Saturday 20 August 2016

ನೆನಪಿಡಬೇಕಾದವರು: ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ "ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು."

 
   
                       
ನೆನಪಿಡಬೇಕಾದವರು : ಶ್ರೀ ವಿನಯಕುಮಾರ್ ಕುಲಕರ್ಣಿ,ತಹಶೀಲ್ದಾರ
ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು.

    ಸನ್ 2015 ಅಗಷ್ಟ್ ಮಾಹೆಯ ಕೊನೆ ವಾರದಲ್ಲಿ ಒಂದು ದಿನ, ವಿಜಯಪುರ ಜಿಲ್ಲೆಯ ಅಧಿಕಾರಿ ವಲಯದಲ್ಲಿ ತಮ್ಮನ್ನು ಮುಂಚೂಣಿ ವ್ಶಕ್ತಿಯಾಗಿ ಗುರುತಿಸಿಕೊಂಡಿದ್ದ ಶ್ರೀಯುತ ವಿನಯಕುಮಾರ್ ಕುಲಕರ್ಣಿ ಇವರು ಪ್ರವಾಸೋದ್ಯಮ ಇಲಾಖೆಯ ಬೆಳಗಾವಿ ವಿಭಾಗದ ಕಛೇರಿಗೆ ಕಂದಾಯ ಇಲಾಖೆಯಿಂದ ವರ್ಗಾವಣೆಗೊಂಡು  ಸಹಕಾರ ಇಲಾಖೆಯವರಾಗಿದ್ದ ಶ್ರೀ ಬಿ.ಸುರೇಶ ರಾವ್ ಇವರಿಂದ ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು.

    ಬಸವನ ಬಾಗೇವಾಡಿ ತಹಶೀಲ್ದಾರರಾಗಿದ್ದ ಶ್ರೀ ವಿನಯಕುಮಾರ್ ಕುಲಕರ್ಣಿ ಅವರನ್ನು  ಪ್ರೀತಿ ಮತ್ತು ಆದರದಿಂದ  ನಾನು ಮತ್ತ್ತು ನನ್ನ  ಸಹದ್ಯೋಗಿಗಳು ಬರಮಾಡಿಕೊಂಡಿದ್ದೆವು.ನೋಡಲು ಸುರದೃಪಿಯಾಗಿರುವ  ಉದ್ದನೆಯ ಹಾಗೂ ನೀಳಕಾಯ ವ್ಯಕ್ತಿತ್ವವನ್ನು ಅವರು ಹೊಂದಿದ್ದರು.ಕೋಶ ಕಠಿನ ಬೀಜ ಮೃದುವಾದ ಕಾಯಿಯಂತಿರುವ ಅವರ ಕಾರ್ಯ ಶೈಲಿಯನ್ನು ತಿಳಿದುಕೊಳ್ಳಲು ನನಗೆ ಬಹಳ ದಿನಗಳು ಬೇಕಾಗಲಿಲ್ಲ! ಕ್ರಿಯಾಶೀಲ ಮನಸ್ಸಿನವರಾದ ಅವರು ಸರ್ಕಾರದ ಕೆಲಸವನ್ನು ಅತ್ಯಂತ ಶಿಸ್ತುಬದ್ಧವಾಗಿ,ಅಚ್ಚುಕಟ್ಟಾಗಿ ನಿರ್ವಹಿಸುವ ಛಾತಿ ಉಳ್ಳವರಾಗಿದ್ದರು.ನನ್ನ 14 ವರ್ಷಗಳ ಸೇವಾ ಅವಧಿಯಲ್ಲಿ ಇಂಥ ಸ್ಪಷ್ಟ,ನೇರ ನಿಲುವಿರುವ ಅಧಿಕಾರಿಯನ್ನು ಖಂಡಿತವಾಗಿಯೂ ನಾನು ನೋಡಿರಲಿಲ್ಲ.ಕಛೇರಿ ಕಾರ್ಯದಲ್ಲಿ ಬಿಗಿಯಾದ ಪಟ್ಟುಗಳಿದ್ದವರಾದರೂ ಸಹ ನನ್ನ ಹಾಗೂ ನಮ್ಮ  ಉಳಿದ ಸಹೋದ್ಯೋಗಿಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.ಇಲಾಖೆಗೆ ಯಾವುದೇ ಕೆಟ್ಟ ಹೆಸರು ಬರದಂತೆ ಎಲ್ಲರೂ ಅತ್ಯಂತ ಶಿಸ್ತು ಮತ್ತು ಕಾಳಜಿಯಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.ಕಛೇರಿಗೆ ಬರುವ ಯಾರನ್ನೇ ಆದರೂ ಪ್ರೀತಿ ಮತ್ತು ಅಭಿಮಾನದಿಂದ ಮಾತನಾಡಿಸುವಂತೆಯೂ ನೀವು ನೀಡುವ ಸಕಾರಾತ್ಮಕ  ಉತ್ತರವೇ ಅವರ ಅರ್ಧ ಸಮಸ್ಯೆಗೆ ಉತ್ತರವಾಗಿರಬೇಕು ಎಂದು ಹಿತವಚನ ನೀಡಿದ್ದರು.ಅವರ ಇಂಥ ನಡೆಯಿಂದ ನಾವು  ಕುಂದು ಕೊರತೆಯುಳ್ಳ ಅನೇಕ ಜನರ ಅಹವಾಲನ್ನು ಸರಾಗವಾಗಿ ನಿರ್ವಹಿಸಬಲ್ಲ ಜಾಣ್ಮೆಯನ್ನು ಪಡೆಯುವಂತಾಯಿತು.

ಇಲಾಖೆಯ ಅನೇಕ ಯೋಜನೆಗಳನ್ನು ತ್ವರಿತವಾಗಿ ಜ್ಯಾರಿಗೆ ತರುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದರು.ಅವರ ಹೆಜ್ಜೆಗೆ ಪ್ರತಿ ಹೆಜ್ಜೆಯಾಗಿ ನಾನು ಪೂರ್ವ ತಯಾರಿಯೊಂದಿಗೆ ಯಾವುದೇ ವಿಷಯವನ್ನು ವಿಷಧೀಕರಿಸುತ್ತಿದ್ದೆ.ನನ್ನ ಕಾರ್ಯ ಕ್ಷಮತೆಯನ್ನು ಅವರು ಬಹುಬಾಗಿ ಮೆಚ್ಚಿಕೊಂಡಿದ್ದರು.ಕೆಲಸದಲ್ಲಿ ನಾನಿಟ್ಟಿರುವ ನಿಷ್ಠೆ ಮತ್ತು ಯಾವುದೇ ವಿಷಯವನ್ನು ಆಳವಾಗಿ ಅಭ್ಯಸಿಸಿ ಕರಾರುವಕ್ಕಾಗಿ ಸಾದರಪಡಿಸುತ್ತಿದ್ದ ನನ್ನನ್ನು ನಿರ್ಮಲವಾದ ಮನಸ್ಸಿನಿಂದ ಕೊಂಡಾಡುತ್ತಿದ್ದರು.ಹೀಗೆ ಅವರು ಅನೇಕ ಮಹನೀಯರೊಂದಿಗೆ ನನ್ನ ನಡೆಯನ್ನು ಹಂಚಿಕೊಂಡು ಪ್ರಶಂಸೆ ಮಾಡಿರುವುದನ್ನು ಹಲವರಿಂದ ನಾನು ಕೇಳಿ ತಿಳಿದುಕೊಂಡಿದ್ದೇನೆ."ನಿನ್ನನ್ನು ಇಲಾಖೆಯವರು ಸರಿಯಾಗಿ ಗುರುತಿಸಿಲ್ಲವೆಂದು ನನಗೆ ಅನಿಸುತ್ತಿದೆ,ನಿನ್ನಂತವರು ಕೇಂದ್ರ ಕಛೇರಿಯಲ್ಲಿದ್ದರೆ ಅನೇಕ ಸಮಸ್ಯೆಗಳಿಗೆ ನೀನು ಉತ್ತರವಾಗುತ್ತಿದ್ದಿ "ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದುಂಟು!
 ಕಳೆದ ವರ್ಷ (2015) ಜಿಲ್ಲಾಡಳಿತದಿಂದ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಅವರು ಅತ್ಯಂತ ಚಿತ್ತಾಕರ್ಷಕವಾಗಿ,ವಿನೂತನವಾಗಿ,ಅಚ್ಚುಕಟ್ಟುತನದಿಂದ ಸಂಘಟಿಸಿದ್ದರು.ಪ್ರವಾಸೋದ್ಯಮ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಪ್ರವರ್ತಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜಾಗೃತಿ ಮೂಡಿಸಿದ್ದು ಅವರ ಕರ್ತವ್ಯ ಪಾಲನೆಯ ದ್ಯೋತಕವಾಯಿತು.ವೇದಿಕೆಯಲ್ಲಿದ್ದ ಮಾನ್ಯ ಲೋಕ ಸಭಾ ಸದಸ್ಯರು,ವಿಧಾನಸಭೆಯ ಸದಸ್ಯರು ಶ್ರೀಯುತ ವಿನಯ ಕುಮಾರ್ ಕುಲಕರ್ಣಿಯವರ ಕ್ರಿಯಾಶೀಲ ವ್ಯಕ್ತಿತ್ವವನ್ನು ಬಹುವಾಗಿ ಶ್ಲಾಘಿಸಿ ಮೆಚ್ಚಿದ್ದರು. ಜಿಲ್ಲಾಡಳಿತದಿಂದ ಕಿತ್ತೂರಿನಲ್ಲಿ ನಡೆದ 'ಚನ್ನಮ್ಮನ ಕಿತ್ತೂರು ಉತ್ಸವ ' ಹಲಸಿಯಲ್ಲಿ ನಡೆದ 'ಹಲಸಿ ಕದಂಬೋತ್ಸವ'ಗಳ ಯಶಸ್ಸಿಗೆ ಅವರು ಬಹುವಾಗಿ ಶ್ರಮಿಸಿದ್ದರು.
ಮೂಲತಃ ವಿಜಯಪುರದವಾರದ ಶ್ರೀಯುತ ವಿನಯಕುಮಾರ ಕುಲರ್ಣಿಯವರು ಬೆಳಗಾವಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾಗಿ ಒಂದು ವರ್ಷ ಮುಗಿಯುವ ಹೊತ್ತಿಗೆ ಸರಿಯಾಗಿ ಸರ್ಕಾರವು ಅವರನ್ನು ಬಾಗಲಕೋಟೆ ತಹಶೀಲ್ದಾರರನ್ನಾಗಿ ವರ್ಗಾಯಿಸಿತು.ನಮ್ಮ ಇಲಾಖೆಯಲ್ಲಿ ಸುಂದರ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದ ಅವರು 19-08-2016 ರಂದು ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶಗಳ ಅನ್ವಯ ಅಧಿಕಾರವನ್ನು ನನಗೆ ಹಸ್ತಾಂತರಿಸಿ ಕರ್ತವ್ಯದಿಂದ ಬಿಡುಗಡೆಯಾಗಿ ಬಾಗಲಕೋಟೆ ತಹಶೀಲ್ದಾರ ಹಾಗೂ ತಾಲೂಕು ಮ್ಯಾಜಿಸ್ಟ್ರೇಟರ್ ಹುದ್ದೆಗೆ ವರದಿ ಮಾಡಿಕೊಳ್ಳಲು ತೆರಳಿದಾಗ ನಾವು ಭಾರವಾದ ಮನಸ್ಸಿನಿಂದಲೇ ಬೀಳ್ಕೊಟ್ಟೆವು.ಇಂಥ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಂಥಃ ಬೆಟ್ಟದಂತ ಸಮಸ್ಯೆಗಳನ್ನಾದರೂ ಎದುರಿಸಬಹುದು.

-ಬನವಾಸಿ ಸೋಮಶೇಖರ್.

Sunday 31 July 2016

ನೆನಪಿನ ಬುತ್ತಿಯಿಂದ: ಮರೆಯಾದ ಬನವಾಸಿ ನಾಡ ಅಭಿವೃದ್ಧಿ ಕನಸುಗಾರ ವಜ್ರನಾಭ ಬಳೆಗಾರ

ಮರೆಯಾದ ಬನವಾಸಿ ನಾಡ ಅಭಿವೃದ್ಧಿ ಕನಸುಗಾರ ವಜ್ರನಾಭ ಬಳೆಗಾರ



ವಜ್ರನಾಭ ಬಳೆಗಾರ,ನಮ್ಮೂರು ಬನವಾಸಿಯ ಹೆಮ್ಮೆಯ ಮಗನಾಗಿದ್ದರು.ಸದಾ ಬನವಾಸಿಯ ಸರ್ವತೋಮುಖ ಅಭಿವೃದ್ಧಿಗಾಗಿ ಅವರ ಮನಸ್ಸು ತುಡಿಯುತ್ತಿತ್ತು.ಬನವಾಸಿಯ ಪ್ರಸಿದ್ಧ ಶ್ರೀ ಜಯಂತಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ಧ ಅವರು ಚಿಕ್ಕಂದಿನಿಂದಲೂ ತಮ್ಮನ್ನು ರಚನಾತ್ಮಕ ಹಾಗೂ ವಿಧಾಯಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.ಕಲೆ,ಸಾಹಿತ್ಯ,ವಿಜ್ಞಾನ,ಸಂಸ್ಕೃತಿ ಇತ್ಯಾದಿ ಬಹುಮುಖ ಕ್ಷೇತ್ರದಲ್ಲಿ ತಮ್ಮ ವ್ಯಕ್ತಿತ್ವದ ಛಾಪನ್ನು ಮೂಡಿಸಿಕೊಂಡಿದ್ದರು.

