ಮೈಸೂರಿನಲ್ಲಿ 'ಫಕೀರ' ಅವರ "ಅಮ್ಮನ
ಆಟೋಗ್ರಾಫ್" ಕಥಾ ಸಂಕಲನ ಬಿಡುಗಡೆಗೊಳಿಸಿದ ಡಾ.ಸಿ.ಪಿ.ಕೆ.
ಮೈಸೂರು ಜ.7.2013:
ನಾಡಿನ ಪ್ರಖ್ಯಾತ ಕಥೆಗಾರ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಸಿದ್ಧ ಲೇಖಕ,ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳ ಜೊತೆಗೆ ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ (ಫಕೀರ) ಅವರ 'ಅಮ್ಮನ ಆಟೋ ಗ್ರಾಫ್' ಎಂಬ ಕಥಾ ಸಂಕಲನ,ಈ ಮೂರು ಸತ್ವಪೂರ್ಣ ಕೃತಿಗಳ ಬಿಡುಗಡೆ ಸಮಾರಂಭವು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜನವರಿ 6,2013 ರಂದು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಬೆಂಗಳೂರಿನ ಪಂಚಮಿ ಮೀಡಿಯಾ ಪಬ್ಲಿಕೇಶನ್ ಸಂಸ್ಥೆಯು ಹೊರತಂದಿರುವ ಈ ಮೂರು ಕೃತಿಗಳನ್ನು ಮೈಸೂರು ಕನ್ನಡ ಸಾಹಿತ್ಯ
ಪರಿಷತ್ತಿನ ಸಹಯೋಗದಲ್ಲಿ ಹೆಸರಾಂತ ಸಾಹಿತ್ಯ ದಿಗ್ಗಜ,ಪಂಪ ಪ್ರಶಸ್ತಿ ಪುರಸ್ಕೃತ ಡಾ||ದೇಜಗೌ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ರತ್ನ ಡಾ|| ಸಿ.ಪಿ.ಕೆ.ಅವರು ಬಿಡುಗಡೆಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಗೈದರು.
ಫೇಸ್ ಬುಕ್ ಸಾಮಾಜಿಕ ಅಂತರ್ ಜಾಲ ತಾಣದಲ್ಲಿ ಸಕ್ರೀಯವಾಗಿದ್ದು ಸಾಹಿತ್ಯ ಸೇವೆಯಲ್ಲಿ ಅರ್ಥವತ್ತಾಗಿ ತೊಡಗಿಸಿಕೊಂಡಿರುವ "ಕನ್ನಡ ಬ್ಲಾಗ್" ವೇದಿಕೆಯ ಬಹುಪಾಲು ನಿರ್ವಾಹಕರು ಸ್ವತಃ ಈ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.ಶ್ರೀಧರ ಬನವಾಸಿ (ಫಕೀರ) ಅವರ ಚೊಚ್ಚಲ ಕೃತಿ ಲೋಕಾರ್ಪಣೆಗೊಳ್ಳುವ ಸುಸಂದರ್ಭದಲ್ಲಿ ಅವರ ಆತ್ಮೀಯ ವಲಯದ ಗೆಳೆಯನಾದ ನಾನು ಪಾಲ್ಗೊಳ್ಳವುದೆಂದು
