Thursday, 8 September 2011

"ಗೆಳೆಯನ ಬಂಗಾರದ ಬಟ್ಟಲು ಜೈಲು ತಟ್ಟೆಯಾದ ಕಥೆ"

ಗೆಳೆಯಾ........!
ಕಡುಕಷ್ಟದಲಿ ನೀ ಬದುಕ ಪ್ರಾರಂಭಿಸಿದಿ
ಪಡಬಾರದ ಪಾಡು ಪಟ್ಟಿ
ಹಗಲಿರುಳೆನ್ನದೆ ಪರದಾಡುತ್ತಲೇ ಇದ್ದಿ
ಸುಖದ ಬಾಳಿಗಾಗಿ;ಕಂಡ ಕನಸಿಗಾಗಿ!


ಅಂದುಕೊಂಡದ್ದೆಲ್ಲ ಮಾಡಲು ಹೊರಟಿ
ಆಡು ಮುಟ್ಟದ ಸೊಪ್ಪುಂಟೇ,ನೀನು ಮಾಡದ ದಂಧೆಯುಂಟೇ
ಹಿರಿಮೆ-ಗರಿಮೆ-ಮಹಿಮೆ ನಿನ್ನ ಮೈಗೂಡಿದವು
ಭೂರಮೆ ನಿನ್ನ ಕೈ ಬೀಸಿ ಕರೆದು
ಮಡಿಲು ತುಂಬಿಕೊಂಡು ಉತ್ತುಂಗಕ್ಕೆ
ಕರೆದೊಯ್ದು ಬಾನಕ್ಕಿ ಮಾಡಿದಳು,
ಗೆಳೆಯಾ....ನೀ ಮಟ್ಟಿದ್ದೆಲ್ಲ ಚಿನ್ನ!

ಆದರೇ ನೀನು ಮಾಡಿದ್ದೇನು ಗೆಳೆಯಾ..?
ನಗುಮುಖದ ನೀ ಅರಿಪಡೆಯನ್ನೂ ಅವಚಿಕೊಂಡೆ
ನಿನ್ನ ಆಸೆಯಾಮಿಷ ದುರಾಸೆ ನೂರ್ಮಡಿಯಾಗುತ್ತಾ
ಭೂತಾಯ ಬಸಿರನ್ನು ಬಗೆಬಗೆಯುತ್ತಲೇ ಇತ್ತು
ನಿನ್ನೊಡಲ ದಾಹವೂ ತಣಿಯದಾಯಿತು
ಅವನಿಯ ಅಡಿಯಿಂದ ಮುಡಿಯನೆಲ್ಲ ವ್ಯಾಪಿಸಿತು
ಅವಳ ಮೈಮನವೆಲ್ಲವೂ ಕೆಂಪಾಯಿತು!

ಆದರೀಗ ಏನಾಯಿತು ಗೆಳೆಯಾ...?
ಭೂತಾಯವ್ವನ ಒಡಲ ದಳ್ಳುರಿ ತಟ್ಟೇಬಿಟ್ಟಿತು ನಿನಗೆ
ನಿನ್ನಾ ಕಸವರವೆಲ್ಲ ಕಸಬರಿಕೆಯಾಯಿತು
ಮೀಸೆಯೂ ಮಣ್ಣುಪಾಲಾಯಿತು
ವಜ್ರಖಚಿತ ಕಿರೀಟವೂ ಕಳಚಿ ಬಿತ್ತು
ವೈಭೋಗದರಮನೆ ನಿನ್ನವಸ್ಥೆಗೆ ಮರುಕ ಪಡುತಿಹುದು
ಬಂಗಾರದ ಬಟ್ಟಲು ಜೈಲು ತಟ್ಟೆಯಾಯಿತು !!

ಗೆಳೆಯಾ.....!
ನಿನ್ನ ಜೀವನಗಾಥೆ ಯಾರಿಗೂ ಮಾದರಿಯಲ್ಲ
ನಿನ್ನ ಹಾಗೆ ಜೀವಿಸಬೇಕು ಎನ್ನುವರಿಗೆ
ನಿನ್ನ ಕಥೆ ಭೂತವಾಗಿ ಕಾಡದೇ ಬಿಡಲ್ಲ
ನಿನ್ನ ಮೇಲಾಣೆ!! ಇದು ಸತ್ಯ ಸತ್ಯ ಸತ್ಯ!!!

      --ಬನವಾಸಿ ಸೋಮಶೇಖರ್.