Saturday 13 October 2012

"...........ಆ ಮಹಾನ್ ವ್ಯಕ್ತಿ ಮಡಿದು ಆರು ವರ್ಷಗಳಾದವು" -ಪ್ರತಾಪ್ ಸಿಂಹ

ಸುಜ್ಞಾನವಂತರಾದ ಶ್ರೀಯುತ ಪ್ರತಾಪ್ ಸಿಂಹ ರವರಿಗೆ ಸಪ್ರೇಮ ನಮಸ್ಕಾರ.

ನಿಮ್ಮ ಈ ದಿನದ ಕನ್ನಡ ಪ್ರಭದಲ್ಲಿನ " ದಲಿತರ ಮತಗಳು ಮಾರಾಟಕ್ಕಿಲ್ಲ ಎಂದ ಆ ಮಹಾನ್ ವ್ಯಕ್ತಿ ಮಡಿದು ಆರು ವರ್ಷಗಳಾದವು" ಲೇಖನವನ್ನು ಓದಿ ಅತ್ಯಾನಂದವಾಯಿತು.ಮೊದಲಿನಿಂದಲೂ ನಿಮ್ಮ ಬರಹಗಳನ್ನೂ ಓದಿ ಆಸ್ವಾದಿಸಿರುವೆ.ಸಮಾಜಮುಖಿಯಾಗಿದ್ದು ಬದ್ಧತೆ ಹೊಂದಿ ಬರೆದ ಲೇಖನದಲ್ಲಿ ಎಲ್ಲಿಯೂ ಯಾವ ಪೂರ್ವಾಗ್ರಹಗಳೂ ಕಾಣ ಬರಲಿಲ್ಲ.ಈ ಸಾರ್ವಭೌಮ ಪರಮಾಧಿಕಾರದ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಒಂದು ವರ್ಗಕ್ಕೆ ನೀವು ಕನ್ನಡಿ ಹಿಡಿದಿದ್ದೀರಿ.ಜೊತೆಗೆ ಹೋರಾಟಗಾರನಿರಬೇಕಾದ ಉದ್ದೇಶವೇನು ಎಂಬುದನ್ನು ಸರ್ವರಿಗೂ ಮನಗಾಣಿಸಿದ್ದೀರಿ. 70 ರ ದಶಕದ ನಂತರ ಕನ್ನಡ ನಾಡಿನಲ್ಲಿ ಉದಯಿಸಿ ಹೋರಾಟದ ಕಿಚ್ಚು ಹಚ್ಚಿದ್ದ ದಲಿತ ಚಳುವಳಿ,ಸ್ವಾರ್ಥ-ಲಾಲಸೆಗಳಿಗೊಳಗಾಗಿ ದಿಕ್ಕೆಟ್ಟು ಹೋದ ಬಗ್ಗೆಯೂ,ಮುಂದೆ ಈ ಜನಾಂಗ ಒಗ್ಗೂಡಬೇಕಾದ ಅವಶ್ಯಕತೆಯ ಬಗ್ಗೆಯೂ ನಿಮ್ಮ  ಲೇಖನಿ ಬೆಳಕು ಚೆಲ್ಲಲೆಂದು ಆಶಿಸುತ್ತೇನೆ.ನಿಮ್ಮಲ್ಲಿರುವ ಹರಿತವಾದ ಲೇಖನಿಯು ಹೀಗೆ ಸರ್ವರನ್ನೂ ತಲುಪುವ ಮಾನದಂಡವಾಗಿ ನಮ್ಮನ್ನು ಪ್ರೇರಿಸಲಿ ಎಂದಷ್ಟೇ ಹೇಳಬಲ್ಲೆ.


ಪ್ರೀತಿಯಿಂದ,

ತಮ್ಮ ಅಭಿಮಾನಿ.

ಬನವಾಸಿ ಸೋಮಶೇಖರ್.

Tuesday 21 August 2012

ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ:ಸುಧಾ ಮೂರ್ತಿಯವರ ದೃಷ್ಠಿಯಲ್ಲಿ

'ಈ ಜಗತ್ತು ಕಂಡ ಅದ್ಭುತ ಹಾಗೂ ಜೀವಂತ ವ್ಯಕ್ತಿಯ ಹೋರಾಟದ ಕಥೆಯ ತಿರುಳನ್ನು ಕಣ್ಣಿಗೆ ಕಟ್ಟಿದ ನಮ್ಮ ಕನ್ನಡ ನಾಡಿನ ಹೆಮ್ಮೆಯ ಆದರ್ಶ ಮತ್ತು ಮಾದರಿ ಮಹಿಳೆ  ಹಿರಿಯ ಸಹೋದರಿ ಸುಧಾ ನಾರಾಯಣ ಮೂರ್ತಿ.'

ಈ ದಿನದ ಕನ್ನಡ ಪ್ರಭ (21-08-2012) ರ ಪತ್ರಿಕೆಯ ಮುಖ ಪುಟದ "ಸೂಚಿ ಯೊಂದಿಗೆ ಒಂದು ಸುಂದರ ಸಂಜೆ" ಎಂಬ ವಿಶಿಷ್ಟ ಹಾಗೂ ಮೌಲಿಕ ಚಿಂತನೆಯ ಅಮೋಘ ಅನುಭವವನ್ನು ಸುಧಾ ಮೂರ್ತಿಯವರ ಲೇಖನಿಯಿಂದ ಓದಿ ಪುಳಕಿತನಾದೆ.ಕಣ್ಣಾಲಿಗಳು ತೇವಗೊಂಡವಲ್ಲದೇ ಆ ಮಹಿಳೆಯ ಧೀರೋದಾತ್ತ ಧೀಃಶಕ್ತಿ ವ್ಯಕ್ತಿತ್ವ ಹಾಗೂ ಆ ಮಹಾ ತಾಯಿಯ ಹೋರಾಟದ ತಲಸ್ಪರ್ಷಿ ನಿರೂಪಣೆಯನ್ನು ತಿಳಿದು ರೋಮಾಂಚನವಾಯಿತು.

ಮಯನ್ ಮಾರ್ (ಬರ್ಮಾ) ದೇಶದ ಜನರಲ್ ಆನ್ ಸಾನ್ ಮತ್ತು ಸೂಚಿ ದಂಪತಿಗಳ ಪುತ್ರಿಯೇ ಈ 'ಆನ್ ಸೂಚಿ'.ಇವಳ ಜೀವನವೇ ಒಂದು ದೀರ್ಘ ಹೋರಾದ ಕಥೆಯಾದ ಬಗೆಯನ್ನು ಸುಧಾ ನಾರಾಯಣ ಮೂರ್ತಿಯವರು ತಮ್ಮ ಲೇಖನಿಯಿಂದ ಪಡೆಮೂಡಿಸಿ ಅವರ ಸ್ಪೂರ್ಥಿಯುತ ಬದುಕಿನ ಚಿತ್ತಾಕರ್ಷಕ ವ್ಯಕ್ತಿತ್ವದ ಘಮವನ್ನು ಕನ್ನಡ ಪ್ರಭ ಓದುಗರಿಗೆ ಉಣ ಬಡಿಸಿದ್ದಾರೆ.

14-08-2012 ರಂದು  "ನಿಪಿಡೋರ್ " ನಲ್ಲಿ ಸಂಜೆ 5-ಘಂಟೆಗೆ ತಮ್ಮ ಪತಿ ಭಾರತ ದೇಶದ ಹೆಮ್ಮೆಯ ಹಾಗೂ ಕನ್ನಡ ನಾಡಿನ ಕೀರ್ತಿಶಾಲಿ ಸಾಧಕ ಸಂಪನ್ನ ಡಾ|| ನಾರಾಯಣ ಮೂರ್ತಿ ಹಾಗೂ ತಮ್ಮ ಸಹೋದರಿಯರೊಂದಿಗೆ ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ ಯನ್ನು ಭೇಟಿಯಾಗಿ ಅವರೊಂದಿಗೆ ಕಳೆದ ಮಧು ಕ್ಷಣಗಳನ್ನು ಕಣ್ಣಿಗೆ ಕಟ್ಟಿದ್ದಾರೆ.ಈ ಅಪರೂಪದ ಹಾಗೂ ಅವಿಸ್ಮರಣೀಯವಾಗುವ ಲೇಖನವನ್ನು ಈ ದಿನದ ಕನ್ನಡ ಪ್ರಭದಲ್ಲಿ ಓದಿ ನಮ್ಮ ಹೋರಾಟದ ಬದುಕಿಗೆ ಸ್ಪೂರ್ಥಿ ಪಡೆಯಬಹುದು.

ಸೂಚಿಯವರು-ಸುಧಾ ಮೂರ್ತಿಯವರನ್ನು ಬೀಳ್ಕೊಡುವಾಗ ಸುಧಾ ಮ್ಯಾಡಮ್ ಅವರು ನಿವೇದಿಸಿಕೊಂಡ ಈ ಸಾಲುಗಳನ್ನು ಓಮ್ಮೆ ಓದಿ.
  " ಮ್ಯಾಡಮ್ ಭಾರತೀಯ ಸಂಸ್ಕೃತಿಯಲ್ಲಿ ನಮಗಿಂತ ಹಿರಿಯರಾದ,ಜ್ಞಾನದಿಂದಲೂ ಗುಣದಿಂದಲೂ ಶ್ರೇಷ್ಠರಾದ ವ್ಯಕ್ತಿಗಳಿಗೆ ಕಾಲು ಮುಟ್ಟಿ ನಮಸ್ಕರಿಸಿ ಗೌರವ ಸೂಚಿಸುವದು ಪದ್ಧತಿ.ಈ ಪದ್ಧತಿ ಅನೇಕ ಕಾಲದಿಂದಲೂ ನಡೆದು ಬಂದಿದೆ.ನೀವು ನನ್ನ ದೃಷ್ಠಿಯಲ್ಲಿ ಎಲ್ಲ ರೀತಿಯಿಂದಲೂ ಈ ನಮಸ್ಕಾರಕ್ಕೆ ಯೋಗ್ಯರು,ನನಗೆ ನೀವು 'ಬೇಡ' ಅನ್ನಕೂಡದು ಎಂದಾಗ ತುಂಬಾ ಸಂತೋಷ ಮತ್ತು ಅಂತಃಕರಣದಿಂದ ನನ್ನ ಎರಡೂ ಕೈ ಹಿಡಿದು ಈ ಪದ್ಧತಿ ನಮ್ಮ ಬೌದ್ಧ ಧರ್ಮದಲ್ಲಿಯೂ ಇದೆ ಎಂದರು,ನಾನು ಬಾಗಿ ಅವರ ಕಾಲಿಗೆ ನಮಸ್ಕರಿಸಿದೆ."

