Tuesday 10 April 2012

ಕಪ್ಪು ಮೋಡ: ಕೆಂಪು ಚುಕ್ಕೆ! ಹಿಂದೂ ಸಮಾಜ ಚಿಕಿತ್ಸಕ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್.

ಕಪ್ಪು ಕಪ್ಪು ಮೋಡದಲಿ
ಕಗ್ಗತ್ತಲ ಬಾನಿನಲಿ
ಮೂಡಿತೊಂದು ಕೆಂಪು ಚುಕ್ಕೆಯೋ
ಓ.........ರಾಮಣ್ಣ ಬಡವರೆದೆಯ ಆಶಾಕಿರಣವೋ!

ಈಗ್ಗೆ ಒಂದು ನೂರಾ ಇಪ್ಪತ್ತೊಂದು ವರ್ಷಗಳ ಹಿಂದೆ ಕಬೀರ್ ಪಂಥದ ತೇಜಃಸ್ವರೂಪಿಯಾದ ಸಾಧುವರೇಣ್ಯರು ಮೋಹಿಗೆ ಭೇಟಿ ಇತ್ತ ಸಂದರ್ಭದಲ್ಲಿ ಅಲ್ಲಿಯೇ ಸೈನಿಕ ಶಾಲೆಯ ಮುಖ್ಯೋಪಾಧ್ಯಾಯ ವೃತ್ತಿಯಲ್ಲಿದ್ದ ರಾಮಜೀ ಸಕ್ಪಾಲ ಮತ್ತು ಕಬೀರ್ ಪಂಥಾನುಯಾಯಿ ದೈವ ಭಕ್ತೆ ಭೀಮಾಬಾಯಿ ದಂಪತಿಗಳಿಗೆ ದರ್ಶನ ಭಾಗ್ಯ ನೀಡಿ ಅವರ ಮೇಲೆ ಕೃಪಾವಲೋಕನ ಬೀರಿ ಹೃದಯ ತುಂಬಿ ಹರಸುತ್ತಾರೆ.ಹದಿಮೂರು ಮಕ್ಕಳನ್ನು ಪಡೆದಿದ್ದ ರಾಮಜೀ ಸಂಸಾರದ ತಾಪತ್ರಯಗಳನ್ನು ಆ ಸಾಧುಗಳ ಬಳಿ ಹೇಳಿಕೊಳ್ಳುತ್ತಾ ಬರುವ ಅಲ್ಪ ಸಂಬಳದಿಂದ ಮಕ್ಕಳನ್ನು ಸಾಕುವುದು ಕಷ್ಟವಾಗುವುದು ಎಂಬ ವಾಸ್ತವವನ್ನು,ಭಕ್ತಿ ಭಾವದಿಂದ ಅಂತರಂಗವನ್ನು ಬಿಚ್ಚಿಡುತ್ತಾರೆ.ಸಾಧುಗಳು ಅವರನ್ನು ಪ್ರೀತಿಯಿಂದ ಸಂತೈಸುತ್ತಾ ಆ ಬಗ್ಗೆ ಚಿಂತಿಸಬೇಡ,"ನೀನೂ ಮತ್ತು ನಿನ್ನ ಹೆಂಡತಿಯೂ ಪುಣ್ಯಶಾಲಿಗಳು.ಮಹಾ ಪುರುಷನೊಬ್ಬ ನಿಮಗೆ ಮಗನಾಗಿ ಜನಿಸುತ್ತಾನೆ.ನಿನ್ನ ವಂಶಕ್ಕವನು ಬೆಳಕಾಗುತ್ತಾನೆ.ಜಗತ್ತಿನಲ್ಲೆಲ್ಲ ಅವನ ಕೀರ್ತಿ ಪಸರಿಸಿ ಜಗದ್ವಿಖ್ಯಾತವಾಗುವುದು"ಎಂಬ ದಿವ್ಯವಾಣಿಯೊಂದಿಗೆ ಆಶೀರ್ವದಿಸಿ ಮರಳುತ್ತಾರೆ.

