ್ಧಿ ಹೊಂದಿತ್ತು.ಹೀಗೆ ಈ ಮನೆತನವು ತನಗರಿವಿಲ್ಲದೇ ಸಮಾಜ ಸೇವೆಯಲ್ಲಿ ತತ್ಪರವಾಗಿತ್ತು.

ಶಿವನಗೌಡ್ರಿಗೆ ಇಬ್ಬರು ಗಂಡು ಮಕ್ಕಳು.ಹೆಣ್ಣು ಮಕ್ಕಳೂ ಇದ್ದಾರೆ.ಕಿರಿಯ ಮಗನೇ ನಾನು ಹೇಳಹೊರಟಿರುವ ಹೃದಯ ಶ್ರೀಮಂತಿಕೆಯ ಸೇನಾಪತಿ ಪಾಟೀಲರು.ತಂದೆ ಗತಿಸಿದ ನಂತರ ಹಿರಿಮಗ ತಮ್ಮಣ್ಣ ಗೌಡ್ರಿಗೇನೆ ಅಂಗಡಿಯ ಪೂರ್ಣ ಹೊಣೆಗಾರಿಕೆ ಲಭ್ಯವಾಯಿತು.ಈ ಸೇನಾಪತಿ ಪಾಟೀಲರಿಗೆ ಅಂಗಡಿ ವ್ಯವಹಾರ,ವ್ಯಾಪಾರವು ಕಿಂಚಿತ್ತೂ ಒಗ್ಗಿ ಬಂದಿರಲಿಲ್ಲ.ತಮಗೆ ಇಷ್ಟವಾದ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿಯೇ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.ಪಿ.ಯೂ.ಸಿ. ಮೆಟ್ಟಿಲು ಹತ್ತಿದ್ದ ಅವರು ತಮ್ಮ 25-28 ರ ವಯಸ್ಸಿನಲ್ಲೇ ಸಾರ್ವಜನಿಕ ವ್ಯಕ್ತಿಯಾಗಿ ರೂಪುಗೊಂಡಿದ್ದರು.ಸದಾ ಕ್ರಿಯಾಶೀಲ ಹಾಗೂ ಚಾಣಾಕ್ಷ ವ್ಯಕ್ತಿತ್ವದ ಸಾಹಸಿ ಪ್ರವೃತ್ತಿ ಅವರದಾಗಿತ್ತು.ರಾಜಕೀಯ ತಂತ್ರಗಾರಿಕೆಯಲ್ಲಿ ಅವರನ್ನು ಸೆದೆಬಡಿಯಲು ವಿರೋಧಿಗಳಿಗೆ ಅಷ್ಟು ಸುಲಭದ  ಮಾತಾಗಿರಲಿಲ್ಲ.ಜಾಗರೂಕತೆ,ಶಿಸ್ತು ಮತ್ತು ದೂರದೃಷ್ಠಿತನದಿಂದ ಹಲವು ದಾಳಗಳನ್ನು ಪ್ರಯೋಗಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು.ಈ ಜನಪ್ರಿಯ ವ್ಯಕ್ತಿಯ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಹಣಿಯಲು ವಿರೋಧಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರಾದರೂ ಅದು ಕೈಗೂಡುತ್ತಿರಲಿಲ್ಲ!