(ಜೀವನ ಸ್ಫರ್ಥಿಗೆ ಸೂಚಿಯ ಹೋರಾಟದ ಬದುಕು ನಮಗೆ ಆದರ್ಶಪ್ರಾಯವಾಗಲಿ ಎಂಬುದೇ ನನ್ನಾಶಯ)
   
=ಬನವಾಸಿ ಸೋಮಶೇಖರ್.

Tuesday 5 June 2012

ಅಸಮಾನತೆ ಮತ್ತು ಮೌಢ್ಯತೆಗಳ ರುದ್ರ ನರ್ತನವಾಗುವುದು ಬೇಡ.


ಜಾತಿ,ಅಸಮಾನತೆ,ಶೋಷಣೆ,ಪುರೋಹಿತಶಾಯಿಯಂಥ ಕಮಟು ಕಂಧಾಚಾರಗಳಿಗೆ ಸೆಡ್ಡು ಹೊಡೆದು ವಿಶ್ವಮಾನವತೆಯ ಸಂದೇಶ ಸಾರಿದ್ದ ಸಾಹಿತ್ಯ ದಿಗ್ಗಜ,ರಸ ಋಷಿ,ಮಾನವತಾವಾದಿ ಕುವೆಂಪು ಅವರನ್ನು ತಮ್ಮ ಜಾತಿ ಕುಲ ಬಾಂಧವನೆಂದು ಸಮಾವೇಷದಲ್ಲಿ ಮೆರೆದಾಡಿದ ನಮ್ಮ ಒಕ್ಕಲಿಗ ಬಂಧುಗಳ ಮನೋಸ್ಥಿತಿಯನ್ನು ನೋಡಿ ಮರುಕುಂಟಾಗುವುದು.
ಗುಡಿ,ಚರ್ಚು,ಮಸೀದಿಗಳನ್ನು ಬಿಟ್ಟು ಹೊರಬನ್ನಿ...ಎಂದು ಕರೆ ನೀಡಿ ಮನುಜ ಮತವೇ ವಿಶ್ವಮತವೆಂದು ಸಾರಿ ಹೇಳಿದ ಕುವೆಂಪು ಅವರನ್ನು ತಮ್ಮ ಜಾತಿ ನೆಲೆಯಲ್ಲಿ ಅನಾವರಣಗೊಳಿಸಿಕೊಂಡು ಅವರ ಶ್ರೀಮಂತ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಅಪಮಾನ ಮಾಡಿರುವುದು ಖೇದಕರ ಸಂಗತಿಯಾಗಿದೆ. ಯಾವ ಗೊಡ್ಡು ವ್ಯವಸ್ಥೆಯನ್ನು ಕುವೆಂಪು ಅವರು ವಿರೋದಿಸಿ ಅದರಂತೆ ಬಾಳಿದರೋ  ಅದೇ ವ್ಯವಸ್ಥೆಯನ್ನು ವೈಭವೀಕರಿಸಿ ಅವರ ಮಹಾನ್ ವ್ಯಕ್ತಿತ್ವಕ್ಕೆ ಅಕ್ಷರಶಃ ಮಸಿ ಬಳಿಯುವ ಮತ್ತು ಅವರನ್ನು ಒಕ್ಕಲಿಗ ಜಾತಿಗೆ ಸೀಮಿತಗೊಳಿಸುವ ಸಂಕುಚಿತ ಮನೋಭಾವದ ದರ್ಶನವೂ ಆಯಿತು.ಜ್ಞಾನ ಮತ್ತು ಸ್ವಾಭಿಮಾನಗಳೇ ತಮ್ಮ ತಮ್ಮ ಏಳಿಗೆಗೆ ಊರುಗೋಲಾಗಬೇಕು. ಧೀಮಂತ ವ್ಯಕ್ತಿಗಳ ಭಾವ ಚಿತ್ರ,ಹೆಸರುಗಳನ್ನು ಹೇಳಿಕೊಂಡು ಬೇಳೆ ಬೇಯಿಸಿಕೊಳ್ಳುವ ಜಾಣತನ ಬೇಡ.ಪುರೋಹಿತಶಾಯಿಯನ್ನು ವೈಭವೀಕರಿಸಿದಷ್ಟೂ ಅಸಮಾನತೆ ಮತ್ತು ಮೌಢ್ಯತೆಗಳ ರುದ್ರ ನರ್ತನವಾಗುವುದೆಂಬ ತಿಳುವಳಿಕೆ ನಮ್ಮ ಬಂಧುಗಳಲ್ಲಿ ಮೂಡಿ ಬರಲಿ.
= ಬನವಾಸಿ ಸೋಮಶೇಖರ್.
   05-06-2012

Sunday 15 April 2012

ಎಲ್ಲಾ ನೀನೆ ನೀನೆ!.

ನನ್ನ ಹಾಡು ನನ್ನದಲ್ಲ
ನನ್ನ ಪಾಡು ನನ್ನದಲ್ಲ
ನನ್ನ ಹಾಡು ನನ್ನ ಪಾಡು
ಎಲ್ಲಾ ನೀನೆ ನೀನೆ!.
= ಬನವಾಸಿ ಸೋಮಶೇಖರ್.

Saturday 14 April 2012

ಸಮಾನತೆ ಕನಸಿಗೆ ಬೆಳಕು ನೀಡಿದ ಪ್ರಜಾವಾಣಿ.

ಮಾನ್ಯ ಸಂಪಾದಕರು,ಪ್ರಜಾವಾಣಿ ಬೆಂಗಳೂರು.

ಮಾನ್ಯರೆ,ಇಂದಿನ ಪ್ರಜಾವಾಣಿ ಪತ್ರಿಕೆಯನ್ನು ನೋಡುತ್ತಲೇ ಆನಂದಿತನಾದೆ.ಅಮೋಘ ಮತ್ತು ಅದ್ವಿತೀಯ ಸೌಂದರ್ಯವನ್ನು ಆಸ್ವಾದಿಸಿದ ಅನುಭವವಾಯಿತು.ಪತ್ರಿಕೆಗೆ ಇರುವ ಸಾಮಾಜಿಕ ಬದ್ಧತೆ, ಶೋಷಿತ ಹಾಗೂ ತುಳಿತಕ್ಕೊಳಗಾದ ಜನವರ್ಗದ ಬಗ್ಗೆ ಇರುವ ಶ್ರದ್ಧಾ ಕಾಳಜಿಯನ್ನು ತಿಳಿದು ಹರ್ಷಿತನಾದೆ.ಪ್ರಜಾವಾಣಿಯನ್ನು ಕಳೆದ 20 ವರ್ಷಗಳಿಂದ ಒಂದಿನವೂ ತಪ್ಪದೇ ಓದುತ್ತಿದ್ದೇವೆ.ಅದರ ತತ್ವ,ನೀತಿ,ಸಿದ್ಧಾಂತಗಳಿಗೆ ಮಾರುಹೋಗಿದ್ದೇವೆ.ಪ್ರೋ.ರಾಬಿನ್ ಜೆಫ್ರಿ ಮಾತುಗಳಿಂದ ಪ್ರೇರಿತರಾಗಿ ದಲಿತರ ನೋವು ನಲಿವುಗಳಿಗೆ ಸ್ಪಂದಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಾಬಾ ಸಾಹೇಬರ ಜನ್ಮ ದಿನದಂದು ಈ ದಿನದ (14-04-2012) ಸಂಚಿಕೆಯನ್ನು ಚಿತ್ತಾಕರ್ಷಕವಾಗಿ ಹೊರ ತಂದಿದ್ದೀರಿ.ಕರ್ನಾಟಕ ಮಾಧ್ಯಮ ಕ್ಷೇತ್ರದ ಇತಿಹಾಸ ಪುಟಗಳಲ್ಲಿ ಪ್ರಜವಾಣಿಯ ಈ ಸಂಚಿಕೆ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿತೆಂದು ಹೇಳ ಬಯಸುತ್ತೇನೆ.ದೇವನೂರು ಮಹಾದೇವರನ್ನು ಅತಿಥಿ ಸಂಪಾದಕರನ್ನಾಗಿ ಗೌರವಿಸುವ ಮೂಲಕ ಪತ್ರಿಕೆ ಹಿರಿಮೆಯನ್ನೇ ಮೆರೆದಿದೆ.ಅವರ ಹಸ್ತಾಕ್ಷರಗಳುಳ್ಳ " ಸಮಾನತೆ ಕನಸನ್ನು ಮತ್ತೆ ಕಾಣುತ್ತ" ಲೇಖನವನ್ನು ಓದಿ ರೋಮಾಂಚನವಾಯಿತು.ಪತ್ರಿಕೆಯ  ಪ್ರತಿ ಪುಟಗಳಲ್ಲೂ ದಲಿತರ ಬದುಕಿನ ನೈಜ ಸ್ಥಿತಿಗಳನ್ನು ಅನಾವರಣಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಜಾಗ್ರತಗೊಳಿಸಲಾಗಿದೆಸುದೇಶ ದೊಡ್ಡಪಾಳ್ಯ,ಡಾ.ನಟರಾಜು ಹುಳಿಯಾರ್,ಎಚ್.ಎ.ಅನಿಲ್ ಕುಮಾರ್,ಸುಬ್ಬು ಹೊಲೆಯಾರ್,ಎನ್.ಕೆ.ಹನುಮಯ್ಯ,ಡಾ.ಎಲ್.ಹನುಮಂತಯ್ಯ,ಇಂದೂಧರ ಹೊನ್ನಾಪುರ,ಪ್ರೊ.ರಾಜೇಂದ್ರ ಜೆನ್ನಿ,ಪ್ರೊ.ಗೋಪಾಲ್ ಗುರು,ಆನಂದ ತೇಲ್ ತುಂಬ್ಡೆ,ಕೆ.ಎಲ್.ಚಂದ್ರಶೇಖರ್ ಐಜೂರ್ ಮತ್ತು ಪ್ರೊ.ರವಿವರ್ಮ ಕುಮಾರ್ ಅವರುಗಳ ಲೇಖನ,ಬರಹಗಳು ಪರಿಪೂರ್ಣ ಮಾಹಿತಿಯನ್ನು ಹೊರತೆಗೆದಿದ್ದು ದಲಿತ ಪ್ರಜ್ಞೆಗೆ ಬೆಳಕು ನೀಡಿವೆ.ಅತಿಥಿ ಸಂಪಾದಕರ 'ಸಾಮಾಜಿಕ ಪೊಲೀಸರು ಅಗತ್ಯ'ಸಂಪಾದಕೀಯ ಬರಹವು ಸರ್ಕಾರದ ಕಣ್ಣು ತೆರೆಸುವಲ್ಲಿ ಸಫಲವಾಗಬುದೆಂದು ಭರವಸೆ ಮೂಡಿಸಿದೆ.ಇಂಥ ವಿನೂತನವಾದ ಪ್ರಯತ್ನಕ್ಕೆ ಕೈ ಹಾಕಿ ಸಾಕಾರಗೊಳಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆತ್ಮಕ್ಕೆ ಅಕ್ಷರಶಃ ಗೌರವಾದರಗಳನ್ನು ಸಲ್ಲಿಸಿದ್ದೀರಿ.ಪತ್ರಿಕೆಗೂ ಅದರ ಸಂಪೂರ್ಣ ಬಳಗಕ್ಕೂ ಅಭಿನಂದನೆಗಳು ಸಲ್ಲುತ್ತವೆ.ಈ ಕಾಯಕ ನಿರಂತರವಾಗಿ ಸಾಗುತ್ತಿರಲಿ.
 
