Sunday 31 July 2016

ನೆನಪಿನ ಬುತ್ತಿಯಿಂದ: ಮರೆಯಾದ ಬನವಾಸಿ ನಾಡ ಅಭಿವೃದ್ಧಿ ಕನಸುಗಾರ ವಜ್ರನಾಭ ಬಳೆಗಾರ

ಮರೆಯಾದ ಬನವಾಸಿ ನಾಡ ಅಭಿವೃದ್ಧಿ ಕನಸುಗಾರ ವಜ್ರನಾಭ ಬಳೆಗಾರವಜ್ರನಾಭ ಬಳೆಗಾರ,ನಮ್ಮೂರು ಬನವಾಸಿಯ ಹೆಮ್ಮೆಯ ಮಗನಾಗಿದ್ದರು.ಸದಾ ಬನವಾಸಿಯ ಸರ್ವತೋಮುಖ ಅಭಿವೃದ್ಧಿಗಾಗಿ ಅವರ ಮನಸ್ಸು ತುಡಿಯುತ್ತಿತ್ತು.ಬನವಾಸಿಯ ಪ್ರಸಿದ್ಧ ಶ್ರೀ ಜಯಂತಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ಧ ಅವರು ಚಿಕ್ಕಂದಿನಿಂದಲೂ ತಮ್ಮನ್ನು ರಚನಾತ್ಮಕ ಹಾಗೂ ವಿಧಾಯಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.ಕಲೆ,ಸಾಹಿತ್ಯ,ವಿಜ್ಞಾನ,ಸಂಸ್ಕೃತಿ ಇತ್ಯಾದಿ ಬಹುಮುಖ ಕ್ಷೇತ್ರದಲ್ಲಿ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿಕೊಂಡಿದ್ದರು.

