Saturday 12 November 2011

ಕವಿ ಬದರಿನಾಥ ಪಲವಲ್ಲಿ ಅವರ "ಸಾವಿಗೆ ಬಾರದ ನೆಂಟ,ವೈಕುಂಠ ಸಮಾರಾಧನೆಗೆ ಹಾಜರು!"ಕವಿತೆಯಲ್ಲಿ ನಂಟರ ಅಮಾನವೀಯತೆ ಅನಾವರಣ.

ಜೀವನ ಯಾತ್ರೆಯಲ್ಲಿ ಬಂಧು-ಬಾಂಧವರು,ಇಷ್ಟ ಮಿತ್ರರು,ಹಿತೈಷಿಗಳು,ನೆಂಟರು ಹೀಗೆ-ಹತ್ತಾರು ಮುಖಗಳು ಒಂದಿಲ್ಲೊಂದು ಸ್ತರಗಳಲ್ಲಿ ಸುಖ-ದುಃಖ,ಕಷ್ಟ-ನಷ್ಟ,ನೋವು-ನಲಿವುಗಳ ಸಂದರ್ಭಗಳಲ್ಲಿ ಬದುಕಿನ ಉತ್ಕರ್ಷಕ್ಕೆ ಹಲವು ಮೆಟ್ಟಿಲುಗಳಾಗಿ,ಆಧಾರ ಸ್ಥಂಭಗಳಾಗಿ ಆಸರೆಯಾಗುವುದುಂಟು.ಕೆಲವೊಮ್ಮೆ ಇದೇ ಬಂಧು-ಬಾಂಧವರೆನಿಸಿಕೊಳ್ಳುವ ಮಹಾಶಯರನೇಕರು ತಮ್ಮದೇ ನೆಂಟನ ಸಾವಿಗೆ ಹಿಡಿ ಮಣ್ಣು ಹಾಕಲು ಬರದಿದ್ದರೂ ಅವನ ಶ್ರಾದ್ಧದೂಟಕ್ಕೆ ಚಾಚೂ ತಪ್ಪದೇ ಹಾಜರಾಗಿ ಹೇಗೆ ಅಮಾನವೀಯತೆ,ಕ್ರೂರತೆಯಿಂದ ವರ್ತಿಸುತ್ತಾರೆ;ಮನೆ ಮುರುಕರಂತೆ ನಡೆದುಕೊಳ್ಳತ್ತಾರೆ ಎಂಬ ಇನ್ನೊಂದು ಮುಖದ ಅನಾವರಣವನ್ನು "ಸಾವಿಗೆ ಬಾರದ ನೆಂಟ,ವೈಕುಂಠ ಸಮಾರಾಧನಗೆ ಹಾಜರು!" ಎಂಬ ಸತ್ವಪೂರಿತ ಕವನದಲ್ಲಿ ಕವಿ ಬದರಿನಾಥ ಪಲವಲ್ಲಿಯವರು ಪರಿಚಯಿಸಿರುವರು.
'ಕೌರವ ಪ್ರಸೂತಿನಿ'ಎಂದು ಅತ್ಯಂತ ಮಾರ್ಮಿಕವಾದ ಪದ ಪ್ರಯೋಗದೊಂದಿಗೆ ಹೆಣ್ಣೊಬ್ಬಳನ್ನು ಗಾಂಧಾರಿಗೆ ಹೋಲಿಸಿರುವುದು ಔಚಿತ್ಯಪೂರ್ಣವಾಗಿದೆ.ಆಕೆ ನೂರಾರು ಮಕ್ಕಳನ್ನು ಹೆರಬಲ್ಲ ಮಹಾತಾಯಿಯಾಗಿದ್ದು ಈಗಲೂ ಬಸುರಿಯಾಗಿ ಪ್ರಸವಕ್ಕೆ ಸಿದ್ಧವಾಗಿದ್ದಾಳೆಂಬ ಸೋಜಿಗವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.ಸಕಲೈಶ್ವರ್ಯ ಸಂಪನ್ನೆಯಾದ ನೂರೊಂದು ಮಕ್ಕಳ ಮಹಾತಾಯಿ ಗಾಂಧಾರಿಗೂ ಕವಿತೆಯಲ್ಲಿನ ನೆಂಟನ ಹೆಂಡತಿಗೂ ಅಜಗಜಾಂತರ ವ್ಯತ್ಯಾಸ.ಬಡತನದ ಬೇಗುದಿಯಲ್ಲಿ ಕಾಲ ನೂಕುವ ಈ ನೆಂಟನ ಸಂಸಾರವನ್ನು ಯಾರಾದರೂ ಮಾತಾ-ಪಿತರು-'ಏನಪ್ಪಾ ಇಷ್ಟೊಂದು ಮಕ್ಕಳೇ?' ಎಂದು ಪ್ರಶ್ನಿಸಿದರೆ " ಇವಾ,ಇವು ಶಿವ ಕೊಟ್ಟ ಪ್ರಸಾದ,ಶಿವನಿಚ್ಛೆ "ಎಂದು ಹೇಳಿ ನಯವಾಗಿ ಜಾರಿಕೊಳ್ಳುವ ಜಾಣ್ಮೆಯ ಮಾತನ್ನು ಸೊಗಸಾಗಿ ಸಂದರ್ಭೋಚಿತವಾಗಿ ಉಪಯೋಗಿಸಿಕೊಂಡು ಆ ನೆಂಟನ ಮಕ್ಕಳ ವಯೋಮಾನದ ಅಳತೆಗೆ ಉತ್ಪ್ರೇಕ್ಷೆ ಎನಿಸಿದರೂ ಅಲಂಕಾರಿಕವಾಗಿರದೇ ಹಳ್ಳಿ ಬದುಕಿನ ಜನರ ಆಡು ಭಾಷೆಯ ಸೊಗಸಿಗೆ ಚಟಾಕು,ಪಾವು,ಸೇರು ಪದಗಳು ಮಾನಗೊಂಡಿವೆ.
ನೆಂಟ,ಆತನ ಹೆಂಡತಿ,ಇವರ ಹತ್ತಾರು ಮಕ್ಕಳು ಇವರುಗಳೆಲ್ಲ ಇಡೀ ಕವಿತೆಯ ಮುಖ್ಯ ಭೂಮಿಕೆಯಲ್ಲಿ ಕಾಣುವ ಪಾತ್ರಧಾರಿಗಳು.ಇವರು ತಮ್ಮದೇ ನೆಂಟನೊಬ್ಬನ ಸಾವಿನ ಸುದ್ಧಿ ಬಂದಾಗ ಶವಯಾತ್ರೆಗೆ ಹೋಗುವ ಔದಾರ್ಯ ತೋರುವುದಿಲ್ಲ.ಸತ್ತರೆ ನಮಗೇನು ಲಾಭವೆನ್ನುವ ಲೆಕ್ಕಾಚಾರ ಹಾಕುವ ಅದೆಷ್ಟೋ ಮಹಾಶಯರ ಧಾಷ್ಟ್ಯತನವನ್ನು ನಾವು ಸಮಾಜದಲ್ಲಿ ಕಾಣುತ್ತೇವೆ.ಪಲವಲ್ಲಿಯವರ ಈ ಕವನವೂ ಇಂಥ ಮನೆ ಮುರುಕು ನೆಂಟರ ನಿಜ ಬಣ್ಣದ ಸತ್ಯ ದರ್ಶನಮಾಡಿಸಿದೆ.

