Sunday 15 April 2012

ಎಲ್ಲಾ ನೀನೆ ನೀನೆ!.

ನನ್ನ ಹಾಡು ನನ್ನದಲ್ಲ
ನನ್ನ ಪಾಡು ನನ್ನದಲ್ಲ
ನನ್ನ ಹಾಡು ನನ್ನ ಪಾಡು
ಎಲ್ಲಾ ನೀನೆ ನೀನೆ!.
= ಬನವಾಸಿ ಸೋಮಶೇಖರ್.

Saturday 14 April 2012

ಸಮಾನತೆ ಕನಸಿಗೆ ಬೆಳಕು ನೀಡಿದ ಪ್ರಜಾವಾಣಿ.

ಮಾನ್ಯ ಸಂಪಾದಕರು,ಪ್ರಜಾವಾಣಿ ಬೆಂಗಳೂರು.

ಮಾನ್ಯರೆ,ಇಂದಿನ ಪ್ರಜಾವಾಣಿ ಪತ್ರಿಕೆಯನ್ನು ನೋಡುತ್ತಲೇ ಆನಂದಿತನಾದೆ.ಅಮೋಘ ಮತ್ತು ಅದ್ವಿತೀಯ ಸೌಂದರ್ಯವನ್ನು ಆಸ್ವಾದಿಸಿದ ಅನುಭವವಾಯಿತು.ಪತ್ರಿಕೆಗೆ ಇರುವ ಸಾಮಾಜಿಕ ಬದ್ಧತೆ, ಶೋಷಿತ ಹಾಗೂ ತುಳಿತಕ್ಕೊಳಗಾದ ಜನವರ್ಗದ ಬಗ್ಗೆ ಇರುವ ಶ್ರದ್ಧಾ ಕಾಳಜಿಯನ್ನು ತಿಳಿದು ಹರ್ಷಿತನಾದೆ.ಪ್ರಜಾವಾಣಿಯನ್ನು ಕಳೆದ 20 ವರ್ಷಗಳಿಂದ ಒಂದಿನವೂ ತಪ್ಪದೇ ಓದುತ್ತಿದ್ದೇವೆ.ಅದರ ತತ್ವ,ನೀತಿ,ಸಿದ್ಧಾಂತಗಳಿಗೆ ಮಾರುಹೋಗಿದ್ದೇವೆ.ಪ್ರೋ.ರಾಬಿನ್ ಜೆಫ್ರಿ ಮಾತುಗಳಿಂದ ಪ್ರೇರಿತರಾಗಿ ದಲಿತರ ನೋವು ನಲಿವುಗಳಿಗೆ ಸ್ಪಂದಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಾಬಾ ಸಾಹೇಬರ ಜನ್ಮ ದಿನದಂದು ಈ ದಿನದ (14-04-2012) ಸಂಚಿಕೆಯನ್ನು ಚಿತ್ತಾಕರ್ಷಕವಾಗಿ ಹೊರ ತಂದಿದ್ದೀರಿ.ಕರ್ನಾಟಕ ಮಾಧ್ಯಮ ಕ್ಷೇತ್ರದ ಇತಿಹಾಸ ಪುಟಗಳಲ್ಲಿ ಪ್ರಜವಾಣಿಯ ಈ ಸಂಚಿಕೆ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿತೆಂದು ಹೇಳ ಬಯಸುತ್ತೇನೆ.ದೇವನೂರು ಮಹಾದೇವರನ್ನು ಅತಿಥಿ ಸಂಪಾದಕರನ್ನಾಗಿ ಗೌರವಿಸುವ ಮೂಲಕ ಪತ್ರಿಕೆ ಹಿರಿಮೆಯನ್ನೇ ಮೆರೆದಿದೆ.ಅವರ ಹಸ್ತಾಕ್ಷರಗಳುಳ್ಳ " ಸಮಾನತೆ ಕನಸನ್ನು ಮತ್ತೆ ಕಾಣುತ್ತ" ಲೇಖನವನ್ನು ಓದಿ ರೋಮಾಂಚನವಾಯಿತು.ಪತ್ರಿಕೆಯ  ಪ್ರತಿ ಪುಟಗಳಲ್ಲೂ ದಲಿತರ ಬದುಕಿನ ನೈಜ ಸ್ಥಿತಿಗಳನ್ನು ಅನಾವರಣಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಜಾಗ್ರತಗೊಳಿಸಲಾಗಿದೆಸುದೇಶ ದೊಡ್ಡಪಾಳ್ಯ,ಡಾ.ನಟರಾಜು ಹುಳಿಯಾರ್,ಎಚ್.ಎ.ಅನಿಲ್ ಕುಮಾರ್,ಸುಬ್ಬು ಹೊಲೆಯಾರ್,ಎನ್.ಕೆ.ಹನುಮಯ್ಯ,ಡಾ.ಎಲ್.ಹನುಮಂತಯ್ಯ,ಇಂದೂಧರ ಹೊನ್ನಾಪುರ,ಪ್ರೊ.ರಾಜೇಂದ್ರ ಜೆನ್ನಿ,ಪ್ರೊ.ಗೋಪಾಲ್ ಗುರು,ಆನಂದ ತೇಲ್ ತುಂಬ್ಡೆ,ಕೆ.ಎಲ್.ಚಂದ್ರಶೇಖರ್ ಐಜೂರ್ ಮತ್ತು ಪ್ರೊ.ರವಿವರ್ಮ ಕುಮಾರ್ ಅವರುಗಳ ಲೇಖನ,ಬರಹಗಳು ಪರಿಪೂರ್ಣ ಮಾಹಿತಿಯನ್ನು ಹೊರತೆಗೆದಿದ್ದು ದಲಿತ ಪ್ರಜ್ಞೆಗೆ ಬೆಳಕು ನೀಡಿವೆ.ಅತಿಥಿ ಸಂಪಾದಕರ 'ಸಾಮಾಜಿಕ ಪೊಲೀಸರು ಅಗತ್ಯ'ಸಂಪಾದಕೀಯ ಬರಹವು ಸರ್ಕಾರದ ಕಣ್ಣು ತೆರೆಸುವಲ್ಲಿ ಸಫಲವಾಗಬುದೆಂದು ಭರವಸೆ ಮೂಡಿಸಿದೆ.ಇಂಥ ವಿನೂತನವಾದ ಪ್ರಯತ್ನಕ್ಕೆ ಕೈ ಹಾಕಿ ಸಾಕಾರಗೊಳಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆತ್ಮಕ್ಕೆ ಅಕ್ಷರಶಃ ಗೌರವಾದರಗಳನ್ನು ಸಲ್ಲಿಸಿದ್ದೀರಿ.ಪತ್ರಿಕೆಗೂ ಅದರ ಸಂಪೂರ್ಣ ಬಳಗಕ್ಕೂ ಅಭಿನಂದನೆಗಳು ಸಲ್ಲುತ್ತವೆ.ಈ ಕಾಯಕ ನಿರಂತರವಾಗಿ ಸಾಗುತ್ತಿರಲಿ.
 