 
        ತಮ್ಮ ಅಭಿಮಾನಿ

ಬನವಾಸಿ ಸೋಮಶೇಖರ.ಮ0ಗಳೂರು.
9480201994

Tuesday 10 April 2012

ಕಪ್ಪು ಮೋಡ: ಕೆಂಪು ಚುಕ್ಕೆ! ಹಿಂದೂ ಸಮಾಜ ಚಿಕಿತ್ಸಕ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್.

ಕಪ್ಪು ಕಪ್ಪು ಮೋಡದಲಿ
ಕಗ್ಗತ್ತಲ ಬಾನಿನಲಿ
ಮೂಡಿತೊಂದು ಕೆಂಪು ಚುಕ್ಕೆಯೋ
ಓ.........ರಾಮಣ್ಣ ಬಡವರೆದೆಯ ಆಶಾಕಿರಣವೋ!

ಈಗ್ಗೆ ಒಂದು ನೂರಾ ಇಪ್ಪತ್ತೊಂದು ವರ್ಷಗಳ ಹಿಂದೆ ಕಬೀರ್ ಪಂಥದ ತೇಜಃಸ್ವರೂಪಿಯಾದ ಸಾಧುವರೇಣ್ಯರು ಮೋಹಿಗೆ ಭೇಟಿ ಇತ್ತ ಸಂದರ್ಭದಲ್ಲಿ ಅಲ್ಲಿಯೇ ಸೈನಿಕ ಶಾಲೆಯ ಮುಖ್ಯೋಪಾಧ್ಯಾಯ ವೃತ್ತಿಯಲ್ಲಿದ್ದ ರಾಮಜೀ ಸಕ್ಪಾಲ ಮತ್ತು ಕಬೀರ್ ಪಂಥಾನುಯಾಯಿ ದೈವ ಭಕ್ತೆ ಭೀಮಾಬಾಯಿ ದಂಪತಿಗಳಿಗೆ ದರ್ಶನ ಭಾಗ್ಯ ನೀಡಿ ಅವರ ಮೇಲೆ ಕೃಪಾವಲೋಕನ ಬೀರಿ ಹೃದಯ ತುಂಬಿ ಹರಸುತ್ತಾರೆ.ಹದಿಮೂರು ಮಕ್ಕಳನ್ನು ಪಡೆದಿದ್ದ ರಾಮಜೀ ಸಂಸಾರದ ತಾಪತ್ರಯಗಳನ್ನು ಆ ಸಾಧುಗಳ ಬಳಿ ಹೇಳಿಕೊಳ್ಳುತ್ತಾ ಬರುವ ಅಲ್ಪ ಸಂಬಳದಿಂದ ಮಕ್ಕಳನ್ನು ಸಾಕುವುದು ಕಷ್ಟವಾಗುವುದು ಎಂಬ ವಾಸ್ತವವನ್ನು,ಭಕ್ತಿ ಭಾವದಿಂದ ಅಂತರಂಗವನ್ನು ಬಿಚ್ಚಿಡುತ್ತಾರೆ.ಸಾಧುಗಳು ಅವರನ್ನು ಪ್ರೀತಿಯಿಂದ ಸಂತೈಸುತ್ತಾ ಆ ಬಗ್ಗೆ ಚಿಂತಿಸಬೇಡ,"ನೀನೂ ಮತ್ತು ನಿನ್ನ ಹೆಂಡತಿಯೂ ಪುಣ್ಯಶಾಲಿಗಳು.ಮಹಾ ಪುರುಷನೊಬ್ಬ ನಿಮಗೆ ಮಗನಾಗಿ ಜನಿಸುತ್ತಾನೆ.ನಿನ್ನ ವಂಶಕ್ಕವನು ಬೆಳಕಾಗುತ್ತಾನೆ.ಜಗತ್ತಿನಲ್ಲೆಲ್ಲ ಅವನ ಕೀರ್ತಿ ಪಸರಿಸಿ ಜಗದ್ವಿಖ್ಯಾತವಾಗುವುದು"ಎಂಬ ದಿವ್ಯವಾಣಿಯೊಂದಿಗೆ ಆಶೀರ್ವದಿಸಿ ಮರಳುತ್ತಾರೆ.

ಆಗ ಭಾರತ ದೇಶದ ಅಸಂಖ್ಯಾತ ಶೋಷಿತರು,ತುಳಿತಕ್ಕೊಳಗಾದವರ ಬದುಕಿನ ತುಂಬೆಲ್ಲ ಬರೀ ಕಗ್ಗತ್ತಲು ಆವರಿಸಿಕೊಂಡಿತ್ತು!ಜಾತೀಯತೆ,ಅಸಮಾನತೆ,ಅಸ್ಪೃಶ್ಯತೆ ಹಸಿ ಹಸಿಯಾಗಿ ತಾಂಡವಾಡುತ್ತಿತ್ತು.ಮಡಿ ಮೈಲಿಗೆಯ ಭಾವನೆಯು ವಿಸ್ತಾರವಾಗಿ ಚಾಚಿಕೊಂಡು ಪೆಡಂಭೂತವಾಗಿ ಕಾಡುತ್ತಿತ್ತು.ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ ಎಂಬ ಚಾತುರ್ವರ್ಣ ಪದ್ಧತಿಯು ಎಲ್ಲೆಡೆ ತನ್ನ ಛಾಪನ್ನು ಗಟ್ಟಿಯಾಗಿ ಭದ್ರಗೊಳಿಸಿಕೊಂಡಿತ್ತು.ಹೊಲೆಯ,ಮಹರ್,ಮಾದಿಗ,ಸಮಗಾರ,ಚಮಗಾರ,ಚಲವಾದಿ,ಚನ್ನಯ್ಯ,ಡೋಹರ,ಮೋಚಿ,ಮಚ್ಚೆಗಾರ,
ಭಂಗಿ,ಮಾಂಗ್,ಮಾಲಾ,ಮುಲ್ಲರ್,ಪರಯಾ,ಪುಲಯ,ಜಾತವ,ವಾಲ್ಮೀಕಿ,ದೋಮ್,ಮೌರ್ಯ,ಇತ್ಯಾದಿ ಇತ್ಯಾದಿ......ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ಹೆಸರುಗಳಿಂದ ಕರೆಯಲ್ಪಡುತ್ತಿರುವ 'ಅಸ್ಪೃಶ್ಯರು' (ಸವರ್ಣಿಯರು ಇಟ್ಟ ಹೆಸರು) ಎಂಬ 'ನಾಗಾ ಜನಾಂಗ' ಸಾಮಾಜಿಕ,ಆರ್ಥಿಕ,ಶೈಕ್ಷಣಿಕ,ಸಾಂಸ್ಕೃತಿಕ,ರಾಜಕೀಯ ಇತ್ಯಾದಿ ಎಲ್ಲಾ ರಂಗದಲ್ಲೂ ಶೋಷಣೆ-ಅಸಮಾನತೆಗೆ ತುತ್ತಾಗಿ ಶೋಚನೀಯ ಸ್ಥಿತಿಯನ್ನು ಅನುಭವಿಸುತ್ತಿತ್ತು.ಇಂಥ ಅನೀತಿ,ಅಜ್ಞಾನ,ಅನ್ಯಾಯ,ಮೌಢ್ಯಾಂಧಕಾರ ಕವಿದುಕೊಂಡ ಕಗ್ಗತ್ತಲ ಬಾನಿನಲ್ಲಿ ಬಂಡಾಯದ ಮತ್ತು ಕ್ರಾಂತಿಯ'ಕೆಂಪು'ದೃವತಾರೆಯಾಗಿ ದಲಿತರು-ದಮನಕ್ಕೊಳಗಾದವರ ಬದುಕಿನ ಹೊಸ ಆಶಾ ಕಿರಣವಾಗಿ ಭೀಮಾಬಾಯಿ ರಾಮಜೀ ದಂಪತಿಗಳಿಗೆ ಹದಿನಾಲ್ಕನೇ ಮಗನಾಗಿ 1891ರ ಏಪ್ರೀಲ್ 14 ರಂದು ಡಾ.ಭೀಮರಾವ್ ರಾಮಜೀ ಅಂಬೇಡ್ಕರ್ ಜನ್ಮ ತಾಳುವ ಮೂಲಕ ಸಾಧುವರೇಣ್ಯರು ಹೇಳಿದ ಭವಿಷ್ಯವಾಣಿ ಅಕ್ಷರಶಃ ದಿಟವಾಯಿತು.ಈ ಅರ್ಥದಲ್ಲಿ ನಾನು ಲೇಖನದ ಪ್ರಾಂಭದಲ್ಲಿ ಉಪಯೋಗಿಸಿಕೊಂಡಿರುವ ಕವಿ ಸಾಲುಗಳು ಅರ್ಥಪೂರ್ಣವಾಗಿದೆ.