ಆಗ ಭಾರತ ದೇಶದ ಅಸಂಖ್ಯಾತ ಶೋಷಿತರು,ತುಳಿತಕ್ಕೊಳಗಾದವರ ಬದುಕಿನ ತುಂಬೆಲ್ಲ ಬರೀ ಕಗ್ಗತ್ತಲು ಆವರಿಸಿಕೊಂಡಿತ್ತು!ಜಾತೀಯತೆ,ಅಸಮಾನತೆ,ಅಸ್ಪೃಶ್ಯತೆ ಹಸಿ ಹಸಿಯಾಗಿ ತಾಂಡವಾಡುತ್ತಿತ್ತು.ಮಡಿ ಮೈಲಿಗೆಯ ಭಾವನೆಯು ವಿಸ್ತಾರವಾಗಿ ಚಾಚಿಕೊಂಡು ಪೆಡಂಭೂತವಾಗಿ ಕಾಡುತ್ತಿತ್ತು.ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ ಎಂಬ ಚಾತುರ್ವರ್ಣ ಪದ್ಧತಿಯು ಎಲ್ಲೆಡೆ ತನ್ನ ಛಾಪನ್ನು ಗಟ್ಟಿಯಾಗಿ ಭದ್ರಗೊಳಿಸಿಕೊಂಡಿತ್ತು.ಹೊಲೆಯ,ಮಹರ್,ಮಾದಿಗ,ಸಮಗಾರ,ಚಮಗಾರ,ಚಲವಾದಿ,ಚನ್ನಯ್ಯ,ಡೋಹರ,ಮೋಚಿ,ಮಚ್ಚೆಗಾರ,
ಭಂಗಿ,ಮಾಂಗ್,ಮಾಲಾ,ಮುಲ್ಲರ್,ಪರಯಾ,ಪುಲಯ,ಜಾತವ,ವಾಲ್ಮೀಕಿ,ದೋಮ್,ಮೌರ್ಯ,ಇತ್ಯಾದಿ ಇತ್ಯಾದಿ......ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ಹೆಸರುಗಳಿಂದ ಕರೆಯಲ್ಪಡುತ್ತಿರುವ 'ಅಸ್ಪೃಶ್ಯರು' (ಸವರ್ಣಿಯರು ಇಟ್ಟ ಹೆಸರು) ಎಂಬ 'ನಾಗಾ ಜನಾಂಗ' ಸಾಮಾಜಿಕ,ಆರ್ಥಿಕ,ಶೈಕ್ಷಣಿಕ,ಸಾಂಸ್ಕೃತಿಕ,ರಾಜಕೀಯ ಇತ್ಯಾದಿ ಎಲ್ಲಾ ರಂಗದಲ್ಲೂ ಶೋಷಣೆ-ಅಸಮಾನತೆಗೆ ತುತ್ತಾಗಿ ಶೋಚನೀಯ ಸ್ಥಿತಿಯನ್ನು ಅನುಭವಿಸುತ್ತಿತ್ತು.ಇಂಥ ಅನೀತಿ,ಅಜ್ಞಾನ,ಅನ್ಯಾಯ,ಮೌಢ್ಯಾಂಧಕಾರ ಕವಿದುಕೊಂಡ ಕಗ್ಗತ್ತಲ ಬಾನಿನಲ್ಲಿ ಬಂಡಾಯದ ಮತ್ತು ಕ್ರಾಂತಿಯ'ಕೆಂಪು'ದೃವತಾರೆಯಾಗಿ ದಲಿತರು-ದಮನಕ್ಕೊಳಗಾದವರ ಬದುಕಿನ ಹೊಸ ಆಶಾ ಕಿರಣವಾಗಿ ಭೀಮಾಬಾಯಿ ರಾಮಜೀ ದಂಪತಿಗಳಿಗೆ ಹದಿನಾಲ್ಕನೇ ಮಗನಾಗಿ 1891ರ ಏಪ್ರೀಲ್ 14 ರಂದು ಡಾ.ಭೀಮರಾವ್ ರಾಮಜೀ ಅಂಬೇಡ್ಕರ್ ಜನ್ಮ ತಾಳುವ ಮೂಲಕ ಸಾಧುವರೇಣ್ಯರು ಹೇಳಿದ ಭವಿಷ್ಯವಾಣಿ ಅಕ್ಷರಶಃ ದಿಟವಾಯಿತು.ಈ ಅರ್ಥದಲ್ಲಿ ನಾನು ಲೇಖನದ ಪ್ರಾಂಭದಲ್ಲಿ ಉಪಯೋಗಿಸಿಕೊಂಡಿರುವ ಕವಿ ಸಾಲುಗಳು ಅರ್ಥಪೂರ್ಣವಾಗಿದೆ.

ಚಿಕ್ಕಂದಿನಲ್ಲಿಯೇ ಅತ್ಯುತ್ತಮ ಸಂಸ್ಕಾರದ ಸುಸಂಸ್ಕೃತ ಮನೆತನದ ವಾತಾವರಣದಲ್ಲಿ ಬೆಳೆದ ಅಂಬೇಡ್ಕರ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ದಪೋಲಿ,ಸತಾರ,ಮುಂಬೈಗಳಲ್ಲಿ ಮುಗಿಸಿಕೊಂಡ ನಂತರ ಮುಂಬೈ,ಕೋಲಂಬಿಯಾ,ಲಂಡನ್ ಮತ್ತು ಬಾನ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗವನ್ನು ಪೂರೈಸಿಕೊಂಡು, ಅದ್ವಿತೀಯ ಆದರ್ಶ ಮತ್ತು ಮಹಾನ್ ಮುತ್ಸದ್ಧಿ,ಚಿಂತಕ,ಚಿಕಿತ್ಸಕ,ವಿದ್ವಾಂಸರಾಗಿ ಹೊರಹೊಮ್ಮಿದ್ದೊಂದು ಯಶೋಗಾಥೆ ಎನ್ನುವುದಕ್ಕಿಂತ ಸ್ವಾಭಿಮಾನ,ಸತತಾಭ್ಯಾಸದ ಮನೋವೃತ್ತಿಯೇ ಕಾರಣವೆನ್ನಬೇಕು.ನಂತರ ಬ್ಯಾರಿಷ್ಟರ್ ಪದವಿ ಪಡೆದು ಅವರು ಮುಂಬೈ ಉಚ್ಛ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಅಲ್ಲಿನ ಸರ್ಕಾರಿ ಕಾನೂನು ವಿಶ್ವವಿದ್ಯಾಲಯದ ಪ್ರಾಚಾರ್ಯರಾಗಿ ಹೆಗ್ಗಳಿಕೆಯ ಸೇವೆಗೈದರು.