ಮುಷ್ಠಿ ಮಣ್ಣಿಗೆ ಹೋಗದ ಮನೆಹಾಳು ನೆಂಟರು,ನೆಂಟನ ವೈಕುಂಠ ಸಮಾರಾಧನೆಗೆ ಹೇಳಿ ಕಳಿಸದಿದ್ದರೂ ಪತ್ರ ಬರೆಯದಿದ್ದರೂ ಮನಸ್ಸಲ್ಲೇ ಲೆಕ್ಕಹಾಕಿ ಚಾಚೂ ತಪ್ಪದೇ ಸಕುಟುಂಭ ಪರವಾರ ಸಮೇತ ಹಾಜರಾಗಿ ಬಗೆ ಬಗೆಯ ಭಕ್ಷ್ಯ ಭೋಜ್ಯಗಳನ್ನು ರಣ ಹದ್ದುಗಳಂತೆ ಬಕ ಬಕ ಮುಕ್ಕುತ್ತಾರೆ.ಗತಿಸಿದ ನೆಂಟನ ಹಿರಿಮಗ ತಂದೆಯ ಸಾವಿನ ದುಃಖದಿಂದ ಹೊರಬರಲಾರದ ನೋವಲ್ಲಿರುವಾಗ ಕೇವಲ ಕಣ್ಣೊರೆಸುವ ತಂತ್ರವಾಗಿ ಮಗನ ಕೈ ಹಿಚುಕುವ,ಮೈ ಸವರಿ ಬೂಟಾಟಿಕೆಗೆ ಸಾಂತ್ವನ ಹೇಳುವ ಆಷಾಢಭೂತಿ ವ್ಯಕ್ತಿಯ ನೈಜ ಮನೋಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿ ಪರಿಚಯಿಸಿರುವರು.
ಹರಕು ಬಾಯಿಯ ಬಿಡಾಡಿ ನೆಂಟನಿಗೆ  ಓಸಿರಾಯನೆಂದು ಜರಿದಿರುವುದು  ಸಿಕ್ಕಿದ್ದನ್ನು ಬಾಚಿಕೊಳ್ಳುವ ತಂತ್ರಗಾರಿಕೆ ಮನುಷ್ಯನ ಲಕ್ಷಣವನ್ನು ಸಮರ್ಥವಾಗಿ ಬಿಂಬಿಸಿದೆ.ಅನಾಯಾಸವಾಗಿ ಸಿಕ್ಕ ತಿಥಿಯೂಟವನ್ನು ಹೊಟ್ಟೆ ಬಿರಿಯುವಂತೆ ತಿಂದು ಲೊಚ ಲೊಚನೆ ಪಾಯಸ ನೆಕ್ಕುತ್ತಿದ್ದರೂ 'ವಡೆಯ ಗಾತ್ರ ಮಾತ್ರ ಇತ್ತಿತ್ತಲಾಗಿ ಸಣ್ಣ ಮಾಡುತ್ತಿದ್ದಾರಲ್ಲೋ ತಮ್ಮಾ.....!' ಎಂದು ಪಕ್ಕದಲ್ಲಿ ಕುಳಿತವನ ಕಿವಿಯಲ್ಲಿ ಹರಟುವ ಈ ಓಸಿರಾಯನ ಹರಾಮತನ  ಅತ್ಯಂತ ಹೇಸಿಗೆ ಮೂಡಿಸುವುದು.
ಉಂಡ ಮನೆಯ ಸೂರು ಗಳ ಎಣಿಸುವ ಈ ಮನೆ ಮುರುಕು ನೆಂಟ ಅಷ್ಟಕ್ಕೂ ಸುಮ್ಮನಾಗದೇ ಶೆಟ್ಟರು ಸತ್ತಾಗ ಅವರ ಮನೆಯಲ್ಲಿ ಅಂಗೈಯಗಲದಷ್ಟು ಗಾತ್ರದ ವಡೆ ಮಾಡಿದ್ದರೆಂದು ಹೇಳಿ ತಿಂದ ಮನೆಗೆರಡು ಬಗೆಯುವ ಮಾತನಾಡುತ್ತಾನೆ.ಇಂಥ ನೆಂಟರನ್ನು ಸತ್ತ ಹೆಣ ತಿನ್ನಲು ಮುತ್ತಿಕ್ಕಿ ಹಾತೊರೆಯುವ ರಣ ಹದ್ದುಗಳಿಗೆ ಹೋಲಿಸಿರುವ ಕವಿ ಅವರ ಅಮಾನವೀಯ ನಡವಳಿಕೆ,ಮನೆ ಮುರುಕುತನ,ಅಗಿದು ನುಂಗಲು ಹೂಡುವ ಹತ್ತಾರು ವೇಷಗಳ ಪಾತ್ರವನ್ನು ಹಸಿ ಹಸಿಯಾಗಿ ಚಿತ್ರಿಸುತ್ತಾ ಓದುಗರ ಸೂಕ್ಷ್ಮ ಮನಸ್ಥಿತಿಯನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿರುವರು.ಇಂಥ ಸುಂದರ ನಿರೂಪಣೆ " ಸಾವಿಗೆ ಬಾರದ ನೆಂಟ ವೈಕುಂಠ ಸಮಾರಾಧನೆಗೆ ಹಾಜರು!"ಕವಿತೆಯಲ್ಲಿ ಪಡಿ ಮೂಡಿದೆ.
   = ಬನವಾಸಿ ಸೋಮಶೇಖರ್.
http://banavasimaatu.blogspot.com/
ಕವಿ ಪಲವಲ್ಲಿರವರ ಕವಿತೆಯನ್ನು ಇಲ್ಲಿ ನೋಡಿರಿ.http://badari-poems.blogspot.com/