ಈಗ್ಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಅಸ್ತಂಗತರಾಗಿದ್ದ ಬನವಾಸಿ ನಾಡಿನ ಕನಸುಗಾರ,ಸ್ವಾತಂತ್ರ್ಯ ಸೇನಾನಿ,ಕರ್ನಾಟಕ ಸರ್ಕಾರದ ಗ್ಯಾಸೇಟಿಯರ್ ನ ಮುಖ್ಯ ಸಂಪಾದಕರಾಗಿದ್ದ ಅಭಿಶಂಕರ್ ಅವರ ಜೊತೆಗೂಡಿ ಬನವಾಸಿ ನಾಡಿನ ಸರ್ವತೋಮುಖ ಅಭಿವೃದ್ಧಿಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ವಜ್ರನಾಭ ಬಳೆಗಾರರು ಬನವಾಸಿ ವಲಯ ಅಭ್ಯುದಯ ಸಮಿತಿ ಎಂಬ ಅರ್ಥವತ್ತಾದ ಸಂಸ್ಥೆಯು ಜನ್ಮ ತಾಳಲು ಮೂಲ ಕಾರಣಿಭೂತರಾಗಿದ್ದರು.ಅದರ ಸಂಸ್ಥಾಪನೆಯ ಮೂಲ ಬೇರು ಆಗಿದ್ದವರು ಅವರು.ಅಭಿಶಂಕರರಿಂದ ಮೊದಲುಗೊಂಡು ಬನವಾಸಿ ನಾಡಿನ ಅನೇಕ ಹಿರಿಯರು ಅದರ ಅಧ್ಯಕ್ಷರಾದರೂ ಸಹ ವಜ್ರನಾಭ ಅವರು ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಹಗಲಿರುಳೆನ್ನದೇ ಅಹರ್ನಿಶಿ ದುಡಿದರು. ಅತ್ಯಂತ ನಿಸ್ವಾರ್ಥ ಮನಸ್ಸಿನಿಂದ,ನಿಷ್ಕಲ್ಮಶ ಹೃದಯದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.
ಕನ್ನಡ ನಾಡಿನ ಅತ್ಯಂತ ಪ್ರಾಚೀನ ನೆಲೆಯಾದ ಬನವಾಸಿಯು ಇತಿಹಾಸದ ಪುಟಗಳಲ್ಲಿ ಹೂತು ಹೋಗಿತ್ತು.ನಾಡಿನ ಸಂಸ್ಕೃತಿ,ಪರಂಪರೆ,ಚಿನ್ನದ ಗಣಿಯಾಗಿದ್ದ ಬನವಾಸಿಯು ಕನ್ನಡ ಸಂಸ್ಕೃತಿಯ ತೊಟ್ಟಿಲು ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡುವಲ್ಲಿ ಎಲ್ಲರೊಂದಿಗೆ ಜೊತೆಗೂಡಿ ಟೊಂಕ ಕಟ್ಟಿ ನಿಂತಿದ್ದರು.ಪತ್ರ ಸಂಸ್ಕೃತಿಯು ಅವರ ನಿತ್ಯದ ಕಾಯಕವೇ ಆಗಿ ಹೋಗಿತ್ತು.ಅವರು ಸೇವೆಯಿಂದ ನಿವೃತ್ತರಾದರೂ ಬನವಾಸಿಯ ಸೇವೆಯಿಂದ ಮಾತ್ರ ಹಿಂದೆ ಸರಿದಿರಲಿಲ್ಲ. ಸದಾ ಅವರ ಜೀವ ಬನವಾಸಿಗಾಗಿ ಹಂಬಲಿಸುತ್ತಿತ್ತು.
ನಾಡ ಜನರ ಹೋರಾಟದ ಫಲವಾಗಿ ಸರ್ಕಾರದಿಂದ ಅಧಿಕೃತವಾಗಿ ಪ್ರತಿ ವರ್ಷ ಬನವಾಸಿಯಲ್ಲಿ ನಡೆಯುತ್ತಿದ್ದ ಕದಂಬೋತ್ಸವವು ಗತಕಾಲದ ಪುನರ್ ದರ್ಶನವಾಗಿತ್ತು.ಈ ಉತ್ಸವವೂ ಒಳಗೊಂಡಂತೆ ಊರಿನ ಎಲ್ಲ ವಿದಾಯಕ ಚಟುವಟಿಕೆಗಳು ಕಾಲಕಳೆದಂತೆ ಮಸುಕಾದ ತೊಡಗಿದವು.ಹಿರಿಯರನೇಕರು ಇನ್ನಿಲ್ಲವಾಗುತ್ತಾ ಬಂದರು.
ಯುವಕರು,ಮುಂದಾಳುಗಳೆನಿಸಿಕೊಂಡವರೆಲ್ಲ ತಮ್ಮ ತಮ್ಮ ಕಾಯಕದಲ್ಲಿ ತಲ್ಲೀನರಾದರು,ಊರಿನ ಬಗ್ಗೆ ಚಿಂತಿಸುವವರು,ಕಾಳಜಿ ಮೆರೆಯುವವರು,ಹೋರಾಟ ಮಾಡುವವರು ಹೀಗೆ ನಾಡಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು ಕಡಿಮೆಯಾಗುತ್ತಾ ಬಂತು.ಇಂಥ ಸಂದರ್ಭದಲ್ಲಿ ಬಳೆಗಾರರ ಆರೋಗ್ಯದಲ್ಲಿ ಏರು ಪೇರಾಯಿತು.ಸದಾ ಬನವಾಸಿ ನಾಡಿನ ಅಭ್ಯುದಯಕ್ಕೆ ಹಾತೊರೆಯುತ್ತಿದ್ದ ಅವರ ಮನಸ್ಸು ಅಭ್ಯುದಯ ಸಮಿತಿಯನ್ನು ಕ್ರಿಯಾತ್ಮಕವಾಗಿ ಮುಂದುವರೆಸಿಕೊಂಡು ಹೋಗುವವರು ಇಲ್ಲದ್ದನ್ನು ಕಂಡು ಚಿಂತಿತವಾಯಿತು.ಇದರಿಂದ ಅವರ ಆರೋಗ್ಯವು ಮತ್ತಷ್ಟು ಹದಗೆಡುವುದಕ್ಕೆ ಕಾರಣವಾಯಿತು.ಹೀಗಾಗಿ ಹಲವಾರು ತಿಂಗಳುಗಳಿಂದ ಅವರು ಹಾಸಿಗೆ ಹಿಡಿಯಬೇಕಾಯಿತು.ಅವರ ಮಕ್ಕಳಾದ ಗೆಳೆಯ ಅರವಿಂದ ಮತ್ತು ಆನಂದ,ಸೊಸೆ,ಧರ್ಮಪತ್ನಿ ಎಲ್ಲರೂ ಅವರನ್ನು ಮಗುವಿನಂತೆ ನೋಡಿಕೊಂಡು ಬಂದರು.ಅವರ ಆರೈಕೆಯಲ್ಲಿ ಜೀವವನ್ನೇ ಸವೆಸಿದರೆಂದರೂ ತಪ್ಪಲ್ಲ !ಆದರೆ ವಿಧಿ ಲಿಖಿತವನ್ನು ತಪ್ಪಿಸುವವರು ಯಾರು?
ನಮ್ಮ ನಾಡಿನ ಚೇತನವಾಗಿದ್ದ ವಿ.ಡಿ.ಬಳೆಗಾರರು ಜುಲೈ 26,2016 ರಂದು ಇನ್ನಿಲ್ಲವಾದರೆಂಬ ವಾರ್ತೆಯನ್ನು ಕೇಳಿ ಅತ್ಯಂತ ದುಃಖಿತನಾದೆ.ಸಾಮಾಜಿಕವಾಗಿ,ಶೈಕ್ಷಣಿಕವಾಗಿ ನಾನು ಮೇಲಕ್ಕೆ ಬರಲು ಅವರು ನೀಡಿದ ಕೊಡುಗೆಯನ್ನು ಯಾವತ್ತೂ ಮರೆತಿಲ್ಲ.ನನ್ನ ಮಾರ್ಗದರ್ಶಿ,ಹಿತೈಷಿ,ಬಂಧುವಾಗಿದ್ದ ಅವರನ್ನು ಕಳೆದುಕೊಂಡು ನಿಜವಾಗಿಯೂ ನಾನು ನಲುಗಿ ಹೋಗಿರುವೆ.ಅವರ ರುಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಅವರ ಅಂತ್ಯ ಸಂಸ್ಕಾರದಲ್ಲಾದರೂ ಪಾಲ್ಗೊಂಡು ಕರ್ತವ್ಯ ಪಾಲನೆ ಮಾಡೋಣವೆಂದು ಕಛೇರಿಯ ಎಲ್ಲ ಕಾರ್ಯವನ್ನು ಬದಿಗೊತ್ತಿ ಬನವಾಸಿಗೆ ದೌಢಾಯಿಸಿದೆ.ಬನವಾಸಿಯಲ್ಲಿ ನಡೆದ ವಿಧಿವಿಧಾನ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡೆ.ನಮ್ಮೂರ ಕನಸುಗಾರರಾಗಿದ್ದ ಪೂಜ್ಯ ವಜ್ರನಾಭ ಬಳೆಗಾರರು ಮತ್ತೆ ಬನವಾಸಿ ನಾಡಲ್ಲೇ ಹುಟ್ಟಿ ಬರಲಿ.