ಹಿಂದು ಸಮಾಜದ ದುರ್ಬಲ, ಹಿಂದುಳಿದ,ಅಲ್ಪ ಸಂಖ್ಯಾತ ಮತ್ತು ಶೋಷಿತ-ನಿರ್ಲಕ್ಷಿತ ಅಸ್ಪೃಶ್ಯರ ಸಂಕಷ್ಟಕ್ಕೆ ನೋವಿಗೆ ಮುಖವಾಣಿಯಾಗಿ ನಿಂತವರು ಅಂಬೇಡ್ಕರ್. ತುಳಿತಕ್ಕೊಳಗಾದ ನೊಂದ ಜನಾಂಗಗಳ ಏಳಿಗೆಗಾಗಿ ಪರಿಶ್ರಮ ಪಟ್ಟು ಪರಮಸಾಧನೆಗೈದರು.ತಮ್ಮ ಇಡೀ ಜೀವಿತವನ್ನೇ ಅವರಿಗೆ ಅರಿವು,ತಿಳುವಳಿಕೆ ನೀಡುವುದಕ್ಕಾಗಿ ಮುಡಿಪಾಗಿಸಿಕೊಂಡರು.ವೇದ,ಶಾಸ್ತ್ರ,ಆಗಮ ಗ್ರಂಥಗಳನ್ನು,ಪೌರಾತ್ಯ-ಪಾಶ್ವಾತ್ಯ ವಿದ್ವತ್ಪೂರ್ಣ ಅಧ್ಯಯನ-ಅಧ್ಯಾಪನ ನಡೆಸಿ ಕರಗತಮಾಡಿಕೊಂಡ ಮಹಾ ಮೇಧಾವಿ ಅವರು.ದಲಿತ ಜನಾಂಗಕ್ಕೆ ನಾಗರಿಕ ಹಾಗೂ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡಲು ಜೀವನಪೂರ್ತಿ ಹೋರಾಟ ನಡೆಸಿದರು.ದುಂಡುಮೇಜಿನ ಪರಿಷತ್ತಿಗೆ ಹೋಗಿ ಬಂದರು.'ಹೋಂ ರೂಲ್ ' ಬೇಡಿಕೆಗೆ ಒಪ್ಪದೇ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕೆಂದೂ ಅದರಲ್ಲಿ ದಲಿತ ವರ್ಗಕ್ಕೆ ಪೂರ್ಣ ರಕ್ಷಣೆ ಬೇಕೆಂದೂ ಹಠಕ್ಕೆ ಬಿದ್ದು ವಾದಿಸಿದರು.'ಜಾತಿವಾರು ತೀರ್ಪು'ಹೊರ ಬಂದಾಗ ಅದನ್ನು ಬದ್ಧವಾಗಿ ವಿರೋಧಿಸಿ ಮಹಾತ್ಮ ಗಾಂಧಿಜೀಯವರು ಅಮರಣಾಂತ ಉಪವಾಸ ಸತ್ಯಾಗ್ರಹದ ನಾಟಕ ಹೂಡಿ ಬಿಟ್ಟರು! ನಿಮ್ನ ಜನಾಂಗಕ್ಕೆ ಅಂಬೇಡ್ಕರ್ ಗೆದ್ದುಕೊಟ್ಟಿದ್ದ ರಾಜಕೀಯ ಹಕ್ಕುಗಳ ಪ್ರಭಾವವನ್ನು ಸಂಪೂರ್ಣವಾಗಿ ಕುಗ್ಗಿಸುವುದೇ ಗಾಂಧಿಜೀಯವರ ಉದ್ದೇಶವಾಗಿತ್ತು ಎಂಬುದರಲ್ಲಿ ಅಕ್ಷರಶಃ ಹುರುಳಿದೆ ಎನಿಸುವುದು.ಇಡೀ ದೇಶದ ಮಹಾತ್ಮನ ಜೀವಕ್ಕೆ ಅಂಬೇಡ್ಕರರಿಂದ ಕುತ್ತು ಬಂದೀತೆಂಬ ಅಪವಾದ ಬರಬಾರದೆಂದೂ ಮತ್ತು ಗಾಂಧೀಜಿಯವರ ಸೇವೆಯು ದೇಶಕ್ಕೆ ಅಗತ್ಯವಾಗಿರುವುದರಿಂದಲೂ ಅವರ ಅಭಿಮಾನಿಯಾಗಿದ್ದ ಕಾರಣವಾಗಿ 1932 ರ 'ಪೂನಾ ಒಪ್ಪಂದ' ವೆಂಬ ಪ್ರಸಿದ್ಧ ಒಡಂಬಡಿಕೆಗೆ ಬಾಬಾ ಸಾಹೇಬ್ ಅಂಬೇಡ್ಕರರು ಒಲ್ಲದ ಮನಸ್ಸಿನ ಅಂಕಿತ ಹಾಕಿ ತಾನೂ ಒಬ್ಬ ಪರಮ ನಿಷ್ಠ ದೇಶಭಕ್ತನಾಗಿರುವುದನ್ನು ತೋರಿಸಿಕೊಟ್ಟರು.