ನನ್ನ ಅಮ್ಮ ಬಂಗಾರಮ್ಮ ಮತ್ತು ಪಾಟೀಲರದು ತಾಯಿ ಮಗನ ಸಂಬಂಧವಾಗಿತ್ತು.ನನ್ನಮ್ಮ ಅವರಿಗೆ 'ನೀ ನನ್ನ ಹಿರಿ ಮಗ' ಅನ್ನುತ್ತಿದ್ದರು.1983-84 ರಿಂದಲೂ ಶ್ರೀಯುತರೊಂದಿಗೆ ಅತ್ಯಂತ ನಿಕಟ ಬಾಂಧವ್ಯವನ್ನು ನಮ್ಮ ಕುಟುಂಬ ಹೊಂದಿತ್ತು.ಅಮ್ಮ ಯಾವುದೇ ಒಂದು ಮಾತನ್ನು ಹೇಳಿದರೆ ಪಾಟೀಲರು ತೆಗೆದುಹಾಕುತ್ತಿರಲಿಲ್ಲವಂತೆ.ತಮ್ಮ ತಂದೆಯವರೊಂದಿಗೆ ಏನಾದರೂ ಭಿನ್ನಾಭಿಪ್ರಾಯ ಬಂದಾಗ ಶಿವನ ಗೌಡ್ರು ಅಮ್ಮನ ಗಮನಕ್ಕೆ ತಂದು 'ಬಂಗಾರಮ್ಮ ಅವನಿಗೇ ನೀನೇ ಏನಾದ್ರೂ ಹೇಳು,ನಿನ್ನ ಮಾತನ್ನು ಅಂವ ನಂಬುತ್ತಾನೆ'ಅನ್ನುತ್ತಿದ್ದರಂತೆ.ತಾನು ಪ್ರೀತಿಸಿದವಳು ಅಪ್ಪನಿಗೆ ಇಷ್ಟವಾಗಿರಲಿಲ್ಲ.ಅಂತರಂಗದ ತುಮುಲವನ್ನು ಅವರ ತಂದೆಯವರು ಅಮ್ಮನಿಗೆ ಹೇಳಿದ್ದರಾದರೂ ಆ ವಿಚಾರದಲ್ಲಿ ಪಾಟೀಲರು ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದರೆಂದು ಅಮ್ಮ ನನಗೆ ಹೇಳಿದ್ದು ನೆನಪಿದೆ.

ಶ್ರೀ ಪಾಟೀಲರು 1983-84ನೇ ಇಸ್ವಿಯಿಂದಲೂ ಪಂಚಾಯಿತಿ ಚುನಾವಣೆಗೆ ನನ್ನ ಅಮ್ಮನನ್ನು ಸದಾ ತಮ್ಮ ಗುಂಪಿನಲ್ಲಿ ಓರ್ವಳನ್ನಾಗಿ ನಿಲ್ಲಿಸಿಕೊಳ್ಳುತ್ತಿದ್ದರು.ಅಮ್ಮನ ಚುನಾವಣಾ ಖರ್ಚು,ವೆಚ್ಚವೆಲ್ಲಾ ಅವರದೇ.ಕಡು ಬಡತನದಲ್ಲಿದ್ದ ಅಮ್ಮನಿಗೆ ಅದೆಲ್ಲ ಸಾಧ್ಯವಿಲ್ಲದ ಮಾತು.ಬನವಾಸಿಯ ಯಾವುದೇ ವಾರ್ಡಿನಲ್ಲಿ ನಿಲ್ಲಿಸಿದರೂ ನನ್ನ ಅಮ್ಮ ಅತೀ ಹೆಚ್ಚು ಮತಗಳನ್ನು ಪಡೆದು ಗೆಲ್ಲುತ್ತಿದ್ದರು.ಅಮ್ಮ ಮತ್ತು ನನ್ನ ಬಗ್ಗೆ ಊರವರಿಗೆ ಅತೀವ ಪ್ರೀತಿ ಇದ್ದು ಅದು ಈಗಲೂ ಇದೆ ಎಂಬುದೇ ನಮ್ಮ ಸುದೈವ.ಜಾತಿ ಪಾತಿ ಇತ್ಯಾದಿ ಯಾವೊಂದು ಅಂಶಗಳೂ ಅಮ್ಮನ ಗೆಲುವಿಗೆ ತೊಡಕಾಗುತ್ತಿರಲಿಲ್ಲ.ಹೀಗೆ ಅಮ್ಮ 5-6 ಬಾರಿ ಪಂಚಾಯ್ತಿ ಚುನಾವಣೆಗೆ ನಿಂತಾಗಲೂ ಅವರ ಗೆಲುವು ನಿಶ್ಚಿತವಾಗಿರುತ್ತಿತ್ತು!