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು!
ಹಿಂದೆಯೇ ಕೌರವ ಪ್ರಸೂತಿನಿ
ತುಂಬು ಗರ್ಭಿಣಿ ಹೆಂಡತಿ,ಶಿವ ಕೊಟ್ಟ ಮಕ್ಕಳದೇ ಸಾಲು
ಚಟಾಕು ಪಾವು ಅಚ್ಚೇರು ಸೇರು
ಸತ್ತವನ ಹಿರೀ ಮಗ
ಸಪ್ಪಗೆ ನಿಂತಿದ್ದ,ಅವನ ಕೈಯನೊಮ್ಮೆ ಹಿಚುಕಿ
ಸಾಂತ್ವನದ ಲೊಚಗುಟ್ಟಿ
ಒರೆಸೇ ಒರೆಸಿದ ಬಾರದ ಕಣ್ಣೀರ...
ಮುಂದೆ ರೈಲು ನಿಂತದ್ದು
ಎಲೆ ಹರವೋ ಮುಂಚೆಯೋ
ಮೊದಲ ಪಂಕ್ತಿಗೇ...
ಓಸಿರಾಯನಿಗೆ ಮೈಯೆಲ್ಲ ತೂತು
ತುಂಬಿಕೊಳ್ಳುತ್ತೆ ಪಂಚ ಭಕ್ಷ್ಯ!
ವಡೇ ಮೇಲೆ ವಡೇ ಪೋಣಿಸಿದ
ಲೊಚ ಲೊಚನೆ ನೆಕ್ಕಿದ ಪಾಯಸ.
ಹದಿನಾರನೇ ವಡೆ ಸಂಹಾರಕೆ ಮುನ್ನ
ಪಕ್ಕದವನ ಕಿವಿಗೆ ಪಿಸುರಿದ
ಇತ್ತಿತ್ತಲಾಗೆ ಸಣ್ಣ ಮಾಡುತಾರಲ್ಲೋ
ತಮ್ಮ ವಡೆಯ?ನೀನು ನೋಡಬೇಕಿತ್ತು
ಶೆಟ್ಟರು ಸತ್ತಾಗ ಅಂಗೈ ಅಗಲ ವಡೆ
ಅಲ್ಲೂ
ಪೊಗದಸ್ತು ಗೋಡಂಬಿ!