ರಾಜ್ಯಾಂಗ ರಚನಾ ಸಭೆಗೆ ಮುಂಬೈ ವಿಧಾನ ಸಭೆಗೆ ಸ್ಪರ್ಧಿಸಿ ಸೋತ ಅಂಬೇಡ್ಕರ್ 1946ರಲ್ಲಿ ಬಂಗಾಳ ವಿಧಾನ ಸಭೆಯಿಂದ ಆಯ್ಕೆಯಾದರು.ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿಯೂ ರಾಜ್ಯಾಂಗ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿಯೂ 1947ರಲ್ಲಿ ಆಯ್ಕೆಯಾದರು.ಹಿಂದುಗಳಿಗೆಲ್ಲ ಸಮಾನ ಕಾನೂನುಕ್ರಮವನ್ನು ಒದಗಿಸುವುದಕ್ಕಾಗಿ ಅವರು 'ಹಿಂದು ಕೋಡ್ 'ಬಿಲ್ಲನ್ನು ತಯಾರಿಸಿದರು.ಆದರೆ ದುರ್ದೈವದಿಂದ ಭಾರತ ಪ್ರಧಾನಿ ನೆಹರುರವರ ಬೆಂಬಲ ದೊರಕದ್ದರಿಂದ ಆ ಮಸೂದೆ ಪಾಸಾಗಲೇ ಇಲ್ಲ.ಈ ಕಾರಣದಿಂದಲೇ ಅವರು ದಲಿತ ವರ್ಗದವರ ಬಗ್ಗೆ ಸರ್ಕಾರವು ಹೊಂದಿದ್ದ ನಿಷ್ಕಾಳಜಿ,ನಿರಾಸಕ್ತಿಯನ್ನು ಅತ್ಯುಘ್ರವಾಗಿ ಖಂಡಿಸಿ ತಮ್ಮ ಸಚಿವ ಪದವಿಗೆ ರಾಜೀನಾಮೆ ಇತ್ತು ಹೊರಬಂದು ಸ್ವಾಭಿಮಾನವನ್ನು ಮೆರೆಯುತ್ತಾರೆ.

ಅವರ ಬದುಕು-ಭಾಷಣ.ಬರಹ-ಹೋರಾಟ,ಪ್ರಕಾಂಡ ಪಾಂಡಿತ್ಯ,ವ್ಯಕ್ತಿತ್ವದ ಕುರಿತು ಹೇಳಿದಷ್ಟೂ ಕಡಿಮೆ.ಇಂಥ ಒಬ್ಬ ಅಸಾಧರಣ,ನಿರ್ಭೀತ,ನಿರ್ಭೀಡೆಯ ಮಹಾನ್ ವ್ಯಕ್ತಿಯು ಧೀಃಶಕ್ತಿಯಾಗಿ ಮನುಕುಲದ ಇತಿಹಾಸದಲ್ಲಿ ಹುಟ್ಟಿ ಬಂದದ್ದೇ ಸರ್ವ ಶೋಷಣೆಯಿಂದಲೂ ಮುಕ್ತವಾದ ನವ ಸಮಾಜ ನಿರ್ಮಾಣ ಮಾಡಲು ಎನ್ನಲೇಬೇಕು.1935ರಲ್ಲಿ ನಾಸಿಕ್ ಜಿಲ್ಲೆಯ ಯಾವೋಲಾದಲ್ಲಿ ನಡೆದ ದಲಿತ ವರ್ಗಗಳ ಮಹಾ ಸಮ್ಮೇಳನದಲ್ಲಿ ಅವರು ಎಲ್ಲ ದಲಿತರೂ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸುವಂತೆ ಬಹಿರಂಗ ಕರೆ ನೀಡಿದರು."ನಾನು ಹಿಂದುವಾಗಿ ಹುಟ್ಟಿರುವೇನಾದರೂ ಹಿಂದುವಾಗಿ ಸಾಯಲಾರೆ" ಎಂಬ ಕ್ರಾಂತಿಕಾರಕ ಘೋಷಣೆ ಹೊರಹೊಮ್ಮಿದಾಗ ಎಲ್ಲ ಭಾರತೀಯರ ಹೃದಯ ಒಮ್ಮೆ ತಲ್ಲಣಗೊಂಡಿರಲೇ ಬೇಕು.ತಮ್ಮ ಅಂತರಾಳದ ಕೂಗಿಗೆ ಕಟಿಬದ್ಧರಾಗಿದ್ದ ಅವರು 1956 ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು.ಈ ಮೂಲಕ ಮಹಾ ಧಾರ್ಮಿಕ ಧುರೀಣರೂ  ದೇವನಾಂಪ್ರಿಯ ಚಕ್ರಚರ್ತಿ ಅಶೋಕ ಮಹಾಶಯನ ತರುವಾಯ ಭಾರತದಲ್ಲಿ ಬೌದ್ಧ ಮತದ ಪುನರುದ್ಧಾರಕರೂ ಆಗಿ ಬೋಧೀಸತ್ವ ಅಂಬೇಡ್ಕರಾದರು.