 
        ತಮ್ಮ ಅಭಿಮಾನಿ

ಬನವಾಸಿ ಸೋಮಶೇಖರ.ಮ0ಗಳೂರು.
9480201994

Tuesday 10 April 2012

ಕಪ್ಪು ಮೋಡ: ಕೆಂಪು ಚುಕ್ಕೆ! ಹಿಂದೂ ಸಮಾಜ ಚಿಕಿತ್ಸಕ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್.

ಕಪ್ಪು ಕಪ್ಪು ಮೋಡದಲಿ
ಕಗ್ಗತ್ತಲ ಬಾನಿನಲಿ
ಮೂಡಿತೊಂದು ಕೆಂಪು ಚುಕ್ಕೆಯೋ
ಓ.........ರಾಮಣ್ಣ ಬಡವರೆದೆಯ ಆಶಾಕಿರಣವೋ!

ಈಗ್ಗೆ ಒಂದು ನೂರಾ ಇಪ್ಪತ್ತೊಂದು ವರ್ಷಗಳ ಹಿಂದೆ ಕಬೀರ್ ಪಂಥದ ತೇಜಃಸ್ವರೂಪಿಯಾದ ಸಾಧುವರೇಣ್ಯರು ಮೋಹಿಗೆ ಭೇಟಿ ಇತ್ತ ಸಂದರ್ಭದಲ್ಲಿ ಅಲ್ಲಿಯೇ ಸೈನಿಕ ಶಾಲೆಯ ಮುಖ್ಯೋಪಾಧ್ಯಾಯ ವೃತ್ತಿಯಲ್ಲಿದ್ದ ರಾಮಜೀ ಸಕ್ಪಾಲ ಮತ್ತು ಕಬೀರ್ ಪಂಥಾನುಯಾಯಿ ದೈವ ಭಕ್ತೆ ಭೀಮಾಬಾಯಿ ದಂಪತಿಗಳಿಗೆ ದರ್ಶನ ಭಾಗ್ಯ ನೀಡಿ ಅವರ ಮೇಲೆ ಕೃಪಾವಲೋಕನ ಬೀರಿ ಹೃದಯ ತುಂಬಿ ಹರಸುತ್ತಾರೆ.ಹದಿಮೂರು ಮಕ್ಕಳನ್ನು ಪಡೆದಿದ್ದ ರಾಮಜೀ ಸಂಸಾರದ ತಾಪತ್ರಯಗಳನ್ನು ಆ ಸಾಧುಗಳ ಬಳಿ ಹೇಳಿಕೊಳ್ಳುತ್ತಾ ಬರುವ ಅಲ್ಪ ಸಂಬಳದಿಂದ ಮಕ್ಕಳನ್ನು ಸಾಕುವುದು ಕಷ್ಟವಾಗುವುದು ಎಂಬ ವಾಸ್ತವವನ್ನು,ಭಕ್ತಿ ಭಾವದಿಂದ ಅಂತರಂಗವನ್ನು ಬಿಚ್ಚಿಡುತ್ತಾರೆ.ಸಾಧುಗಳು ಅವರನ್ನು ಪ್ರೀತಿಯಿಂದ ಸಂತೈಸುತ್ತಾ ಆ ಬಗ್ಗೆ ಚಿಂತಿಸಬೇಡ,"ನೀನೂ ಮತ್ತು ನಿನ್ನ ಹೆಂಡತಿಯೂ ಪುಣ್ಯಶಾಲಿಗಳು.ಮಹಾ ಪುರುಷನೊಬ್ಬ ನಿಮಗೆ ಮಗನಾಗಿ ಜನಿಸುತ್ತಾನೆ.ನಿನ್ನ ವಂಶಕ್ಕವನು ಬೆಳಕಾಗುತ್ತಾನೆ.ಜಗತ್ತಿನಲ್ಲೆಲ್ಲ ಅವನ ಕೀರ್ತಿ ಪಸರಿಸಿ ಜಗದ್ವಿಖ್ಯಾತವಾಗುವುದು"ಎಂಬ ದಿವ್ಯವಾಣಿಯೊಂದಿಗೆ ಆಶೀರ್ವದಿಸಿ ಮರಳುತ್ತಾರೆ.