ಈ ಮೊದಲೇ ಸಂಕಲ್ಪವಾಗಿತ್ತು! ಸಾಹಿತ್ಯಿಕ ಚಟುವಟಿಕೆಗಳಲ್ಲಿ
ಸದಾ ಮುಂಚೂಣಿಲ್ಲಿಯೇ ಪಾಲ್ಗೊಳ್ಳುವ ಆತ್ಮೀಯ ಕವಿ ಗೆಳೆಯರಾದ ಶ್ರೀ ಪುಷ್ಪರಾಜ್ ಚೌಟ ಅವರು ತಮ್ಮ ಫೇಸ್ ಬುಕ್ ಪ್ರೋಫೈಲ್ ಸ್ಟೇಟಸ್ ನಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಭಾಗವಹಿಸುವ ಇಚ್ಚೆ ಯಿಂದ ಪ್ರಕಟಣೆ ಭಿತ್ತರಿಸಿ ತಮ್ಮ ಗೆಳೆಯರನ್ನು ಸಹ ಪಾಲ್ಗೊಳ್ಲಲು ಪ್ರೇರೇಪಿಸಿದರು.ಅದರಂತೆ ನಾನೂ ಸಹ ಹೊರಟಿದ್ದೇನೆಂಬ ವಿಷಯ ತಿಳಿದೊಡನೆಯೇ ನಮ್ಮ ಬ್ಲಾಗಿನ ನಿರ್ವಾಹಕರೆಲ್ಲರೂ ಮೈಸೂರಿಗೆ ತೆರಳಲು ಅಣಿಯಾದರು. ಅಂದುಕೊಂಡಂತೆ ನಾನು ಮಂಗಳೂರಿನಿಂದ
ಹೊರಟೆ.ಬೆಂಗಳೂರಿನಿಂದ ಗೆಳೆಯರಾದ ಪುಷ್ಪರಾಜ್ ಚೌಟ,ಸತೀಶ ಡಿ.ಆರ್.ರಾಮನಗರ,ಫರೇಶ್ ಸರಾಫ್ ಹೊರಟರು.ಮೈಸೂರಲ್ಲೇ ಇರುವ ಪ್ರಸಾದ್ ವಿ.ಮೂರ್ತಿ,ಪ್ರಮೋದ ಪಮ್ಮು ಮತ್ತು ಗಣೇಶ್
ಇವರುಗಳು
ನಮ್ಮ ಜೊತೆಯಾದರು ಹಾಗೂ ನಮ್ಮ ಕನ್ನಡ ಬ್ಲಾಗಿನ ಕ್ರಿಯಾಶೀಲ ಸದಸ್ಯರಾದ ಮೈಸೂರಿನ ಸಹೋದರಿ ಸುನೀತಾ ಮಂಜುನಾಥ ಮತ್ತು ಬೆಂಗಳೂರಿನ ಕೃಷ್ಣ ಮೂರ್ತಿ ಎಮ್.ಎಸ್.ಅವರು ಸಹ ನಮ್ಮ ಕೈ
ಜೋಡಿಸಿದರು.ನಾವೆಲ್ಲರೂ ಒಟ್ಟಾಗಿ ಸೇರಿ ಉಪಸ್ಥಿತರಿದ್ದು ಶುಭಕೋರಿದೆವು.
ಈ ಸಂದರ್ಭದಲ್ಲಿ ಮೂರೂ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ|| ಸಿ.ಪಿ.ಕೆ, ಫಕೀರ ಅವರ 'ಅಮ್ಮನ ಆಟೋಗ್ರಾಫ್' ಕಥಾ ಸಂಕಲನದ ಜೊತೆಗೆ ಬಿಡುಗಡೆಗೊಳಿಸುತ್ತಿರುವ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳು ವಾಸ್ತವವಾಗಿ ಕಾವ್ಯಶಕ್ತಿಯನ್ನು ಪಡೆದುಕೊಂಡು ಸೊಗಸಾಗಿ ರಚಿತಗೊಂಡಿವೆ. ಕಾವ್ಯ ಮತ್ತು ಕಾದಂಬರಿ ಎರಡೂ ಪ್ರಕಾರದಲ್ಲಿ