ಒಂದುಬಾರಿ ಒಂದೆರಡು ಮತಗಳ ಅಂತರದಿಂದ ಅಮ್ಮನೂ ಸೋಲಿನ ರುಚಿ ಉಂಡಿದ್ದರು. ಒಂದು ವೇಳೆ ಚುನಾವಣೆಯಲ್ಲಿ ಪಾಟೀಲರು ಸೋತರೂ ಅಮ್ಮನ ಗೆಲುವನ್ನು ಮಾತ್ರ ಅವರು ಬಯಸುತ್ತಿದ್ದರು."ನನ್ನವ್ವ ಗೆದ್ದಳೋ?"ಎನ್ನುತ್ತಿದ್ದರಂತೆ.ಅವರ ಪ್ರಯತ್ನದಿಂದ ಅಮ್ಮ ಪಂಚಾಯ್ತಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.ಅತ್ಯಂತ ದೀರ್ಘ ವರ್ಷಗಳ ಕಾಲ ಅಮ್ಮ ಬನವಾಸಿ ಪಂಚಾತಿಯಲ್ಲಿದ್ದರು.ಅಮ್ಮನಿಗೆ ವಯಸ್ಸಾಗುತ್ತಾ ಬಂದಿದ್ದರಿಂದ ಅವರನ್ನು ಮುಂದೆ ಮತ್ತೆ ಚುನಾವಣೆಗೆ ನಿಲ್ಲಿಸುವುದು ಬೇಡವೆಂದು ನಾನು ಪಾಟೀಲರಿಗೆ ಹೇಳಿದ್ದೆ.1996-97ರ ನಂತರ ನಾನು ಪಾಟೀಲರ ನಿಕಟಕ್ಕೆ ಬಂದಿದ್ದೆ.ಅವರ ಸಮಾಜ ಸುಧಾರಣಾ ಮನೋಭಾವ,ಸಂಘಟನಾ ಕೌಶಲ್ಯ,ಬಡವರ ಮೇಲಿನ ಕಾಳಜಿ,ಮಾನವತೆ ಇತ್ಯಾದಿ ಗುಣಗಳು ನನ್ನನ್ನು ಬಹುವಾಗಿ ಆಕರ್ಷಿಸಿದ್ದವು.ನಾನವರ ಪರಮಾಪ್ತ ವಲಯದವನಾಗಿದ್ದೆ!

ಬಡವರೆಂದರೆ ಪಾಟೀಲರಿಗೆ ಜೀವಾಳ.ಒಮ್ಮೆ ಉರುವಲು ಕಟ್ಟಿಗೆಗಾಗಿ ಬಡ ರೈತರು,ಕೃಷಿ ಕಾರ್ಮಿಕರು ಎತ್ತಿನ ಗಾಡಿಗಳನ್ನು ಹೊಡೆದುಕೊಂಡು ಕಾಡಿಗೆ ಹೋಗಿದ್ದರು.ಕಟ್ಟಿಗೆ ತುಂಬಿಕೊಂಡು ಬರುತ್ತಿದ್ದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಎತ್ತು ಗಾಡಿ ಸಮೇತ ಅವರನ್ನು ಬಂಧಿಸಿದ್ದರು.ಪಾಟೀಲರಿಗೆ ವಿಷಯ ಮುಟ್ಟಿದಾಗ ಸೀದಾ ವಲಯ ಅರಣ್ಯಾಧಿಕಾರಿ ಕಛೇರಿಗೆ ಭೇಟಿ ನೀಡಿ ಬಿಟ್ಟು ಬಿಡುವಂತೆ ಒತ್ತಾಯಿಸಿದ್ದರು.ಅಧಿಕಾರಿಗೂ ಇವರಿಗೂ ಮಾತಿಗೆ ಮಾತು ಬೆಳೆದಿತ್ತು.ಅಧಿಕಾರಿ ವಿವೇಚನೆ ಕಳೆದುಕೊಂಡಿದ್ದು ಬಂದೂಕನ್ನು ತೋರಿಸಿ ಹೆದರಿಸಿದ್ದರೆಂಬ ವಿಷಯ ತಿಳಿಯಿತು.