ಆಗ ಭಾರತ ದೇಶದ ಅಸಂಖ್ಯಾತ ಶೋಷಿತರು,ತುಳಿತಕ್ಕೊಳಗಾದವರ ಬದುಕಿನ ತುಂಬೆಲ್ಲ ಬರೀ ಕಗ್ಗತ್ತಲು ಆವರಿಸಿಕೊಂಡಿತ್ತು!ಜಾತೀಯತೆ,ಅಸಮಾನತೆ,ಅಸ್ಪೃಶ್ಯತೆ ಹಸಿ ಹಸಿಯಾಗಿ ತಾಂಡವಾಡುತ್ತಿತ್ತು.ಮಡಿ ಮೈಲಿಗೆಯ ಭಾವನೆಯು ವಿಸ್ತಾರವಾಗಿ ಚಾಚಿಕೊಂಡು ಪೆಡಂಭೂತವಾಗಿ ಕಾಡುತ್ತಿತ್ತು.ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ ಎಂಬ ಚಾತುರ್ವರ್ಣ ಪದ್ಧತಿಯು ಎಲ್ಲೆಡೆ ತನ್ನ ಛಾಪನ್ನು ಗಟ್ಟಿಯಾಗಿ ಭದ್ರಗೊಳಿಸಿಕೊಂಡಿತ್ತು.ಹೊಲೆಯ,ಮಹರ್,ಮಾದಿಗ,ಸಮಗಾರ,ಚಮಗಾರ,ಚಲವಾದಿ,ಚನ್ನಯ್ಯ,ಡೋಹರ,ಮೋಚಿ,ಮಚ್ಚೆಗಾರ,
ಭಂಗಿ,ಮಾಂಗ್,ಮಾಲಾ,ಮುಲ್ಲರ್,ಪರಯಾ,ಪುಲಯ,ಜಾತವ,ವಾಲ್ಮೀಕಿ,ದೋಮ್,ಮೌರ್ಯ,ಇತ್ಯಾದಿ ಇತ್ಯಾದಿ......ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ಹೆಸರುಗಳಿಂದ ಕರೆಯಲ್ಪಡುತ್ತಿರುವ 'ಅಸ್ಪೃಶ್ಯರು' (ಸವರ್ಣಿಯರು ಇಟ್ಟ ಹೆಸರು) ಎಂಬ 'ನಾಗಾ ಜನಾಂಗ' ಸಾಮಾಜಿಕ,ಆರ್ಥಿಕ,ಶೈಕ್ಷಣಿಕ,ಸಾಂಸ್ಕೃತಿಕ,ರಾಜಕೀಯ ಇತ್ಯಾದಿ ಎಲ್ಲಾ ರಂಗದಲ್ಲೂ ಶೋಷಣೆ-ಅಸಮಾನತೆಗೆ ತುತ್ತಾಗಿ ಶೋಚನೀಯ ಸ್ಥಿತಿಯನ್ನು ಅನುಭವಿಸುತ್ತಿತ್ತು.ಇಂಥ ಅನೀತಿ,ಅಜ್ಞಾನ,ಅನ್ಯಾಯ,ಮೌಢ್ಯಾಂಧಕಾರ ಕವಿದುಕೊಂಡ ಕಗ್ಗತ್ತಲ ಬಾನಿನಲ್ಲಿ ಬಂಡಾಯದ ಮತ್ತು ಕ್ರಾಂತಿಯ'ಕೆಂಪು'ದೃವತಾರೆಯಾಗಿ ದಲಿತರು-ದಮನಕ್ಕೊಳಗಾದವರ ಬದುಕಿನ ಹೊಸ ಆಶಾ ಕಿರಣವಾಗಿ ಭೀಮಾಬಾಯಿ ರಾಮಜೀ ದಂಪತಿಗಳಿಗೆ ಹದಿನಾಲ್ಕನೇ ಮಗನಾಗಿ 1891ರ ಏಪ್ರೀಲ್ 14 ರಂದು ಡಾ.ಭೀಮರಾವ್ ರಾಮಜೀ ಅಂಬೇಡ್ಕರ್ ಜನ್ಮ ತಾಳುವ ಮೂಲಕ ಸಾಧುವರೇಣ್ಯರು ಹೇಳಿದ ಭವಿಷ್ಯವಾಣಿ ಅಕ್ಷರಶಃ ದಿಟವಾಯಿತು.ಈ ಅರ್ಥದಲ್ಲಿ ನಾನು ಲೇಖನದ ಪ್ರಾಂಭದಲ್ಲಿ ಉಪಯೋಗಿಸಿಕೊಂಡಿರುವ ಕವಿ ಸಾಲುಗಳು ಅರ್ಥಪೂರ್ಣವಾಗಿದೆ.

