ಕೆಲವು ಗೂಂಡಾ ವಕೀಲರುಗಳು ಪೂರ್ವಾಗ್ರಹ ಪೀಡಿತರಾಗಿ ಮಾಧ್ಯಮದವರು ಹಾಗೂ ಪೋಲೀಸರ ಮೇಲೆ ಅಮಾನವೀಯ ದೌರ್ಜನ್ಯ,ಹಲ್ಲೆ ನಡೆಸುವ ಮೂಲಕ ನಮ್ಮ ಪವಿತ್ರ ನ್ಯಾಯಾಂಗ ವ್ಯವಸ್ಥೆಗೆ ಅಕ್ಷರಶಃ ಚ್ಯುತಿ ತಂದರು.ಇವರು ತಮ್ಮನ್ನು ಏನೆಂದುಕೊಂಡಿರುವರೋ? ಪ್ರಜಾಪ್ರಭುತ್ವದ ಸಾರ್ವಭೌಮ ಪರಮಾಧಿಕಾರದ ಉತ್ತುಂಗ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಸಂವಿಧಾನದ ಆಶಯ,ಮೂಲೋದ್ಧೇಶ ಹಾಗೂ ನಿಯಮಗಳ ಮೇಲೆ ದಬ್ಬಾಳಿಕೆ ನಡೆಸಿರುವ ಈ ಅನ್ಯಾಯವಾದಿಗಳ ಹುಟ್ಟಡಗಲೇಬೇಕು.ಸಂವಿಧಾನದ 19 (1) ನೇ ವಿಧಿಗೆ ಕಳಂಕ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡಿರುವ ಈ ವಿಕೃತ ಮನಸುಗಳ ಮರ್ಧನ ಆಗಲೇಬೇಕು.ನಮ್ಮ ಪರಂಪರೆಗೆ,ನ್ಯಾಯ ದೇವತೆಯ ಕಣ್ಣಿಗೆ ಮಣ್ಣೆರಚಿರುವ ಈ ಕೂಳರ ಅಟ್ಟಹಾಸದ ಹಿಂದಿನ ಪಟ್ಟಭದ್ರರ ಬಣ್ಣ ಬಯಲಾಗಿ ಪ್ರಜಾಪ್ರಭುವಿಗೆ ಸತ್ಯದರಿವು ಆಗಲೇಬೇಕು.ಮೌಲ್ಯಾಧಾರಿತ ನ್ಯಾಯವಾದಿಗಳ ಮನಸ್ಸನ್ನು ಘಾಸಿಗೊಳಿಸಿರುವ ಈ ಘಟನೆ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವ ಹುನ್ನಾರುವುಳ್ಳದ್ದು.ಇಂಥ ವಿಚಾರ ಹೀನ,ಬುದ್ಧಿ ಹೀನ,ಅವಿವೇಕಿ ಲಂಪಟರಿಗೆ ಕೈಕೊಳತೊಡಿಸಿ ಜೈಲಿಗಟ್ಟಲೇಬೇಕು.ಬುಡಮೇಲು ಕೃತ್ಯವೆಸಗುವ ಯಾರನ್ನೇ ಆಗಲಿ ರಕ್ಷಿಸುವ,ಹಿನ್ನೆಲೆಯಲ್ಲಿ ಆಶ್ರಯ ನೀಡುವ ಕಾರ್ಯ ಸರ್ವಥಾ ಸಲ್ಲದು.ನಮ್ಮ ಶ್ರೀಮಂತ ಸಂಸ್ಕ್ರತಿ,ಪರಂಪರೆ,ಜನ ಜೀವನ,ನ್ಯಾಯ-ಅನ್ಯಾಯ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲಿ ಸತ್ಯ ದರ್ಶನ ಮಾಡಿಸುವ ಮಾಧ್ಯಮ ಹಾಗೂ ಅದರ ಪ್ರತಿನಿಧಿಗಳ ಬದುಕಿಗೆ ಭದ್ರತೆ ಮತ್ತು ರಕ್ಷಣೆಯೇ ಇಲ್ಲವಾಗಿದೆ.ಜೀವದ ಹಂಗು ತೊರೆದು ಕಾವಲು ನಾಯಿಯಂತೆ ಕಾರ್ಯವೆಸಗುವ ಪತ್ರಕರ್ತರಿಗೆ,ಕಾನೂನು ಮತ್ತು ಸುವ್ಯವಸ್ಥೆಯ ಸೇವೆಗೈಯುವ ಪೊಲೀಸರಿಗೆ ಸೂಕ್ತ ರಕ್ಷಣೆ ನೀಡುವ ಹೊಣೆಗಾರಿಕೆ ಹಿಂದಿಗಿಂತಲೂ ಈಗ ಅತ್ಯಂತಯ ಅಗತ್ಯವಾಗಿದೆ ಎಂಬುದನ್ನು ದಿನಾಂಕ:02-03-2012 ರಂದು ಬೆಂಗಳೂರಿನ ನ್ಯಾಯ ದೇವತೆಯ ಅಂಗಳದಲ್ಲಿ ನಡೆದ ಅನ್ಯಾಯವಾದಿಗಳ ಕ್ರೌರ್ಯ,ಅನಾಗರಿಕ ಕೃತ್ಯ ಜೀವಂತ ಸಾಕ್ಷಿಯಾಗಿ ಕರ್ನಾಟಕ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.
