Sunday 16 October 2011

" ಪ್ರಖ್ಯಾತಿ-ಕುಖ್ಯಾತಿ"



ಸಿಟ್ಟು ಆಕ್ರೋಶ ಕೋಪಾತಾಪಗಳೆಲ್ಲ
ನಿನ್ನ ಹೋರಾಟದ ಅಸ್ತ್ರಗಳಾಗಿದ್ದವು
ಬಾಯಲ್ಲಿ ಬೆಂಕಿಯುಗುಳುತ್ತಲೇ ಬಡಿದೆಬ್ಬಿಸಿ
ಸರ್ವರ ನೋವು ನಲಿವು ಭವಣೆಗಳಿಗೆಲ್ಲ
ಸದಾ ಸ್ಪಂದಿಸುವ ಧೀಃಶಕ್ತಿಯಾಗಿದ್ದವನು ನೀನು!

ತತ್ವ ನೀತಿ ಸಿದ್ಧಾಂತಗಳಾಗ ನಿನ್ನುಸಿರಾಗಿದ್ದವು
ಹಳ್ಳಿ ಪಟ್ಟಣ ರಾಜ ಬೀದಿ ಎಲ್ಲೆಲ್ಲೂ ನಿನ್ನಾ
ಹೋರಾಟದ ಕಾವು ಬಹುರೂಪ ಪಡೆದಿತ್ತು
ಭಲೇ ಚಳುವಳಿಗಾರ ನೀನೆಂದು ಪ್ರಖ್ಯಾತಿ!!

ನಿನ್ನ ದಿಟ್ಟ ನೇರ ನಿಷ್ಠುರ ನುಡಿಗಳಿಗೆ ಸೋತಾ
ಮಂದಿ ಮನ್ನಣೆ ನೀಡಿ ರತ್ನ ಸಿಂಹಾಸನ ಅರ್ಪಿಸಿದ್ದರು
ಮತ್ತಷ್ಟು ಮೊಗದಷ್ಟು ಗಟ್ಟಿಯಾಗ ಬಯಸಿದ್ದ ನೀ
ಮೌಲ್ಯಗಳಿಗೆ ತಿಲಾಂಜಲಿಯಿತ್ತು ಹೊಸ ಸಂಪ್ರದಾಯ ಸೃಷ್ಟಿಸಿದಿ!!!

ಬಾಳ ಬುದ್ಧಿವಂತನಾದ ನೀನು ಛಲದಂಕಮಲ್ಲ
ಚಾಣಾಕ್ಷತೆಯಲ್ಲಿ ಎತ್ತಿದ ಕೈಯಾಗಿದ್ದ ನೀ ಚಾಣಕ್ಯ
ಬಹುಫರಾಕು ಹೇಳುತ್ತಿದ್ದ ನಿನ್ನ ಬಂಟರು ಮಾತ್ರ
ನಗೆಪಾಟಲೀಗೀಡಾಗುತ್ತಾ ಜನಕೆ ವಿನೋದವಾದರು!!!!

ನಿನ್ನಾ ವಿವೇಕ ವಿಚಾರ ಲಹರಿ ಎಲ್ಲವೂ ಮಸುಕಾದವು
ಗುಡಿ ಗುಂಡಾರ ಜ್ಯೋತಿಷ್ಯವೆಂದೆಲ್ಲ ನಂಬಿ ಮೌಡ್ಯದ ದಾಸನಾದಿ
ಸ್ವಾರ್ಥಕ್ಕೆ ಜೋತು ಬಿದ್ದು ತಪ್ಪು ಮಾಡಲು ಹೊರಟಿ
ಅಂತಸ್ತಿನಮಲು ಮೈಮೇಲೇರಿ ನಿನ್ನತನವೆಲ್ಲ
ನಿಸ್ತೇಜವಾಗಿ ಕಳೆಗುಂದುತ್ತಾ ಪೇಲವಗೊಂಡಿತು!!!!!

ರತ್ನ ಸಿಂಹಾಸನ ಉರುಳಿ ಬಿದ್ದು ನ್ಯಾಯದೇವಿಗೆ
ನಿನ್ನಹವಾಲು ಮುಟ್ಟಿದಾಗ ಕಣ್ಮುಚ್ಚಿಕುಳಿತಿದ್ದಾಕೆಯೊಳ
ಗಣ್ತೆರೆದು ನೋಡಿ ತೂಕ ಮಾಡಿ ಹೇಳಿಯೇ ಬಿಟ್ಟಳು
ಕೃಷ್ಣಾಶ್ರಮಕ್ಕೆ ನೀ ಹೋಗುವುದನ್ನಾಕೆಗೆ ತಪ್ಪಿಸಲಾಗಲೇ ಇಲ್ಲ
ಮಹಾಪತನ ಹೊಂದಿ ನೀ ಲೋಕ ಕುಖ್ಯಾತಿ ಪಡೆದು ಬಿಟ್ಟಿ
ಹೇಳು ನೀ ! ಇದಕೆ ವಿಧಿಯಾಟ ಎನ್ನಲೇ ? ವಿಪರ್ಯಾಸ ಎನ್ನಲೇ ?
ಬನವಾಸಿ ಸೋಮಶೇಖರ್.
http://banavasimaathu.blogspot.com/

1 comment:

  1. ಅಶಾಶ್ವತ ರಾಜಕೀಯ ಗದ್ದುಗೆಯ ಆಸೆಗೆ ಬಿದ್ದ ಭ್ರಷ್ಟನ ಕಥನ. ಹಲ ಮಜಲುಗಳನ್ನು ಕವನ ಸಮರ್ಥವಾಗಿ ಹಿಡಿದಿಡುತ್ತದೆ. ಭೇಷ್ ಬನವಾಸಿ ಸರ್!

    ReplyDelete