ಚಿಕ್ಕಂದಿನಲ್ಲಿಯೇ ಅತ್ಯುತ್ತಮ ಸಂಸ್ಕಾರದ ಸುಸಂಸ್ಕೃತ ಮನೆತನದ ವಾತಾವರಣದಲ್ಲಿ ಬೆಳೆದ ಅಂಬೇಡ್ಕರ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ದಪೋಲಿ,ಸತಾರ,ಮುಂಬೈಗಳಲ್ಲಿ ಮುಗಿಸಿಕೊಂಡ ನಂತರ ಮುಂಬೈ,ಕೋಲಂಬಿಯಾ,ಲಂಡನ್ ಮತ್ತು ಬಾನ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗವನ್ನು ಪೂರೈಸಿಕೊಂಡು, ಅದ್ವಿತೀಯ ಆದರ್ಶ ಮತ್ತು ಮಹಾನ್ ಮುತ್ಸದ್ಧಿ,ಚಿಂತಕ,ಚಿಕಿತ್ಸಕ,ವಿದ್ವಾಂಸರಾಗಿ ಹೊರಹೊಮ್ಮಿದ್ದೊಂದು ಯಶೋಗಾಥೆ ಎನ್ನುವುದಕ್ಕಿಂತ ಸ್ವಾಭಿಮಾನ,ಸತತಾಭ್ಯಾಸದ ಮನೋವೃತ್ತಿಯೇ ಕಾರಣವೆನ್ನಬೇಕು.ನಂತರ ಬ್ಯಾರಿಷ್ಟರ್ ಪದವಿ ಪಡೆದು ಅವರು ಮುಂಬೈ ಉಚ್ಛ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಅಲ್ಲಿನ ಸರ್ಕಾರಿ ಕಾನೂನು ವಿಶ್ವವಿದ್ಯಾಲಯದ ಪ್ರಾಚಾರ್ಯರಾಗಿ ಹೆಗ್ಗಳಿಕೆಯ ಸೇವೆಗೈದರು.


ಹಿಂದು ಸಮಾಜದ ದುರ್ಬಲ, ಹಿಂದುಳಿದ,ಅಲ್ಪ ಸಂಖ್ಯಾತ ಮತ್ತು ಶೋಷಿತ-ನಿರ್ಲಕ್ಷಿತ ಅಸ್ಪೃಶ್ಯರ ಸಂಕಷ್ಟಕ್ಕೆ ನೋವಿಗೆ ಮುಖವಾಣಿಯಾಗಿ ನಿಂತವರು ಅಂಬೇಡ್ಕರ್. ತುಳಿತಕ್ಕೊಳಗಾದ ನೊಂದ ಜನಾಂಗಗಳ ಏಳಿಗೆಗಾಗಿ ಪರಿಶ್ರಮ ಪಟ್ಟು ಪರಮಸಾಧನೆಗೈದರು.ತಮ್ಮ ಇಡೀ ಜೀವಿತವನ್ನೇ ಅವರಿಗೆ ಅರಿವು,ತಿಳುವಳಿಕೆ ನೀಡುವುದಕ್ಕಾಗಿ ಮುಡಿಪಾಗಿಸಿಕೊಂಡರು.ವೇದ,ಶಾಸ್ತ್ರ,ಆಗಮ ಗ್ರಂಥಗಳನ್ನು,ಪೌರಾತ್ಯ-ಪಾಶ್ವಾತ್ಯ ವಿದ್ವತ್ಪೂರ್ಣ ಅಧ್ಯಯನ-ಅಧ್ಯಾಪನ ನಡೆಸಿ ಕರಗತಮಾಡಿಕೊಂಡ ಮಹಾ ಮೇಧಾವಿ ಅವರು.