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು
ಕರೆದರೂ ಕರೆ ಓಲೆ ಮರೆತರೂ!
ಅಮೇಧ್ಯದಿ ನಾಣ್ಯಾನ್ವೇಷಕ
ಮಂದಿ ನೆಂಟರು,ಕಳೇಬರಕೆ ಸುತ್ತೋ ಹಸಿದ
ಹದ್ದುಗಳಂತವರು...


5 comments:

  1. ಪ್ರೀತಿಯ Banavasi
    Somashekhar. ಸಾರ್,

    ನನ್ನ ಕವನವನ್ನು ನನ್ನ ಯೋಗ್ಯತೆಗೂ ಮೀರಿ, ಅದ್ಭುತವಾಗಿ ವಿಶ್ಲೇಷಿಸಿದ್ದೀರಿ. ಯಾವ ಭಾವನೆ ಇಟ್ಟುಕೊಂಡು ಕವಿತೆ ಬರೆದೆನೋ ಅದನ್ನು ಸರಿಯಾದ ದಿಕ್ಕಿನಲ್ಲಿ ಗ್ರಹಿಸಿ ಬರೆದಿದ್ದೀರ. ನನ್ನಂತಹ ಅಙ್ಞಾತ ಕವಿಯ ಬಗ್ಗೆ ಪ್ರೋತ್ಸಾಹಕರವಾಗಿ ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಕ್ಕಾಗಿ ಅನಂತ ಧನ್ಯವಾದಗಳು.