ಪಾಟೀಲರು 'ಹಾಗಾದರೆ ಮೊದಲು ನನ್ನ ಎದೆಗೆ ನಿಮ್ಮ ಗುಂಡು ಹಾರಲಿ'ಎಂದು ಆರ್ಭಟಿಸಿ ಪ್ರತಿಭಟಿಸಿದ್ದರಂತೆ.ಕೊನೆಗೆ ಆ ಅಧಿಕಾರಿ ಬಾಲಮುದುರಿಕೊಂಡಿದ್ದರೆಂದು ತಿಳಿಯಿತು.ಹೀಗೆ ದಿಟ್ಟೆದೆಯವರಾಗಿ ಅಪ್ಪಟವಾದ ನಾಯಕನಾಗಿದ್ದರು.ಅಂಜಿಕೆ,ಅಳುಕು ಏನೆಂಬುದೇ ಅವರಿಗೆ ಗೊತ್ತಿರಲಿಲ್ಲ.ಊರ ಅಭ್ಯುದಯದ ಪ್ರಶ್ನೆ ಬಂದಾಗಲಂತೂ ಯಾವುದಕ್ಕೂ,ಯಾರೊಂದಿಗೂ ರಾಜಿಯಾಗುತ್ತಿರಲಿಲ್ಲ.ಗಟ್ಟಿ ಧ್ವನಿಯಲ್ಲಿ ಬದ್ಧವಾಗಿ ಪ್ರತಿಪಾದಿಸುತ್ತಿದ್ದರು.ಸರಿಯಾದ ನಿರ್ಧಾರವನ್ನೇ ಮಾಡುತ್ತಿದ್ದರು.ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಹತ್ವಪೂರ್ಣ ವ್ಯಕ್ತಿಗಳೊಂದಿಗೆ ಸಂಪರ್ಕ,ಒಡನಾಟ ಇಟ್ಟುಕೊಂಡಿದ್ದ ಅವರು ವಿಧಾನ ಸೌಧದಿಂದಾಗಬಹುದಾದ ಯಾವುದೇ ವ್ಯಕ್ತಿಯ ಕೆಲಸವನ್ನು ಅತ್ಯಂತ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು.ಈ ಕಾರ್ಯದಲ್ಲಿ ಅವರು ಅತ್ಯಂತ ಸಮರ್ಥರಾಗಿದ್ದುರಿಂದ ಅಧಿಕಾರಿಗಳು,ನೌಕರರು ಅವರ ಹಿಂದೆ ಬೀಳುತ್ತಿದ್ದರು.

.
ಕಮರಿ ಹೋಯಿತು ಬದುಕು!
=================

ಜೀವನದಲ್ಲಿ ಒಮ್ಮೆಯಾದರೂ ಪ್ರಸಿದ್ಧ ನಾಡು ಬನವಾಸಿ ಪಂಚಾಯ್ತಿಯ ಅಧ್ಯಕ್ಷನಾಗಬೇಕೆಂಬ ಹೆದ್ದಾಸೆ,ಮಹತ್ವಾಕಾಂಕ್ಷೆ ಅವರದಾಗಿತ್ತು.ಊರ ಅಧ್ಯಕ್ಷನಾದರೆ ನಮ್ಮ ಪಂಚಾಯ್ತಿಯನ್ನು ರಾಜ್ಯದಲ್ಲೇ ಒಂದು ಮಾದರಿ ಪಂಚಾಯ್ತಿಯನ್ನಾಗಿಸುತ್ತೇನೆ ಎನ್ನುತ್ತಿದ್ದರು.ಪಾಟೀಲರ ಕನಸಿಗೆ ವಿಧಿ ಮಾತ್ರ ಸೊಪ್ಪು ಹಾಕಲೇ ಇಲ್ಲ.ಒಮ್ಮೆ ಪಂಚಾಯ್ತಿ ಉಪಾಧ್ಯಕ್ಷರಾಗಿಯೂ, ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.