ದಲಿತ ಜನಾಂಗಕ್ಕೆ ನಾಗರಿಕ ಹಾಗೂ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡಲು ಜೀವನಪೂರ್ತಿ ಹೋರಾಟ ನಡೆಸಿದರು.ದುಂಡುಮೇಜಿನ ಪರಿಷತ್ತಿಗೆ ಹೋಗಿ ಬಂದರು.'ಹೋಂ ರೂಲ್ ' ಬೇಡಿಕೆಗೆ ಒಪ್ಪದೇ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕೆಂದೂ ಅದರಲ್ಲಿ ದಲಿತ ವರ್ಗಕ್ಕೆ ಪೂರ್ಣ ರಕ್ಷಣೆ ಬೇಕೆಂದೂ ಹಠಕ್ಕೆ ಬಿದ್ದು ವಾದಿಸಿದರು.'ಜಾತಿವಾರು ತೀರ್ಪು'ಹೊರ ಬಂದಾಗ ಅದನ್ನು ಬದ್ಧವಾಗಿ ವಿರೋಧಿಸಿ ಮಹಾತ್ಮ ಗಾಂಧಿಜೀಯವರು ಅಮರಣಾಂತ ಉಪವಾಸ ಸತ್ಯಾಗ್ರಹದ ನಾಟಕ ಹೂಡಿ ಬಿಟ್ಟರು! ನಿಮ್ನ ಜನಾಂಗಕ್ಕೆ ಅಂಬೇಡ್ಕರ್ ಗೆದ್ದುಕೊಟ್ಟಿದ್ದ ರಾಜಕೀಯ ಹಕ್ಕುಗಳ ಪ್ರಭಾವವನ್ನು ಸಂಪೂರ್ಣವಾಗಿ ಕುಗ್ಗಿಸುವುದೇ ಗಾಂಧಿಜೀಯವರ ಉದ್ದೇಶವಾಗಿತ್ತು ಎಂಬುದರಲ್ಲಿ ಅಕ್ಷರಶಃ ಹುರುಳಿದೆ ಎನಿಸುವುದು.ಇಡೀ ದೇಶದ ಮಹಾತ್ಮನ ಜೀವಕ್ಕೆ ಅಂಬೇಡ್ಕರರಿಂದ ಕುತ್ತು ಬಂದೀತೆಂಬ ಅಪವಾದ ಬರಬಾರದೆಂದೂ ಮತ್ತು ಗಾಂಧೀಜಿಯವರ ಸೇವೆಯು ದೇಶಕ್ಕೆ ಅಗತ್ಯವಾಗಿರುವುದರಿಂದಲೂ ಅವರ ಅಭಿಮಾನಿಯಾಗಿದ್ದ ಕಾರಣವಾಗಿ 1932 ರ 'ಪೂನಾ ಒಪ್ಪಂದ' ವೆಂಬ ಪ್ರಸಿದ್ಧ ಒಡಂಬಡಿಕೆಗೆ ಬಾಬಾ ಸಾಹೇಬ್ ಅಂಬೇಡ್ಕರರು ಒಲ್ಲದ ಮನಸ್ಸಿನ ಅಂಕಿತ ಹಾಕಿ ತಾನೂ ಒಬ್ಬ ಪರಮ ನಿಷ್ಠ ದೇಶಭಕ್ತನಾಗಿರುವುದನ್ನು ತೋರಿಸಿಕೊಟ್ಟರು.

