Thursday 18 August 2011

"ಪರಮಾಧಿಕಾರಿಗೆ"

ನೋಡು ನೀ....
ಈ ವೇಷಗಾರರ ಆಟವನ್ನು
ಇವರಾಡುವ ನಾಟಕವನ್ನು
ಇವರಾ ಕಪಿ ಚೇಷ್ಟೆಯನ್ನು!
ಮನ ಬಂದಂತೆ ಮಾತಾಡಿ
ಮನಸು ಕೆಡಿಸುವೀ
ಮಲೀನರ ಬಹುರೂಪವನು ನೀ ನೋಡು!
ಮಾತಿಗೆ ಮಾತು ಕದ್ದು
ಎದೆ ಮೇಲೆ ಕೈಯಿಟ್ಟು ಹೇಳಿ
ಮನಃಶಾಂತಿ ಕಳಕೊಂಡು
ದಿನರಾತ್ರಿ ವಿಲವಿಲನೆ ಒದ್ದಾಡಿ
ನಿದ್ದೆಗೆಟ್ಟು ಕಳೆಗೆಟ್ಟು ಹೋದೀ
ಮತ ಭ್ರಷ್ಟ ಮತಿ ಭ್ರಷ್ಟ
ಡೊಂಕು ಬಾಲದ ನಾಯಕರ
ಹುಚ್ಚಾಟವನು ನೀ ನೋಡು!

ಮಗ್ಗುಲು ಮುಳ್ಳಾಗಿ
ದುಃಸ್ವಪ್ನರಾಗಿ ನಿತ್ಯವೂ
ನವಗಾಳ ಹಾಕುತ್ತಾ ಗಳಿಗೆ ಗಳಿಗೆಗೂ
ಕುಟುಕುತ್ತಿರುವೀ ಭಿನ್ನರ ವ್ಯವಹಾರ
ರಂಪಾಟ ಜಂಪಾಟವನು ನೀ ನೋಡು!

ತತ್ವ ನೀತಿ ಸಿದ್ಧಾಂತವೆಂದು
ಅರುಹಿದವರು ಹಲವರು
ಹತ್ತರಕೂಡ ಹನ್ನೊಂದಾದವರು ಅನೇಕರು
ನಂಬಿದ ಶಿಸ್ತಿಗೆ ಬೆನ್ನು ಬಿದ್ದವರು ಹತ್ತಾರು
ಆಸೆಯಾಮಿಶ ದುರಾಸೆಗೆ ಒಳಗಾದವರು ನೂರಾರು
ಅಂತೂ ಒಪ್ಪಿಗೆಯ ಮುದ್ರೆಯೂರಿ,
ಜೈಕಾರ ಹಾಕಿಯೇ ಬಿಟ್ಟರು ಸಾವಿರಾರು!

ನೋಡು ನೋಡು ನೀ
ನೋಡುತ್ತಲೇ ಇರು
ಆಟ ಮುಗಿದಾದ ಮೇಲೆ
ಮಗದೊಂದು ಆಟಕ್ಕಾಗಿ ಕಾದು ಕುಳಿತು
ಮತ್ತೆ ಬಳಿ ಸಾರಿ ಕಾಲಿಗೂ ಬೀಳುವರು
ಲಜ್ಜೆ ಮರೆತಾ ವಿಧೂಷಕರು!

ನಿನ್ನ ಪರಮಾಧಿಕಾರವವನು
ಕಸಿದು ಓಡಿ ಹೋದ ಮೇಲೆ
ತಿರುಗಿಯೂ ನೋಡದೀ ಮತಿಹೀನರು
ಮತ್ತದೇ ಆಟವ ಹೂಡುವರು;ಹೊಸ ರೂಪದಲಿ!
ನೀನು ಮಾತ್ರ ಅವತಾರ ಮುಗಿಸದೇ
ಹೀಗೆಯೇ ಇರು,ಬದಲಾಗ ಬೇಡ!
ಏಕೆಂದರೇ ನೀನೂ....ಅವನೇ ತಾನೆ?
--------------------------------
              -ಬನವಾಸಿ ಸೋಮಶೇಖರ್.

No comments:

Post a Comment