ಚಿಕ್ಕಂದಿನಲ್ಲಿಯೇ ಅತ್ಯುತ್ತಮ ಸಂಸ್ಕಾರದ ಸುಸಂಸ್ಕೃತ ಮನೆತನದ ವಾತಾವರಣದಲ್ಲಿ ಬೆಳೆದ ಅಂಬೇಡ್ಕರ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ದಪೋಲಿ,ಸತಾರ,ಮುಂಬೈಗಳಲ್ಲಿ ಮುಗಿಸಿಕೊಂಡ ನಂತರ ಮುಂಬೈ,ಕೋಲಂಬಿಯಾ,ಲಂಡನ್ ಮತ್ತು ಬಾನ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗವನ್ನು ಪೂರೈಸಿಕೊಂಡು, ಅದ್ವಿತೀಯ ಆದರ್ಶ ಮತ್ತು ಮಹಾನ್ ಮುತ್ಸದ್ಧಿ,ಚಿಂತಕ,ಚಿಕಿತ್ಸಕ,ವಿದ್ವಾಂಸರಾಗಿ ಹೊರಹೊಮ್ಮಿದ್ದೊಂದು ಯಶೋಗಾಥೆ ಎನ್ನುವುದಕ್ಕಿಂತ ಸ್ವಾಭಿಮಾನ,ಸತತಾಭ್ಯಾಸದ ಮನೋವೃತ್ತಿಯೇ ಕಾರಣವೆನ್ನಬೇಕು.ನಂತರ ಬ್ಯಾರಿಷ್ಟರ್ ಪದವಿ ಪಡೆದು ಅವರು ಮುಂಬೈ ಉಚ್ಛ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಅಲ್ಲಿನ ಸರ್ಕಾರಿ ಕಾನೂನು ವಿಶ್ವವಿದ್ಯಾಲಯದ ಪ್ರಾಚಾರ್ಯರಾಗಿ ಹೆಗ್ಗಳಿಕೆಯ ಸೇವೆಗೈದರು.


ಹಿಂದು ಸಮಾಜದ ದುರ್ಬಲ, ಹಿಂದುಳಿದ,ಅಲ್ಪ ಸಂಖ್ಯಾತ ಮತ್ತು ಶೋಷಿತ-ನಿರ್ಲಕ್ಷಿತ ಅಸ್ಪೃಶ್ಯರ ಸಂಕಷ್ಟಕ್ಕೆ ನೋವಿಗೆ ಮುಖವಾಣಿಯಾಗಿ ನಿಂತವರು ಅಂಬೇಡ್ಕರ್. ತುಳಿತಕ್ಕೊಳಗಾದ ನೊಂದ ಜನಾಂಗಗಳ ಏಳಿಗೆಗಾಗಿ ಪರಿಶ್ರಮ ಪಟ್ಟು ಪರಮಸಾಧನೆಗೈದರು.ತಮ್ಮ ಇಡೀ ಜೀವಿತವನ್ನೇ ಅವರಿಗೆ ಅರಿವು,ತಿಳುವಳಿಕೆ ನೀಡುವುದಕ್ಕಾಗಿ ಮುಡಿಪಾಗಿಸಿಕೊಂಡರು.ವೇದ,ಶಾಸ್ತ್ರ,ಆಗಮ ಗ್ರಂಥಗಳನ್ನು,ಪೌರಾತ್ಯ-ಪಾಶ್ವಾತ್ಯ ವಿದ್ವತ್ಪೂರ್ಣ ಅಧ್ಯಯನ-ಅಧ್ಯಾಪನ ನಡೆಸಿ ಕರಗತಮಾಡಿಕೊಂಡ ಮಹಾ ಮೇಧಾವಿ ಅವರು.ದಲಿತ ಜನಾಂಗಕ್ಕೆ ನಾಗರಿಕ ಹಾಗೂ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡಲು ಜೀವನಪೂರ್ತಿ ಹೋರಾಟ ನಡೆಸಿದರು.ದುಂಡುಮೇಜಿನ ಪರಿಷತ್ತಿಗೆ ಹೋಗಿ ಬಂದರು.'ಹೋಂ ರೂಲ್ ' ಬೇಡಿಕೆಗೆ ಒಪ್ಪದೇ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕೆಂದೂ ಅದರಲ್ಲಿ ದಲಿತ ವರ್ಗಕ್ಕೆ ಪೂರ್ಣ ರಕ್ಷಣೆ ಬೇಕೆಂದೂ ಹಠಕ್ಕೆ ಬಿದ್ದು ವಾದಿಸಿದರು.'ಜಾತಿವಾರು ತೀರ್ಪು'ಹೊರ ಬಂದಾಗ ಅದನ್ನು ಬದ್ಧವಾಗಿ ವಿರೋಧಿಸಿ ಮಹಾತ್ಮ ಗಾಂಧಿಜೀಯವರು ಅಮರಣಾಂತ ಉಪವಾಸ ಸತ್ಯಾಗ್ರಹದ ನಾಟಕ ಹೂಡಿ ಬಿಟ್ಟರು! ನಿಮ್ನ ಜನಾಂಗಕ್ಕೆ ಅಂಬೇಡ್ಕರ್ ಗೆದ್ದುಕೊಟ್ಟಿದ್ದ ರಾಜಕೀಯ ಹಕ್ಕುಗಳ ಪ್ರಭಾವವನ್ನು ಸಂಪೂರ್ಣವಾಗಿ ಕುಗ್ಗಿಸುವುದೇ ಗಾಂಧಿಜೀಯವರ ಉದ್ದೇಶವಾಗಿತ್ತು ಎಂಬುದರಲ್ಲಿ ಅಕ್ಷರಶಃ ಹುರುಳಿದೆ ಎನಿಸುವುದು.ಇಡೀ ದೇಶದ ಮಹಾತ್ಮನ ಜೀವಕ್ಕೆ ಅಂಬೇಡ್ಕರರಿಂದ ಕುತ್ತು ಬಂದೀತೆಂಬ ಅಪವಾದ ಬರಬಾರದೆಂದೂ ಮತ್ತು ಗಾಂಧೀಜಿಯವರ ಸೇವೆಯು ದೇಶಕ್ಕೆ ಅಗತ್ಯವಾಗಿರುವುದರಿಂದಲೂ ಅವರ ಅಭಿಮಾನಿಯಾಗಿದ್ದ ಕಾರಣವಾಗಿ 1932 ರ 'ಪೂನಾ ಒಪ್ಪಂದ' ವೆಂಬ ಪ್ರಸಿದ್ಧ ಒಡಂಬಡಿಕೆಗೆ ಬಾಬಾ ಸಾಹೇಬ್ ಅಂಬೇಡ್ಕರರು ಒಲ್ಲದ ಮನಸ್ಸಿನ ಅಂಕಿತ ಹಾಕಿ ತಾನೂ ಒಬ್ಬ ಪರಮ ನಿಷ್ಠ ದೇಶಭಕ್ತನಾಗಿರುವುದನ್ನು ತೋರಿಸಿಕೊಟ್ಟರು.

ರಾಜ್ಯಾಂಗ ರಚನಾ ಸಭೆಗೆ ಮುಂಬೈ ವಿಧಾನ ಸಭೆಗೆ ಸ್ಪರ್ಧಿಸಿ ಸೋತ ಅಂಬೇಡ್ಕರ್ 1946ರಲ್ಲಿ ಬಂಗಾಳ ವಿಧಾನ ಸಭೆಯಿಂದ ಆಯ್ಕೆಯಾದರು.ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿಯೂ ರಾಜ್ಯಾಂಗ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿಯೂ 1947ರಲ್ಲಿ ಆಯ್ಕೆಯಾದರು.ಹಿಂದುಗಳಿಗೆಲ್ಲ ಸಮಾನ ಕಾನೂನುಕ್ರಮವನ್ನು ಒದಗಿಸುವುದಕ್ಕಾಗಿ ಅವರು 'ಹಿಂದು ಕೋಡ್ 'ಬಿಲ್ಲನ್ನು ತಯಾರಿಸಿದರು.ಆದರೆ ದುರ್ದೈವದಿಂದ ಭಾರತ ಪ್ರಧಾನಿ ನೆಹರುರವರ ಬೆಂಬಲ ದೊರಕದ್ದರಿಂದ ಆ ಮಸೂದೆ ಪಾಸಾಗಲೇ ಇಲ್ಲ.ಈ ಕಾರಣದಿಂದಲೇ ಅವರು ದಲಿತ ವರ್ಗದವರ ಬಗ್ಗೆ ಸರ್ಕಾರವು ಹೊಂದಿದ್ದ ನಿಷ್ಕಾಳಜಿ,ನಿರಾಸಕ್ತಿಯನ್ನು ಅತ್ಯುಘ್ರವಾಗಿ ಖಂಡಿಸಿ ತಮ್ಮ ಸಚಿವ ಪದವಿಗೆ ರಾಜೀನಾಮೆ ಇತ್ತು ಹೊರಬಂದು ಸ್ವಾಭಿಮಾನವನ್ನು ಮೆರೆಯುತ್ತಾರೆ.

ಅವರ ಬದುಕು-ಭಾಷಣ.ಬರಹ-ಹೋರಾಟ,ಪ್ರಕಾಂಡ ಪಾಂಡಿತ್ಯ,ವ್ಯಕ್ತಿತ್ವದ ಕುರಿತು ಹೇಳಿದಷ್ಟೂ ಕಡಿಮೆ.ಇಂಥ ಒಬ್ಬ ಅಸಾಧರಣ,ನಿರ್ಭೀತ,ನಿರ್ಭೀಡೆಯ ಮಹಾನ್ ವ್ಯಕ್ತಿಯು ಧೀಃಶಕ್ತಿಯಾಗಿ ಮನುಕುಲದ ಇತಿಹಾಸದಲ್ಲಿ ಹುಟ್ಟಿ ಬಂದದ್ದೇ ಸರ್ವ ಶೋಷಣೆಯಿಂದಲೂ ಮುಕ್ತವಾದ ನವ ಸಮಾಜ ನಿರ್ಮಾಣ ಮಾಡಲು ಎನ್ನಲೇಬೇಕು.1935ರಲ್ಲಿ ನಾಸಿಕ್ ಜಿಲ್ಲೆಯ ಯಾವೋಲಾದಲ್ಲಿ ನಡೆದ ದಲಿತ ವರ್ಗಗಳ ಮಹಾ ಸಮ್ಮೇಳನದಲ್ಲಿ ಅವರು ಎಲ್ಲ ದಲಿತರೂ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸುವಂತೆ ಬಹಿರಂಗ ಕರೆ ನೀಡಿದರು."ನಾನು ಹಿಂದುವಾಗಿ ಹುಟ್ಟಿರುವೇನಾದರೂ ಹಿಂದುವಾಗಿ ಸಾಯಲಾರೆ" ಎಂಬ ಕ್ರಾಂತಿಕಾರಕ ಘೋಷಣೆ ಹೊರಹೊಮ್ಮಿದಾಗ ಎಲ್ಲ ಭಾರತೀಯರ ಹೃದಯ ಒಮ್ಮೆ ತಲ್ಲಣಗೊಂಡಿರಲೇ ಬೇಕು.ತಮ್ಮ ಅಂತರಾಳದ ಕೂಗಿಗೆ ಕಟಿಬದ್ಧರಾಗಿದ್ದ ಅವರು 1956 ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು.ಈ ಮೂಲಕ ಮಹಾ ಧಾರ್ಮಿಕ ಧುರೀಣರೂ  ದೇವನಾಂಪ್ರಿಯ ಚಕ್ರಚರ್ತಿ ಅಶೋಕ ಮಹಾಶಯನ ತರುವಾಯ ಭಾರತದಲ್ಲಿ ಬೌದ್ಧ ಮತದ ಪುನರುದ್ಧಾರಕರೂ ಆಗಿ ಬೋಧೀಸತ್ವ ಅಂಬೇಡ್ಕರಾದರು.