ಈಗ್ಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಅಸ್ತಂಗತರಾಗಿದ್ದ ಬನವಾಸಿ ನಾಡಿನ ಕನಸುಗಾರ,ಸ್ವಾತಂತ್ರ್ಯ ಸೇನಾನಿ,ಕರ್ನಾಟಕ ಸರ್ಕಾರದ ಗ್ಯಾಸೇಟಿಯರ್ ನ ಮುಖ್ಯ ಸಂಪಾದಕರಾಗಿದ್ದ ಅಭಿಶಂಕರ್ ಅವರ ಜೊತೆಗೂಡಿ ಬನವಾಸಿ ನಾಡಿನ ಸರ್ವತೋಮುಖ ಅಭಿವೃದ್ಧಿಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ವಜ್ರನಾಭ ಬಳೆಗಾರರು ಬನವಾಸಿ ವಲಯ ಅಭ್ಯುದಯ ಸಮಿತಿ ಎಂಬ ಅರ್ಥವತ್ತಾದ ಸಂಸ್ಥೆಯು ಜನ್ಮ ತಾಳಲು ಮೂಲ ಕಾರಣಿಭೂತರಾಗಿದ್ದರು.ಅದರ ಸಂಸ್ಥಾಪನೆಯ ಮೂಲ ಬೇರು ಆಗಿದ್ದವರು ಅವರು.ಅಭಿಶಂಕರರಿಂದ ಮೊದಲುಗೊಂಡು ಬನವಾಸಿ ನಾಡಿನ ಅನೇಕ ಹಿರಿಯರು ಅದರ ಅಧ್ಯಕ್ಷರಾದರೂ ಸಹ ವಜ್ರನಾಭ ಅವರು ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಹಗಲಿರುಳೆನ್ನದೇ ಅಹರ್ನಿಶಿ ದುಡಿದರು. ಅತ್ಯಂತ ನಿಸ್ವಾರ್ಥ ಮನಸ್ಸಿನಿಂದ,ನಿಷ್ಕಲ್ಮಶ ಹೃದಯದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.
ಕನ್ನಡ ನಾಡಿನ ಅತ್ಯಂತ ಪ್ರಾಚೀನ ನೆಲೆಯಾದ ಬನವಾಸಿಯು ಇತಿಹಾಸದ ಪುಟಗಳಲ್ಲಿ ಹೂತು ಹೋಗಿತ್ತು.ನಾಡಿನ ಸಂಸ್ಕೃತಿ,ಪರಂಪರೆ,ಚಿನ್ನದ ಗಣಿಯಾಗಿದ್ದ ಬನವಾಸಿಯು ಕನ್ನಡ ಸಂಸ್ಕೃತಿಯ ತೊಟ್ಟಿಲು ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡುವಲ್ಲಿ ಎಲ್ಲರೊಂದಿಗೆ ಜೊತೆಗೂಡಿ ಟೊಂಕ ಕಟ್ಟಿ ನಿಂತಿದ್ದರು.ಪತ್ರ ಸಂಸ್ಕೃತಿಯು ಅವರ ನಿತ್ಯದ ಕಾಯಕವೇ ಆಗಿ ಹೋಗಿತ್ತು.ಅವರು ಸೇವೆಯಿಂದ ನಿವೃತ್ತರಾದರೂ ಬನವಾಸಿಯ ಸೇವೆಯಿಂದ ಮಾತ್ರ ಹಿಂದೆ ಸರಿದಿರಲಿಲ್ಲ. ಸದಾ ಅವರ ಜೀವ ಬನವಾಸಿಗಾಗಿ ಹಂಬಲಿಸುತ್ತಿತ್ತು.
ನಾಡ ಜನರ ಹೋರಾಟದ ಫಲವಾಗಿ ಸರ್ಕಾರದಿಂದ ಅಧಿಕೃತವಾಗಿ ಪ್ರತಿ ವರ್ಷ ಬನವಾಸಿಯಲ್ಲಿ ನಡೆಯುತ್ತಿದ್ದ ಕದಂಬೋತ್ಸವವು ಗತಕಾಲದ ಪುನರ್ ದರ್ಶನವಾಗಿತ್ತು.ಈ ಉತ್ಸವವೂ ಒಳಗೊಂಡಂತೆ ಊರಿನ ಎಲ್ಲ ವಿದಾಯಕ ಚಟುವಟಿಕೆಗಳು ಕಾಲಕಳೆದಂತೆ ಮಸುಕಾದ ತೊಡಗಿದವು.ಹಿರಿಯರನೇಕರು ಇನ್ನಿಲ್ಲವಾಗುತ್ತಾ ಬಂದರು.
ಯುವಕರು,ಮುಂದಾಳುಗಳೆನಿಸಿಕೊಂಡವರೆಲ್ಲ ತಮ್ಮ ತಮ್ಮ ಕಾಯಕದಲ್ಲಿ ತಲ್ಲೀನರಾದರು,ಊರಿನ ಬಗ್ಗೆ ಚಿಂತಿಸುವವರು,ಕಾಳಜಿ ಮೆರೆಯುವವರು,ಹೋರಾಟ ಮಾಡುವವರು ಹೀಗೆ ನಾಡಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರು ಕಡಿಮೆಯಾಗುತ್ತಾ ಬಂತು.ಇಂಥ ಸಂದರ್ಭದಲ್ಲಿ ಬಳೆಗಾರರ ಆರೋಗ್ಯದಲ್ಲಿ ಏರು ಪೇರಾಯಿತು.ಸದಾ ಬನವಾಸಿ ನಾಡಿನ ಅಭ್ಯುದಯಕ್ಕೆ ಹಾತೊರೆಯುತ್ತಿದ್ದ ಅವರ ಮನಸ್ಸು ಅಭ್ಯುದಯ ಸಮಿತಿಯನ್ನು ಕ್ರಿಯಾತ್ಮಕವಾಗಿ ಮುಂದುವರೆಸಿಕೊಂಡು ಹೋಗುವವರು ಇಲ್ಲದ್ದನ್ನು ಕಂಡು ಚಿಂತಿತವಾಯಿತು.ಇದರಿಂದ ಅವರ ಆರೋಗ್ಯವು ಮತ್ತಷ್ಟು ಹದಗೆಡುವುದಕ್ಕೆ ಕಾರಣವಾಯಿತು.ಹೀಗಾಗಿ ಹಲವಾರು ತಿಂಗಳುಗಳಿಂದ ಅವರು ಹಾಸಿಗೆ ಹಿಡಿಯಬೇಕಾಯಿತು.ಅವರ ಮಕ್ಕಳಾದ ಗೆಳೆಯ ಅರವಿಂದ ಮತ್ತು ಆನಂದ,ಸೊಸೆ,ಧರ್ಮಪತ್ನಿ ಎಲ್ಲರೂ ಅವರನ್ನು ಮಗುವಿನಂತೆ ನೋಡಿಕೊಂಡು ಬಂದರು.ಅವರ ಆರೈಕೆಯಲ್ಲಿ ಜೀವವನ್ನೇ ಸವೆಸಿದರೆಂದರೂ ತಪ್ಪಲ್ಲ !ಆದರೆ ವಿಧಿ ಲಿಖಿತವನ್ನು ತಪ್ಪಿಸುವವರು ಯಾರು?
ನಮ್ಮ ನಾಡಿನ ಚೇತನವಾಗಿದ್ದ ವಿ.ಡಿ.ಬಳೆಗಾರರು ಜುಲೈ 26,2016 ರಂದು ಇನ್ನಿಲ್ಲವಾದರೆಂಬ ವಾರ್ತೆಯನ್ನು ಕೇಳಿ ಅತ್ಯಂತ ದುಃಖಿತನಾದೆ.ಸಾಮಾಜಿಕವಾಗಿ,ಶೈಕ್ಷಣಿಕವಾಗಿ ನಾನು ಮೇಲಕ್ಕೆ ಬರಲು ಅವರು ನೀಡಿದ ಕೊಡುಗೆಯನ್ನು ಯಾವತ್ತೂ ಮರೆತಿಲ್ಲ.ನನ್ನ ಮಾರ್ಗದರ್ಶಿ,ಹಿತೈಷಿ,ಬಂಧುವಾಗಿದ್ದ ಅವರನ್ನು ಕಳೆದುಕೊಂಡು ನಿಜವಾಗಿಯೂ ನಾನು ನಲುಗಿ ಹೋಗಿರುವೆ.ಅವರ ರುಣವನ್ನು ತೀರಿಸಲು ಸಾಧ್ಯವಿಲ್ಲವಾದರೂ ಅವರ ಅಂತ್ಯ ಸಂಸ್ಕಾರದಲ್ಲಾದರೂ ಪಾಲ್ಗೊಂಡು ಕರ್ತವ್ಯ ಪಾಲನೆ ಮಾಡೋಣವೆಂದು ಕಛೇರಿಯ ಎಲ್ಲ ಕಾರ್ಯವನ್ನು ಬದಿಗೊತ್ತಿ ಬನವಾಸಿಗೆ ದೌಢಾಯಿಸಿದೆ.ಬನವಾಸಿಯಲ್ಲಿ ನಡೆದ ವಿಧಿವಿಧಾನ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡೆ.ನಮ್ಮೂರ ಕನಸುಗಾರರಾಗಿದ್ದ ಪೂಜ್ಯ ವಜ್ರನಾಭ ಬಳೆಗಾರರು ಮತ್ತೆ ಬನವಾಸಿ ನಾಡಲ್ಲೇ ಹುಟ್ಟಿ ಬರಲಿ.

Monday 2 November 2015

ಅಮ್ಮ ಕಲಿಸಿದ್ದ “ದುಡಿಮೆಯೇ ದುಡ್ಡಿನ ತಾಯಿ” ಪಾಠ.