    ನಿಮ್ಮ ಪ್ರೀತಿಗೆ ನನ್ನ ಶರಣು.
    ನೀವು ಹೊಗಳುವ ಮಟ್ಟಿಗೆಯ ಕವಿತೆ
    ಬರೆಯಲು ಖಂಡಿತ ಶ್ರಮಿಸುತ್ತೇನೆ.
    ಕಾವ್ಯವನ್ನು ಕಬ್ಬಿಣದ ಕಡಲೆ
    ಆಗಿಸಬಾರದು ಎನ್ನುವುದು ನನ್ನ ಆಶಯ. ಹಾಗೆಂದು ತೀರಾ ಜೊಳ್ಳೂ ಗೀಚ ಬಾರದಲ್ಲವೇ ಗೆಳೆಯ.

    ಕವನವು ಮೂರು ನಾಲ್ಕು ಓದುಗಳಿಗೆ ವಿವಿದ ಆಯಾಮದ ಅರ್ಥ ಹೇಳ ಬಲ್ಲದಾದರೆ, ನನ್ನ
    ಪ್ರಯತ್ನಕ್ಕೂ ಸಾರ್ಥಕ್ಯ.
    ಪದಗಳು ಪ್ರೇಯಸಿಯಂತೆ, ಅವುಗಳ ಜೊತೆ ಎಷ್ಟು ಆಟವಾಡಬಲ್ಲಿವೋ ಅಷ್ಟೇ ಕಾವ್ಯ ರಸ ಸಿದ್ಧಿ!

    ನಿಮ್ಮ ಅಭಿಪ್ರಾಯಗಳಿಗೆ
    ನಾನು ಸದಾ ಕಾದಿರುತ್ತೇನೆ.

    ReplyDelete
  2. ನಿಜಕ್ಕೂ ಅದ್ಭುತವಾಗಿದೆ ನಿಮ್ಮ ವಿಮರ್ಶೆ ಅವರ ಕವನಕ್ಕೆ ಒಂದು ಕಿರೀಟವಾಗಿದೆ
    ಅವರ ಕವನಕ್ಕೆ ಜೀವನ ತುಂಬಿದ್ದಿರಾ ತುಂಬಾನೇ ಇಷ್ಟ ಆಯಿತು ಓದಿ ಅಭಿನಂದನೆಗಳು ಗೆಳೆಯ
    ನಿಮ್ಮ ವಿಮರ್ಶೆ ಎಲ್ಲ ಕವಿಗಳನ್ನು ಇನ್ನೂ ಶಿಕರಕ್ಕೆ ಕೊಂಡು ಹೋಗಲಿ ಶುಭವಾಗಲಿ :)

    ಇಂಥಹ ಒಂದು ಮನ ಮುಟ್ಟುವ ಕವಿತೆಯನ್ನು ಬರೆದ Badarinath Palavalliಅವರಿಗೂ ನನ್ನ ಅಭಿನಂದನೆಗಳು ಸರ್ :)

    ReplyDelete
  3. ಉತ್ತಮ ಕವನದ ಉತ್ತಮ ವಿಮರ್ಶೆ!

    ReplyDelete
  4. ನನ್ನ ನೆಚ್ಚಿನ ಕವಿಯ ಮೆಚ್ಚಿದ ಕವಿತೆಯ ವಿಮರ್ಶೆ ಕೂಡ ಇಷ್ಟವಾಯಿತು.

    ReplyDelete
  5. ಆತ್ಮೀಯ ಕವಿ ಬದರಿನಾಥರ ಕವನದ ಆ೦ತರ್ಯವನ್ನು ಹೊಕ್ಕು, ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದೀರಿ. ಅಭಿನ೦ದನೆಗಳು.

    ReplyDelete