ದೀನದಲಿತರು,ವಂಚಿತರು,ದಬ್ಬಾಳಿಕೆಗೊಳಗಾದ ಸ್ತ್ರೀಯರು......ಇವರೆಲ್ಲರ ವಿಮೋಚನೆಗಾಗಿಯೇ ಅಂಬೇಡ್ಕರ ಬದುಕಿದರು,ದುಡಿದರು.ಭಾರತದ ಐಕ್ಯ ಹಾಗೂ ಪುನರ್ ಘಟನೆಗಾಗಿ ಹೋರಾಡಿದಿ ಈ ವಿಶ್ವಮಾನವ,ಸಾಮಾಜಿಕ ನ್ಯಾಯದ ಹರಿಕಾರ ಹೊಸದಿಲ್ಲಿಯ ಅಲಿಪೋರ್ ರಸ್ತೆಯಲ್ಲಿಯ ತಮ್ಮ 26 ನೇ ಕ್ರಮ ಸಂಖ್ಯೆಯ ನಿವಾಸದಲ್ಲಿ 1956 ನೇ ಡಿಸೆಂಬರ್ 6 ರಂದು ನಿರ್ವಾಣ ಹೊಂದಿದರು.

 = ಬನವಾಸಿ ಸೋಮಶೇಖರ್,ಮಂಗಳೂರು.

Friday 2 March 2012

" ಅನ್ಯಾಯವಾದಿಗಳ ಹುಟ್ಟಡಗಿ ಪ್ರಜಾ ಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲಿ"


ಕೆಲವು ಗೂಂಡಾ ವಕೀಲರುಗಳು ಪೂರ್ವಾಗ್ರಹ ಪೀಡಿತರಾಗಿ ಮಾಧ್ಯಮದವರು ಹಾಗೂ ಪೋಲೀಸರ ಮೇಲೆ ಅಮಾನವೀಯ ದೌರ್ಜನ್ಯ,ಹಲ್ಲೆ ನಡೆಸುವ ಮೂಲಕ ನಮ್ಮ ಪವಿತ್ರ ನ್ಯಾಯಾಂಗ ವ್ಯವಸ್ಥೆಗೆ ಅಕ್ಷರಶಃ ಚ್ಯುತಿ ತಂದರು.ಇವರು ತಮ್ಮನ್ನು ಏನೆಂದುಕೊಂಡಿರುವರೋ? ಪ್ರಜಾಪ್ರಭುತ್ವದ ಸಾರ್ವಭೌಮ ಪರಮಾಧಿಕಾರದ ಉತ್ತುಂಗ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಸಂವಿಧಾನದ ಆಶಯ,ಮೂಲೋದ್ಧೇಶ ಹಾಗೂ ನಿಯಮಗಳ ಮೇಲೆ ದಬ್ಬಾಳಿಕೆ ನಡೆಸಿರುವ ಈ ಅನ್ಯಾಯವಾದಿಗಳ ಹುಟ್ಟಡಗಲೇಬೇಕು.ಸಂವಿಧಾನದ 19 (1) ನೇ ವಿಧಿಗೆ ಕಳಂಕ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ  ಹರಣ ಮಾಡಿರುವ ಈ ವಿಕೃತ ಮನಸುಗಳ ಮರ್ಧನ ಆಗಲೇಬೇಕು.ನಮ್ಮ ಪರಂಪರೆಗೆ,ನ್ಯಾಯ ದೇವತೆಯ ಕಣ್ಣಿಗೆ ಮಣ್ಣೆರಚಿರುವ ಈ ಕೂಳರ ಅಟ್ಟಹಾಸದ ಹಿಂದಿನ ಪಟ್ಟಭದ್ರರ ಬಣ್ಣ ಬಯಲಾಗಿ ಪ್ರಜಾಪ್ರಭುವಿಗೆ ಸತ್ಯದರಿವು ಆಗಲೇಬೇಕು.ಮೌಲ್ಯಾಧಾರಿತ ನ್ಯಾಯವಾದಿಗಳ ಮನಸ್ಸನ್ನು ಘಾಸಿಗೊಳಿಸಿರುವ ಈ ಘಟನೆ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುವ ಹುನ್ನಾರುವುಳ್ಳದ್ದು.ಇಂಥ ವಿಚಾರ ಹೀನ,ಬುದ್ಧಿ ಹೀನ,ಅವಿವೇಕಿ ಲಂಪಟರಿಗೆ ಕೈಕೊಳತೊಡಿಸಿ ಜೈಲಿಗಟ್ಟಲೇಬೇಕು.ಬುಡಮೇಲು ಕೃತ್ಯವೆಸಗುವ ಯಾರನ್ನೇ ಆಗಲಿ ರಕ್ಷಿಸುವ,ಹಿನ್ನೆಲೆಯಲ್ಲಿ ಆಶ್ರಯ ನೀಡುವ ಕಾರ್ಯ ಸರ್ವಥಾ ಸಲ್ಲದು.ನಮ್ಮ ಶ್ರೀಮಂತ ಸಂಸ್ಕ್ರತಿ,ಪರಂಪರೆ,ಜನ ಜೀವನ,ನ್ಯಾಯ-ಅನ್ಯಾಯ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲಿ ಸತ್ಯ ದರ್ಶನ ಮಾಡಿಸುವ ಮಾಧ್ಯಮ ಹಾಗೂ ಅದರ ಪ್ರತಿನಿಧಿಗಳ ಬದುಕಿಗೆ ಭದ್ರತೆ ಮತ್ತು ರಕ್ಷಣೆಯೇ ಇಲ್ಲವಾಗಿದೆ.ಜೀವದ ಹಂಗು ತೊರೆದು ಕಾವಲು ನಾಯಿಯಂತೆ ಕಾರ್ಯವೆಸಗುವ ಪತ್ರಕರ್ತರಿಗೆ,ಕಾನೂನು ಮತ್ತು ಸುವ್ಯವಸ್ಥೆಯ ಸೇವೆಗೈಯುವ ಪೊಲೀಸರಿಗೆ ಸೂಕ್ತ ರಕ್ಷಣೆ ನೀಡುವ ಹೊಣೆಗಾರಿಕೆ ಹಿಂದಿಗಿಂತಲೂ ಈಗ ಅತ್ಯಂತಯ ಅಗತ್ಯವಾಗಿದೆ ಎಂಬುದನ್ನು ದಿನಾಂಕ:02-03-2012 ರಂದು ಬೆಂಗಳೂರಿನ ನ್ಯಾಯ ದೇವತೆಯ ಅಂಗಳದಲ್ಲಿ ನಡೆದ ಅನ್ಯಾಯವಾದಿಗಳ ಕ್ರೌರ್ಯ,ಅನಾಗರಿಕ  ಕೃತ್ಯ  ಜೀವಂತ ಸಾಕ್ಷಿಯಾಗಿ ಕರ್ನಾಟಕ ಇತಿಹಾಸದ ಪುಟಗಳಲ್ಲಿ ದಾಖಲಾಯಿತು.ನಮ್ಮ ಮಾಧ್ಯಮ ಮಿತ್ರರೂ ಸಹ ಇತ್ತೀಚೆಗೆ ಅತೀ ರಂಜಿತ ಸುದ್ಧಿಗಳನ್ನು ಭಿತ್ತರಿಸುತ್ತಾ ಸಮಾಜಕ್ಕೆ ಅನಾವಶ್ಯಕವಾದ ವಿಚಾರಗಳನ್ನು ಜನರ ಮೇಲೆ ಹೇರುತ್ತಿರುವುದು,ಹಾಗೂ ಪ್ರಚೋದಿಸುವುದು ಅಧಿಕವಾಗುತ್ತಿದೆ.ಇದು ಭೌದ್ಧಿಕ ದಿವಾಳಿತನದ ಪರಮಾವದಿಯಾಗಿದೆ.ಮಾಧ್ಯಮಗಳೂ ಕೂಡ ನೀತಿ ಸಂಹಿತೆಯನ್ನು ಅಳವಡಿಸಿಕೊಂಡು ಮೌಲ್ಯಾಧಾರಿತವಾದ ಸಂಗತಿಗಳ ಮೇಲೆಯೇ ಬೆಳಕು ಚೆಲ್ಲುವ ಸೇವೆ ಒದಗಿಸುವಂತಾಗಬೇಕು.ರಂಜನೀಯವಾದ,ವೈಭವೀಕರಣದ ಸುದ್ಧಿ ಪ್ರಸಾರದ ಅವಶ್ಯಕತೆ  ಖಂಡಿತಾ ಅಗತ್ಯವಿಲ್ಲ.ಜೊತೆಗೆ ಎಲ್ಲಾ ಮಾಧ್ಯಮ ಮಿತ್ರರೂ ಅನವಶ್ಯಕವಾದ ಸ್ಪರ್ಧೆ ನಡೆಸದೇ ತಮ್ಮ ಒಗ್ಗಟ್ಟನ್ನು ಗಟ್ಟಿಗೊಳಿಸಿಕೊಂಡರೆ ಅತ್ಯುತ್ತಮ ಕಾರ್ಯವಾದೀತೆಂದು ನಾನು ಭಾವಿಸುತ್ತೇನೆ.ತಮ್ಮ ಕಾರ್ಯ ವಿನೂತನವಾಗಿದ್ದರೆ ಸಾಕು.ಸುದ್ಧಿ ಮಾಧ್ಯಮಗಳಿಗೆ ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿಯುತ ತಾಕತ್ತು ಇದೆ ಎಂಬುದನ್ನು ಯಾರೂ ಮರೆಯಬಾರದು.