ದೀನದಲಿತರು,ವಂಚಿತರು,ದಬ್ಬಾಳಿಕೆಗೊಳಗಾದ ಸ್ತ್ರೀಯರು......ಇವರೆಲ್ಲರ ವಿಮೋಚನೆಗಾಗಿಯೇ ಅಂಬೇಡ್ಕರ ಬದುಕಿದರು,ದುಡಿದರು.ಭಾರತದ ಐಕ್ಯ ಹಾಗೂ ಪುನರ್ ಘಟನೆಗಾಗಿ ಹೋರಾಡಿದಿ ಈ ವಿಶ್ವಮಾನವ,ಸಾಮಾಜಿಕ ನ್ಯಾಯದ ಹರಿಕಾರ ಹೊಸದಿಲ್ಲಿಯ ಅಲಿಪೋರ್ ರಸ್ತೆಯಲ್ಲಿಯ ತಮ್ಮ 26 ನೇ ಕ್ರಮ ಸಂಖ್ಯೆಯ ನಿವಾಸದಲ್ಲಿ 1956 ನೇ ಡಿಸೆಂಬರ್ 6 ರಂದು ನಿರ್ವಾಣ ಹೊಂದಿದರು.

 = ಬನವಾಸಿ ಸೋಮಶೇಖರ್,ಮಂಗಳೂರು.

7 comments:

  1. ಭರವಸೆ ಇಟ್ಟಿದ್ದೆ ಬರವಣಿಗೆಯಲ್ಲಿ. ಉತ್ತಮ ಶೈಲಿ ಮತ್ತು ಚಿಂತನೆ ನಿಮ್ಮ ಲೇಖನಿಯನ್ನು ಓದಿಸಿಕೊಂಡು ಹೋಗುವ ತಾಕತ್ತನ್ನು ಪಡೆದಿದೆ.ನಾನು ಹಲವು ಇಂತಹ ಮತ್ತೆ ಮತ್ತೆ ಪುನರಾವರ್ತನೆ ಆಗವ ಮಹನಿಯರ ಕುರಿತ ಬರಹ ಓದುತ್ತಿದ್ದೇನೆ. ಒಂದೇ ವಸ್ತು ವಿಷಯವನ್ನು ವಿಭಿನ್ನ ರೀತಿಯಲ್ಲಿ ಬರೆದು ಮುಟ್ಟಿಸುವುದು ಬರಹಗಾರನ ತಾಕತ್ತು. ಅದು ಓದುಗನ ಮನಸ್ಸಿಗೆ ಹಿತವಾಗುವಂತೆ. ಈ ಬರಹ ಹಾಗೇ ಓದಿಸಿಕೊಂಡು ಹೋಗುವಂತಹದ್ದು. ಶುಭವಾಗಲಿ.

    ReplyDelete
    Replies
    1. ಸರ್ ನನ್ನ ಬರಹವನ್ನು ತಕ್ಷಣಕ್ಕೆ ಓದಿ ಪ್ರೋತ್ಸಾಹಿಸಿ ಉತ್ತೇಜನ ನೀಡಿದ್ದೀರಿ.ತುಂಬಾ ಸಂತೋಷವಾಯಿತು.ನಿಮ್ಮ ಹಾರೈಕೆ ಸದಾ ಇರಲಿ.ಈ ಲೇಖನ 14-04-2012 ರ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇನೆ.