ನನ್ನ ಕಥೆ.
            ನಾನು,ಬನವಾಸಿ ಸೋಮಶೇಖರ್.ಸಮಾಜದಲ್ಲಿ ಬೇರೂರಿರುವ ಗೊಡ್ಡು ಸಂಪ್ರದಾಯ,ಅಸಮಾನತೆ,ಬಡತನಗಳ ಮಧ್ಯೆ ಸೆಟೆದು ಎದ್ದು ನಿಲ್ಲಬೇಕಾದ ಸ್ಥಿತಿ ನನ್ನದಾಗಿತ್ತು.ಬಾಲ್ಯ ಜೀವನವು ಹಲವು ಏಳು ಬೀಳುಗಳ ವಿಷಮಯ ಘಟನೆಗಳಿಂದಾಗಿ ಆಹ್ಲಾದಕತೆಯ ವಾತಾವರಣದಲ್ಲಿ ಬೆಳೆದು ಬರುವ ಭಾಗ್ಯ ನೀಡಲಿಲ್ಲ!
 ಬಡತನ,ಹಸಿವು,ಉಡುಗೆ-ತೊಡುಗೆಗಳು ವ್ಯವಸ್ಥೆಯಿಂದ ಮೀರಿ ಬೆಳೆಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದವು.ಓರಗೆಯವರೊಡನೆ ಮೈಚಳಿ ಬಿಟ್ಟು ಸ್ವಚ್ಛಂದವಾಗಿ ವಿಹರಿಸುವಷ್ಟು ಸ್ವಾತಂತ್ರ,ಅವಕಾಶ ಬಾಲ್ಯ ಜೀವನದಾಗಿರಲಿಲ್ಲ.ಹೀಗಾಗಿ ಬಾಲ್ಯದ ಸಿಹಿ ಸವಿ ನೆನಪುಗಳು ಅಷ್ಟಕಷ್ಟೆ! ಆದರೆ ನಾನು ಓದಲು ಸೇರಿದ್ದ ಮಾದರಿ ಶಾಲೆಯ ನಾಲ್ಕನೇ ತರಗತಿಯಲ್ಲಿ ವರ್ಗ ಶಿಕ್ಷಕರಾಗಿದ್ದ ಭಾರತಿ ಟೀಚರ್ ಅವರ ವಿಶೇಷ ಸಹಾನುಭೂತಿ,ಅನುಕಂಪ,ಪ್ರೀತಿ ವಿಶ್ವಾಸಗಳು ಮುಂದೆ ಓದಬೇಕೆಂಬ ಆಸೆಯನ್ನು ಚಿಗುರಿಸಿದವು!.
ಬಳ್ಳಿ,ಲೆಕ್ಕ,ಮಗ್ಗಿ ಯಾವುದೂ ಬರುತ್ತಿರಲಿಲ್ಲ! ದಿನಾಲು ಹೊಡೆತ ತಿನ್ನುವುದು ಅನಿವಾರ್ಯವಾಗಿದ್ದಿತು.ಮನೆಯಲ್ಲಿ ಅಳುತ್ತಾ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿ ಅಮ್ಮನೆದುರು ಹೇಳಿಕೊಳ್ಳುವುದು ರೂಢಿಯಾಗಿ ಬಿಟ್ಟಿತ್ತು! ‘ಯಾವುದೇ ಕಾರಣಕ್ಕೂ ಶಾಲೆ ಬಿಡಕೂಡದು,ಭಾ ನಾನೇ ಕಲಿಸುತ್ತೇನೆ’ ಎಂದು ಅಮ್ಮ ಪಾಠವನ್ನು ಓದಿ ಓದಿಸಲಾರಂಭಿಸಿದರು.
ಅಮ್ಮ ಕಲಿಸಿದ್ದ “ದುಡಿಮೆಯೇ ದುಡ್ಡಿನ ತಾಯಿ” ಎಂಬ ಹೃದಯ ಸ್ಪರ್ಷಿಯಾದ ಹಾಗೂ ಭಾವನಾತ್ಮಕವಾದ ಕಥಾ ಪಾಠವು ನನ್ನ ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರಿತು. ಅಮ್ಮ ಸವಿಯಾಗಿ ಸುಂದರವಾಗಿ ಓದಿಸಿ ಕಲಿಸಿದ್ದ ಪಾಠವನ್ನು ನಾನು ತರಗತಿಯಲ್ಲಿ ಓದಿದಾಗ ಭಾರತಿ ಟೀಚರ್ ಅವರು ನನ್ನ ಓದುವಿಕೆಯ ಶೈಲಿಯನ್ನು ಕೊಂಡಾಡಿ ಗುಣಗಾನ ಮಾಡಿದರು.ತರಗತಿಯಲ್ಲಿ,ಕಲಿಕೆಯಲ್ಲಿ ಅತ್ಯಂತ ಹಿಂದಿದ್ದ ನಾನು ಅಂದು ಓದಿದ ಆ ಪಾಠವು ತರಗತಿಯ ಎಲ್ಲರ ಕಣ್ಣಾಲಿಗಳಲ್ಲಿ ದುಃಖ ಭರಿಸಿತ್ತು. ‘ಸೋಮಶೇಖರ, ಎಷ್ಟು ಚನ್ನಾಗಿ ಪಾಠವನ್ನು ಓದಿದ ನೋಡ್ರೋ’……..,ನೀವೆಲ್ಲ ಹೀಗೆ ಪಾಠವನ್ನು ಓದುವುದನ್ನು ಕಲಿತುಕೊಳ್ಳಿ ಎಂದು ಎಲ್ಲರಿಗೂ ಭಾರತಿ ಟೀಚರ್ ತಿಳಿಸಿ ಪ್ರಶಂಸೆ ಮಾಡಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.ಆ ಸಂದರ್ಭವು ನನ್ನ ಶೈಕ್ಷಣಿಕ ಏಳಿಗೆಗೆ ಮುನ್ನುಡಿ ಬರೆದಂತಾಯಿತೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸಿವುದು.
ಪೆನ್ನು,ಪುಸ್ತಕ,ಬಟ್ಟೆಗಳನ್ನು ಕೊಡಿಸಿ ನನ್ನನ್ನು ಅತ್ಯಂತ ಅಕ್ಕರೆ ಮತ್ತು ಕಕ್ಕುಲತೆಯಿಂದ ನೋಡಿಕೊಳ್ಳುತ್ತಿದ್ದ ಭಾರತಿ ಅನಂತ ಭಟ್ಟ ಎಂಬ ಸಹೃದಯಿ ಕರುಣಾಮಯಿ ಶಿಕ್ಷಕರು,’ಸೋಮು ನೀನು ಇನ್ನಷ್ಟು ಬುದ್ದಿವಂತನಾಗಬೇಕು,ಆದ್ದರಿಂದ ಈ ವರ್ಷ ನಿನ್ನನ್ನು ಫೇಲ್ ಮಾಡುತ್ತಿರುವೆ ಬೇಸರ ಪಟ್ಕೋ ಬೇಡ್ವೋ,ನಿನಗೆ ಒಳ್ಳೆದಾಗುತ್ತೆ,ಶಾಲೆ ಬಿಟ್ಟು ಬಿಟ್ಟಿ ಮತ್ತೆ ‘ ಎಂಬ ಕಾಳಜಿ ಭರಿತ ಹಿತನುಡಿಗಳನ್ನಾಡಿ ಹರಸಿದ್ದರು.ಪುನಃ ಇನ್ನೊಂದು ವರ್ಷ ನಾಲ್ಕನೇ ತರಗತಿಯಲ್ಲಿಯೇ ಓದಿ ಮತ್ತೆ ಐದನೇ ತರಗತಿಗೆ ಹೋದಾಗಲೂ ಭಾರತಿ ಟೀಚರ್ ಇಂಗ್ಲೀಷ ಶಿಕ್ಷಕರಾಗಿ ಒಂದು ವರ್ಷ ಬೋಧಿಸಿದರು.ಆ ನಂತರ ಅವರು ವರ್ಗವಾಗಿ ಬೇರೆ ಕಡೆ ಹೋದ ಮೇಲೆ ನನಗೆ ಮಂಕು ಕವಿದಂತಾಯಿತು.
ಆದರೆ ಬರ ಬರುತ್ತಾ ಅರೆಬರೆ ಬುದ್ದಿವಂತ,ತುಂಟ ಹುಡುಗನೆಂಬ ಹೆಸರು ಮಾಡಿದ ನನಗೆ ಒಂದಿನವೂ ಶಾಲೆಯನ್ನು ತಪ್ಪಿಸದೇ ಓದಬೇಕೆಂಬ ಉತ್ಸಾಹವನ್ನು ಮೂಡಿಸಿತು.ಆ ನಂತರವು ಬಂಡೇರ್ ಗುರೂಜಿ, ಜಿ,ಡಿ..ನಾಯ್ಕ ಗುರೂಜಿ,ಚಂದ್ರಪ್ಪ ಗುರೂಜಿ,ಸುಮಿತ್ರಾ ಟೀಚರ್ ಮುಂತಾದವರು ನನಗೆ ಯಾವತ್ತೂ ನೆನಪಾಗಿರುತ್ತಾರೆ.ಬಂಡೇರ್ ಗುರೂಜಿಯವರ ಸಹಿಯನ್ನು ಯಥಾವತ್ತಾಗಿ ಕಲಿತು ಗೆಳೆಯರೆಲ್ಲರ ನೋಟ್ ಬುಕ್ಕಗಳಿಗೆ ವಿಶ್ರಾಂತಿ ಬಿಟ್ಟ ವೇಳೆಯಲ್ಲಿ ರೈಟ್ ಮಾರ್ಕ ಮಾಡಿ ಸಹಿ ಹಾಕಿ ಬಿಡುತ್ತಿದ್ದೆ!ಇದು ಗುರೂಜಿಯವರಿಗೆ ಸೋಜಿಗವನ್ನುಂಟು ಮಾಡಿ ಹೇಗೋ ಒಮ್ಮೆ ಕಂಡು ಹಿಡಿದೇ ಬಿಟ್ಟರು! ಅವರು ನೀಡಿದ ಒಂದು ಏಟು ನನ್ನ ಕೈ ಮಣಿಕಟ್ಟನ್ನು ತುಂಡರಿಸುವಂತೆ ಮಾಡಿ ಬಿಟ್ಟಿತ್ತು! ಇದಕ್ಕೇ ಅಮ್ಮ ಸರಿಯಾಗಿ ಮಾಡಿದ್ರಿ ಮಾಸ್ತರ್ರೇ….ಚನ್ನಾಗಿ ಬುದ್ಧಿ ಕಲಿಸೋ ಭಾರ ನಿಮ್ಮದು ಎಂದು ಕಣ್ಣೆದುರೆ ಹೇಳಿದ್ದರು! ನಂತರ ಗುರೂಜಿಯವರು ದವಾಖಾನೆಗೆ ಕರೆದುಕೊಂಡು ಹೋಗಿ ಪಟ್ಟು ಹಾಕಿಸಿದ್ದರು.ಹೀಗಿರುತ್ತಲೇ ನನ್ನ ಪ್ರಾಥಮಿಕ ಶಿಕ್ಷಣ ಮುಗಿದು ಹೋಯಿತು!
ಏಳನೇ ತರಗತಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ನನ್ನನ್ನು ಅಮ್ಮ ಮುಂದೆ ಹೈಸ್ಕೂಲು ಶಿಕ್ಷಣಕ್ಕಾಗಿ ಪಕ್ಕದಲ್ಲಿಯೇ ಇದ್ದ ಪ್ರತಿಷ್ಠಿತ ಜಯಂತಿ ಹೈಸ್ಕೂಲಿಗೆ ಸೇರಿಸಿದರು.ಅಲ್ಲಿ ಮುಖ್ಯಾಧ್ಯಾಪಕರಾಗಿ ಆಗಷ್ಟೇ ಬಡ್ತಿ ಹೊಂದಿದ್ದ ದೇವಳಿ ಗುರುಗಳ ಪಾಠ ಬೋಧನೆ,ನಡವಳಿಕೆ ಅತ್ಯಂತ ಹಿತವಾಗಿತ್ತು.ನಮ್ಮ ಬ್ಯಾಚಿನ ಎಂಟು ‘ಬ’ ವರ್ಗಕ್ಕೆ ಅವರು ತರಗತಿ ಶಿಕ್ಷಕ್ಕರಾಗಿದ್ದ ಸಂದರ್ಬದಲ್ಲಿಯೇ ಅವರಿಗೆ ಮುಖ್ಯಾಧ್ಯಾಪಕ ಹುದ್ದೆ ಲಭಿಸಿದ್ದರಿಂದ ನಮ್ಮ ವರ್ಗವನ್ನು ಬಹುವಾಗಿ ಹಚ್ಚಿಕೊಂಡಿದ್ದರು.ನನ್ನ ಬಗ್ಗೆಯೂ ಅವರಿಗೆ ವಿಶೇಷ ಪ್ರೀತಿ ಇತ್ತು.ನನ್ನ ತುಂಟ ತನಕ್ಕೆ ಅವರಿಂದ ಭಾರೀ ಹೊಡೆತವನ್ನೇ ತಿಂದಿರುವೆ!
ನನಗೆ ತುಂಬಾ ಗೆಳೆಯರಿದ್ದರು.ಅವರೆಲ್ಲ ಕ್ಲಾಸಿನಲ್ಲಿ ಮುಂಚೂಣಿಯಲ್ಲಿದ್ದರು.ನಾನು ಸಾಧಾರಣ ವಿದ್ಯಾರ್ಥಿಯಾಗಿದ್ದರಿಂದ ಕೆಲ ಶಿಕ್ಷಕರು ನನ್ನನ್ನು ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಲಲು ಹೇಳುತ್ತಿದ್ದರು.ಆದರೆ ನಾನು ಅದನ್ನು ಅಲಕ್ಷಿಸುತ್ತಿದ್ದೆ ಮತ್ತು ಮೊದಲ ಡೆಸ್ಕನಲ್ಲೇ ಬಾಲ್ಯದ ಗೆಳೆಯ ಪ್ರಕಾಶ ಹೆಗಡೆ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಿದ್ದೆ.ನಮ್ಮ ಗೆಳೆತನವನ್ನು ತೊರೆಸಲು ಬಹಳಷ್ಟು ಮಂದಿ ಹರಸಾಹಸ ಪಟ್ಟಿದ್ದರು! ಆದರೂ ಅವರ ಆಸೆ ಕೈಗೂಡುತ್ತಿರಲಿಲ್ಲ.ನನ್ನ ಅವನ ಸ್ನೇಹ ಅಷ್ಟು ಗಾಢವಾಗಿತ್ತು.ಊರವರು ಸಹ ನಮ್ಮನ್ನು ರಾಮ ಲಕ್ಷ್ಮಣ ಎನ್ನುತ್ತಿದ್ದರು.
ಶಾಲೆಯಲ್ಲಿ ನಾ ತುಂಬಾ ಜೋರಿದ್ದೆ.ಯಾವುದೇ ಸ್ನೇಹಿತರಿಂದ ಯಾವುದಾದರೂ ಪುಸ್ತಕವನ್ನು ಎರವಲು ಪಡೆದಿದ್ದರೆ ಅದನ್ನು ಮರಳಿ ಕೊಡುವ ಗೋಜಿಗೇ ಹೋಗುತ್ತಿರಲಿಲ್ಲ,ಕಾರಣ ಅದು ನನ್ನ ವಿಪರೀತ ಬಡತನಕ್ಕೆ ಸಾಕ್ಷಿಯಾಗಿತ್ತು.ಒಂದು ವೇಳೆ ಕೊಟ್ಟರೂ ಒಲ್ಲದ ಮನಸ್ಸಿನಿಂದ ಕೊಡುತ್ತಿದ್ದೆ!ಪ್ರಕಾಶನ ಪುಸ್ತಕವನ್ನೂ ಹಿಂದಿರುಗಿಸಲು ಹಿಂದೆ ಮುಂದೆ ನೋಡಿದ್ದುಂಟು!
ನನಗೆ ಗಣಿತ ರುಚಿಸದ ವಿಷಯವಾಗಿತ್ತು. ಹತ್ತನೇ ತರಗತಿಯಲ್ಲೇನಾದರೂ ಫೇಲ್ ಆದರೆ ಮುಂದೆಂದೂ ಪರೀಕ್ಷೆಗೆ ಕಟ್ಟುವುದಿಲ್ಲ, ಓದುವುದಿಲ್ಲ ಎಂದು ಹಠ ತೊಟ್ಟಿದ್ದೆ. ಹೇಗೋ ಗಣಿತವೂ ಪಾಸಾಯಿತು. ನಂತರ ಕಾಲೇಜು ಹಂತಕ್ಕೆ ಹೋಗಲು ದಾರಿಯಾಯಿತು.ಈ ಪ್ರೌಢ ವಿದ್ಯಾರ್ಥಿ ಜೀವನದಿಂದಲೇ ನನ್ನಲ್ಲಿ ಮುಂಚೂಣಿಯ ಹೋರಾಟಗಾರನ ಲಕ್ಷಣಗಳಿದ್ದವು.
 ಕಲೆ,ಸಾಹಿತ್ಯ,ಸಂಗೀತ,ವಿಜ್ಞಾನ,ಸಂಸ್ಕೃತಿ,ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯನಾಗಿ ಭಾಗವಹಿಸುತ್ತಿದ್ದೆ. ಹಲವು ಸ್ಪರ್ಧೆಗಳಿಗೆ ಭಾಗವಹಿಸಿ ಅಗ್ರ ಬಹುಮಾನವನ್ನೂ ಪಡೆದೆ. ನನ್ನ ಸೃಜನಶೀಲ ಚಟುವಟಿಕೆಯು ಶಾಲಾ ಕೈ ಬರಹ ಮ್ಯಾಗಜಿನ್ “ಪಂಚಾಮೃತ” ಪತ್ರಿಕೆಯ ಸಂಪಾದಕನಾಗಿ ಕಾರ್ಯನಿರ್ವಹಿಸುವ ಅವಕಾಶವನ್ನೂ ಕೊಟ್ಟಿತು.ಹಲವು ಏಳು ಬೀಳುಗಳನ್ನು ಎದುರಿಸಿ ಹೈಸ್ಕೂಲ ಶಿಕ್ಷಣವನ್ನು ಮುಗಿಸಿದೆ.ನನ್ನ ಆಗಿನ ಅವಧಿಯಲ್ಲಿ ಇದೊಂದು ಗುರುತರ ಸಾಧನೆಯೆಂದೇ ಹೇಳಬೇಕು.
ಈ ಮಧ್ಯೆ ಮನೆಯಲ್ಲಿ ಕಿತ್ತು ತಿನ್ನುವ ಬಡತನವು ಮನೆ ಬಿಟ್ಟು ಕೆಲಸ ಅರಸಿ ಬೆಂಗಳೂರಿನತ್ತ ಹೊರಡಲು ಪ್ರೇರೇಪಿಸಿತ್ತು.ಅದರಂತೆ ಬೆಂಗಳೂರಿಗೆ ಧಾವಿಸಿ ಆಗಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಬಂಗಾರಪ್ಪಜೀಯವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಕೆಲಸ ನೀಡುವಂತೆ ಪ್ರಾರ್ಥಿಸಿದ್ದೆ.ಅವರು ನನ್ನ ಪರಿಸ್ಥಿತಿ,ತೀಕ್ಷ್ಣ ಬುದ್ಧಿ ಇತ್ಯಾದಿಗಳನ್ನು ಗುರುತಿಸಿ ಬೈದು ಬುದ್ದಿವಾದ ಹೇಳಿ ಊರಿಗೆ ಹೋಗಿ ಎಷ್ಟೇ ಕಷ್ಟ ಆದರೂ ಓದನ್ನು ಮುಂದುವರೆಸು ಉದ್ಧಾರವಾಗುತ್ತಿ ಎಂದು ಗದರಿಸಿ ಪರತ್ ಕಳುಹಿಸಿಕೊಟ್ಟಿದ್ದರು.ಇದು ಪುನಃ ನನ್ನನ್ನು ಓದಿನೆಡೆಗೆ ಆಕರ್ಷಿಸುವಂತೆ ಪ್ರೇರಣೆ ನೀಡಿತು.
1992 ರಿಂದ ಬನವಾಸಿಯ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದ ಹಿರಿಯ ಸ್ವಾತ್ರಂತ್ರ್ಯ ಹೋರಾಟಗಾರರೂ ಮತ್ತು ಕರ್ನಾಟಕ ಸರ್ಕಾರದ ಗ್ಯಾಸೆಟೀಯರ್ ಇಲಾಖೆಯ ಮುಖ್ಯ ಸಂಪಾದಕರೂ ಆಗಿದ್ದ ಅಪೂರ್ವ ವ್ಯಕ್ತಿತ್ವದ ಪೂಜ್ಯ ಕೆ.ಅಭಿಶಂಕರ್ ಇವರ ಪ್ರೀತಿ,ಮಮತೆ,ಅಕ್ಕರೆ ತುಂಬಿದ ಆಶ್ರಯ ಲಭ್ಯವಾಯಿತು.ಅವರ ಶಿಷ್ಯತ್ವ ಸ್ವೀಕರಿಸಿ ಅವರ ಮಾರ್ಗದರ್ಶನದಲ್ಲಿ ವ್ಯಾಸಂಗ ಮುನ್ನಡೆಸುವ ಸುದೈವ ನನ್ನದಾಯಿತು.ಶಿರಸಿಯ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಆಗ ತಾನೆ ಪಿ,ಯೂಸಿ.ಅಧ್ಯಯನಕ್ಕೆ ಪಾದಾರ್ಪಣೆ ಮಾಡಿದ್ದ ನನಗೆ ಅಭಿಶಂಕರ್ ನನ್ನ ಪಾಲಿನ ಭಾಗ್ಯದಾತರಾಗಿ ಸಿಕ್ಕರು.ಕ್ರಿಯಾಶೀಲ ಯುವಕರಾಗಿದ್ದ ಉದಯಕುಮಾರ ಕಾನಳ್ಳಿಯವರಿಂದ ಅಭಿಶಂಕರ್ ವಿಳಾಸ ಪಡೆದು ಪತ್ರ ಬರೆದಿದ್ದೆ.ಅಷ್ಟೇ ನನ್ನ ಬದುಕಿನ ದಿಕ್ಕೇ ಬದಲಾಯಿತು.ತದನಂತರದಲ್ಲಿ ನಾನು ಪೂಜ್ಯ ಅಭಿಶಂಕರ ಅವರ ಕುಟುಂಬದ ಓರ್ವ ಸದಸ್ಯನೇ ಆಗಿಬಿಟ್ಟೆ.ಸ್ವಂತ ಮಗನಂತೆ ನನ್ನನ್ನು ನೋಡಿಕೊಂಡರು.ಬೇಕಾಗಿರುವುದೆಲ್ಲವನ್ನೂ ನೀಡಿದರು.
ಬನವಾಸಿಯಲ್ಲಿ ನನಗೆ ಸಿಕ್ಕ ಇನ್ನೊಬ್ಬ ಸಹೃದಯಿ ಹಿರಿಯರೆಂದರೆ ಅವರು ಶ್ರೀಯುತರಾದ ವಜ್ರನಾಭ ಬಳೆಗಾರ,ಬನವಾಸಿ ಶ್ರೀ ಜಯಂತಿ ಪ್ರೌಢ ಶಾಲೆಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ನಿವೃತ್ತರಾಗಿರುವ ಇವರು ಬನವಾಸಿ ವಲಯ ಅಭ್ಯದಯ ಸಮಿತಿಯ ಗೌರವ ಕಾರ್ಯದರ್ಶಿಗಳಾಗಿ ಈಗಲೂ ಅತ್ಯಂತ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವರು.ನಾನು ಮತ್ತು ಹಿರಿಯರಾದ ವಜ್ರನಾಭ ಇಬ್ಬರೂ ಅಭಿಶಂಕರ್ ಅವರ ನಿಕಟ ಬಾಂಧ್ಯವ ಹೊಂದಿದ ಹಾಗೂ ಆತ್ಮೀಯ ವಲಯದವರಾಗಿದ್ದೆವು.ನನ್ನ ವ್ಯಕ್ತಿತ್ವದ ಬಗ್ಗೆ ಅಭಿಶಂಕರ ಅವರಿಗೆ ಸಕಾರಾತ್ಮಕವಾಗಿ ಅಭಿಪ್ರಾಯಿಸಿ ನಾನು ಉನ್ನತಿ ಹೊಂದಲು ನೆರವಾದ ಉದಾರಿಯಾಗಿದ್ದಾರೆ.
ಅಭಿಶಂಕರ್ ಅವರ ಆಶ್ರಯದ ಶ್ರೀ ರಕ್ಷೆಯ ನಡುವೆ ಪಿ.ಯೂ.ಸಿ. ವ್ಯಾಸಂಗ ಮಾಡುತ್ತಲೇ ಶಿರಸಿಯಲ್ಲಿ “ಲೋಕ ಧ್ವನಿ” ಜಿಲ್ಲಾ ದೈನಿಕ ಪತ್ರಿಕೆಯ ಸ್ಟಾಪ್ ರಿಪೋರ್ಟರ್ ಆಗಿ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ.ಸಂಪಾದಕರಾಗಿದ್ದ ಗೋಪಾಲ ಕೃಷ್ಣ ಅನವಟ್ಟಿಯವರು ನನಗೆ ಕೆಲಸ ಕಲಿಸಿದ ರೀತಿ ಅನನ್ಯ ಅನುಭವ ನೀಡಿತು.ಅವರಿಂದ ಪಡೆದ ಸಂಬಳಕ್ಕಿಂತ ಬರೆಯುವ ಕಲೆ,ವರ್ಣನೆ,ಶೈಲಿ ಹಾಗೂ ವಿಷಯವನ್ನು ಇಡಿಯಾಗಿ ಗ್ರಹಿಸಿಕೊಂಡು ಆಶಯಕ್ಕೆ ಧಕ್ಕೆಯಾಗದಂತೆ ಪರಿಣಾಮಕಾರಿಯಾಗಿ,ಶಿಸ್ತುಬದ್ಧವಾಗಿ ಅರ್ಥಪೂರ್ಣವಾಗಿ,ಸರಳ ಮತ್ತು ಕ್ರೋಢೀಕರಿಸಿ ಹೇಗೆ ವರದಿ ಮಾಡಬೇಕು,ಸಂಪಾದನೆ ಮಾಡಬೇಕು ಎಂಬುದನ್ನು ಕಲಿತುಕೊಂಡೆ,ಎನ್ನುವುದಕ್ಕಿಂತ ಕಲಿಸಿಕೊಟ್ಟರು ಎಂದು ಹೇಳಿಕೊಳ್ಲಲು ಅತ್ಯಂತ ಹೆಮ್ಮೆ ನನಗೆ.ನನ್ನ ಕಾಲೇಜು ಓದನ್ನು ಗೌರವಿಸಿದ ಅವರು ನನ್ನಲ್ಲಿನ ಕ್ರಿಯಾಶೀಲ,ಸರಳ ಮತ್ತು ವಿದೇಯ ವ್ಯಕ್ತಿತ್ವದ ಮಾತುಗಾರಿಕೆ,ನಡೆಯನ್ನು ಗುರುತಿಸಿ ವರದಿಗಾರನನ್ನಾಗಿಸಿ ಪ್ರೋತ್ಸಾಹಿಸಿದರು.ನಂತರ ಕಾಲೇಜಿನ ಕೈ ಬರಹ ಪತ್ರಿಗೆ ಸಂಪಾದಕನಾಗಿಯೂ ಕಾರ್ಯ ನಿರ್ವಹಿಸಿದ ನಾನು ಮುಂದೆ ಕನ್ನಡ ಪ್ರಭ ಪತ್ರಿಕೆಯ ಆಗಿನ ಸಂಪಾದಕರಾಗಿದ್ದ ಕೆ.ಎನ್.ಕೆ ಯವರು ಹುಬ್ಬಳ್ಳಿಯಲ್ಲಿ ನಡೆಸಿದ ಸಂದರ್ಶನದಲ್ಲಿ ಆಯ್ಕೆ ಹೊಂದಿ ಆ ಪತ್ರಿಕೆಯ ಬನವಾಸಿ ಭಾಗದ ವರದಿಗಾರನಾಗಿಯೂ ಸೇವೆಸಲ್ಲಿಸಿದೆ.ಬದುಕು,ಮನೆ ಮತ್ತು ದಾರಿ ಎಂಬ ಮಾಗಜಿನ್ ಹಾಗೂ ವಾರ ಪತ್ರಿಕೆಗಳಿಗೂ ವರದಿಗಾರನಾಗಿ ಕಾರ್ಯನಿರ್ಹಿಸಿದೆ.
ಶಿರಸಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎ.ಸಂಗೀತ ಶಾಸ್ತ್ರ ವಿದ್ಯಾರ್ಥಿಯೂ ಆಗಿದ್ದ ನಾನು ಶಿರಸಿಯ “ಸ್ನೇಹ ಕಲಾ ಕುಂಜ” ಎಂಬ ಸಂಗೀತ ಸಂಘಟನೆಯ ಅಧ್ಯಕ್ಷನಾಗಿ ಗುರುತರ ಸೇವೆ ಸಲ್ಲಿಸುವ ಭಾಗ್ಯ ನನ್ನದಾಯಿತು.ಈ ಸಂದರ್ಭದಲ್ಲಿ ನಾಡಿನ ಖ್ಯಾತನಾಮ ಸಂಗೀತ ವಿದ್ವಾಂಸರನ್ನು ಶಿರಸಿಗೆ ಬರಮಾಡಿಕೊಂಡು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟದ್ದು ಸುಂದರ ಅನುಭವಗಳಲ್ಲಿ ಒಂದಾಗಿದೆ.
ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾಗಿದ್ದ ನಮ್ಮೂರಿನವರಾದ ಪ್ರೋ.ಡಿ.ಡಿ.ಭಟ್ಟ ಅವರ ಸಂಪರ್ಕಕಕ್ಕೆ ಬಂದೆ.ಅವರ ಮಾರ್ಗದರ್ಶನದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಗೆಳೆಯರ ಸಹವಾಸವಾಯಿತು.ಭಟ್ಟರ ಸಹಕಾರದಿಂದಾಗಿ ಅನೇಕ ಶಿಭಿರಗಳಲ್ಲಿ, ಪಶ್ಚಿಮ ಘಟ್ಟ ಕಾಡಿನ ಅಧ್ಯಯನ ಸಮೀಕ್ಷೆ ಕೈಗೊಳ್ಳಲು ಈ ಮೂಲಕ ಶರಾವತಿ ಕಣಿವೆ ಪ್ರದೇಶದ ಜನ ಜೀವನ ತಿಳಿದುಕೊಳ್ಲಲು ಅವಕಾಶ ಲಭಿಸಿತು.ಇದೇ ಸಂದರ್ಭದಲ್ಲಿ ಖ್ಯಾತ ಪರಿಸರ ಹೋರಾಟಗಾರ್ತಿಯಾಗಿದ್ದ  ಡಾ.ಕುಸುಮಾ ಸೊರಬ್ ಅವರ ಪರಿಚಯಯವಾಯಿತು.
ನಂತರ ಕಾರಣಾಂತರಗಳಿಂದ ಭಾರತ ವಿದ್ಯಾರ್ಥಿ ಫೆಡರೇಶನ್ನಿನ ಸಂಪರ್ಕವಾಗಿ ಅದರ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದೆ.ಈ ಮೂಲಕ ಅನೇಕ ವಿದ್ಯಾರ್ಥಿಪರ ಚಟುವಟಿಕೆಗಳಲ್ಲಿ ದಿಟ್ಟೆದೆಯಿಂದ ಭಾಗವಹಿಸಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿದ್ದೆ.ವಿದ್ಯಾರ್ಥಿಪರ ಮುಷ್ಕರಗಳಿಗಾಗಿ ಪೋಲಿಸ್ (ಪಿಕೆಟಿಂಗ್) ಬಂಧನಕ್ಕೊಳಗಾಗಿದ್ದೂ ಉಂಟು.
ಇತ್ತ ಬನವಾಸಿಯಲ್ಲಿ ಶೋಷಿತ ಮತ್ತು ತುಳಿತಕ್ಕೊಳಗಾದ ಜನರಲ್ಲಿ ಜಾಗೃತಿ ಮೂಡಿಸಬೇಕು,ಅವರನ್ನು ಸಮಾಜದ ಮುಖ್ಯವಾಹಿನಿಯತ್ತ ಕೊಂಡೊಯ್ಯಬೇಕೆಂಬ ತವಕ ಮನದಲ್ಲಿ ಮೂಡತೊಡಗಿತು.ಕೂಡಲೇ ಕಾರ್ಯಪ್ರವರ್ತನಾದೆ.ಹತ್ತು ಸಮಸ್ತರ ಯುವಪಡೆಯನ್ನು ಒಟ್ಟುಗೂಡಿಸಿ ಯುವಕ ಮಂಡಳಿಯೊಂದನ್ನು ಹುಟ್ಟು ಹಾಕಿದೆ.ಅದರ ಸಂಸ್ಥಾಪಕ ಅಧ್ಯಕ್ಷನಾಗಿ ನಾನೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇತ್ತು.ಬನವಾಸಿಯಲ್ಲಿರುವ ಎಲ್ಲ ಜನ ಸಮುದಾಯದವರ ಪ್ರೀತಿ ವಿಶ್ವಾಸ ನನ್ನ ಮೇಲಿತ್ತು.ನಾನು ಅವಕಾಶ ವಂಚಿತ ಸಮುದಾಯದಿಂದ ಬಂದಿದ್ದರೂ ಕೂಡ ನನ್ನನ್ನು ಬಹುವಾಗಿ ಪ್ರೀತಿಸುವ ಎಲ್ಲ ವರ್ಗದವರ ಅಭಿಮಾನವೂ ಇತ್ತು.ನಾನು ಹುಟ್ಟಿ ಬೆಳೆದ ಸಮಾಜವನ್ನು ಇತರ ವರ್ಗದವರ ಸಹಕಾರ ಮತ್ತು ಸಹಬಾಳ್ವೆಯ ನಡುವೆ ಹೇಗೆ ಮುನ್ನಡೆಸಿಕೊಂಡು ಹೋಗಬಹುದೆನ್ನುವ ಮನಸ್ಥಿತಿಯನ್ನು ಸಮಾಜಮುಖಿ ನೆಲೆಯಿಂದ ಕಂಡುಕೊಂಡಿದ್ದೆ.ಹೀಗೆ  ಬೆಳೆದು ಬಂದ ಪರಿಸರದ ಜನರಿಗೆ ದನಿಯಾಗಲು ಹಾಗೂ ಇತರೆಲ್ಲ ವರ್ಗದವರ ನೋವು ನಲಿವುಗಳಲ್ಲಿ ಸಹಕಾರಿಯಾಗಲು ಪ್ರಯತ್ನಿಸಿದೆ. ಹಲವು ಹೋರಾಟ,ನಿರಂತರ ಪತ್ರ ಸಂವಹನವಲ್ಲದೇ ಸ್ವತಃ ಸರ್ಕಾರದ ವಿವಿಧ ಇಲಾಖೆ,ಸಮುದಾಯದ ಹತ್ತಾರು ಸಂಘ ಸಂಸ್ಥೆಗಳನ್ನು ಭೇಟಿಯಾಗಿ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಯತ್ನಿಸಿದೆ.ಇದಕ್ಕೆ ಬನವಾಸಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಸೇನಾಪತಿ ಪಾಟೀಲರ ಸಹಕಾರವನ್ನು ಪಡೆದೆ.ಪಾಟೀಲರು ನನ್ನ ಚಟುವಟಿಕೆಗಳಿಗೆ ನೀರೆರೆದು ಪ್ರೋತ್ಸಾಹಿಸಿದರು.ಅವರು ಅಪೂರ್ವ ನಾಯಕತ್ವ ಗುಣ ಹೊಂದಿದ ಅಜಾನುಭಾಹು ಹಾಗೂ ಜನಾಕರ್ಷಕ ವ್ಯಕ್ತಿಯಾಗಿದ್ದರು.ಅವರ ಸಾಮಿಪ್ಯ ನನ್ನದಾಗಿದ್ದರಿಂದ ನನ್ನಲ್ಲಿಯೂ ನಾಯಕತ್ವದ ಗುಣ ಮನೆಮಾಡಲು ಸಹಕಾರಿಯಾಯಿತು.
                                                                                                                                             