= ಬನವಾಸಿ ಸೋಮಶೇಖರ್,ಮಂಗಳೂರು.
http://banavasimaatu.blogspot.com/ಬನವಾಸಿ ಮಾತು/
email:banavasisomashekhar@yahoo.com

Monday 13 February 2012

ನೆನಪಿನ ಬುತ್ತಿಯಿಂದ:ಅಮರ ಚೇತನ ಬನವಾಸಿಯ ಸೇನಾಪತಿ ಪಾಟೀಲರು.

ಸೇನಾಪತಿ ಶಿವನಗೌಡ ಪಾಟೀಲರು ನಮ್ಮ ಊರು ಬನವಾಸಿಯ ಹೆಮ್ಮೆಯ ಮಗನಾಗಿದ್ದರು.ಹೆಸರಿಗೆ ತಕ್ಕಂತೆಯೇ ಇದ್ದರು.ಮುಂದಾಳ್ತನಕ್ಕೆ ಹೇಳಿ ಮಾಡಿಸಿದಂತಿದ್ದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಮಾತಾಗಿದ್ದರು.ಒಬ್ಬ ಅಪರೂಪದ ನೇತಾರನಾಗಿದ್ದು ಸದಾಕಾಲವೂ ಬಡವರು,ದೀನ ದಲಿತರು,ಹಿಂದುಳಿದವರು,ಅಲ್ಪಸಂಖ್ಯಾತರು ಮತ್ತು ಸಮಾಜದ ಎಲ್ಲಾ ವರ್ಗದ ಜನರ ನೋವು,ಭವಣೆಗಳಿಗೆ ಸ್ಪಂದಿಸುತ್ತಿದ್ದರಲ್ಲದೇ ಅವರ  ಧ್ವನಿಯೂ ಆಗಿದ್ದರು.ಹೀಗೆ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿಕೊಂಡಿದ್ದರಲ್ಲದೇ  ಜನಮಾನಸದಲ್ಲಿ ಹಚ್ಚಹಸಿರಾಗಿದ್ದರು.

ಕೂಲಿ ಕಾರ್ಮಿಕರು ಮತ್ತು ಹಮಾಲಿ ಶ್ರಮ ಜೀವಿಗಳ ಮಧ್ಯೆಯೇ ಇದ್ದು ಅವರನ್ನೆಲ್ಲ ಒಂದುಗೂಡಿಸಿ ಅವರ ಕಷ್ಟ ಕಾರ್ಪಣ್ಯಗಳ ಬದುಕಿಗೆ ಆಸರೆಯೊದಗಿಸುವ ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದರು.ತನ್ಮೂಲಕ ಬನವಾಸಿ ಎಂದರೆ 'ಸೇನಾಪತಿ' ಎನ್ನುವಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದರು.

ಬನವಾಸಿಯ ಅತ್ಯಂತ ಪ್ರತಿಷ್ಠಿತ ಕುಟುಂಬಗಳಲ್ಲಿ ಶಿವನಗೌಡ ಪಾಟೀಲರ ಮನೆತನವೂ ಒಂದಾಗಿದೆ.ಶಿವನಗೌಡರು ವ್ಯಾಪಾರಿಯಾಗಿದ್ದು ಕಿರುಕುಳ ಅಂಗಡಿಯೊಂದನ್ನು ನಡೆಸುತಿದ್ದರು.ಅವರ ಅಂಗಡಿಯಲ್ಲಿ ಇಂಥ ವಸ್ತು ಸಿಗುವುದಿಲ್ಲ ಎಂಬ ಮಾತೇ ಇಲ್ಲ! ಮಳೆಯೊಡನೆ ಬೀಳುವ ಆಲಿಕಲ್ಲು ನೀರಿನಿಂದ ಹಿಡಿದು ಮತ್ತೆಲ್ಲೂ ದೊರಕದ ಅಪರೂಪದ ವಸ್ತುಗಳು ಅವರ ಅಂಗಡಿಯಲ್ಲಿ ಈಗಲೂ ಲಭ್ಯ.ಹೀಗಾಗಿ ಇವರ ಅಂಗಡಿ ಈಗಿಗಿಂತಲೂ ಆಗ ಬಹು ಪ್ರಸಿದ್ಧಿ ಹೊಂದಿತ್ತು.ಹೀಗೆ ಈ ಮನೆತನವು ತನಗರಿವಿಲ್ಲದೇ ಸಮಾಜ ಸೇವೆಯಲ್ಲಿ ತತ್ಪರವಾಗಿತ್ತು.

ಶಿವನಗೌಡ್ರಿಗೆ ಇಬ್ಬರು ಗಂಡು ಮಕ್ಕಳು.ಹೆಣ್ಣು ಮಕ್ಕಳೂ ಇದ್ದಾರೆ.ಕಿರಿಯ ಮಗನೇ ನಾನು ಹೇಳಹೊರಟಿರುವ ಹೃದಯ ಶ್ರೀಮಂತಿಕೆಯ ಸೇನಾಪತಿ ಪಾಟೀಲರು.ತಂದೆ ಗತಿಸಿದ ನಂತರ ಹಿರಿಮಗ ತಮ್ಮಣ್ಣ ಗೌಡ್ರಿಗೇನೆ ಅಂಗಡಿಯ ಪೂರ್ಣ ಹೊಣೆಗಾರಿಕೆ ಲಭ್ಯವಾಯಿತು.ಈ ಸೇನಾಪತಿ ಪಾಟೀಲರಿಗೆ ಅಂಗಡಿ ವ್ಯವಹಾರ,ವ್ಯಾಪಾರವು ಕಿಂಚಿತ್ತೂ ಒಗ್ಗಿ ಬಂದಿರಲಿಲ್ಲ.ತಮಗೆ ಇಷ್ಟವಾದ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿಯೇ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು.ಪಿ.ಯೂ.ಸಿ. ಮೆಟ್ಟಿಲು ಹತ್ತಿದ್ದ ಅವರು ತಮ್ಮ 25-28 ರ ವಯಸ್ಸಿನಲ್ಲೇ ಸಾರ್ವಜನಿಕ ವ್ಯಕ್ತಿಯಾಗಿ ರೂಪುಗೊಂಡಿದ್ದರು.ಸದಾ ಕ್ರಿಯಾಶೀಲ ಹಾಗೂ ಚಾಣಾಕ್ಷ ವ್ಯಕ್ತಿತ್ವದ ಸಾಹಸಿ ಪ್ರವೃತ್ತಿ ಅವರದಾಗಿತ್ತು.ರಾಜಕೀಯ ತಂತ್ರಗಾರಿಕೆಯಲ್ಲಿ ಅವರನ್ನು ಸೆದೆಬಡಿಯಲು ವಿರೋಧಿಗಳಿಗೆ ಅಷ್ಟು ಸುಲಭದ  ಮಾತಾಗಿರಲಿಲ್ಲ.ಜಾಗರೂಕತೆ,ಶಿಸ್ತು ಮತ್ತು ದೂರದೃಷ್ಠಿತನದಿಂದ ಹಲವು ದಾಳಗಳನ್ನು ಪ್ರಯೋಗಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು.ಈ ಜನಪ್ರಿಯ ವ್ಯಕ್ತಿಯ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಹಣಿಯಲು ವಿರೋಧಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರಾದರೂ ಅದು ಕೈಗೂಡುತ್ತಿರಲಿಲ್ಲ!
ನನ್ನ ಅಮ್ಮ ಬಂಗಾರಮ್ಮ ಮತ್ತು ಪಾಟೀಲರದು ತಾಯಿ ಮಗನ ಸಂಬಂಧವಾಗಿತ್ತು.ನನ್ನಮ್ಮ ಅವರಿಗೆ 'ನೀ ನನ್ನ ಹಿರಿ ಮಗ' ಅನ್ನುತ್ತಿದ್ದರು.1983-84 ರಿಂದಲೂ ಶ್ರೀಯುತರೊಂದಿಗೆ ಅತ್ಯಂತ ನಿಕಟ ಬಾಂಧವ್ಯವನ್ನು ನಮ್ಮ ಕುಟುಂಬ ಹೊಂದಿತ್ತು.ಅಮ್ಮ ಯಾವುದೇ ಒಂದು ಮಾತನ್ನು ಹೇಳಿದರೆ ಪಾಟೀಲರು ತೆಗೆದುಹಾಕುತ್ತಿರಲಿಲ್ಲವಂತೆ.ತಮ್ಮ ತಂದೆಯವರೊಂದಿಗೆ ಏನಾದರೂ ಭಿನ್ನಾಭಿಪ್ರಾಯ ಬಂದಾಗ ಶಿವನ ಗೌಡ್ರು ಅಮ್ಮನ ಗಮನಕ್ಕೆ ತಂದು 'ಬಂಗಾರಮ್ಮ ಅವನಿಗೇ ನೀನೇ ಏನಾದ್ರೂ ಹೇಳು,ನಿನ್ನ ಮಾತನ್ನು ಅಂವ ನಂಬುತ್ತಾನೆ'ಅನ್ನುತ್ತಿದ್ದರಂತೆ.ತಾನು ಪ್ರೀತಿಸಿದವಳು ಅಪ್ಪನಿಗೆ ಇಷ್ಟವಾಗಿರಲಿಲ್ಲ.ಅಂತರಂಗದ ತುಮುಲವನ್ನು ಅವರ ತಂದೆಯವರು ಅಮ್ಮನಿಗೆ ಹೇಳಿದ್ದರಾದರೂ ಆ ವಿಚಾರದಲ್ಲಿ ಪಾಟೀಲರು ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದರೆಂದು ಅಮ್ಮ ನನಗೆ ಹೇಳಿದ್ದು ನೆನಪಿದೆ.

