Monday, 14 January 2013

ಕ್ಷಣ ಕತ್ತಲೆಯ ಭಯ: ಕರಿಬಸಪ್ಪನ ಕತ್ತಲಾದ ಬದುಕಿನ ಕಥೆ!


ಪ್ರಿಯ ಶ್ರೀಧರ್,

ನಿಮ್ಮ, ಅಮ್ಮನ ಆಟೋಗ್ರಾಫ್ ಕಥಾ ಸಂಕಲನದ ಮೊದಲ ಕಥೆ 'ಕ್ಷಣ ಕತ್ತಲೆಯ ಭಯ'ವನ್ನು ಓದಿದೆ.ಮೊದಲು ಕ್ಲೀನರ್ ಆಗಿ ನಂತರ ಲಾರಿಯೊಂದರ ಡ್ರೈವರ್ ಆಗಿದ್ದ ಕರಿಬಸಪ್ಪನ ಜೀವನ ಗಾಥೆಯನ್ನು ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಿಸಲಾಗಿದೆ.13-01-2013 ರಾತ್ರಿ 10-30 ರಿಂದ 11-47 ಅವಧಿಯಲ್ಲಿ ತದೇಕಚಿತ್ತದಿಂದ ಕಥಾ ಸಂಕಲನದ ಮೊದಲ ಕಥೆಯನ್ನು ಓದಿದೆ.ನಿಮ್ಮ ಪ್ರೀತಿಯ ಸ್ನೇಹಕ್ಕಾದರೂ ಚೊಚ್ಚಲ ಕೃತಿಯನ್ನು ಓದಿ ಅಭಿಪ್ರಾಯಿಸಬೇಕೆಂಬ ಹಂಬಲ ನನ್ನದು.ಕಥೆ ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಮೂಡಿಸಿ ಓದಿಸಿಕೊಳ್ಳುತ್ತದೆ.

ಪ್ರೀತಿಯ ಸುಖ ದಾಂಪತ್ಯದಲ್ಲಿ ಮೈಮರೆತ ಹೆಣ್ಣೊಬ್ಬಳು ಮುದುವೆಗೆ ಮುಂಚೆ ಪ್ರೀತಿಸಿದಾತನೊಂದಿಗಿದ್ದು ಅನುರಕ್ತರಾದ ಘಟನೆಯನ್ನು ಗಂಡನ ಬಳಿ  ಪ್ರಾಮಾಣಿಕವಾಗಿ ಹೇಳಿಕೊಂಡು ತನ್ನ  ಇಡೀ ಭವಿಷ್ಯವನ್ನೇ ಕತ್ತಲೆಯ ಕೂಪಕ್ಕೆ ತಳ್ಳಿಕೊಳ್ಳುತ್ತಾಳೆ.ಆಕೆಯ ಪ್ರಾಮಾಣಿಕತೆ ಯಾಕಾದರೂ ಬೇಕಿತ್ತೆಂದು ಪ್ರಶ್ನಿಸಿ ಕರುಳನ್ನು ಚುಚ್ಚುತ್ತದೆ.ಯಾವ ಅಭಲೆಯೂ ಇಂಥ ದುಃಸ್ಥಿತಿಗೆ ತನ್ನ ಸಂಸಾರ ಸುಖವನ್ನೇ ಬಲಿಕೊಟ್ಟುಕೊಳ್ಳುವ ಕಟು ಸತ್ಯಕ್ಕೆ ಶರಣಾಗದಿರಲೆಂದು ಕಥೆಯನ್ನು ಓದುವ ಸಹೃದಯಿಗೆ ಆಗದೇ ಇರಲಾರದು.ಕ್ಷಣ ಕತ್ತಲೆಯ ಭಯ,ಕಥೆಗೆ ಸೊಗಸಾದ ಶೀರ್ಷಿಕೆಯನ್ನು ಒದಗಿಸಿದ್ದು ಭಾವನೆಗಳಿಗೆ ತಕ್ಕಂತೆ ಪಾತ್ರಗಳನ್ನು ನಿರೂಪಿಸಿ ಅರ್ಥವಂತಿಕೆಯನ್ನು ಮೆರೆದಿದೆ.ಯಾರ ಬದುಕೂ ಹೀಗಾಗಬಾರದು.