ಒಂದು ಪ್ರತ್ಯೇಕ ಸಾಹಿತ್ಯ ರೂಪ ಪಡೆದು ಓದುಗ ವರ್ಗಕ್ಕೆ ಆಸಕ್ತಿಯನ್ನು ಕೆರಳಿಸುವಂತೆ ಈ ಮೂರು ಕೃತಿಗಳು ರಚನೆಗೊಂಡಿವೆ ಎಂದರು.ಕಾವ್ಯ ಎಂಬುದು ಒಂದು ಸರ್ವಾಂತರ್ಯಾಮಿ ಶಕ್ತಿಯಾಗಿದ್ದು 'ಕಾವ್ಯೇಷು ನಾಟಕಂ ರಮ್ಯಂ' ಎಂಬಂತೆ ಈ ಎಲ್ಲ ರಚನೆಗಳಲ್ಲಿ ಕಾವ್ಯಾಂಶದ ಹರಿವು ದಟ್ಟವಾಗಿ ಹರಿದಾಡಿದೆ ಎಂದು ಅವರು ಕೃತಿಗಳನ್ನು ಬಣ್ಣಿಸಿದರು.ಕಥೆ ಕವನಗಳು ಗದ್ಯರೂಪದಲ್ಲಿದ್ದರೂ ಭೇದ ಔಪಚಾರಿಕವಾಗಿದ್ದು ಕಾವ್ಯಶಕ್ತಿಯನ್ನು ಪಡೆದುಕೊಂಡು ಅಕ್ಷರ ರೂಪ ಪಡೆದಿರುವ ಈ ಮೂರು ಕತೃಗಳ ರಚನೆಗಳು ಸತ್ವಪೂರ್ಣವಾಗಿ ಹೊರಹೊಮ್ಮಿರುವುದಾಗಿ
ಕೃತಿಗಳ ಕುರಿತು ವಿಷಧೀಕರಿಸಿದರು.
ಸಂತೆಯೊಳಗೆ ಕಳೆದು ಹೋದ 'ಸಂತ'ಕವಿ ವೀರಭದ್ರ
'ಮಂಕು ಮಡೆಯನ ಕೊಂಕು ನುಡಿಗಳು' ಕೃತಿಯು ಕಾಲಾತೀತವಾಗಿದ್ದು ಮುವತ್ತು ವರ್ಷಗಳ ನಂತರ ಪ್ರಕಟಗೊಂಢಿದ್ದರೂ ಸಕಾಲಿಕ ಸ್ವರೂಪ ಪಡೆದಿದೆ.ಎಲ್ಲ ಕಾವ್ಯವೂ ಸಮಕಾಲೀನವಾಗುತ್ತವೆ ಎಂದು ತಿಳಿಸಿದ ಸಿ.ಪಿ.ಕೆ ವೀರಭದ್ರ ಅವರ ಕೃತಿಯಲ್ಲಿ ಇರುವುದೆಲ್ಲವೂ ವೀವೇಕದ ಅನುಭವ ಸಂಪನ್ನ ಉಕ್ತಿಗಳಾಗಿದ್ದು ವಕ್ರೋಕ್ತಿಗಳಂತೆ ಸುಂದರವಾಗಿ ಚಿತ್ರಿತಗೊಂಡಿವೆ ಎಂದು ವಿವರಿಸಿದರು.ಸಂತೆಯೊಳಗೆ ಕಳೆದು ಹೋದ ಒಬ್ಬ ಸಂತ ಕವಿ 'ವೀರಭದ್ರ' ಅವರಾಗಿದ್ದು ವ್ಯಾಖ್ಯೆ,ವಿಡಂಬನೆ,ಬೋಧೆಗಳನ್ನು ಸ್ವಂತಿಕೆಯೊಡನೆ,ಸರ್ವೋದಯದ ಆದರ್ಶ ತತ್ವಗಳನ್ನು ತಮ್ಮ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ಅತ್ಯಂತ ಮಾರ್ಮಿಕವಾಗಿ ನುಡಿದರು. ಇಂಥ ಕವಿ ಸಹೃದಯಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ
ಈ ಹುಚ್ಚು ಸಂತೆಯಲ್ಲಿ ಈ ಸಂತ ಕವಿ ಕಳೆದು ಹೋಗಿದ್ದಾರೆಂದು ಸರ್ಕಾರದ ಕುರುಡು ವ್ಯವಸ್ಥೆಗೆ ಛಾಟಿ ಏಟು ನೀಡಿದರು.