ಶ್ರೀ ಪಾಟೀಲರು 1983-84ನೇ ಇಸ್ವಿಯಿಂದಲೂ ಪಂಚಾಯಿತಿ ಚುನಾವಣೆಗೆ ನನ್ನ ಅಮ್ಮನನ್ನು ಸದಾ ತಮ್ಮ ಗುಂಪಿನಲ್ಲಿ ಓರ್ವಳನ್ನಾಗಿ ನಿಲ್ಲಿಸಿಕೊಳ್ಳುತ್ತಿದ್ದರು.ಅಮ್ಮನ ಚುನಾವಣಾ ಖರ್ಚು,ವೆಚ್ಚವೆಲ್ಲಾ ಅವರದೇ.ಕಡು ಬಡತನದಲ್ಲಿದ್ದ ಅಮ್ಮನಿಗೆ ಅದೆಲ್ಲ ಸಾಧ್ಯವಿಲ್ಲದ ಮಾತು.ಬನವಾಸಿಯ ಯಾವುದೇ ವಾರ್ಡಿನಲ್ಲಿ ನಿಲ್ಲಿಸಿದರೂ ನನ್ನ ಅಮ್ಮ ಅತೀ ಹೆಚ್ಚು ಮತಗಳನ್ನು ಪಡೆದು ಗೆಲ್ಲುತ್ತಿದ್ದರು.ಅಮ್ಮ ಮತ್ತು ನನ್ನ ಬಗ್ಗೆ ಊರವರಿಗೆ ಅತೀವ ಪ್ರೀತಿ ಇದ್ದು ಅದು ಈಗಲೂ ಇದೆ ಎಂಬುದೇ ನಮ್ಮ ಸುದೈವ.ಜಾತಿ ಪಾತಿ ಇತ್ಯಾದಿ ಯಾವೊಂದು ಅಂಶಗಳೂ ಅಮ್ಮನ ಗೆಲುವಿಗೆ ತೊಡಕಾಗುತ್ತಿರಲಿಲ್ಲ.ಹೀಗೆ ಅಮ್ಮ 5-6 ಬಾರಿ ಪಂಚಾಯ್ತಿ ಚುನಾವಣೆಗೆ ನಿಂತಾಗಲೂ ಅವರ ಗೆಲುವು ನಿಶ್ಚಿತವಾಗಿರುತ್ತಿತ್ತು!ಒಂದುಬಾರಿ ಒಂದೆರಡು ಮತಗಳ ಅಂತರದಿಂದ ಅಮ್ಮನೂ ಸೋಲಿನ ರುಚಿ ಉಂಡಿದ್ದರು. ಒಂದು ವೇಳೆ ಚುನಾವಣೆಯಲ್ಲಿ ಪಾಟೀಲರು ಸೋತರೂ ಅಮ್ಮನ ಗೆಲುವನ್ನು ಮಾತ್ರ ಅವರು ಬಯಸುತ್ತಿದ್ದರು."ನನ್ನವ್ವ ಗೆದ್ದಳೋ?"ಎನ್ನುತ್ತಿದ್ದರಂತೆ.ಅವರ ಪ್ರಯತ್ನದಿಂದ ಅಮ್ಮ ಪಂಚಾಯ್ತಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು.ಅತ್ಯಂತ ದೀರ್ಘ ವರ್ಷಗಳ ಕಾಲ ಅಮ್ಮ ಬನವಾಸಿ ಪಂಚಾತಿಯಲ್ಲಿದ್ದರು.ಅಮ್ಮನಿಗೆ ವಯಸ್ಸಾಗುತ್ತಾ ಬಂದಿದ್ದರಿಂದ ಅವರನ್ನು ಮುಂದೆ ಮತ್ತೆ ಚುನಾವಣೆಗೆ ನಿಲ್ಲಿಸುವುದು ಬೇಡವೆಂದು ನಾನು ಪಾಟೀಲರಿಗೆ ಹೇಳಿದ್ದೆ.1996-97ರ ನಂತರ ನಾನು ಪಾಟೀಲರ ನಿಕಟಕ್ಕೆ ಬಂದಿದ್ದೆ.ಅವರ ಸಮಾಜ ಸುಧಾರಣಾ ಮನೋಭಾವ,ಸಂಘಟನಾ ಕೌಶಲ್ಯ,ಬಡವರ ಮೇಲಿನ ಕಾಳಜಿ,ಮಾನವತೆ ಇತ್ಯಾದಿ ಗುಣಗಳು ನನ್ನನ್ನು ಬಹುವಾಗಿ ಆಕರ್ಷಿಸಿದ್ದವು.ನಾನವರ ಪರಮಾಪ್ತ ವಲಯದವನಾಗಿದ್ದೆ!

ಬಡವರೆಂದರೆ ಪಾಟೀಲರಿಗೆ ಜೀವಾಳ.ಒಮ್ಮೆ ಉರುವಲು ಕಟ್ಟಿಗೆಗಾಗಿ ಬಡ ರೈತರು,ಕೃಷಿ ಕಾರ್ಮಿಕರು ಎತ್ತಿನ ಗಾಡಿಗಳನ್ನು ಹೊಡೆದುಕೊಂಡು ಕಾಡಿಗೆ ಹೋಗಿದ್ದರು.ಕಟ್ಟಿಗೆ ತುಂಬಿಕೊಂಡು ಬರುತ್ತಿದ್ದಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಎತ್ತು ಗಾಡಿ ಸಮೇತ ಅವರನ್ನು ಬಂಧಿಸಿದ್ದರು.ಪಾಟೀಲರಿಗೆ ವಿಷಯ ಮುಟ್ಟಿದಾಗ ಸೀದಾ ವಲಯ ಅರಣ್ಯಾಧಿಕಾರಿ ಕಛೇರಿಗೆ ಭೇಟಿ ನೀಡಿ ಬಿಟ್ಟು ಬಿಡುವಂತೆ ಒತ್ತಾಯಿಸಿದ್ದರು.ಅಧಿಕಾರಿಗೂ ಇವರಿಗೂ ಮಾತಿಗೆ ಮಾತು ಬೆಳೆದಿತ್ತು.ಅಧಿಕಾರಿ ವಿವೇಚನೆ ಕಳೆದುಕೊಂಡಿದ್ದು ಬಂದೂಕನ್ನು ತೋರಿಸಿ ಹೆದರಿಸಿದ್ದರೆಂಬ ವಿಷಯ ತಿಳಿಯಿತು.ಪಾಟೀಲರು 'ಹಾಗಾದರೆ ಮೊದಲು ನನ್ನ ಎದೆಗೆ ನಿಮ್ಮ ಗುಂಡು ಹಾರಲಿ'ಎಂದು ಆರ್ಭಟಿಸಿ ಪ್ರತಿಭಟಿಸಿದ್ದರಂತೆ.ಕೊನೆಗೆ ಆ ಅಧಿಕಾರಿ ಬಾಲಮುದುರಿಕೊಂಡಿದ್ದರೆಂದು ತಿಳಿಯಿತು.ಹೀಗೆ ದಿಟ್ಟೆದೆಯವರಾಗಿ ಅಪ್ಪಟವಾದ ನಾಯಕನಾಗಿದ್ದರು.ಅಂಜಿಕೆ,ಅಳುಕು ಏನೆಂಬುದೇ ಅವರಿಗೆ ಗೊತ್ತಿರಲಿಲ್ಲ.ಊರ ಅಭ್ಯುದಯದ ಪ್ರಶ್ನೆ ಬಂದಾಗಲಂತೂ ಯಾವುದಕ್ಕೂ,ಯಾರೊಂದಿಗೂ ರಾಜಿಯಾಗುತ್ತಿರಲಿಲ್ಲ.ಗಟ್ಟಿ ಧ್ವನಿಯಲ್ಲಿ ಬದ್ಧವಾಗಿ ಪ್ರತಿಪಾದಿಸುತ್ತಿದ್ದರು.ಸರಿಯಾದ ನಿರ್ಧಾರವನ್ನೇ ಮಾಡುತ್ತಿದ್ದರು.ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಹತ್ವಪೂರ್ಣ ವ್ಯಕ್ತಿಗಳೊಂದಿಗೆ ಸಂಪರ್ಕ,ಒಡನಾಟ ಇಟ್ಟುಕೊಂಡಿದ್ದ ಅವರು ವಿಧಾನ ಸೌಧದಿಂದಾಗಬಹುದಾದ ಯಾವುದೇ ವ್ಯಕ್ತಿಯ ಕೆಲಸವನ್ನು ಅತ್ಯಂತ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು.ಈ ಕಾರ್ಯದಲ್ಲಿ ಅವರು ಅತ್ಯಂತ ಸಮರ್ಥರಾಗಿದ್ದುರಿಂದ ಅಧಿಕಾರಿಗಳು,ನೌಕರರು ಅವರ ಹಿಂದೆ ಬೀಳುತ್ತಿದ್ದರು.