ಕರಿಬಸಪ್ಪನ ವೈಯಕ್ತಿಕ ಬದುಕೇನು ಶುದ್ಧಹಸ್ತವಾಗಿರಲಿಲ್ಲ.ಒಳ್ಳೆಯ ವ್ಯಕ್ತಿಯಾಗಿದ್ದರೂ ಪರಸ್ತ್ರೀ ಸಂಗ,ಕುಡಿತಗಳ ದಾಸನಾಗಿದ್ದವನು!ಇಂಥ ವ್ಯಕ್ತಿತ್ವದ ಆತ ತನ್ನ ಜೀವನಕ್ಕೇ ತನ್ನನ್ನೇ ಅನ್ವಯಿಸಿಕೊಂಡು ಸಹಧರ್ಮಿಣ ಹೇಳಿದ ಪ್ರಾಮಾಣಿಕ ಸತ್ಯವನ್ನು ಅರಗಿಸಿಕೊಂಡು ಜೀವನ ಸಾಗಿಸುವ ಹೃದಯವಂತಿಕೆ ಆತನಲ್ಲಿ ಮೂಡಬೇಕಿತ್ತು.ಆದರಾತ ಮಾಡಿದ್ದೇನು? ಅರೆಕ್ಷಣದ ಕೋಪಕ್ಕೆ ಹೆಂಡತಿ ಮತ್ತು ತನ್ನ ಮುದ್ದಿನ ಹೆಣ್ಣು ಕೂಸನ್ನು ದಿಕ್ಕಾಪಾಲಾಗಿಸಿ  ಹೊರಟು ಹೋಗಿ ಬಿಟ್ಟಿದ್ದ.ಆದರೂ ಧೃತಿಗೆಡದೇ ತಾಯಿ ಮಗಳು ತಮ್ಮ  ಪಾಡಿಗೆ ತಾವಿದ್ದರಾದರೂ ಗಂಡನನ್ನು ಹುಡುಕಿಕೊಳ್ಳುವ ದಿಟ್ಟ ಪ್ರಯತ್ನವನ್ನಂತೂ ಬಿಟ್ಟಿರಲಿಲ್ಲ!ಬರಮಘಡದಲ್ಲಿ ತನ್ನ    ಗಂಡನಿರುವನೆಂಬ ಸುದ್ದಿ ಕೇಳಿ ತಿಳಿದಿದ್ದ ಅವಳು ಮಗಳೊಂದಿಗೆ ಭರಮಘಡಕ್ಕೆ ಹೊರಟಾಗ ವಿಧಿಯ ಅಟ್ಟಹಾಸವೂ ಎಂಬಂತೆ ಅರಿವಿಲ್ಲದೇ  ಗಂಡನ ಲಾರಿಯ ಗಾಲಿಗಳಿಗೆ ಆಹುತಿಯಾಗುವ ಕ್ಷಣದ ಘಟನೆ ಕರಿಬಸಪ್ಪನಿಗೂ ತಿಳಿಯದ ಹಾಗೆ ಕರುಣಾಜನಕ ಕಥೆಯನ್ನು ಚಿತ್ರಿಸಲಾಗಿದೆ.

