Thursday 2 February 2012

"ಬೆಳದಿಂಗಳಾಗಿ ಬಾ"

ಎಂತು ಹೇಳಲೀ
ಮನದಾಳದ ಭಾವ
ಮಾತಿನಿಂ ವ್ಯಕ್ತವಾಗದಾ
ಅವ್ಯಕ್ತ ನೋವ

ಮನಭಾರವಾಗಿಹುದೇಕೋ
ಅರಿಯದಾಗಿ
ದುಗುಡ ದುಮ್ಮಾನಗಳ
ಬಲೆಯಲ್ಲಿದ್ದು ಒದ್ದಾಡುತಿಹೆನು!

ಮನದೊಡಲಲ್ಲಿ ತಳವೂರಿ
ದುಪ್ಪಟ್ಟಾಗಿ ಹೊತ್ತುರಿಯುತ್ತಿರುವಾಸೆಯ
ಧಾವಾಗ್ನಿಯು ಬರೀ ನೋವನ್ನೇ
ಉಣಿಸಿ ಧಗಧಗಿಸುತಲಿಹುದು ಆ
ಸುಡುವಾಗ್ನಿಯ ಜ್ವಾಲೆಯು
ಉರಿವ ಕೆನ್ನಾಲಿಗೆಯಂತೆ ಬದುಕಿನ
ಸಾರವೇ ನಿಸ್ತೇಜವಾಗಿಹುದು.!!

ಸಂಸಾರ ಸಾಗರದೀ
ಕ್ಷಣ ಕ್ಷಣದ ಕೋಲಾಹಲಗಳಿಗೆ
ಹಾಲಾಹಲ ಬೆರಸಿ ನೀ
ಜೀವಕ್ಕೆ ಕುತ್ತಾಗದಿರಾಸೆಯೆ

ಬದುಕಿನೀ ಬಾಂದಳಕೆ
ಬಿದಿಗೆ ಚಂದ್ರಮನಾಗಿ
ನಿತ್ಯ ಚೇತನವ ನೀಡಿ
ಮನವನನುಗೊಳಿಸು ನೀ
ಹೇ ಶಕ್ತಿಯೇ.....!!!
= ಬನವಾಸಿ ಸೋಮಶೇಖರ್.
   25-01-2012

10 comments:

  1. ಸೋಮಣ್ಣ, ತಿಂಗಳಬೆಳಕಿನ ಹಿತಭಾವ, ಸರಳ ಸುಮಧುರ ಅನುಭೂತಿ ನಿಮ್ಮ ಕವಿತೆಯೊಳಗೆ ನಿಂತದ್ದು ಓದುಗ ಮನಸಿಗೆ ಸಂತಸ ನೀಡುತ್ತವೆ.

    ReplyDelete
  2. ಗೆಳೆಯ ಬನವಾಸಿ, ಲವ್ಲೀ ರಚನೆ ಇದು.
    ಇಂತಹ ಪ್ರೇಮೋತ್ಕರ್ಷದ ಕವನ,
    ತಲುಪ ಬೇಕಿರುವಾಕೆಗೆ ಮುಟ್ಟಿದರೇ
    ಕವನದ ಹುಟ್ಟಿಗೂ ಸಾರ್ಥಕ್ಯ!

    ReplyDelete
    Replies
    1. ಧನ್ಯವಾದ ಮಾನ್ಯ ಪಲವಳ್ಳಿ ಕವಿ ಮಾನ್ಯರಿಗೆ.

      Delete
  3. ತುಂಬಾ ಸುಂದರವಾದ ಕವಿತೆ ಸೋಮಣ್ಣ.. ಭಾವಗಳಿಗೆ ರೆಕ್ಕೆ ನೀಡಿ ಹಾರಿಸುವ ನಿಮ್ಮ ಪರಿ ಕವಿತೆಯ ಒಡಲನ್ನು ಓದುಗನ ಮನಕ್ಕೆ ನುಗ್ಗಿಸುತ್ತದೆ..:) ಆಸೆಯನ್ನು ’ಬೆಳದಿಂಗಳಾಗಿ ಬಾ’ ಎಮ್ದು ಸ್ವಾಗತಿಸಿದ ಕವಿತೆ ತುಂಬಾ ಸುಂದರ ಅನುಭೂತಿಗಳನ್ನು ಅಸ್ವಾದನೆಗೆ ನೀಡುತ್ತದೆ.. ಆಸೆಯ ಪರಿಣಾಮಗಳನ್ನು ಪ್ರತಿಬಿಂಬಿಸಿ, ಅದು ಸೃಷ್ಟಿಸುವ ದುಗುಡ ದುಮ್ಮಾನಗಳ ಆಳವನ್ನು ತೆರೆದಿಟ್ಟು ’ಖುಷಿಯನ್ನು ಮಾತ್ರ ನೀಡುವ ಬೆಳದಿಂಗಳಾಗಿ ಬಾ’ ಎಂಬ ಕವಿಮನದ ಆಶಯ ತುಂಬಾ ಹಿಡಿಸಿತು.. ಪದಗಳ ಪ್ರಯೋಗ ಪಕ್ವವೆನಿಸುತ್ತದೆ.. ಮತ್ತೆ ಕವಿತೆಯಲ್ಲಿನ ತಿಳಿಯಾದ ಭಾವ ಸ್ರಾವ ಮನಮುಟ್ಟೂತ್ತದೆ.. ತುಂಬಾ ಹಿಡಿಸಿತು ಕವಿತೆ..:)))
    ಬದುಕಿನೀ ಬಾಂದಳಕೆ
    ಬಿದಿಗೆ ಚಂದ್ರಮನಾಗಿ
    ನಿತ್ಯ ಚೇತನವ ನೀಡಿ
    ಮನವನನುಗೊಳಿಸು ನೀ
    ಹೇ ಶಕ್ತಿಯೇ.....!!!
    ಈ ಸಾಲುಗಳು ಕವಿತೆಗೆ ಒಂದು ಪರಿಪೂರ್ಣತೆ ನೀಡಿದೆ.. ತುಂಬಾ ಸೊಗಸಾದ ಕವಿತೆ..:)

    ReplyDelete
    Replies
    1. ಧನ್ಯವಾದ ಪ್ರಸಾದು ತುಂಬಾ ಸೊಗಸಾಗಿ ಹೇಳಿದ್ದೀರಿ.