ರಾಷ್ಟ್ರೀಯ ಪಕ್ಷವೊಂದರ ಸಕ್ರೀಯ ಸದಸ್ಯನಾಗಿ,ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ವಿಭಾಗಗಳ ಅಧ್ಯಕ್ಷ,ಜನರಲ್ ಸಕ್ರೇಟರಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.ಸಾರ್ವಜನಿಕ ಜೀವನದಲ್ಲಿ ರಚನಾತ್ಮಕವಾಗಿ,ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಪಾಟೀಲರ ಸಾಂಸಾರಿಕ ಜೀವನದಲ್ಲಿ  ಹಲವು ಏರುಪೇರುಗಳಾಗಿ ಕುಗ್ಗಿ ಹೋಗಿದ್ದರು.ಹೇಳಿಕೊಳ್ಳಲಾಗದ ಅವ್ಯಕ್ತ ನೋವು ಅವರನ್ನು ಕಾಡುತ್ತಿತ್ತು.'ನನ್ನ ಹಲವು ನಿರ್ಧಾರಗಳು ತಪ್ಪಾಗಿ ಬಿಟ್ಟವು ಸೋಮು'ಅನ್ನುತ್ತಿದ್ದರು.ತಮ್ಮ ಕೌಟುಂಬಿಕ ಜೀವನ ಸುಗಮವಾಗಿರಲೆಂದು ತಮ್ಮ ಇಷ್ಟ ದೇವರು ಮಧುಕೇಶ್ವರನಿಗೆ ನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತಿದ್ದರು.ಮಗ ಅವಿನಾಶ ಮತ್ತು ಮಗಳು ಪ್ರಿಯದರ್ಶಿನಿಯ ಜೀವನವನ್ನು ಉಜ್ವಲಗೊಳಿಸುವ ದೊಡ್ಡ ಕನಸನ್ನು ಹೊತ್ತಿದ್ದರು.40-45ರ ವಯೋಮಾನದಲ್ಲಿ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಉನ್ನತಿಗೆ ಹೋಗುವ ಲಕ್ಷಣಗಳು ಗೋಚರಿಸಿದ್ದವು.ಕೆಲವೊಮ್ಮೆ ತಪ್ಪು ಲೆಕ್ಕಾಚಾರಗಳೂ,ವಿರೋಧಿಗಳ ಕುಕೃತ್ಯಗಳು ಗಾಯದ ಮೇಲೆ ಬರೆ ಎಳೆದಿದ್ದಲ್ಲದೇ ಅವರ ಸಾರ್ವಜನಿಕ ಜೀವನಕ್ಕೆ ತೊಡಕಾಗಿ ಪರಿಣಮಿಸಿತ್ತು.ಆದರೆ ಕೊನೆ ಕೊನೆಗೆ ವಿರೋಧಿಗಳೂ ಅವರ ಕಾರ್ಯಕ್ಷಮತೆಯನ್ನು ಕೊಂಡಾಡುತ್ತಿದ್ದರು.ಅವರ ಸಮಾಜ ಸೇವಾ ಕಾಳಜಿ ಮತ್ತು ಹೋರಾಟವನ್ನು ಮೆಚ್ಚ ತೊಡಗಿದರು.ಎಲ್ಲವನ್ನೂ ಮೀರಿ ಬೆಳೆಯುವ ಹಂತಕ್ಕೆ ತಲುಪುತ್ತಿರುವಾಗಲೇ ವಿಧಿ ಅವರೊಡನೆ ಆಟ ಆಡಲು ಪ್ರಾರಂಬಿಸಿ ಬಿಟ್ಟಿತು.ಇದ್ದಕಿದ್ದಂತೇ ವಿಪರೀತ ಹೊಟ್ಟೆ ನೋವೆಂದು ಹೊರಳಾಡತೊಡಗಿದರು.ತಕ್ಷಣ ಅವರನ್ನು ಶಿರಸಿಯ ಪವಾರ್ ಆಸ್ಪತ್ರೆಗೆ ದಾಖಲಿಸಲಾಯಿತು.