ನಮ್ಮ ಮಾಧ್ಯಮ ಮಿತ್ರರೂ ಸಹ ಇತ್ತೀಚೆಗೆ ಅತೀ ರಂಜಿತ ಸುದ್ಧಿಗಳನ್ನು ಭಿತ್ತರಿಸುತ್ತಾ ಸಮಾಜಕ್ಕೆ ಅನಾವಶ್ಯಕವಾದ ವಿಚಾರಗಳನ್ನು ಜನರ ಮೇಲೆ ಹೇರುತ್ತಿರುವುದು,ಹಾಗೂ ಪ್ರಚೋದಿಸುವುದು ಅಧಿಕವಾಗುತ್ತಿದೆ.ಇದು ಭೌದ್ಧಿಕ ದಿವಾಳಿತನದ ಪರಮಾವದಿಯಾಗಿದೆ.ಮಾಧ್ಯಮಗಳೂ ಕೂಡ ನೀತಿ ಸಂಹಿತೆಯನ್ನು ಅಳವಡಿಸಿಕೊಂಡು ಮೌಲ್ಯಾಧಾರಿತವಾದ ಸಂಗತಿಗಳ ಮೇಲೆಯೇ ಬೆಳಕು ಚೆಲ್ಲುವ ಸೇವೆ ಒದಗಿಸುವಂತಾಗಬೇಕು.ರಂಜನೀಯವಾದ,ವೈಭವೀಕರಣದ ಸುದ್ಧಿ ಪ್ರಸಾರದ ಅವಶ್ಯಕತೆ ಖಂಡಿತಾ ಅಗತ್ಯವಿಲ್ಲ.ಜೊತೆಗೆ ಎಲ್ಲಾ ಮಾಧ್ಯಮ ಮಿತ್ರರೂ ಅನವಶ್ಯಕವಾದ ಸ್ಪರ್ಧೆ ನಡೆಸದೇ ತಮ್ಮ ಒಗ್ಗಟ್ಟನ್ನು ಗಟ್ಟಿಗೊಳಿಸಿಕೊಂಡರೆ ಅತ್ಯುತ್ತಮ ಕಾರ್ಯವಾದೀತೆಂದು ನಾನು ಭಾವಿಸುತ್ತೇನೆ.ತಮ್ಮ ಕಾರ್ಯ ವಿನೂತನವಾಗಿದ್ದರೆ ಸಾಕು.ಸುದ್ಧಿ ಮಾಧ್ಯಮಗಳಿಗೆ ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿಯುತ ತಾಕತ್ತು ಇದೆ ಎಂಬುದನ್ನು ಯಾರೂ ಮರೆಯಬಾರದು.
= ಬನವಾಸಿ ಸೋಮಶೇಖರ್,ಮಂಗಳೂರು.
http://banavasimaatu.blogspot.com/ಬನವಾಸಿ ಮಾತು/
email:banavasisomashekhar@yahoo.com
email:banavasisomashekhar@yahoo.com