      Delete
  2. ಸಕಾಲಿಕ ಲೇಖನ ಸೋಮಣ್ಣ.. ಬರಹದ ಪ್ರಖರತೆ ತೀಕ್ಷ್ಣವಾಗಿದೆ ಮತ್ತು ಮನ ಮುಟ್ಟುವಂತಿದ್ದು ಎಲ್ಲರಲ್ಲೂ ಇರಬಹುದಾದ ಮಾನವತಾವಾದಿಯನ್ನು ಬಡಿದೆಬ್ಬಿಸುತ್ತದೆ.. ಇದನ್ನು ಓದುತ್ತಿದ್ದಂತೆ ಕುವಂಪುರವರ ’ಏನಾದರಾಗು, ಮೊದಲು ಮಾನವನಾಗು’ ಎಂಬ ಸಾಲು ನೆನಪಿಗೆ ಬಂತು.. ಸಮಾನತೆಯ ದಿವ್ಯ ಸಮಾಜದ ನಿರ್ಮಾಣಕ್ಕೆ ಅಗಲಿರುಳು ದುಡಿದ ಮಹಾ ಮಾನವತಾವಾದಿ ಅಂಬೇಡ್ಕರ್ ರವರು.. ಅವರ ಗಟ್ಟಿತನ ಮತ್ತು ಸತ್ವಯುತ ಜೀವನದಿಂದ ಭಾರತೀಯ ಇತಿಹಾಸದಲ್ಲಿ ಎಂದೂ ಅಜರಾಮರರಾಗಿರುವ ಧೀಮಂತ ಕಿರಣಕ್ಕೆ ಅವರ ಹುಟ್ಟುಹಬ್ಬದ ದಿನಕ್ಕಾಗಿ ಬರೆದ ಲೇಖನ ನುಡಿನಮನದಂತೆ ಮೂಡಿ ನಿಂತಿದೆ.. ಕನ್ನಡ ಪ್ರಭಾದಲ್ಲಿನ ನಿಮ್ಮ ಲೇಖನವನ್ನು ಓದಿದೆ.. ಅಭಿನಂದನೆಗಳು..:))

    ReplyDelete
    Replies
    1. ಧನ್ಯವಾದ ನನ್ನ ಪ್ರೀತಿಯ ಪ್ರಸಾದು.