ಹೀಗಿರುತ್ತಲೆ 1996 ರಲ್ಲಿ ಬಿ.ಎ.ಪದವಿಯನ್ನು ಪೂರೈಸಿದ ನಾನು ಮುಂದೇನು ಮಾಡಬೇಕೆಂಬ ತವಕದಲ್ಲಿರುವಾಗಲೇ ಅಭಿಶಂಕರರು ಬೆಂಗಳೂರಿನಲ್ಲಿ ನನ್ನನ್ನು ಹಾಸ್ಟೆಲಿನಲ್ಲಿಟ್ಟು ಬಿ.ಇಡಿ ಪದವಿ ಓದಿಸಿದರು.ಪ್ರತಿ ವಾರ ಅವರ ಬೆಂಗಳೂರಿನ ರಾಜ್ ಮಹಲ್ ವಿಲಾಸದ ಮನೆಯಿಂದ ಚಾಮರಾಜ ಪೇಟೆಯಲ್ಲಿ ನಾನಿರುವ ಹಾಸ್ಟೆಲ್ಲಿಗೆ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದರು.ಒಮ್ಮೊಮ್ಮೆ ನಾನು ಕೇಳದಿದ್ದರೂ ನನಗಿರುವ ಹಣಕಾಸಿನ ಅಗತ್ಯತೆಯನ್ನು ಮನಗಂಡು,ಕೆಲವೊಮ್ಮೆ ಕಾಲೇಜಿಗೆ ಭೇಟಿ ನೀಡಿ ಇಲ್ಲವೇ ಪೋನು ಮಾಡಿ ವಿಚಾರಿಸಿ ಕೈ ತುಂಬಾ ಹಣ ನೀಡಿ ಸಾಕಿ ಸಲುಹಿದರು. ‘ಚನ್ನಾಗಿ ಓದಬೇಕು,ನಿನ್ನ ಕಾಲ ಮೇಲೆ ನೀನು ನಿಲ್ಲಬೇಕು,ನಿನಗೆ ನೀನೇ ಬೆಳಕಾಗಬೇಕು ಎನ್ನುತ್ತಿದ್ದರು.ನಾನು ಎಷ್ಟೇ ಸಹಾಯ ಮಾಡಬಹುದು ಆದರೆ ಓದಬೇಕಾದವನು,ಸಾಧಿಸಬೇಕಾದವನು ನೀನೆ.ಆದ್ದರಿಂದ ವೃಥಾ ಅನ್ಯ ಮನಸ್ಕನಾಗದೇ ಅಮೂಲ್ಯ ಜೀವನವನ್ನು ಕಾಲಹರಣ,ವಯೋ ಸಹಜ ಕನವರಿಕೆಗಳಿಗೆ ಎಡೆಮಾಡಿಕೊಳ್ಳದೇ ಎಚ್ಚರಿಕೆಯಿಂದ,ಲಕ್ಷ್ಯ ಕೊಟ್ಟು ಅಧ್ಯಯನ ನಡೆಸಿ ಜೀವನ ರೂಪಿಸಿಕೋ’ ಎಂದು ಖಾಳಜಿ ಭರಿತ ಹಿತವಚನ ನೀಡುತ್ತಿದ್ದರು.                                                                                                                                            ಕರ್ನಾಟಕ ಗಾಂಧಿ ಬನವಾಸಿಯವರಾದ ಹರ್ಡೇಕರ ಮಂಜಪ್ಪ,ಮಾನವತಾವಾದಿ ಬುದ್ಧ, ವಚನಕಾರರ ವಚನಗಳು,ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿ ಅವುಗಳನ್ನು ಓದಲು ನೀಡುತ್ತಿದ್ದರು.ಬಸವ ಪ್ರಜ್ಞೆ ಮತ್ತು ಬುದ್ಧ ಧರ್ಮದ ಬಗ್ಗೆ ಅವರಿಗೆ ಅಪಾರ ಒಲವಿತ್ತು.ಹೀಗೆ ನಾನು ಕನ್ನಡನಾಡಿನ ಖ್ಯಾತ ಇತಿಹಾಸಕಾರ,ಸಂಶೋಧಕ ಮತ್ತು ವಿದ್ವಾಂಸರಾಗಿದ್ದ ಕೆ.ಅಭಶಂಕರ ಅವರ ನಿರಂತರ ಒಡನಾಟದಲ್ಲಿ ಅವರು ಅನುಸರಿಸುತ್ತಿದ್ದ ಸರ್ವೋದಯ ತತ್ವ,ಮೌಲ್ಯಾಧಾರಿತ,ವೈಚಾರಿಕ,ತಾತ್ವಿಕ ಮತ್ತು ಮಾನವೀಯ ವ್ಯಕ್ತಿತ್ವದ ದರ್ಶನವನ್ನು ಹೊಂದುವಂತಾಯಿತು.
1997 ರಲ್ಲಿ ಬಿ.ಇಡಿ ಪೂರ್ಣವಾದ ಕೂಡಲೇ ನಾನು ಕೆಲಸ ಅರಸುವತ್ತ ಲಕ್ಷ್ಯ ವಹಿಸಿದೆ.ಬೆಂಗಳೂರಿನ ಸಮೀಪವಿರುವ ಬಿಡದಿ ಹತ್ತಿರ ಬುದ್ದ ಇಂಗ್ಲೀಷ ವಸತಿ ಶಾಲೆಗೆ ಇತಿಹಾಸ ಬೋಧಕನಾಗಿ ಹಲವು ಗೆಳೆಯರೊಂದಿಗೆ ಸೇರಿಕೊಂಡು ಸೇವೆ ಆರಂಭಿಸಿದೆ.ಆದರೆ ನಾನು ಕೆ.ಎ.ಎಸ್ ಮತ್ತು ಐ.ಎ.ಎಸ್.ಓದಬೇಕೆಂಬುದು ಅಭಿಶಂಕರ್ ಅವರ ಹೆಬ್ಬಯಕೆಯಾಗಿತ್ತು.ಇದಕ್ಕಾಗಿ ನನಗೆ ಸೂಕ್ತ ತರಬೇತಿ ನೀಡಲು ಅವರು ಹಲವು ಪ್ರೋಫೇಸರ್ ಅವರೊಂದಿಗೆ ಮಾತನಾಡಿದ್ದರು.ಹಾಗೂ ತರಬೇತಿ ನೀಡಲು ಅಗತ್ಯ ಏರ್ಪಾಡು ಮಾಡಲು ಯೋಜಿಸಿದ್ದರು.ಈ ಬಗ್ಗೆ ನನ್ನೊಂದಿಗೆ ಮಾತನಾಡಿ ದುಡ್ಡು ಎಷ್ಟಾದರೂ ಖರ್ಚಾಗಲಿ,ಚಿಂತೆ ಮಾಡಬೇಡ ಒಂದು ವರ್ಷ ಓದಿಗೆ ದೃಢ ಸಂಕಲ್ಪ ಮಾಡು ಎಂದಿದ್ದರು.ಅಷ್ಟರಲ್ಲಾಗಲೇ ಇದ್ದಕ್ಕಿದ್ದಂತೆಯೇ ಹೊಟ್ಟೆ ನೋವಿನಿಂದ ವಾಂತಿಯಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ನೀನು ಬೇಗನೇ ಬಾ ಎಂದು ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಾ ಪೋನು ಮಾಡಿದರು.ನಾವು ತಕ್ಷಣ ಆಸ್ಪತ್ರೆಗೆ ಹೋದೆವು.ಅವರೊಂದಿಗೆ ಮಾತನಾಡುವ ಭಾಗ್ಯವೇ ಇಲ್ಲದಾಗಿತ್ತು.ಪ್ರಜ್ಞಾ ಶೂನ್ಯರಾಗಿ ಏದುಸಿರು ಬಿಡುತ್ತಿದ್ದ ಸ್ಥಿತಿಯನ್ನು ನೋಡಿ ದಿಕ್ಕೇ ತೋಚದಾಯಿತು.ನಾನು,ಬಳೆಗಾರವರು ಇನ್ನಿತರರು ರಕ್ತ ಕೊಟ್ಟೆವು.ಏನು ಮಾಡೋದು ವಿಧಿ ತನ್ನ ಕಾರ್ಯವನ್ನು ಸಾಧಿಸದೇ ಬಿಡಲಿಲ್ಲ.ಕನ್ನಡ ನಾಡಿನ ಪ್ರಾಚೀನ ನೆಲೆ ಬನವಾಸಿಯ ಮಹತ್ವವನ್ನು ಆಧುನಿಕ ಕಾಲದಲ್ಲಿ ಸರ್ಕಾರದ ಮಟ್ಟಕ್ಕೆ ಪರಿಚಯಿಸಿ ಈಗಿನ ಬನವಾಸಿಯಲ್ಲಿ ಪ್ರತಿ ವರ್ಷ ನಡೆಯುವ ಕದಂಬೋತ್ಸವ,ಪಂಪ ಪ್ರಶಸ್ತಿ ವಿತರಣೆಗೆ ಸರ್ಕಾರದ ಅಧಿಕೃತ ಆದೇಶವಾಗಲು ಕಾರಣೀಭೂತರಾಗಿದ್ದ ಅವರನ್ನು ಕಳೆದುಕೊಂಡು ಅತೀವ ವೇದನೆ,ಮಾನಸಿಕ ಕ್ಷೋಭೆಯುಂಟಾಯಿತು.ಅಗಲಿಕೆಯ ಕೊರಗನ್ನು ತಡೆಯಲಾಗದೇ ಬೆಂಗಳೂರನ್ನು ಬಿಟ್ಟು ಬನವಾಸಿಗೆ ಬಂದುಬಿಟ್ಟೆ!
1998 ರಲ್ಲಿ ಬೆಂಗಳೂರಿಂದ ಬನವಾಸಿಗೆ ಮರಳಿದ ನಾನು 3-4 ತಿಂಗಳು ದಿಕ್ಕೇ ತೋಚದವನಾಗಿ ಖಿನ್ನತೆಗೊಳಗಾಗಿದ್ದೆ.ಅಮ್ಮ ಬಂಗಾರಮ್ಮ ನನ್ನ ಸಣಕಲು ದೇಹವನ್ನು,ಆರೋಗ್ಯದ ಏರುಪೇರನ್ನು ನೋಡಿ ಕಂಗಾಲಾದರು.ಅಂಥ ಮಹಾನುಭಾವರ ಸಾನಿಧ್ಯದಲ್ಲಿ ಬೆಳೆದ ನೀನು ಹೀಗೆ ಮಂಕಾಗಿ ಕುಳಿತರೆ ಕಳೆದುಕೊಂಡ ಮುತ್ತು ಮತ್ತೆ ಸಿಗುವುದೇ? ಅಭಿಶಂಕರ್ ಹಾಕಿ ಕೊಟ್ಟ ಆದರ್ಶದಲ್ಲಿ ನಿನ್ನ ದಾರಿಯನ್ನು ಹುಡುಕಲು ಪ್ರಯತ್ನಿಸು.ಏನಾದರೂ ಸಾಧಿಸಲು ಅವರ ಬದುಕನ್ನು ಸ್ಪೂರ್ಥಿಯಾಗಿಸಿಕೊ ಎನ್ನುತ್ತಿದ್ದರು.
ಮತ್ತೆ ಮೈಕೊಡವಿಕೊಂಡೆ,ಬನವಾಸಿಯ ಪಕ್ಕದಲ್ಲೇ ಇದ್ದ ನರೂರಿನ ಶಾಂತವೇರಿ ಗೋಪಾಲ ಗೌಡ ಪ್ರೌಢ ಶಾಲೆಯ,ಮಂಜಪ್ಪ ನಾಯ್ಕ್,ಸದಾನಂದ ಗೌಡ್ರು,ಧರ್ಮಪ್ಪ ನಾಯ್ಕ್,ಎಸ್.ಎಸ್.ಸಿದ್ಧನವರು ನನ್ನನ್ನು ಸಂಪರ್ಕಿಸಿ ತಮ್ಮ ಶಾಲೆಯಲ್ಲಿ ಬೋಧಕನಾಗುವಂತೆ ವಿನಂತಿಸಿಕೊಂಡರು.ನಮ್ಮೂರಿನ ಜಯಂತಿ ಪ್ರೌಢ ಶಾಲೆಯಲ್ಲಿಯೇ ನಾನು ಇತಿಹಾಸ ಬೋಧಕನಾಗಬೇಕೆಂಬ ಇಚ್ಛೆ ಹೊಂದಿದ್ದೆ.ಆದರೆ ಅದು ಕೆಲವರ ಹಿತಾಸಕ್ತಿಯಿಂದಾಗಿ ಸಾಧ್ಯವಾಗದೇ ಹೋಯಿತು!
ಶಾಂತವೇರಿ ಗೋಪಾಲ ಗೌಡ ಪ್ರೌಢ ಶಾಲೆಗೆ ಭಾಷೆ ಮತ್ತು ಇತಿಹಾಸ ಸಹ ಶಿಕ್ಷಕನಾಗಿ ಸೇರಿಕೊಳ್ಳಲು ಒಪ್ಪಿಗೆ ಸೂಚಿಸಿ ಕೆಲಸಕ್ಕೆ ಹಾಜರಾದೆ.ಅದೊಂದು ಅನುದಾನ ರಹಿತ ಶಾಲೆಯಾಗಿತ್ತು,ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿತ್ತು.ಅದು ಸರ್ಕಾರಿ ಶಾಲೆಯಾಗಿರದ ಕಾರಣ ನಾನು ರಾಜಕೀಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದ ಯುವಕನಾಗಿದ್ದೆ.ಭಾರತೀಯ ರಾಷ್ಟ್ರೀಯ ಕಾಂಗ್ರೇಸಿನ ಸಕ್ರೀಯ ಸದಸ್ಯನಾಗಿದ್ದೆ.ಹಿರಿಯ ಕಾಂಗ್ರೇಸಿಗರಾಗಿದ್ದ ಬಿ.ಟಿ.ನಾಯ್ಕ,ಡಿ.ಸಿ.ಸಿ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶೀಗೇಹಳ್ಳಿ,ಸೇನಾಪತಿ ಪಾಟೀಲರು ಈ ಮುಂತಾದವರು ನನ್ನ ರಾಜಕೀಯ ಬದುಕಿನ ಧೀಶಕ್ತಿಯಾಗಿದ್ದರು.ನನ್ನ ಬಗ್ಗೆ ಅಪಾರ ನಂಬಿಕೆ ಮತ್ತು ವಿಶ್ವಾಸ ಇಟ್ಟಿದ್ದರು.ನಾನೊಬ್ಬ ಭರವಸೆಯ ನಾಯಕನಾಗಬಹುದೆಂಬ ಆಶಾ ಭಾವ ಅವರಲ್ಲಿತ್ತು.ಈ ಎಲ್ಲ ಮಹನೀಯರ ಸಹಕಾರ ಪಡೆದು ಲೋಕ ಸಭಾ ಸದಸ್ಯರಾಗಿದ್ದ ಶ್ರೀಮತಿ ಮಾರ್ಗರೇಟ್ ಆಳ್ವಾ ಇವರ ಮನ ಒಲಿಸಿ ಶಾಂತವೇರಿ ಗೋಪಾಲಗೌಡ ಪ್ರೌಢ ಶಾಲೆಗೆ ಒಂದು ಸಮುದಾಯ ಭವನವನ್ನು ಮಂಜೂರುಗೊಳಿಸಲು ಪ್ರಯತ್ನಿಸಿ ಹಲವರ ವಿರೋಧದ ನಡುವೆಯೂ ಯಶಸ್ಸು ಪಡೆದೆ.ನನ್ನ ಎಲ್ಲ ಚಟುವಟಿಕೆಗಳನ್ನು ಶಾಲೆಯ ಎಲ್ಲಾ ಶಿಕ್ಷಕ ಸಹೋದ್ಯೋಗಿಗಳು,ಆಡಳಿತ ಮಂಡಳಿ ಬೆನ್ನು ತಟ್ಟಿ ಚಪ್ಪರಿಸುತ್ತಿತ್ತು. ಇದೇ ಅವಧಿಯಲ್ಲಿ ನಾನು ಎಂ.ಎ,(ಕನ್ನಡ) ಓದಬೇಕೆಂಬ ಹಂಬಲದಿಂದ ಮೈಸೂರು ಮುಕ್ತ ವಿಶ್ವ ವಿದ್ಯಾಲಯಕ್ಕೆ ಪ್ರವೇಶ ಪಡೆದೆ.ಶಾಲಾ ಪಾಠ ಬೋಧನೆಯು ಓದಿಗೆ ಸಹಕಾರವಾಯಿತು.
ಸನ್ 2000 ರಲ್ಲಿ ಕರ್ನಾಟಕ ಸರ್ಕಾರವು ನನ್ನನ್ನು ಶಿರಸಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯನನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿತು.ಶ್ರೀಯುತರಾದ ಬಿ.ಟಿ.ನಾಯ್ಕ ಗುರೂಜಿ,ಶಾಂತಾರಾಮ ಹೆಗಡೆ ಹಾಗೂ ಸೇನಾಪತಿ ಪಾಟೀಲರು ಹಾಗೂ ಅನೇಕ ಕಾಂಗ್ರೇಸ್ ಕಾರ್ಯಕರ್ತರ ಪರಿಶ್ರಮವು ನನ್ನ ವ್ಯಕ್ತಿತ್ವವನ್ನು ಗುರುತಿಸಿ ಈ ಗೌರವಾನ್ವಿತ ಹುದ್ದೆ ಸಿಗುವಂತೆ ಮಾಡಿತ್ತು.ಈ ಅವಧಿಯಲ್ಲಿ ನಾನು ಭೂಮಾಲಿಕರ ಪರ ನಿಲುವು ತೆಗೆದುಕೊಳ್ಳದೇ,ರೈತಪರ ಹಾಗೂ ನ್ಯಾಯಪರ ನಿಲುವನ್ನು ತಾಳಿ ಪ್ರಮಾಣಿಕ ಸೇವೆ ಸಲ್ಲಿಸಿರುವೆನೆಂಬ ಹೆಮ್ಮೆ ನನ್ನದು.ನಾನು ಭ್ರಷ್ಟನಾಗಿದ್ದರೆ ಆ ಕಾಲದಲ್ಲಿ  ಕಾರು ಮಾಡಿಕೊಂಡು ಓಡಾಡಬಹುದಿತ್ತು! ಭೂನ್ಯಾಯದಾನದಿಂದ ವಂಚಿತರಾದವರಿಗೆ ನ್ಯಾಯ ದೊರಕಿಸಿಕೊಟ್ಟದ್ದು ನನ್ನ ಜೀವನದ ಹೆಮ್ಮೆಯ ಅನುಭವ ಸಾಧನೆಯಾಗಿದೆ.