ರಾಜ್ಯಾಂಗ ರಚನಾ ಸಭೆಗೆ ಮುಂಬೈ ವಿಧಾನ ಸಭೆಗೆ ಸ್ಪರ್ಧಿಸಿ ಸೋತ ಅಂಬೇಡ್ಕರ್ 1946ರಲ್ಲಿ ಬಂಗಾಳ ವಿಧಾನ ಸಭೆಯಿಂದ ಆಯ್ಕೆಯಾದರು.ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿಯೂ ರಾಜ್ಯಾಂಗ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿಯೂ 1947ರಲ್ಲಿ ಆಯ್ಕೆಯಾದರು.ಹಿಂದುಗಳಿಗೆಲ್ಲ ಸಮಾನ ಕಾನೂನುಕ್ರಮವನ್ನು ಒದಗಿಸುವುದಕ್ಕಾಗಿ ಅವರು 'ಹಿಂದು ಕೋಡ್ 'ಬಿಲ್ಲನ್ನು ತಯಾರಿಸಿದರು.ಆದರೆ ದುರ್ದೈವದಿಂದ ಭಾರತ ಪ್ರಧಾನಿ ನೆಹರುರವರ ಬೆಂಬಲ ದೊರಕದ್ದರಿಂದ ಆ ಮಸೂದೆ ಪಾಸಾಗಲೇ ಇಲ್ಲ.ಈ ಕಾರಣದಿಂದಲೇ ಅವರು ದಲಿತ ವರ್ಗದವರ ಬಗ್ಗೆ ಸರ್ಕಾರವು ಹೊಂದಿದ್ದ ನಿಷ್ಕಾಳಜಿ,ನಿರಾಸಕ್ತಿಯನ್ನು ಅತ್ಯುಘ್ರವಾಗಿ ಖಂಡಿಸಿ ತಮ್ಮ ಸಚಿವ ಪದವಿಗೆ ರಾಜೀನಾಮೆ ಇತ್ತು ಹೊರಬಂದು ಸ್ವಾಭಿಮಾನವನ್ನು ಮೆರೆಯುತ್ತಾರೆ.