ಸಾಮಾಜಿಕ ಧ್ವನಿ ಪ್ರಜ್ಞೆಯ ಸಂಖ್ಯೇತ 'ಭುವಿಬಾಲೆ'
ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ ಭುವಿಬಾಲೆ ಕೃತಿ ಕುರಿತು ಮಾತನಾಡಿದ ಸಿ.ಪಿ.ಕೆ, ಪ್ರೀತಿಯ ಕಾವ್ಯವಾಗಿ,ಬೆಳಕಿನ ಕಾವ್ಯವಾಗಿ ನವೋದಯ ಮತ್ತು ಬಂಡಾಯ ಸಾಹಿತ್ಯವೆಂಬ ಎರಡು ಪ್ರಧಾನ ಮಾರ್ಗಗಳಲ್ಲಿನ ಮೂಸೆಯಲ್ಲಿ ಈ ಕವನ ಸಂಕಲನವು ಮೂಡಿಬಂದಿದೆ ಎಂದರಲ್ಲದೇ ಸಾಮಾಜಿಕ ಧ್ವನಿ ಪ್ರಜ್ಞೆಯನ್ನು ಮೆರೆದಿರುವ ಗಟ್ಟಿಕಾವ್ಯವಾಗಿದೆ ಹೊರಹೊಮ್ಮಿದೆ ಎಂದು ಸೊಗಸಾಗಿ ವಿವರಿಸಿದರು.ಹೃದಯಸ್ಪರ್ಷಿಯಾದ ಹೆಣ್ಣಿನ ಹಾಡಿನ ಕರುಣಾ ಜನಕ ಕವನವೇ ಭುವಿಬಾಲೆಯಾಗಿದೆ. ಹೂತು ಹೋದ ಮನುಷ್ಯ ಪ್ರೀತಿಯ ಸೆಲೆಯನ್ನು ಚಿತ್ತಾಕರ್ಷಕವಾಗಿ ಮನಮುಟ್ಟುವಂತೆ ವಿವರಿಸುವ ಕೃತಿ ಇದಾಗಿದ್ದು ಓದಿ ಆಸ್ವಾದನಗೊಳಿಸುವುದೆಂದು ಸಿ.ಪಿ.ಕೆ ತಿಳಿಸಿದರು.
ಮನಕಲುಕುವ ಕಥೆಗಳ ಸುಂದರ ನಿರೂಪಣೆಯೇ 'ಅಮ್ಮನ ಆಟೋಗ್ರಾಫ್'
ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ(ಫಕೀರ) ಅವರ ಕೃತಿ ಕುರಿತು ಅತ್ಯಂತ ಹರ್ಷಚಿತ್ತರಾಗಿ ಅನಿಸಿಕೆ ವ್ಯಕ್ತಪಡಿಸಿದ ಡಾ|| ಸಿ.ಪಿ.ಕೆ.ಅವರು ವಿಶಿಷ್ಟ ಗುಣವುಳ್ಳ ಅರ್ಥವತ್ತಾದ ಶೀರ್ಷಿಕೆ ಹೊತ್ತು ಹೊರಬಂದಿರುವ
"ಅಮ್ಮನ ಆಟೋಗ್ರಾಫ್" ಕಥಾ ಸಂಕಲನವು ಮನಕಲುಕುವ ಕಥೆಗಳನ್ನು ಒಳಗೊಂಡಿರುವ ಸುಂದರ ನಿರೂಪಣೆಯಾಗಿದೆ ಎಂದರು.ತೀರ ಸರಳವಾಗಿಲ್ಲದ ಸಂಕೀರ್ಣ ಕಥೆಗಳನ್ನು ಹೆಣೆದಿರುವ ಶ್ರೀಧರ್ 'ಫಕೀರತ್ವ"ದ ನೈಜ ತತ್ವವನ್ನು ಕೃತಿಯಲ್ಲಿಯೇ ನಿರೂಪಿಸಿದ್ದಾರೆಂದರು.