ಐ.ಎ.ಎಸ್.ಅಧಿಕಾರಿಯಾಗಿದ್ದ ಸಹಾಯಕ ಕಮೀಷನರ್ ನವೀನ್ ರಾಜ್ ಸಿಂಹ ಮತ್ತು ನನ್ನ ನಿಲುವ ಒಂದೇ ಆಗಿರುತ್ತಿತ್ತು.ಹೀಗಾಗಿ ನ್ಯಾಯಾಲಯಕ್ಕೆ ಹಾಜರಾದ ಸದಸ್ಯರಲ್ಲಿ ನಮ್ಮಿಬ್ಬರ (ನಾನು ಮತ್ತು ಎ.ಸಿ) ಜಡ್ಜಮೆಂಟ್ ಮೆಂಟಲಿಟಿ ನ್ಯಾಯಪರವೇ ಆಗಿದ್ದರಿಂದ ಭಾಗಶಃ ನಮ್ಮ ನಿಲುವುಗಳು ಬಹುಮತದ ತೀರ್ಮಾನಕ್ಕೆ ಎಡೆ ಮಾಡಿಕೊಡುತ್ತಿತ್ತು.ಭೂನ್ಯಾಯ ಮಂಡಳಿಯ ಸದಸ್ಯನಾಗಿ ಉಪವಿಭಾಗಿಯ ದಂಡಾಧಿಕಾರಿಗಳೊಂದಿಗೆ ಅವರ ವಾಹನದಲ್ಲಿ ಸ್ಥಳ ತಪಾಸಣೆಗೆ ಹೋಗುತ್ತಿದ್ದುದು ನನಗೆ ದಿವ್ಯವಾದ ಅನುಭೂತಿ ನೀಡಿದ ಅವಿಸ್ಮರಣೀಯ ಕ್ಷಣಗಳಾಗಿವೆ.
ಸನ್ 2002 ರಲ್ಲಿ ನಾನು ಸ್ನಾತಕೋತ್ತರ ಪದವಿಯನ್ನು ಸಂಪಾದಿಸಿಕೊಂಡೆ.ಇದರ ಜೊತೆಯಲ್ಲೇ ಶಾಲೆಯ ಸರ್ವಾಂಗೀಣ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೆ.ಶಾಲೆಯ ವಿದ್ಯಾರ್ಥಿಗಳೂ ಅಷ್ಟೇ ನನ್ನನ್ನು ಬಹುವಾಗಿ ಹಚ್ಚಿಕೊಳ್ಳುತ್ತಿದ್ದರು.ನಾ ಮಾರ್ಗದರ್ಶನ ನೀಡಿದ ನನ್ನ ಅನೇಕ ವಿದ್ಯಾರ್ಥಿಗಳೀಗ ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ.
ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಮಠವು ನಡೆಸುವ ವಚನ ಕಮ್ಮಟ ಪರೀಕ್ಷೆಗಳಿಗೆ ಶಾಂತವೇರಿ ಗೋಪಾಲಗೌಡ ಪ್ರೌಢ ಶಾಲೆಯ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದೆ.ವಚನಗಳನ್ನು ಲೀಲಾಜಾಲವಾಗಿ,ಭಾವನಾತ್ಮಕವಾಗಿ ಅರ್ಥವತ್ತಾಗಿ ವಾಚಿಸುವುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟೆ.ಶರಣರ ವಚನಗಳ ಅನುಭಾವ ಸಂಗಮ ನನ್ನಲ್ಲಿ ಹಾಗೂ ನನ್ನ ವಿದ್ಯಾರ್ಥಿಗಳಲ್ಲಿ ಆವಾಹನೆಯಾದ ಅನುಭೂತಿಯನ್ನು ನೀಡಿತು.ಈ ಸಾಧನೆಗೆ ಚಿತ್ರದುರ್ಗ ಮಠದ ಪೂಜ್ಯ ಶ್ರೀ ಶಿವಮೂರ್ತಿ ಶರಣರು ನನಗೆ “ಶಿಕ್ಷಕಶ್ರೀ” ಮತ್ತು ಜಿಲ್ಲಾ ಮಟ್ಟದ “ಉತ್ತಮ ಶಿಕ್ಷಕ” ಪ್ರಶಸ್ತಿಯನ್ನು ಘೋಷಿಸಿದರು.
1999-2002 ರ ಅವದಿಯಲ್ಲಿ ನಾನು ಶಿರಸಿ ರೋಟರಿ ಕ್ಲಬ್ ಪ್ರಣೀತ ಬನವಾಸಿ ರೋಟರಿ ಗ್ರಾಮ ದಳದ ಜನರಲ್ ಸಕ್ರೇಟರಿಯಾಗಿ,ಕೋಶಾಧ್ಯಕ್ಷನಾಗಿ ಸಕ್ರೀಯವಾಗಿ ಸೇವೆ ಸಲ್ಲಿಸಿದೆ.ಬನವಾಸಿಯ ಅನೇಕ ಹಿರಿಯ ಹಾಗೂ ಸಮಕಾಲಿನ ಗೆಳೆಯರ ಕ್ರಿಯಾಶೀಲ ಒಗ್ಗೂಡುವಿಕೆಯಿಂದಾಗಿ ನಾವು ಜನಸಮುದಾಯದ,ಗ್ರಾಮಾಭ್ಯದಯದ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿದೆವು.ಈ ಸಂಘಟನೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವ ಹಾಗೆ ನಾವು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೆವು.ಈ ಮೂಲಕ ಸಾಮಾಜಿಕ,ಸಾಂಸ್ಕೃತಿಕ,ಆರ್ಥಿಕ,ಧಾರ್ಮಿಕ ಮತ್ತು ಅರಣ್ಯ,ಪರಿಸರ ಹಾಗೂ ರೈತ ಪರವಾದ ಯೋಜನೆಗಳನ್ನು ರೂಪಿಸಿ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಸಂಘಟಿಸಿದೆವು. ಸಾಂಘಿಕವಾಗಿ ವಿದಾಯಕ ಚಟುವಟಿಕೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಮಾಣಿಕವಾಗಿ ತೊಡಗಿಸಿಕೊಂಡಿದ್ದೆವು.
ಹೀಗೆ ಜನ ಸಮುದಾಯದ ಹಲವಾರು ಚಟುವಟಿಕೆಯಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಂಡಿದ್ದ ನಾನು ಹೊಟ್ಟೆಯ ಪಾಡಿಗಾಗಿ ಉದ್ಯೋಗ ಅರಸಿ ನೂರಾರು ಅರ್ಜಿಗಳನ್ನು ಗುಜರಾಯಿಸುತ್ತಲೇ ಇದ್ದೆ. ನನಗೆ ಸರ್ಕಾರಿ ನೌಕರಿ ಸಿಗುವುದು ಕನಸಿನ ಮಾತೆಂದೂ,ಸರ್ಕಾರಿ ಅನ್ನ ತಿನ್ನುವ ಋಣವಿಲ್ಲವೆಂದೂ ನನ್ನಷ್ಟಕ್ಕೆ ನಾನೇ ವ್ಯಥೆ ಪಟ್ಟು ದೀರ್ಘ ಉಸಿರು ಬಿಡುತ್ತಿದ್ದೆ.ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆದರೂ 5-6 ಅಂಕಗಳಿಂದ ಹುದ್ದೆ ತಪ್ಪಿ ಹೋಗುತ್ತಿತ್ತು! ಹೀಗಿರುವಾಗ 2002 ರ ನವೆಂಬರ್ ತಿಂಗಳ ಕೊನೆ ವಾರದಲ್ಲಿ ನಾನು  ಪ್ರವಾಸೋದ್ಯಮ ಪ್ರವರ್ತಕ ಎಂಬ ಹುದ್ದೆಗೆ ಆಯ್ಕೆಯಾಗಿರುವ ಬಗ್ಗೆ ಪತ್ರ ಬಂದಿತು.ಇದೆಂತ ನೌಕರಿನೋ ಏನೋ ಎಂದು ಮೂಗುಮುರಿದೆ.ಆದರೆ ನನ್ನ ಹೈಸ್ಕೂಲ ಸಹೋದ್ಯೋಗಿಗಳು ಈ ಶಾಲೆ ಅನುದಾನಕ್ಕೆ ಒಳಗಾಗುವುದು ಯಾವಾಗೋ ಏನೋ ನೀವು ಯಾವುದೇ ಕಾರಣಕ್ಕೂ ಹುದ್ದೆ ಬಿಡಕೂಡದು,ತಕ್ಚಣ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಿರೆಂದು ಒತ್ತಾಯಪಡಿಸಿದರು.ನನಗೂ ಇದು ನಿಜ ಅನಿಸಿತು.ಶಾಲಾ ಆಡಳಿತ ಮಂಡಳಿಗೆ,ಶಿರಸಿ ತಾಲೂಕು ಭೂನ್ಯಾಯ ಮಂಡಳಿಗೆ,ಕಾಂಗ್ರೇಸ್ ಪಕ್ಷದ ಸಕ್ರೀಯ ಸದಸ್ಯತ್ವ ಹಾಗೂ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದೆ.ತದನಂತರ ನೇಮಕಾತಿ ಪತ್ರ ಸ್ವೀಕೃತಿಯಾಗಿ ಹಲವು ದಿನಗಳ ನಂತರ ಕಾರವಾರದ ಪ್ರವಾಸೋದ್ಯಮ ಸಹಾಯಕ ನಿರ್ದೇಶಕರ ಕಛೇರಿಗೆ ತೆರಳಿ ಕರ್ತವ್ಯಕ್ಕೆ ದಿನಾಂಕ:03-12-2002 ರಂದು ವರದಿ ಮಾಡಿಕೊಂಡೆ.
ನಾನು ಸರ್ಕಾರಿ ಸೇವೆಗೆ ಸೇರಿದೊಡನೆಯೇ ಅಮ್ಮ ವಿವಾಹ ಆಗುವಂತೆ ಪ್ರೇರೇಪಿಸಿ ಆಶೀರ್ವದಿಸಿದರು.ಅದರಂತೆ ಕನ್ಯಾಶೋಧವೂ ಆಯಿತು.ಮದುವೆಗಾಗಿ ಐದು ಹೆಣ್ಣುಮಕ್ಕಳನ್ನು ನೋಡಿದೆ,ನಂತರ ಐದನೇಯವಳಾದ ಹಾಗೂ ಇಷ್ಟವಾದ ಸೊರಬ ತಾಲೂಕಿನ ಉಳವಿಯ ಶ್ರೀಮತಿ ಮಂಜಮ್ಮ ಮತ್ತು ಶ್ರೀ ಮರಿಯಪ್ಪ ದಂಪತಿಗಳ ಸುಪುತ್ರಿ,ವಿದ್ಯಾವಂತೆ ಹಾಗೂ ಲಿಂಗಗುಣ ಸಂಪನ್ನೆಯಾದ ಶಿಲ್ಪಾಳನ್ನು ಸಾಂಪ್ರದಾಯಿಕವಾಗಿ 30-05-2004 ರಲ್ಲಿ ವಿವಾಹವಾದೆ.ಪ್ರಸ್ತುತ ನನಗೆ ಇಬ್ಬರು ಹೆಣ್ಣು ಮಕ್ಕಳು (ರಕ್ಷಿತಾ,ಹರ್ಷಿತಾ) ಹಾಗೂ ಒಬ್ಬ ಮಗ (ಅಭಿಶಂಕರ್) ಇದ್ದು ನಮ್ಮದು ಸರಳ ಹಾಗೂ ಸುಂದರ ಸಂಸಾರವಾಗಿದೆ.
ನನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಕ್ತಿತ್ವವು ನಾನು ಹುಟ್ಟಿ ಬೆಳೆದ ಅಸಂಘಟಿತ ಜಾತಿ ಸಮುದಾಯದ ಜಾಗೃತಿಗಾಗಿಯೂ ಹಾತೊರೆಯುತ್ತಿತ್ತು.ಕರ್ನಾಟಕದಲ್ಲಿ ಹುಟ್ಟಿಕೊಂಡಿರುವ ಜಾತಿ ಜಾಲದಲ್ಲಿ ಚನ್ನಯ್ಯ ಜಾತಿಯು ಹೇಳ ಹೆಸರಿಲ್ಲದಂತಿರುವುದನ್ನು ನೋಡಿ ಮನಸ್ಸು ಕಳವಳಗೊಂಡಿತು.ಇದಕ್ಕಾಗಿ ಜಾತಿ ಬಾಂಧವರಲ್ಲಿರುವ ಸಣ್ಣ ಪುಟ್ಟ ಕೆಲಸದಲ್ಲಿರುವ ನೌಕರರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಜಾತಿಯಲ್ಲೇ ಹುಟ್ಟಿ ಬೆಳೆದ ಅನೇಕರು ಪ್ರತಿರೋಧವನ್ನುಂಟು ಮಾಡಿದರು.ಅದನ್ನು ಲೆಕ್ಕಿಸಿದೇ ಕೆಲ ವಿದ್ಯಾವಂತ ತಿಳುವಳಿಕಸ್ತ ಯುವಕರು ಹಾಗೂ ಹಿರಿಯರನ್ನು ಕಟ್ಟಿಕೊಂಡು ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ನೋಂದಾಯಿಸಿದೆ.ಅನಿವಾರ್ಯತೆಗೆ ಕಟ್ಟುಬಿದ್ದು ಅದರ ಸಂಸ್ಥಾಪಕ ಅಧ್ಯಕ್ಷನಾಗಿಯೂ ಹೆಸರಿಗೆ ಕಾರ್ಯನಿರ್ವಹಿಸುತ್ತಿರುವೆ.ಆದರೆ ಈ ಸಮಾಜದ ಧ್ವನಿಯಾಗಬಲ್ಲವರು ಮುಂದೆ ಯಾರಾದರೂ ಬರುತ್ತಾರೆಂಬ ಭರವಸೆಯಲ್ಲಿ ಸಮಾಜವು ತನ್ನ ಅಸ್ತಿತ್ವ ಕಂಡುಕೊಳ್ಳಲಾಗದೇ ಸೊರಗುತ್ತಿರುವುದನ್ನು ನೋಡಿ ಮನಸ್ಸು ವೇದನೆ ಪಡುತ್ತಿದೆ.ಈ ಸಮಾಜಕ್ಕೆ ನನಗೆ ಇರುವ ಪರಿಮಿತಿಯಲ್ಲಿ ನನ್ನಿಂದಾಗುವ ಕಾಣಿಕೆ ಸಲ್ಲಿಸಲು ಸರ್ವಥಾ ಪ್ರಯತ್ನಿಸುತ್ತಿದ್ದೇನೆ.
ಈ ನಡುವೆ ಜನಸಮುದಾಯದ ನನ್ನ ಅನೇಕ ಕಾರ್ಯಶೀಲ ಚಟುವಟಿಕೆಗಳನ್ನು ಗುರುತಿಸಿ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯು ಸನ್-2008 ರಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಫೆಲೋಶಿಫ್ ಅವಾರ್ಡನ್ನು ನೀಡಿ ಗೌರವಿಸಿತು.
ಇಲಾಖೆಗೆ ಸೇರಿದ ಕೂಡಲೇ ಅಲ್ಲೂ ನನ್ನ ವ್ಯಕ್ತಿತ್ವದ ಛಾಪು ಮೂಡಿಸಲು ಸದಾ ಪ್ರಯತ್ನಿಸುತ್ತಲೇ ಇದ್ದೇನೆ.ಇಲಾಖೆಯು ನನ್ನ ಕಾರ್ಯ ತತ್ಪರತೆಯನ್ನು ಗುರುತಿಸಿ ರಾಜ್ಯದ ಹೊರಗಡೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟ್ದದ ಸಮಾವೇಷಗಳಿಗೆ ಕರ್ತವ್ಯಕ್ಕೆ ನಿಯೋಜಿಸಿತು.2009-10 ರಲ್ಲಿ ನವದೆಹಲಿ ಮತ್ತು 2011 ,2015 ರಲ್ಲಿ ಗುಜರಾತನಲ್ಲಿ ನಡೆದ ಪ್ರವಾಸೋದ್ಯಮ ಸಮಾವೇಷಗಳಲ್ಲಿ ನಾನು ಭಾಗವಹಿಸುವ ಅವಕಾಶ ಲಭಿಸಿತು.ಅಗಷ್ಟ-2015 ನೇ ಮಾಹೆಯಲ್ಲಿ ಫೆಸಿಪಿಕ್ ಏಷ್ಯಾ ಟ್ರಾವೆಲ್ ಮಾರ್ಟ್ ಸಮಾವೇಷದಲ್ಲಿ ಭಾಗವಹಿಸುವ ಮೂಲಕ ನನ್ನ ಅನುಭವ ಹೆಚ್ಚಳಕ್ಕೆ ನಿರ್ಶದೇಶಕರು ಅವಕಾಶ ನೀಡಿ ಪೋಷಿಸಿದರು.ಇಲಾಖೆಯ ಜಿಲ್ಲಾ ಮಟ್ಟದ ಕಛೇರಿಯಲ್ಲಿ ನಡೆಯುವ ಹತ್ತಾರು ಕಾರ್ಯಗಳಲ್ಲಿ ಅತ್ಯಂತ ನಿಷ್ಠೆ,ಆಸಕ್ತಿ ಮತ್ತು ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡಿದ್ದೇನೆಂಬ ಹೆಮ್ಮೆ ನನಗಿದೆ.ಪ್ರವಾಸೋದ್ಯಮ ಚಟುವಟಿಕೆಗಳು ಆಸಕ್ತಿದಾಯಕವಾಗಲು ನನಗಿರುವ ಪರಿಮಿತಿಯ ನಡುವೆ ನನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ.