      Delete
  3. ಆಂಬೇಡ್ಕರ್ ವ್ಯಕ್ತಿ ಬದುಕನ್ನು ಒಮ್ಮೆ ಕಣ್ಣು ಮುಚ್ಚಿ ನೆನದುಕೊಂಡರೆ ನಮಗೆ ಕಾಣುವುದು..ಅವರ ಆಜಾನುಬಾಹು ದೇಹ, ಗಂಭೀರ ವದನ, ಗಾಢ ಚಿಂತನೆಯ ನೋಟ, ಭವಿಷ್ಯದ ದೊಡ್ಡ ಕನಸುಗಳು, ಶಿಸ್ತಿನ ಧಿರಿಸು, ಸರಸ್ವತಿ ಪುತ್ರನೆನ್ನಲು ಕೈಯಲ್ಲಿ ಸದಾ ಪುಸ್ತಕ,
    ಇವೆಲ್ಲಾ ಅಂಶಗಳಿಂದ ದಾದಾಸಾಹೇಬರನ್ನು ಗೌರವಿಸಹುದೇ ಅಥವಾ ಆಂಬೇಡ್ಕರ್ ಅಂದರೆ ಇಷ್ಟೇನಾ..?
    ನವಭಾರತದ ಮುನ್ನುಡಿಗೆ ಆಂಬೇಡ್ಕರ್ ಹಾಕಿದ ಬುನಾದಿ ಇನ್ನು ಏಷ್ಟು ಸಾವಿರ ಮರುಷಗಳು ಕಳೆದರೂ, ಅವರು ಹಾಕಿದ ಅಡಿಪಾಯವನ್ನು ಅಲುಗಾಡಿಸುವುದು ತುಂಬಾ ಕಷ್ಟ. ಅದು ಆಂಬೇಡ್ಕರ್ ರ ಶಕ್ತಿ. ಅಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ
    ಕಲ್ಪನೆಯ ಜೊತೆಗೆ ಮೊಳೆತು ನಿಂತಿದ್ದು ದೇಶದ ಕಾನೂನು/ಸಂವಿಧಾನ. ಪ್ರಜಾಪ್ರಭುತ್ವದ ಕಲ್ಪನೆಗೆ ಸಂವಿಧಾನ ಬೇಕೆ ಬೇಕು ಅನ್ನುವ ಸಂಧರ್ಭವಾಗಿತ್ತು. ಪ್ರಜಾಪ್ರಭುತ್ವ ಎಂಬ ಮರಕ್ಕೆ ಸಂವಿಧಾನ ಎಂಬ ಬೇರನ್ನು ಕಲ್ಸಿಸಿಕೊಟ್ಟವರು ಆಂಬೇಡ್ಕರ್.
    ಪ್ರಜಾಪ್ರಭುತ್ವ ಇಂದು ಸುಭದ್ರವಾಗಿ ನಮ್ಮ ನಿಮ್ಮ ನಡುವೆ ಆಲದ ಮರದಂತೆ ಬೆಳೆದು ನಿಂತಿದೆ ಅಂದರೆ ಅದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ. ಪ್ರಜಾಪ್ರಭುತ್ವ ಆಡಳಿತವನ್ನು ಸಂಘಟಿಸಲು ನೂರಾರು ನಾಯಕರು ಶ್ರಮವಹಿಸಿ ದುಡಿದರೂ, ಅದಕ್ಕೆ ಸಮಾನವಾಗಿ ಸಂವಿಧಾನವನ್ನು ರಚಿಸಿದ ಏಕೈಕ ವ್ಯಕ್ತಿ ಆಂಬೇಡ್ಕರ್. ಇದು ಆಂಬೇಡ್ಕರ್ ಎಂಬ ಶಕ್ತಿಯ ಬಗ್ಗೆ ಹೇಳಬೇಕಾದ ಮಾತು.
    ರಾಷ್ಟ್ರೀಯ ನಾಯಕರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ರಾಜಕೀಯ, ವೈಯಕ್ತಿಕನಿಲುವುಗಳಿಗೂ ಆಂಬೇಡ್ಕರ್ ರ ನಿಲುವುಗಳಿಗೂ ಅನೇಕ ಸಾಮ್ಯತೆಗಳಿದ್ದರೂ ಆಂಬೇಡ್ಕರ್ ಮಾತ್ರ ಯಾವುದಕ್ಕೂ ಎದೆಗುಂದದೇ ತಮ್ಮ ಪಾಡಿಗೆ ತಾವು ಅಂದುಕೊಂಡಿದ್ದನ್ನು ಸಾಧಿಸಿದರು. ನೆಹರು, ಗಾಂಧಿ, ವಿವೇಕಾನಂದರ ಚಿಂತನೆಗಳು ಹೆಚ್ಚಾಗಿಯೇ ರಾಷ್ಟ್ರದ ಜನತೆ, ಪಠ್ಯಪುಸ್ತಕಗಳಲ್ಲಿ ಹೇರಿಕೆಯಾಗಿ ಕಂಡವು. ಮೇಲುನೋಟಕ್ಕೆ ಇದರಲ್ಲಿ ರಾಜಕೀಯ, ಹಿಂದುತ್ವದ ನಿಲುವುಗಳು ಹೆಚ್ಚಾಗಿಯೇ ಕೆಲಸಮಾಡಿವೆ ಅಂತ ನಮಗನಿಸಿದ್ದರೂ ,ಆಂಬೇಡ್ಕರ್ ಕೂಡ ವಿಶ್ವಮಾನವರಾಗಿ ಚಿಂತಿಸಿದ್ದರು ಅಂತ ಏಕಮುಖವಾಗಿದ್ದ ಕೆಲವರಿಗೆ ಕಾಣಲೇ ಇಲ್ಲ. ಆಂಬೇಡ್ಕರ್ ಕೇವಲ ದಲಿತರು, ಶೋಷಿತರ ಪರ ಮಾತ್ರ ಹೆಚ್ಚಿನವರು ಅಂದುಕೊಂಡರು. ಆಂಬೇಡ್ಕರ್ ಸಂವಿಧಾನವನ್ನು ರೂಪಿಸುವಾಗ ವಸುದೈವ ಕುಟುಂಬಕಂ ಅಂತ ಅಂದುಕೊಂಡೇ ಕಾನೂನು ರೂಪಿಸಿದ್ದರು. ಶೋಷಣೆಯ ವಿರುದ್ಧ ಉಗ್ರ ಹೋರಾಟ ಮಾಡಿದರೂ, ಅವರಲ್ಲಿನ ಸಮಾನತೆಯ ಮಹತ್ವವನ್ನು ಹೆಚ್ಚಿನವರು ಗುರುತಿಸದೇ ಇರದೇ ಇರುವುದು ತುಂಬಾ ನೋವಿನ ಸಂಗತಿ.
    ಆಂಬೇಡ್ಕರ್ ರಚಿಸಿದ ಸಂವಿಧಾನ, ಕಾನೂನು ಪದ್ಧತಿಗಳು ಇಂದಿನವರೆಗೆ ಏಷ್ಟು ಬಾರಿ ತಿದ್ದುಪಡಿಯಾಗಿದೆಯೋ? ಆಂಬೇಡ್ಕರ್ ರೂಪಿಸಿದ ಮೂಲ ಕಾನೂನುಗಳು ಇಂದಿಗೂ ಇದ್ದಾವೋ, ಇಲ್ಲವೋ? ಅದನ್ನು ನಮ್ಮ ಸ್ವಾರ್ಥ ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ಸಂಬಂಧಿಸಿದಂತೆ, ಬದಲಾಯಿಸಿಕೊಂಡಿದ್ದಾರೋ, ಈ ನಿಟ್ಟಿನಲ್ಲಿ ತಜ್ಷರು ಆಂಬೇಡ್ಕರ್ ರಚಿಸಿದ ಸಂವಿಧಾನ, ಇಂದು ಏಷ್ಟರಮಟ್ಟಿಗೆ ನಮ್ಮವರು ಶ್ರೀಸಾಮಾನ್ಯರಿಗೊಸ್ಕರ ಉಳಿಸಿಕೊಂಡಿದ್ದಾರೆ ಅನ್ನುವುದು ಚರ್ಚೆಯಾದರೆ ಚೆನ್ನ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರವಾದ ಅಧ್ಯಯನ ಕೈಗೊಂಡರೆ, ಇಲ್ಲಿವರೆಗೆ ತಿದ್ದುಪಡಿಯಾದ ಕಾನೂನುಗಳ ಮೇಲೆ ದೊಡ್ಡ ವರದಿಯೇ ಸಿಗಬಹುದು. ಈ ನಿಟ್ಟಿನಲ್ಲಿ ತಜ್ಷರು ಗಮನಹರಿಸಿದರೆ ಚೆನ್ನ. ಎಲ್ಲರಿಗೂ ಮಾಹಿತಿ ದೊರಕಿದಂತಾಗುತ್ತದೆ.
    ಇಂದು ದಲಿತ ಚಳುವಳಿಗಳು, ಹೋರಾಟಗಳು ಅಂತ ಹೇಳಿಕೊಂಡು ಅಲ್ಲಿ ಆಂಬೇಡ್ಕರ್ ಭಾವಚಿತ್ರವನ್ನು ಅನಾವಶ್ಯಕವಾಗಿ ಬಳಸಿಕೊಳ್ಳುವುದನ್ನು ಕಾಣಬಹುದು. ಇದರಲ್ಲಿ ಅವರ ಉದ್ದೇಶ ಮತ್ತು ಹೋರಾಟದ ಒಳಾರ್ಥವನ್ನು ಆ ದೇವರೇ ಬಲ್ಲ. ಇಂತವುಗಳಿಂದ ಸಮಸ್ಯೆಗಳು ಖಂಡಿತ ಪರಿಹಾರವಾದಂತೆ ಕಾಣುವುದಿಲ್ಲ.
    ಇತ್ತೀಚಿನ ದಿನಗಳು ಅಂದರೆ ಕೆಲವು ತಿಂಗಳ ಹಿಂದೆ, ಮಾನವಧರ್ಮಪೀಠದ ನಿಡುಮಾಡುಡಿ ಸ್ವಾಮೀಜಿಯವರು `ದಲಿತರು ಹಿಂದುಗಳಲ್ಲ' ಅಂತ ಹೇಳಿಕೆಯನ್ನು ನೀಡುತ್ತಾರೆ. ಹಾಗಾದರೆ ಹಿಂದುಗಳು ಅಂದರೆ ಯಾರು? ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ. ದಲಿತರನ್ನು ಹಿಂದುಗಳಿಂದ ಬೇರ್ಪಡಿಸುತ್ತಿರುವ ಮನಸ್ಸುಗಳನ್ನು ನಾನು ವಿರೋಧಿಸುತ್ತೇನೆ. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಸೋಮಣ್ಣ..