ಸೌಧಾಮಿನಿ ಅಪಾರ್ಟಮೆಂಟ್ ನ'ಸೌಧಾಮಿನಿಯ ಕಥೆಯಂತೂ ವಾಸ್ತವವಾಗಿದೆ ಎಂದುಕೊಂಡೆ,ಆದರೆ ಅದು ಭ್ರಾಮಕ ಜಗತ್ತಿನ ರೋಚಕ ಹಾಗೂ ಕಾವ್ಯಾತ್ಮಕ ಕಥೆಯಾಗಿದೆ' ಎಂದು ಅರ್ಥಪೂರ್ಣವಾಗಿ ಬಣ್ಣಿಸಿದರು.ಫಕೀರನ ಬರಹ ಶಕ್ತಿಯಲ್ಲಿ ಹೊಸ ವಸ್ತು ನಾವಿನ್ಯತೆಯನ್ನೂ ನಿರೂಪಣೆಯ ನವ್ಯತೆಯನ್ನೂ ಕಾಣಬಹುದಾಗಿದ್ದು ಸತ್ವಯುತ ಶ್ರೀಮಂತ ಕವಿ ಕಥೆಗಾರನಾಗುವ ಲಕ್ಷಣವನ್ನು "ಅಮ್ಮನ ಆಟೋಗ್ರಾಫ್" ಕೃತಿಯಲ್ಲಿ ಮೂಡಿಸಿದ್ದು ಫಕೀರ ಕನ್ನಡ ನಾಡಿನ ಮನೆಮಾತಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಈ ಮೂರು ವಿಶಿಷ್ಟ ಕೃತಿಗಳ ಬಿಡುಗಡೆ ಜೊತೆಯಲ್ಲಿಯೇ ಅಧ್ಯಾಪಕ,ಅನುವಾದಕ,ಕವಿ,ಕಥೆಗಾರರಾಗಿ ಹೆಸರುವಾಸಿಯಾಗಿರುವ ಪ್ರೋ.ವೀರಭದ್ರ ಅವರಿಗೆ "ಸಮ್ಮಿಲನ ಸಾಹಿತ್ಯ ಪ್ರಶಸ್ತಿ"ನೀಡಿ ಗೌರವಿಸಲಾಯಿತು.ನಂತರ ಈ ಮೂರೂ ಕೃತಿಗಳ ಬಗ್ಗೆ ಪ್ರಸಿದ್ದ ಲೇಖಕರಾದ ಡಾ|| ಮಳಲಿ ವಸಂತ ಕುಮಾರ್, ಡಾ||ಕೆ.ಲೀಲಾ ಪ್ರಕಾಶ್ ಮತ್ತು ಪ್ರೋ.ಮಲೆಯೂರು ಗುರುಸ್ವಾಮಿ ಅರ್ಥಪೂರ್ಣವಾಗಿ ಮಾತನಾಡಿ ಪರಿಚಯಿಸಿದರು.ನಂತರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಇಡೀ ಸಮಾರಂಭಕ್ಕೆ ಕಳೆಯನ್ನು ನೀಡಿದ ಡಾ|| ದೇ.ಜವರೇ ಗೌಡ (ದೇಜಗೌ) ಅವರು ಸಮಾರೋಪ ಭಾಷಣ ಮಾಡಿದರು.ನಮ್ಮ ಸಮಯ ಮೀರಿದ್ದರಿಂದ ಸ್ವಸ್ಥಾನಗಳಿಗೆ ತೆರಳಬೇಕಿದ್ಗರಿಂದ ಹೊರಡುವುದು ಅನಿವಾರ್ಯವಾಯಿತು.ಹೀಗಾಗಿ ದೇಜಗೌ ಅವರ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಲಲು ನನಗೆ ಸಾಧ್ಯವಾಗಿಲ್ಲ.