ನನ್ನ ಈವರೆಗಿನ ಜೀವನವನ್ನು ನನಗೆ ತಿಳಿದ ಬುದ್ಧಿಮತ್ತೆಗೆ ಅನುಗುಣವಾಗಿ ಸಮುದಾಯದ ವಿದಾಯಕ ಚಟುವಟಿಕೆಗಳಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿಕೊಂಡು ಕಳೆದಿದ್ದೇನೆಂಬ ಸಂತಸ ನನಗಿದೆ.ಎಲೆಮರೆಯಲ್ಲಿದ್ದೇ ಸಮಾಜದ ಬಹುಮುಖ ಕ್ಷೇತ್ರದಲ್ಲಿ ಆಸಕ್ತಿದಾಯಕವಾಗಿ ತೊಡಗಿಸಿಕೊಂಡು ಸೇವೆಸಲ್ಲಿಸುತ್ತಿದ್ದು ಈ ಕೈಂಕರ್ಯವು ಅವ್ಯಾಹತವಾಗಿ ಜೀವಿತದ ಕೊನೆಯವರೆಗೂ ಮುಂದುವರೆಯುತ್ತದೆ.ಅಂಥ ಶಕ್ತಿಯನ್ನು ನೀಡಿ ನಿನ್ನ ಶ್ರೀರಕ್ಷೆಯ ಅಭಯ ನೀಡಿ ಕಾಪಾಡು,ಅನುಗ್ರಹಿಸಿ ಆಶೀರ್ವದಿಸೆಂದು ಮಾತೃದೇವತೆಯಲ್ಲಿ ಪ್ರಾರ್ಥಿಸುತ್ತೇನೆ.