ಹೊಟ್ಟೆಯ ಶಸ್ತ್ರ ಚಿಕಿತ್ಸೆಗೆ ಅವರನ್ನು ಒಳಪಡಿಸಲಾಯಿತು.ಅದಾಗಿ ಒಂದೆರಡು ದಿನದ ನಂತರವೂ ಮತ್ತೆ ಹೊಟ್ಟೆ ನೋವೆಂದಾಗ ಹುಬ್ಬಳ್ಳಿಗೆ ಒಯ್ಯಿರೆಂದರು.ಹುಬ್ಬಳ್ಳಿಗೆ ಕೊಂಡೊಯ್ದರೆ ಮಣಿಪಾಲಿಗೆ ಒಯ್ಯಿರೆಂದರು.ಹೀಗೆ ಅವರನ್ನು ಅಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿಸಲಾಯಿತು.ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲೇ ಇಲ್ಲ.ಅಂತ್ಯದ ದಿನಗಳು ಸಮೀಪವಾಗಿ ಬಿಟ್ಟವು.ವಿಪರೀತ ದುಡ್ಡು ಖರ್ಚಾಯಿತು.ಅನ್ನಾಹಾರ ಸ್ವೀಕರಿಸದಾದರು.ತಮ್ಮ ಐವತ್ತನೇ ಕಿರಿ ವಯಸ್ಸಲ್ಲಿ 05-11-2005ರಲ್ಲಿ ಇಹಲೋಕ ತ್ಯಜಿಸಿ ಜೀವನ್ಮುಕ್ತರಾದರು.ಪಾಟೀಲರನ್ನು ಬನವಾಸಿಯ ಜನರು ಈಗಲೂ ಸ್ಮರಿಸಿಕೊಳ್ಳುತ್ತಾರೆ.ಊರಿನ ಯಾವುದೇ ಸಮಸ್ಯೆ ಬಂದಾಗ ಪಾಟೀಲ್ರು ಇದ್ದಿದ್ದರೆ ಚನ್ನಾಗಿರ್ತಿತ್ತು ಅಂದುಕೊಳ್ಳುತ್ತಾರೆ.ಆದರೆ ಕಾಲನಿಗೇಕೆ ಕಾಲಕ್ಷೇಪ?ತನ್ನ ಸಮಯ ಬಂದರೆ ಆತ ಸುಮ್ಮನೆ ಬಿಡುವನೇ?

ನನ್ನ ಬದುಕಿನ ಉತ್ಕರ್ಷಕ್ಕೆ ಊರುಗೋಲಾದವರಲ್ಲಿ ಪಾಟೀಲರೂ ಒಬ್ಬರಾಗಿದ್ದರು.ಅವರು ನನ್ನ ಪ್ರಗತಿಯನ್ನು ಸರ್ವಥಾ ಬಯಸುತ್ತಿದ್ದರು. ಈ ಜೀವ ನನ್ನ ಸಂಪರ್ಕಕ್ಕೆ ಸಿಕ್ಕಿದ್ದೆ ಒಂದು ಸೋಜಿಗದ ವಿಷಯ.ನನ್ನ ಅವರ ನಡುವಿನ ಒಡನಾಟದ ಪ್ರೀತಿ ಮಾತಿಗೆ ನಿಲುಕದ್ದು.ಇಂಥ ಮಹಾನುಭಾವನನ್ನು ಕಳೆದುಕೊಂಡು ನಾನು ನಿಜಕ್ಕೂ ಉಡುಗಿ ಹೋಗಿದ್ದೇನೆ.
= ಬನವಾಸಿ ಸೋಮಶೇಖರ್.
   14-02-2012

4 comments:

  1. ಶಿವನಗೌಡರ ವ್ಯಕ್ತಿತ್ವ ಮತ್ತು ಅವರ ಸೇವಾಪರತೆ ಎಲ್ಲರಿಗೂ ಮಾದರಿ. ಸೇನಾಪತಿಯಂಥಹ ಬಿರುದುಗಳು ಸುಮ್ಮನೆ ಮಾತಲ್ಲ, ಅವರು ಜನ ಸೇವೆ ಅದೆಷ್ಟೋ ನಿಸ್ವಾರ್ಥದಿಂದ ಮಾಡಿದಾಗಲೇ ಇಂತಹ ಬಿರುದುಗಳು ಬರುವುದು.