.
ಕಮರಿ ಹೋಯಿತು ಬದುಕು!
=================

ಜೀವನದಲ್ಲಿ ಒಮ್ಮೆಯಾದರೂ ಪ್ರಸಿದ್ಧ ನಾಡು ಬನವಾಸಿ ಪಂಚಾಯ್ತಿಯ ಅಧ್ಯಕ್ಷನಾಗಬೇಕೆಂಬ ಹೆದ್ದಾಸೆ,ಮಹತ್ವಾಕಾಂಕ್ಷೆ ಅವರದಾಗಿತ್ತು.ಊರ ಅಧ್ಯಕ್ಷನಾದರೆ ನಮ್ಮ ಪಂಚಾಯ್ತಿಯನ್ನು ರಾಜ್ಯದಲ್ಲೇ ಒಂದು ಮಾದರಿ ಪಂಚಾಯ್ತಿಯನ್ನಾಗಿಸುತ್ತೇನೆ ಎನ್ನುತ್ತಿದ್ದರು.ಪಾಟೀಲರ ಕನಸಿಗೆ ವಿಧಿ ಮಾತ್ರ ಸೊಪ್ಪು ಹಾಕಲೇ ಇಲ್ಲ.ಒಮ್ಮೆ ಪಂಚಾಯ್ತಿ ಉಪಾಧ್ಯಕ್ಷರಾಗಿಯೂ, ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.ರಾಷ್ಟ್ರೀಯ ಪಕ್ಷವೊಂದರ ಸಕ್ರೀಯ ಸದಸ್ಯನಾಗಿ,ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ವಿಭಾಗಗಳ ಅಧ್ಯಕ್ಷ,ಜನರಲ್ ಸಕ್ರೇಟರಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.ಸಾರ್ವಜನಿಕ ಜೀವನದಲ್ಲಿ ರಚನಾತ್ಮಕವಾಗಿ,ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಪಾಟೀಲರ ಸಾಂಸಾರಿಕ ಜೀವನದಲ್ಲಿ  ಹಲವು ಏರುಪೇರುಗಳಾಗಿ ಕುಗ್ಗಿ ಹೋಗಿದ್ದರು.ಹೇಳಿಕೊಳ್ಳಲಾಗದ ಅವ್ಯಕ್ತ ನೋವು ಅವರನ್ನು ಕಾಡುತ್ತಿತ್ತು.'ನನ್ನ ಹಲವು ನಿರ್ಧಾರಗಳು ತಪ್ಪಾಗಿ ಬಿಟ್ಟವು ಸೋಮು'ಅನ್ನುತ್ತಿದ್ದರು.ತಮ್ಮ ಕೌಟುಂಬಿಕ ಜೀವನ ಸುಗಮವಾಗಿರಲೆಂದು ತಮ್ಮ ಇಷ್ಟ ದೇವರು ಮಧುಕೇಶ್ವರನಿಗೆ ನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತಿದ್ದರು.ಮಗ ಅವಿನಾಶ ಮತ್ತು ಮಗಳು ಪ್ರಿಯದರ್ಶಿನಿಯ ಜೀವನವನ್ನು ಉಜ್ವಲಗೊಳಿಸುವ ದೊಡ್ಡ ಕನಸನ್ನು ಹೊತ್ತಿದ್ದರು.40-45ರ ವಯೋಮಾನದಲ್ಲಿ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಉನ್ನತಿಗೆ ಹೋಗುವ ಲಕ್ಷಣಗಳು ಗೋಚರಿಸಿದ್ದವು.ಕೆಲವೊಮ್ಮೆ ತಪ್ಪು ಲೆಕ್ಕಾಚಾರಗಳೂ,ವಿರೋಧಿಗಳ ಕುಕೃತ್ಯಗಳು ಗಾಯದ ಮೇಲೆ ಬರೆ ಎಳೆದಿದ್ದಲ್ಲದೇ ಅವರ ಸಾರ್ವಜನಿಕ ಜೀವನಕ್ಕೆ ತೊಡಕಾಗಿ ಪರಿಣಮಿಸಿತ್ತು.ಆದರೆ ಕೊನೆ ಕೊನೆಗೆ ವಿರೋಧಿಗಳೂ ಅವರ ಕಾರ್ಯಕ್ಷಮತೆಯನ್ನು ಕೊಂಡಾಡುತ್ತಿದ್ದರು.ಅವರ ಸಮಾಜ ಸೇವಾ ಕಾಳಜಿ ಮತ್ತು ಹೋರಾಟವನ್ನು ಮೆಚ್ಚ ತೊಡಗಿದರು.ಎಲ್ಲವನ್ನೂ ಮೀರಿ ಬೆಳೆಯುವ ಹಂತಕ್ಕೆ ತಲುಪುತ್ತಿರುವಾಗಲೇ ವಿಧಿ ಅವರೊಡನೆ ಆಟ ಆಡಲು ಪ್ರಾರಂಬಿಸಿ ಬಿಟ್ಟಿತು.ಇದ್ದಕಿದ್ದಂತೇ ವಿಪರೀತ ಹೊಟ್ಟೆ ನೋವೆಂದು ಹೊರಳಾಡತೊಡಗಿದರು.ತಕ್ಷಣ ಅವರನ್ನು ಶಿರಸಿಯ ಪವಾರ್ ಆಸ್ಪತ್ರೆಗೆ ದಾಖಲಿಸಲಾಯಿತು.ಹೊಟ್ಟೆಯ ಶಸ್ತ್ರ ಚಿಕಿತ್ಸೆಗೆ ಅವರನ್ನು ಒಳಪಡಿಸಲಾಯಿತು.ಅದಾಗಿ ಒಂದೆರಡು ದಿನದ ನಂತರವೂ ಮತ್ತೆ ಹೊಟ್ಟೆ ನೋವೆಂದಾಗ ಹುಬ್ಬಳ್ಳಿಗೆ ಒಯ್ಯಿರೆಂದರು.ಹುಬ್ಬಳ್ಳಿಗೆ ಕೊಂಡೊಯ್ದರೆ ಮಣಿಪಾಲಿಗೆ ಒಯ್ಯಿರೆಂದರು.ಹೀಗೆ ಅವರನ್ನು ಅಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿಸಲಾಯಿತು.ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲೇ ಇಲ್ಲ.ಅಂತ್ಯದ ದಿನಗಳು ಸಮೀಪವಾಗಿ ಬಿಟ್ಟವು.ವಿಪರೀತ ದುಡ್ಡು ಖರ್ಚಾಯಿತು.ಅನ್ನಾಹಾರ ಸ್ವೀಕರಿಸದಾದರು.ತಮ್ಮ ಐವತ್ತನೇ ಕಿರಿ ವಯಸ್ಸಲ್ಲಿ 05-11-2005ರಲ್ಲಿ ಇಹಲೋಕ ತ್ಯಜಿಸಿ ಜೀವನ್ಮುಕ್ತರಾದರು.ಪಾಟೀಲರನ್ನು ಬನವಾಸಿಯ ಜನರು ಈಗಲೂ ಸ್ಮರಿಸಿಕೊಳ್ಳುತ್ತಾರೆ.ಊರಿನ ಯಾವುದೇ ಸಮಸ್ಯೆ ಬಂದಾಗ ಪಾಟೀಲ್ರು ಇದ್ದಿದ್ದರೆ ಚನ್ನಾಗಿರ್ತಿತ್ತು ಅಂದುಕೊಳ್ಳುತ್ತಾರೆ.ಆದರೆ ಕಾಲನಿಗೇಕೆ ಕಾಲಕ್ಷೇಪ?ತನ್ನ ಸಮಯ ಬಂದರೆ ಆತ ಸುಮ್ಮನೆ ಬಿಡುವನೇ?

ನನ್ನ ಬದುಕಿನ ಉತ್ಕರ್ಷಕ್ಕೆ ಊರುಗೋಲಾದವರಲ್ಲಿ ಪಾಟೀಲರೂ ಒಬ್ಬರಾಗಿದ್ದರು.ಅವರು ನನ್ನ ಪ್ರಗತಿಯನ್ನು ಸರ್ವಥಾ ಬಯಸುತ್ತಿದ್ದರು. ಈ ಜೀವ ನನ್ನ ಸಂಪರ್ಕಕ್ಕೆ ಸಿಕ್ಕಿದ್ದೆ ಒಂದು ಸೋಜಿಗದ ವಿಷಯ.ನನ್ನ ಅವರ ನಡುವಿನ ಒಡನಾಟದ ಪ್ರೀತಿ ಮಾತಿಗೆ ನಿಲುಕದ್ದು.ಇಂಥ ಮಹಾನುಭಾವನನ್ನು ಕಳೆದುಕೊಂಡು ನಾನು ನಿಜಕ್ಕೂ ಉಡುಗಿ ಹೋಗಿದ್ದೇನೆ.
= ಬನವಾಸಿ ಸೋಮಶೇಖರ್.
   14-02-2012

Thursday 2 February 2012

"ಬೆಳದಿಂಗಳಾಗಿ ಬಾ"

ಎಂತು ಹೇಳಲೀ
ಮನದಾಳದ ಭಾವ
ಮಾತಿನಿಂ ವ್ಯಕ್ತವಾಗದಾ
ಅವ್ಯಕ್ತ ನೋವ

ಮನಭಾರವಾಗಿಹುದೇಕೋ
ಅರಿಯದಾಗಿ
ದುಗುಡ ದುಮ್ಮಾನಗಳ
ಬಲೆಯಲ್ಲಿದ್ದು ಒದ್ದಾಡುತಿಹೆನು!

ಮನದೊಡಲಲ್ಲಿ ತಳವೂರಿ
ದುಪ್ಪಟ್ಟಾಗಿ ಹೊತ್ತುರಿಯುತ್ತಿರುವಾಸೆಯ
ಧಾವಾಗ್ನಿಯು ಬರೀ ನೋವನ್ನೇ
ಉಣಿಸಿ ಧಗಧಗಿಸುತಲಿಹುದು ಆ
ಸುಡುವಾಗ್ನಿಯ ಜ್ವಾಲೆಯು
ಉರಿವ ಕೆನ್ನಾಲಿಗೆಯಂತೆ ಬದುಕಿನ
ಸಾರವೇ ನಿಸ್ತೇಜವಾಗಿಹುದು.!!

ಸಂಸಾರ ಸಾಗರದೀ
ಕ್ಷಣ ಕ್ಷಣದ ಕೋಲಾಹಲಗಳಿಗೆ
ಹಾಲಾಹಲ ಬೆರಸಿ ನೀ
ಜೀವಕ್ಕೆ ಕುತ್ತಾಗದಿರಾಸೆಯೆ

ಬದುಕಿನೀ ಬಾಂದಳಕೆ
ಬಿದಿಗೆ ಚಂದ್ರಮನಾಗಿ
ನಿತ್ಯ ಚೇತನವ ನೀಡಿ
ಮನವನನುಗೊಳಿಸು ನೀ
ಹೇ ಶಕ್ತಿಯೇ.....!!!
= ಬನವಾಸಿ ಸೋಮಶೇಖರ್.
   25-01-2012

Wednesday 18 January 2012

'ವಿವೇಕಾನಂದರ ಬಗ್ಗೆ.....' ಗೃಹಿಕೆಗೆ ಪೂರಕವಾಗಿ........


"........ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಅಭಿಮಾನ-ಗೌರವಕ್ಕೆ ಪಾತ್ರವಾದ ಆಧ್ಯಾತ್ಮ ಚೇತನ.ಅದನ್ನು ಯಾರೂ ಅಲ್ಲಗಳೆಯುವುದು ಸಾಧ್ಯವಿಲ್ಲ.ಅವರನ್ನು ಇನ್ನಷ್ಟು ಅರಿಯುವ ಪ್ರಯತ್ನದಿಂದ ಅವರ ಬಗೆಗಿನ ಅಭಿಮಾನ-ಗೌರವ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು."
  = ದಿನೇಶ್ ಅಮೀನ್ ಮಟ್ಟು.ಓದಿರಿ,ಪ್ರಜಾವಾಣಿ 19-01-2012,ಸಂಗತ.
( ಇದು ಸಹೃದಯಿ ಓದುಗರ ಅವಗಾಹನೆಗೆ ಮಾತ್ರ.ವಿವೇಕಾನಂದರ ವಿರುದ್ಧ ಟೀಕೆಗಾಗಿ ಅಲ್ಲ.ಅಭಿಪ್ರಾಯಿಸಿರಿ.)
http://banavasimaatu.blogspot.com/ಬನವಾಸಿ ಮಾತು.