Friday 3 January 2014

ಈಗ ನೀವು ಯಾರನ್ನು ಅಣಕ ಮಾಡಿದ್ದು?


" ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಹರಿಬಿಡುವುದೇ ಬೌದ್ಧಿಕತೆಯ ಶ್ರೇಷ್ಠ ಲಕ್ಷಣ.ಅದು ಇದೆ ಎಂದು ಹೇಗೆ ಬೇಕಾದರೂ,ಏನು ಬೇಕಾದರೂ ಮಾತನಾಡಿ ದೋಣಿ ದಾಟಿಯಾದ ಮೇಲೆ 'ಆಡಿದ್ದೊಂದು ಮಾಡಿದ್ದೊಂದು' ಎನ್ನುವ ಹಾಗೆ ನಡೆದುಕೊಂಡರೆ ಇದೆಂಥ ಮೌಲ್ಯವಾದೀತು? ಆಡುವುದು ಸುಲಭ,ಆಡಿದಂತೆಯೇ ನಡೆಯುವುದು ಕಷ್ಟ ಕಷ್ಟ ಎನ್ನುವ ಕಟು ಸತ್ಯದ ಪರಿಜ್ಞಾನ ಆಡುವ ಮೊದಲೇ ಮೂಡಿರಬೇಕು.ಆಡಿ ನಂತರ ನಾನು ಹಾಗೆ ಆಡಿಲ್ಲ,ಹೀಗೆ ಆಡಿದ್ದೆ ಎಂಬ ಮತ್ತದೇ ಹುಸಿ ಸಮರ್ಥನೆಯ ಆಟ ಆಡಿದರೆ ಅದು ದಿಬ್ಯವಾದೀತೆ? ಮೊದಲು ಎನಗಿಂತ ಕಿರಿಯರಿಲ್ಲ,ನಿಮಗಿಂತ ಹಿರಿಯರಿಲ್ಲ ಎಂದಿರಿ.ಈಗ? ಈಗ ನೀವು ಯಾರನ್ನು ಅಣಕ ಮಾಡಿದ್ದು?

Monday 21 January 2013

ಶರಣರ ನೈತಿಕ ಮೌಲ್ಯಗಳು.

ಈ ಮಹಾ ಮನೆ, ಅನುಭವ ಮಂಟಪದಲ್ಲಿ ಆಸೀನರಾಗಿರುವ ಎಲ್ಲ ಶರಣರೇ ಮತ್ತು ಶರಣೆಯರೇ,
ನಿಮಗೆಲ್ಲ ಶರಣು ಶರಣಾರ್ಥಿಗಳು.

ಎನಗಿಂತ ಕಿರಿಯರಿಲ್ಲ
ಶಿವ ಭಕ್ತರಿಗಿಂತ ಹಿರಿಯರಿಲ್ಲ
ಎನ್ನ ಮನಸಾಕ್ಷಿ ನಿಮ್ಮ ಪಾದ ಸಾಕ್ಷಿ
ಕೂಡಲ ಸಂಗಮದೇವ ಎನಗಿದೇ ದಿಬ್ಯ!

ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಕನ್ನಡ ನಾಡು ಅನುಭಾವಿಗಳು,ಶರಣರು, ದಾರ್ಶನಿಕರು ಮತ್ತು ಸಾಧುಸಂತರು ನೆಲೆಸಿದ ಪಾವನ ಭೂಮಿಯಾಗಿತ್ತು.ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಅನುಭಾವವೇ ಪ್ರಧಾನವೆಂದು  ಈ ಬಸವಾದಿ ಪ್ರಮಥರು ಸಾರಿದರು.ವಚನಕಾರರು ಜನ ಸಾಮಾನ್ಯರಿಗೆ ನೈತಿಕ ಜೀವನ ದರ್ಶನ ಮಾಡಿಸಿದರು.ಸಂಸ್ಕೃತದಲ್ಲಿ ನಿಕ್ಷಿಪ್ತವಾಗಿದ್ದ ತತ್ತ್ವಶಾಸ್ತ್ರಗಳು ಕೇವಲ ಪಂಡಿತರು ಮಾತ್ರರಿಗೆ ಮೀಸಲಾಗಿತ್ತೇ ಹೊರತು ಸಾಮಾನ್ಯರಿಗೆ ಎಟಕುವಂತಿರಲಿಲ್ಲ.ಇಂಥ ಸನ್ನೀವೇಷದಲ್ಲಿ ಉದಯಿಸಿದ ವಚನ ಚಳುವಳಿಯ ಅನುಭಾವಿ ದಿಗ್ಗಜರು (ಶರಣರು) ಶಾಸ್ತ್ರ ಗ್ರಂಥಗಳ ಒಳ-ಹೊರ ತಿರುಳು ಮತ್ತು ಅವುಗಳಲ್ಲಿ ಅಡಗಿರುವ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ತಿಳಿಯಾದ ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೂ ತಲುಪಿಸುವ ಕೈಂಕರ್ಯಕ್ಕೆ ವಚನಗಳನ್ನು ಪ್ರಕ್ಷಿಪ್ತಗೊಳಿಸಿದರು.

ಕ್ರಾಂತಿಯೋಗಿ, ಮಹಾನ್ ಸಮಾಜ ಸುಧಾರಣಾ ಚಳುವಳಿಯ ನೇತಾರನಾಗಿದ್ದ ಬಸವಣ್ಣನವರು 12 ನೇ ಶತಮಾನದಲ್ಲಿ  ಪ್ರಜಾಪ್ರಭುತ್ವದ ಕನಸು ಕಂಡು ಒಂದು ಹೊಸ ಪರಿವರ್ತನಾಶೀಲ ಆದರ್ಶ ಸಮಾಜವನ್ನು ಸರ್ವೋದಯ ತತ್ವದ ತಳಹದಿಯಲ್ಲಿ ನಿರ್ಮಾಣ ಮಾಡುವ ಪಣ ತೊಟ್ಟಿದ್ದರು. ವ್ಯಾಸ ಸಾಹಿತ್ಯ ಪ್ರಕಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಎಲ್ಲ ಶರಣರೂ ಈ ವಿಶ್ವಗುರು ಬಸವಣ್ಣನ ಹಿರಿತನದಲ್ಲಿ ಸಂಪ್ರದಾಯಬದ್ಧ  ಸಮಾಜದಲ್ಲೇ ಪ್ರಜಾಪ್ರಭುತ್ವವಾದಿ ಪರ್ಯಾಯ ಸಮಾಜ ರಚಿಸಿದರು. ಸಮಾಜದ ಸದಸ್ಯರೆಲ್ಲ ಭಕ್ತರೆನಿಸಿದರು, ಶರಣರೆನಿಸಿದರು. ಹೀಗೆ ಬಸವಣ್ಣನವರು 867 ವರ್ಷಗಳ ಹಿಂದೆಯೇ ಜಾತಿಭೇದ, ವರ್ಣಭೇದ,ಲಿಂಗ,ವರ್ಗ,ವರ್ಣ ಮತ್ತು ಕಾಯಕ ಭೇದಗಳಿಲ್ಲದ ಹೊಸ ಶೋಷಣೆ ರಹಿತ ಸರ್ವೋದಯ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ಸು ಸಾಧಿಸಿದರು, ಅವರ ಸರ್ವ ಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ, ಸರ್ವಕಾಲಕ್ಕೂ  ಹೇಗಿರಬೇಕು  ಎಂಬುದಕ್ಕೆ ದಿಕ್ಸೂಚಿಯಾಗಿದೆ.