ಅವರ ಬದುಕು-ಭಾಷಣ.ಬರಹ-ಹೋರಾಟ,ಪ್ರಕಾಂಡ ಪಾಂಡಿತ್ಯ,ವ್ಯಕ್ತಿತ್ವದ ಕುರಿತು ಹೇಳಿದಷ್ಟೂ ಕಡಿಮೆ.ಇಂಥ ಒಬ್ಬ ಅಸಾಧರಣ,ನಿರ್ಭೀತ,ನಿರ್ಭೀಡೆಯ ಮಹಾನ್ ವ್ಯಕ್ತಿಯು ಧೀಃಶಕ್ತಿಯಾಗಿ ಮನುಕುಲದ ಇತಿಹಾಸದಲ್ಲಿ ಹುಟ್ಟಿ ಬಂದದ್ದೇ ಸರ್ವ ಶೋಷಣೆಯಿಂದಲೂ ಮುಕ್ತವಾದ ನವ ಸಮಾಜ ನಿರ್ಮಾಣ ಮಾಡಲು ಎನ್ನಲೇಬೇಕು.1935ರಲ್ಲಿ ನಾಸಿಕ್ ಜಿಲ್ಲೆಯ ಯಾವೋಲಾದಲ್ಲಿ ನಡೆದ ದಲಿತ ವರ್ಗಗಳ ಮಹಾ ಸಮ್ಮೇಳನದಲ್ಲಿ ಅವರು ಎಲ್ಲ ದಲಿತರೂ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸುವಂತೆ ಬಹಿರಂಗ ಕರೆ ನೀಡಿದರು."ನಾನು ಹಿಂದುವಾಗಿ ಹುಟ್ಟಿರುವೇನಾದರೂ ಹಿಂದುವಾಗಿ ಸಾಯಲಾರೆ" ಎಂಬ ಕ್ರಾಂತಿಕಾರಕ ಘೋಷಣೆ ಹೊರಹೊಮ್ಮಿದಾಗ ಎಲ್ಲ ಭಾರತೀಯರ ಹೃದಯ ಒಮ್ಮೆ ತಲ್ಲಣಗೊಂಡಿರಲೇ ಬೇಕು.ತಮ್ಮ ಅಂತರಾಳದ ಕೂಗಿಗೆ ಕಟಿಬದ್ಧರಾಗಿದ್ದ ಅವರು 1956 ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು.ಈ ಮೂಲಕ ಮಹಾ ಧಾರ್ಮಿಕ ಧುರೀಣರೂ  ದೇವನಾಂಪ್ರಿಯ ಚಕ್ರಚರ್ತಿ ಅಶೋಕ ಮಹಾಶಯನ ತರುವಾಯ ಭಾರತದಲ್ಲಿ ಬೌದ್ಧ ಮತದ ಪುನರುದ್ಧಾರಕರೂ ಆಗಿ ಬೋಧೀಸತ್ವ ಅಂಬೇಡ್ಕರಾದರು.

ದೀನದಲಿತರು,ವಂಚಿತರು,ದಬ್ಬಾಳಿಕೆಗೊಳಗಾದ ಸ್ತ್ರೀಯರು......ಇವರೆಲ್ಲರ ವಿಮೋಚನೆಗಾಗಿಯೇ ಅಂಬೇಡ್ಕರ ಬದುಕಿದರು,ದುಡಿದರು.ಭಾರತದ ಐಕ್ಯ ಹಾಗೂ ಪುನರ್ ಘಟನೆಗಾಗಿ ಹೋರಾಡಿದಿ ಈ ವಿಶ್ವಮಾನವ,ಸಾಮಾಜಿಕ ನ್ಯಾಯದ ಹರಿಕಾರ ಹೊಸದಿಲ್ಲಿಯ ಅಲಿಪೋರ್ ರಸ್ತೆಯಲ್ಲಿಯ ತಮ್ಮ 26 ನೇ ಕ್ರಮ ಸಂಖ್ಯೆಯ ನಿವಾಸದಲ್ಲಿ 1956 ನೇ ಡಿಸೆಂಬರ್ 6 ರಂದು ನಿರ್ವಾಣ ಹೊಂದಿದರು.

 = ಬನವಾಸಿ ಸೋಮಶೇಖರ್,ಮಂಗಳೂರು.