ಕುಡಿದ ಅಮಲಿನ ಅರೆಗಳಿಗೆಯಲ್ಲಿ  ಹೆಂಡತಿ ಮತ್ತು ಮಗಳು ಇಬ್ಬರೂ ತನ್ನ ಲಾರಿಗೆ ಆಹುತಿಯಾಗುವ ಆಘಾತಕಾರಿ ಸನ್ನೀವೇಷ,ಕರಿಬಸಪ್ಪನ ಮುಂದಿನ ಇಡೀ ಜೀವಿತಕ್ಕೆ ಘೋರ ಶಿಕ್ಷೆಯನ್ನೇ ನೀಡಿ ಕಥೆಯನ್ನು ಕಟ್ಟಿದ ರೀತಿ ಮೆಚ್ಚುವಂತದ್ದು.ಆದಷ್ಟು ಬೇಗ ಹೆಂಡತಿಯನ್ನು ನೋಡಬೇಕು,ಮಗಳ ಮದುವೆ ಮಾಡಬೇಕು ಎಂಬ ಮಹದಾಸೆಯಿಂದ 20 ವರ್ಷಗಳ ನಂತರ ಕೈ ತುಂಬಾ ಹಣ ಹಿಡಿದುಕೊಂಡು ಮಗರಾಣಿಗೆ ಬರುವ ಡ್ರೈವರ್ ಕರಿಬಸಪ್ಪನನ್ನು ವಿಧಿ ಅತ್ಯಂತ ನಿಷ್ಕರುಣಿಯಂತೆ ನಡೆಸಿಕೊಂಡಿತು ಎನಿಸುತ್ತದೆ.ಕಥೆಯಲ್ಲಿನ ಪಾತ್ರ,ಸನ್ನೀವೇಷಗಳು ಕಾಲ್ಪನಿಕವೆನಿಸುವುದಿಲ್ಲ.ಇದೊಂದು ಸತ್ಯ ಘಟನೆಯೇ ಎಂಬುದು ಓದುತ್ತಾ ಹೋದ ಹಾಗೆ ವ್ಯಕ್ತವಾಗುತ್ತಾ ಮಮ್ಮಲ ಮರುಗುವಂತಾಗುವುದು.
ಒಂದು ಸುದೀರ್ಘವಾದ ಕಥೆಯನ್ನು ಅತ್ಯಂತ ಕರುಣಾಜನಕವಾಗಿ,ಅಂತಃಕರಣವನ್ನು ಚುರ್ ಗುಟ್ಟಿಸುವಂತೆ,ಮನೋವಿಶ್ಲೇಷಣೆಗೆ ಒಳಪಡಿಸಿ ಹೆಣೆದಿರುವಿರಿ.ಮಗರಾಣಿಯ ಹೆಣ್ಣನ್ನು (ಅವಳ ಹೆಸರನ್ನು ಪ್ರಸ್ತಾಪಿಸಿಲ್ಲ) ಮದುವೆಯಾದ ಕರಿಬಸಪ್ಪನ ಊರನ್ನು ಮಾತ್ರ ಕಥೆಯಲ್ಲಿ ನನಗೆ ಗುರುತಿಸಲಾಗಿಲ್ಲ! ಬಹುಶಃ ಆತ ನಮ್ಮೂರಿನವನೇ ಆಗಿರಬಹುದೇ?

ಪ್ರೀತಿಯಿಂದ,

ಬನವಾಸಿ ಸೋಮಶೇಖರ್.




2 comments:

  1. ಸೋಮಣ್ಣ ನಿಜಕ್ಕೂ ನೀವು ನನ್ನ ಕಥೆಯ ಆಳಕ್ಕೆ ಹೋಗಿ, ಕಥೆಯ ಪಾತ್ರಧಾರಿಗಳನ್ನು ಅಂತರಂಗವನ್ನು ಹೊಕ್ಕು ನೋಡಿದ್ದೀರಿ... ಕಥೆಯ ಮುಖ್ಯವಸ್ತುವೇ ಪಾಪಪ್ರಜ್ಞೆ...ಪಾಪಪ್ರಜ್ಞೆ ಅನ್ನುವುದು ಎಂತವನಾದರೂ ಬಿಡುವುದಿಲ್ಲ, ಸಾಯುವ ಮೊದಲು ಒಮ್ಮೆಯಾದರೂ ತಪ್ಪು ಮಾಡಿರುವವನನ್ನು ಅದು ಕಾಡೇ ಕಾಡುತ್ತದೆ. ಕರಿಬಸಪ್ಪನ ಊರು ಕಲ್ಪನೆಗೆ ಬಿಟ್ಟಿದ್ದು. ಆದರೆ ಆತನ ಹೆಂಡತಿ ರಾಣೆಬೆನ್ನೂರು ಹಾಗೂ ಹಿರೇಕೆರೂರು ಪ್ರಾಂತ್ಯಕ್ಕೆ ಸೇರಿದವಳು...

    ReplyDelete
  2. 'ಕ್ಷಣ ಕತ್ತಲೆಯ ಭಯ' ಕೃತಿಯನ್ನು ಓದಿ ಮತ್ತೆ ಪ್ರತಿಕ್ರಿಯಿಸುತ್ತೇನೆ. :)

    ReplyDelete