ಶರಣರ ನೈತಿಕ ಮೌಲ್ಯಗಳು ಶರಣರುಗಳೆಲ್ಲ ಅನುಗ್ರಹಿಸಿರುವ ವಚನಗಳಲ್ಲೇ ಅಡಗಿವೆ.ಬಸವ ಪ್ರಜ್ಞೆಯು ನೈತಿಕ,ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಮತ್ತು ಆರ್ಥಿಕ ಮೌಲ್ಯಗಳನ್ನು ಸಾಕಾರಗೊಳಿಸಿದ ಮಾನವ ಹಕ್ಕುಗಳ ಪ್ರಜ್ಞೆಯಾಗಿದೆ. ಜಾಗತಿಕ ಸಂತ, ವ್ಯೋಮಕಾಯರಾದ ಅಲ್ಲಮ ಪ್ರಭು,ಚೆನ್ನ ಬಸವಣ್ಣ,ಸಿದ್ಧರಾಮ,ಮಾದಾರ ಚನ್ನಯ್ಯ,ಅಂಬಿಗರ ಚೌಡಯ್ಯ,ಡೋಹರ ಕಕ್ಕಯ್ಯ,ಮಡಿವಾಳ ಮಾಚಯ್ಯ,ಸತ್ಯಕ್ಕ,ಕುಂಬಾರ ಗುಂಡಣ್ಣ, ಮುಂತಾಗಿ ನೂರಾರು ಶರಣರು ಬಸವಣ್ಣನವರ ಜಾತ್ಯಾತೀತ, ಪ್ರಜಾ ಪ್ರಭುತ್ವವಾದಿ ಪ್ರಜ್ಞೆಯ ಚೇತನಗಳಾಗಿ ಮೈದುಂಬಿಸಿದರು.ಈ ಆಶಯಗಳೇ ಭಾರತೀಯ ಸಂವಿದಾನದ ನಿಜ ಆಶಯಗಳ ತತ್ವಶಃ ಸಮಾಜವಾದಿ, ಸಮತಾವಾದಿ ಪ್ರಜ್ಞೆಯಾಗಿ ರೂಪುಗೊಂಡಿರುವುದು ಸಾಕ್ಷಿಯಾಗಿದೆ.ಮಾದಾರ ಚನ್ನಯ್ಯನ ಮನೆಯಲ್ಲಿ ಅಂಬಲಿಯನ್ನು ಕುಡಿಯುವ ದೇವರು ಬಸವಣ್ಣನವರ ಕೂಡಲಸಂಗಮದೇವನಾಗಿದ್ದರ ಸಾಮಾಜಿಕ ಮೌಲ್ಯ ಅತ್ಯಂತ ಶ್ರೇಷ್ಠತಮವಾಗಿದೆ.

"ಲಿಂಗ ವ್ಯಸನಿ ಜಂಗಮ ಪ್ರೇಮಿ" ಎಂದು ಬಸವಣ್ಣನವರು ಹೇಳುವಲ್ಲಿ ಮೌಲ್ಯಗಳಿಂದ ತುಂಬಿದ ಒಳಜಗತ್ತು ಹೊರ ಜಗತ್ತನ್ನು ಆಳಬೇಕೆಂದು ಸೂಚಿಸುತ್ತಾರೆ. ಮಾನವೀಯ ಮೌಲ್ಯಗಳು ಜಗತ್ತನ್ನು ಆಳಬೇಕು. ಆದರೆ ಇಂದು ಮಾರುಕಟ್ಟೆ ಮೌಲ್ಯಗಳು ಜಗತ್ತನ್ನು ಆಳತೊಡಗಿರುವುದು ಅತ್ಯಂತ ದುರದೃಷ್ಠಕರವಾದ ಸಂಗತಿಯಾಗಿದೆ.

ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವವನು ಭಕ್ತ. ಸಕಲ ವಸ್ತುಗಳೆಲ್ಲ ಬೇಕೆಂಬುವವನು ಭವಿ. ಇಂದಿನ ಜಗತ್ತು ಭವಿಗಳ ಸಾಮ್ರಾಜ್ಯವಾಗಿದ್ದು ಅಟ್ಟಹಾಸಗೈಯುತ್ತಿರುವುದು ದುರಂತವಾಗಿದೆ.ಈ ಜಗತ್ತನ್ನು ಭಕ್ತರ ಸಾಮ್ರಾಜ್ಯ ಮಾಡಿದಾಗ ಮಾತ್ರ ಮೇಲು ಕೀಳಿಲ್ಲದ, ಸುಲಿಗೆ ಇಲ್ಲದ, ಘನತೆವೆತ್ತ ಸ್ವತಂತ್ರ ಮಾನವನ ಉದಯವಾಗುತ್ತದೆ. ಇಂಥ ಹೊಸ ಮನುಷ್ಯರ ಸಮಾಜವನ್ನು ಸೃಷ್ಟಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಶರಣಾಗುವುದೆಂದರೆ ಭವದಲ್ಲಿ ಯಾರಿಗೂ ಶರಣಾಗತರಾಗದೆ ಸ್ವತಂತ್ರಧೀರರಾಗಿ ಬದುಕುವುದು ಎಂಬುದಕ್ಕೆ ಬಸವಣ್ಣನವರ ಈ ವಚನ ಮಾರ್ಮಿಕವಾದ ಅರ್ಥವನ್ನು ಒದಗಿಸುತ್ತದೆ. 
                                                                                                                 
"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

"ಕೂಡಲಸಂಗನ ಶರಣರು ಸ್ವತಂತ್ರಧೀರರು" ಎಂದು ಬಸವಣ್ಣನವರು ಹೇಳುತ್ತಾರೆ. ಸ್ವತಂತ್ರಧೀರರ ಸಮಾಜದಲ್ಲಿ ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಾಗುತ್ತದೆ. ಇಲ್ಲದಿದ್ದರೆ ಅದು ಸ್ವಾರ್ಥಿಗಳ ಕಮ್ಮಟವಾಗುತ್ತದೆ.

"ದೇವನೊಬ್ಬ ನಾಮ ಹಲವು" ಎಂದು ಬಸವಣ್ಣನವರು ಹೇಳುತ್ತಾರೆ. ದೇವರು ಒಬ್ಬನೇ ಇದ್ದಾನೆ. ಆತ ಸೋಲುವುದೂ ಇಲ್ಲ, ಗೆಲ್ಲುವುದೂ ಇಲ್ಲ ಆದರೆ  ಆತ ಸೃಷ್ಟಿಯ ಸಮತೋಲನವನ್ನು ರಕ್ಷಿಸುತ್ತಾನೆಂಬುದು ಬಸವಣ್ಣನವರ ಪರಿಸರ ಪ್ರಜ್ಞೆ. ಭೌತಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ವಸ್ತುಗಳೊಂದಿಗೆ ಮತ್ತು ಆಂತರಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಹೆಚ್ಚು ಆನಂದಮಯವಾಗಿ ಬದುಕುವವನೇ ಶರಣನಾಗುತ್ತಾನೆಂಬುದಕ್ಕೆ ಈ ವಚನ ಆರ್ಥಿಕ ಮೌಲ್ಯದ ಶಕ್ತಿಯನ್ನು ತುಂಬಿದೆ;

ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದೆಳೆಯ,
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಿಮ್ಮ ಶರಣರಿಗಲ್ಲದೆ ಮತ್ತೊಂದಕಿಕ್ಕೆನಯ್ಯ
ಕೂಡಲಸಂಗಮದೇವ.

ಬಸವಾದಿ ಪ್ರಮಥರು, ಶರಣನಾಗುವುದೆಂದರೆ ಅಹಂಕಾರದ ಮೇಲೆ ವಿಜಯ ಸಾಧಿಸಿದ ವೀರರಾಗಿರುವುದಷ್ಟೇ ಆಗಿರದೇ ನ್ಯಾಯನಿಷ್ಠುರಾಗಿದ್ದು ಪರಿಪೂರ್ಣ ಸತ್ಯಕ್ಕೆ ಮಾತ್ರ ತಲೆಬಾಗುವವರಾಗಿದ್ದಾರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಈ ವಚನ ಜೀವಂತಿಕೆಯನ್ನೊದಗಿಸುತ್ತವೆ.
ನ್ಯಾಯನಿಷ್ಠುರ!
ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ!
ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ!

ಕೇರಳದ ಮಾರ್ತಾಂಡಂ ರಾಜ್ಯವನ್ನಾಳುತ್ತಿದ್ದ ಮಾರ್ತಾಂಡವರ್ಮ ಮಹಾಶೂರನಾಗಿದ್ದನಲ್ಲದೇ ರಾಜ್ಯವಿಸ್ತಾರದ ಮಹತ್ವಾಕಾಂಕ್ಷಿಯಾಗಿದ್ದ.ಸುತ್ತಮುತ್ತಲಿನ ರಾಜ್ಯಗಳನ್ನೆಲ್ಲ ಗೆದ್ದುಕೊಂಡನಾದರೂ ಬದುಕಿನ ಅರ್ಥ ತಿಳಿಯದೇ ಗೊಂದಲಕ್ಕೀಡಾಗಿ ಗಾಬರಿಯಾದ. ಚಿತ್ತಶಾಂತಿಯಿಲ್ಲದೇ ಭೋಗಲಾಲಸೆ,ವೈಭೋಗದ ಜೀವನದ ಮಧ್ಯೆ ವಿಲವಿಲನೆ ಒದ್ದಾಡತೊಡಗಿದ. ಅಂತಿಮವಾಗಿ ಪದ್ಮನಾಭ ಮಂದಿರಕ್ಕೆ ಹೋಗಿ ತನ್ನ ನೆಚ್ಚಿನ ಖಡ್ಗವನ್ನು ಪದ್ಮನಾಭನ ಪಾದಕ್ಕರ್ಪಿಸಿ ಶರಣಾಗತನಾದ. "ಹೇ,ದೇವರೆ ನಾನು ನಿನಗೆ ಶರಣಾಗತನಾಗಿದ್ದೇನೆ,ನನ್ನೆಲ್ಲ ಆಸೆಗಳನ್ನು ಜಯಿಸಿ ಮಾನಸಿಕ ಕ್ಷೋಭೆ ಮತ್ತು ಒತ್ತಡಗಳಿಂದ ಹೊರಬರುವಂತೆ ಕೃಪೆ ದೋರಿ ರಕ್ಷಿಸೆಂದು ನಿರ್ಮಲ ಮನಸ್ಸಿಂದ ಬೇಡಿದ. ಚಿತ್ತಕ್ಕೆ ಸಮಾಧಾನ ಸಿಕ್ಕೊಡನೆಯೇ ಐಹಿಕ ಜಗತ್ತಿನ ಮೋಹಪಾಶದಿಂದ ಹೊರಬಂದು ಮಾತಾಂಡಂ ರಾಜಧಾನಿಯ ಹೆಸರನ್ನೇ ಬದಲಾಯಿಸಿ ಪದ್ಮನಾಭಪುರ ಎಂದು ಮರು ನಾಮಕರಣಗೊಳಿಸುತ್ತಾನೆ.ಹೀಹೆ ಐಹಿಕ ಜಗತ್ತನ್ನು ಗೆಲ್ಲದವ ಶರಣನಾಗಲಾರ. ದಾಸೋಹಂಭಾವ ತಾಳಲಾರ ಎಂಬುದಕ್ಕೆ ಈ ವಚನ ಸಾಂದರ್ಭಿಕ ಉದಾಹರಣೆಯಾಗಬಲ್ಲದು.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.
 ಹೀಗೆ ಶರಣರ ಅನುಭಾವ ಸಂಗಮದಿಂದ ಬದುಕು ಶ್ರೇಷ್ಠವಾಗುವುದೆಂಬುದಕ್ಕೆ ಈ ವಚನ ದಿವ್ಯಾನುಭೂತಿ ನೀಡುತ್ತದೆ.

ಸಾರ ಸಜ್ಜನರ ಸಂಗವೇ ಲೇಸು ಕಂಡಯ್ಯ!
ದೂರ ದುರ್ಜನರ ಸಂಗವದು ಭಂಗವಯ್ಯ!
ಸಂಗವೆರಡುಂಟು-ಒಂದ ಬಿಡು, ಒಂದ ಹಿಡಿ
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣ.

  ಶರಣರು ಸಾರಿದ ನೈತಿಕ ಮೌಲ್ಯಗಳು ವಚನ ಸಾಹಿತ್ಯದ ಮೂಲಕ ಇಡೀ ಜಗತ್ತಿನ ಗೌರವ ಕಾಪಾಡುತ್ತದೆ. ಭೂಮಿಯ ಮಹತ್ವ ಸಾರುತ್ತದೆ. ಲೋಕದ ಜನರ ಹಿತಚಿಂತನೆ ಮಾಡುತ್ತದೆ. ಮಾನವರ ಹಿತ ಕಾಪಾಡುವುದೇ ವಚನ ಸಾಹಿತ್ಯದ ಮುಖ್ಯ ಮೌಲ್ಯವಾಗಿದೆ. ವಚನ ಸಾಹಿತ್ಯವು ವಿಶ್ವಸಾಹಿತ್ಯಕ್ಕೆ ಮಾರ್ಗದರ್ಶಕವಾಗಿದೆ. ಇಲ್ಲಿಯ ವರೆಗೆ ಲಭ್ಯವಾದ 20 ಸಾವಿರದಷ್ಟು ವಚನಗಳು ಜಗತ್ತಿನ ಎಲ್ಲ ಜನ ಸಮುದಾಯಗಳ ಆಸ್ತಿಯಾಗಿದ್ದು ಬದುಕಿನ ಮೌಲ್ಯಗಳನ್ನು ಬಿತ್ತರಿಸಿವೆ.

ಹೀಗೆ ಎಲ್ಲ ಶರಣರು ಬಸವಣ್ಣನವರ ತತ್ವಾದರ್ಶಗಳನ್ನು ಎತ್ತಿಹಿಡಿದಿದ್ದಾರೆ. ಬಸವತತ್ತ್ವ, ಕಾಯಕತತ್ತ್ವ ಮತ್ತು ಇಷ್ಟಲಿಂಗತತ್ತ್ವಗಳೆಲ್ಲ ಬದುಕಿನ ಮೌಲ್ಯಗಳಾಗಿದ್ದು ಸಮಾನತೆಯನ್ನು ಸಾರಿದ ಶ್ರೇಷ್ಠ ತತ್ವಗಳಾಗಿವೆ.


Ø  ಅನುಭಾವಿ:ಬನವಾಸಿ ಸೋಮಶೇಖರ್,ಎಂ.ಎ.,ಬಿ.ಇಡಿ
               (ಆಕರ: ವಿವಿಧ ಮೂಲಗಳಿಂದ)

(ಬೆಂಗಳೂರಿನ, ಮಹಾಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ ಸಂಸ್ಥೆಯು ದಿನಾಂಕ:20-01-2013 ರಂದು ಉಡುಪಿ ಜಿಲ್ಲೆಯ ಹಿರಿಯಡ್ಕ-ಕೊಂಡಾಡಿ ಜಂಗಮ ಮಠದಲ್ಲಿ ನಡೆಸಿದ “53 ನೇ ತಿಂಗಳ ಬೆಳಕಿನ ಅಂಗಳದ ಅನುಭಾವ ಸಂಗಮ” ಕಾರ್ಯಕ್ರಮದಲ್ಲಿ ನೀಡಿದ ಅನುಭಾವ ನುಡಿ.)