    ReplyDelete
    Replies
    1. ಅದ್ಭುತವಾಗಿ ದೂರದೃಷ್ಟಿಯೊಂದಿಗೆ ಅಭಿಪ್ರಾಯಿಸಿದ್ದೀರಿ ಶ್ರೀಧರ್.ನಿಜಕ್ಕೂ ನಿಮ್ಮ ಗಾಢ ಆಲೋಚನೆಗೆ ಬೆರಗಾದೆ.ನಿಮ್ಮ ಯೋಚನಾ ಲಹರಿ ತುಂಬಾ ಮೆಚ್ಚುಗೆಯಾಯಿತು.ನಿಮ್ಮ ಕೊನೆಯ ಸಂದೇಹದ ಪ್ರಶ್ನೆಗೆ ಇನ್ನೊಮ್ಮೆ ಉತ್ತರಿಸುತ್ತೇನೆ.ನೀವೇ ಒಂದು ಅತ್ಯತ್ತಮ ಲೇಖನವನ್ನಾಗಿ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೀರಿ.ನಿಮ್ಮನ್ನು ಪಡೆದ ನಾವು ಧನ್ಯ.

      Delete
  4. ಸರ್ ತುಂಬಾ ಉತ್ಸುಕತೆಯ ಓದನ್ನು ಒಳಗೊಂಡ ಬರಹ ನಿಮ್ಮದು ಈ ಮಹಾತ್ಮರ ಬಗೆಗಿನ ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಸಿಕೊಡಿ.

    ReplyDelete