    ರಾಜಕೀಯ ಅಧಿಪತನ ಒಬ್ಬ ಸಮರ್ಥ ರಾಜಕಾರಣಿಯನ್ನು ಯಾವ ರೀತಿ ಹಣ್ಣುಗಾಯಿ ಮಾಡಿ ಆತನ ಬದುಕನ್ನೇ ಆಪೋಷಣ ತೆಗೆದುಕೊಳ್ಳ ಬಹುದು ಎಂಬುದನ್ನು ನಾವೆಲ್ಲ ಬಹಳ ಕಡೆ ನೋಡಿದ್ದೇವೆ.

    ಶಿವನಗೌಡರ ನಿಸ್ಪೃಹತೆ ಜನಮಾನಸದಲ್ಲಿ ಸದಾ ಉಳಿಯಲಿ.

    ReplyDelete
  2. ಒಂದು ಸೊಗಸಾದ ಲೇಖನ ಹಾಗು ಅತ್ಯುತ್ತಮ ನಿಮ್ಮ ಆತ್ಮೀಯರ ಪರಿಚಯ.. ಆದರೆ ಅವರು ಈಗಿಲ್ಲ ಎಂಬುದೇ ದುಃಖದ ಸಂಗತಿ.. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗು.. ನಿಮ್ಮಂಥ ಆತ್ಮೀಯರಿಗೆ ಅವರ ಅಗಲಿಕೆಯ ನೋವನ್ನು ಮರೆಯುವ ಮಾರ್ಗವು ಲಭಿಸಲಿ.. :)
    ಮತ್ತು ಇಲ್ಲಿ ವಿವರಿಸಿದ ತಾಯಿ ಮಕ್ಕಳ ಒಂದು ಭಾಂಧವ್ಯ ಸುಂದರ.. ಹಾಗು.. ಒಂದು ಸಣ್ಣ ಗೊಂದಲ.. ಎರಡು ಮೂರು ನಾಲ್ಕು ಸಾರಿ ಆ ಸಾಲುಗಳನ್ನು ಓದಿದರೂ ಸಹ ಕೇಳುತ್ತಿದ್ದೇವೆ.. ಇಲ್ಲಿ ಪಂಚಾಯಿತಿಯಲ್ಲಿ ಆಯ್ಕೆ ಆಗಿ ಸೇವೆ ಸಲ್ಲಿದವರು ನಿಮ್ಮ ಅಮ್ಮನವರೇ.. :)
    ಹಾಗು ಈ ರೀತಿಯ ಭಾವದಲ್ಲಿ ನೀವು.... ನಿಮ್ಮನ್ನು ಅಗಲಿದ ಮತ್ತೊಬ್ಬ ಸ್ನೇಹಿತರ ಬಗ್ಗೆ ಹೇಳಿದ ಮಾತುಗಳು ಇನ್ನೂ ನೆನಪಿಗೆ ಬರುತ್ತಿದೆ.. ಆದರೆ ಅವರ ಹೆಸರು ನೆನಪಾಗುತ್ತಿಲ್ಲ.. ನಿಮ್ಮ ಬ್ಲಾಗ್ ಅಲ್ಲಿ ನೋಡಿದರೆ ಸಿಗಬಹುದು.. ಉತ್ತಮ ನುಡಿಗಳ ಸಮ್ಮಿಲನ... :)
    ವಿಷಯ ಬೇಸರದ ಸಂಗತಿ ಆದರೂ ಬರೆದಿರುವ ಸಾಲುಗಳು ಓದುಗರನ್ನು ಮುಂದೆ ಮುಂದೆ ಕುತೂಹಲದಿಂದ ಓದುವಂತೆ ಮಾಡುತ್ತವೆ.. :)

    ReplyDelete