      Delete
  4. ಭಾವಪೂರ್ಣ ಕವಿತೆ ಸರ್.. ಪದೇ ಪದೇ ಓದಿದೆವು ಆರಾಮಾಗಿ ಕೂತು , ಪ್ರಶಾಂತ ಮನಸ್ಸಿನಿಂದ.. ನಿಮ್ಮ ಕವಿತೆಗಳ ಸೊಗಸನ್ನು ಸವಿಯಲು , ಕೆಲಸದ ಒತ್ತಡಗಳಿಲ್ಲದ , ಶಾಂತಿಯುತವಾದ ಮನಸ್ಸಿರಬೇಕು.. ಆಗಲೇ ಕವಿತೆಯ ಒಳಾರ್ಥಗಳು ಸರಳವಾಗಿ ಲಭಿಸುತ್ತವೆ.. :)
    (ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಕೋರುತ್ತ).....
    ಈ ಕವಿತೆಯಲ್ಲಿ ಚಿತ್ರಿಸಿರುವ , ಮಾನವನ ಆಸೆಗಳ ಪರಿಣಾಮಗಳು ಮತ್ತು ಮನಸ್ಸು ಬಯಸುವ ಒಂದು ವಿಶೇಷ ಪರಿಯ ಶಾಂತಿ ನೆಮ್ಮದಿಗಳ ಜೀವನ ಹಾಗು ಅದರ ಇತಿ ಮಿತಿಗಳನ್ನು ವರ್ಣಿಸುತ್ತಾ .. ಭಗವಂತನಲ್ಲಿ ಬಯಕೆಗಳ ಪ್ರಾರ್ಥನೆ , ಪ್ರೀತಿಯ ನುಡಿಗಳು .. ತುಂಬಾ ಮನ ಮಿಡಿತದ ಕವಿತೆ ಸರ್.. :)

    ReplyDelete
    Replies
    1. ಗೆಳೆಯ ಪ್ರಶಾಂತ ನನ್ನ ಮೇಲಿನ ಒಲವನ್ನು ಅಕ್ಷರಗಳ ಮೂಲಕ ಹಂಚಿಕೊಂಡಿದ್ದೀರಿ.ನಾ ಆಭಾರಿ.

      Delete
  5. ಉತ್ತಮ ಕಾವ್ಯದ ಅಭೀಕ್ಷೆ ಹೊಂದಿರುವ ಮೃದುಲ ಭಾವ ಹೃದಯದ ಮಾತುಗಳು ಇಲ್ಲಿ ಕಂಡೆನು.ಒಂದು ವಿಚಾರದಂತೆ ಇಂತಹ ಭಾವಗಳನ್ನು ಸೂಕ್ಷ್ಮಗಳಿಗೆ ಅದ್ದುವುದು ತುಂಬಾ ತ್ರಾಸದ ಕೆಲಸ. ಅದೇ ರೀತಿ ತಾಳ್ಮೆಯಿಲ್ಲದ ಹೃದಯ ಅದರ ಆಳಕ್ಕೆ ಇಳಿದು ಆಸ್ವಾಧಿಸುವುದೂ ಕಷ್ಟ.ಆಳಕ್ಕೆ ಇಳಿದಷ್ಟೂ ತೆರೆದುಕೊಳ್ಳುವ ಭಾವ ಸಮುದ್ರದ ಅಲೆಗಳ ಬಡಿತ ಪ್ರತೀ ಸಾಲಿನಲ್ಲಿ ಕಂಡು ಖುಷಿ ಆಯಿತು.
    ಕವಿತೆ ಕಟ್ಟಲು ಬೇಕಾದ ಧ್ಯಾನ,ಭಾವದ ತಪಸ್ಸು, ಕವಿತೆಯ ಲಯದಲ್ಲಿ ಬರುವ ಗೊಂದಲದ ನಿವಾರಣೆಗೆ ನೀವು ಪಡುವ ಶ್ರಮ ತುಂಬಾ ತದೇಕ ಚಿಂತನೆಯ ಎಲ್ಲಾ ಗುಣಗಳೂ ನಿಮ್ಮಲ್ಲಿ ಇವೆ ಎಂದು ಸಂತಸಗೊಂಡಿದ್ದೇನೆ. ಉತ್ತಮ ಕಾವ್ಯವನ್ನು ಎದುರು ನೋಡುತ್ತೇನೆ. ಶುಭವಾಗಲಿ.

    ReplyDelete
    Replies
    1. ರವಿ ಸರ್,ನೀವು ಅಭಿಪ್ರಾಯಿಸಿದರಂತೂ ಮುಗಿದೇ ಹೋಯಿತು,ನನ್ನ ಮನ ಸಂತೋಷಕ್ಕೆ ಇನ್ನೇನು ಬೇಕು.ನನ್ನ ಮನದಲ್ಲಾದ ಭಾವನೆಗಳಿಗೆ ನಿಜ ಅರ್ಥ ಕಲ್ಪಿಸಿದ್ದೀರಿ,ಮನ ಸಂತೋಷ ಪಡಿಸಿದ್ದೀರಿ.ಧನ್ಯವಾದಗಳು.

      Delete