ಗಾಯಕಿ ಶಾಂತಾ ಜಗದೀಶ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಪಂಚಮಿ ಪ್ರಕಾಶನದ ಶ್ರೀಧರ್ ಬನವಾಸಿ ಎಲ್ಲರನ್ನೂ ಸ್ವಾಗತಿಸಿದರು.ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಮ್ ಶ್ರೀಧರ್ ಪ್ರಾಸ್ತಾವಿಕ ನುಡಿಗೈದರು.ಕುವಲ ಯಲ್ಲಪ್ಪ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಗಣ್ಯ ಸಾಹಿತಿಗಳು,ಚಿಂತಕರು,ಲೇಖಕರು ಮತ್ತು ಉದಯೋನ್ಮುಖ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಇಡೀ ಸಮಾರಂಭವನ್ನು ಶೋಭೆಗೊಳಿಸಿದರು.
ಬ್ಲಾಗ್ ಗೆಳೆಯ ಗಣೇಶ್ ಅವರು
ನಮಗೆ ವಿಶೇಷವಾದ ಮಧ್ಯಾಹ್ನದ ಆದರಾತಿಥ್ಯ ನೀಡಿದರು.ರಾತ್ರಿ ಗೆಳೆಯ ಪುಷ್ಪರಾಜ್ ಅವರು ಔತಣ ನೀಡಿ
ನೆನಪು ಚಿರವಾಗಿರುವಂತೆ ಮಾಡಿದರು.ಪ್ರಸಾದ ಮತ್ತು ಪಮ್ಮು ನಮ್ಮೊಂದಿಗೆ ಬೆರೆತುಕೊಂಡು ಪ್ರೀತಿಯಿಂದ
ನೋಡಿಕೊಂಡರು.ಸತೀಶ,ಪುಷ್ಪರಾಜ್ ಮತ್ತು ಫರೇಶ ಅವರು ನನ್ನನ್ನು ನಕ್ಕು ನಲಿಸಿ ಸ್ನೇಹ
ಹಸಿರಾಗಿಸಿದರು.ಗೆಳೆಯ ಶ್ರೀಧರ ಅವರ ಕಥಾ ಸಂಕಲನದ ಬಿಡುಗಡೆಯ ದಿನವು ನಮ್ಮ ಜೀವಮಾನದ ಅವಿಸ್ಮರಣೀಯ
ದಿನವಾಯಿತೆಂದು ಬೇರೆ ಹೇಳ ಬೇಕೆ?
ವರದಿ: ಬನವಾಸಿ ಸೋಮಶೇಖರ್.
ಸೋಮಣ್ಣ ,ಮೊದಲನೆಯದಾಗಿ ನೀವು ಕನ್ನಡ ಬ್ಲಾಗ್ ನ ಸ್ನೇಹಿತರ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ಬೆಟ್ಟದಷ್ಟು ಖುಷಿ ನೀಡಿದೆ . ನಿಮ್ಮ ಆಗಮನ ನಿಜಕ್ಕೂ ದೊಡ್ಡದು ಅಂತ ಭಾವಿಸಿದ್ದೇನೆ. ಆ ದಿನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಮಾಡುವ ಮುಂಚೆ ಹಾಗೂ ಕಾರ್ಯಕ್ರಮದ ನಂತರದ ವಿಶೇಷತೆಯನ್ನು ಕನ್ನಡ ಪ್ರಮುಖ ಪತ್ರಿಕೆಗಳು ಸುದ್ದಿ ಮಾಡಿದವು. ಇದರ ಹೊರತಾಗಿ ಇಡೀ ಕಾರ್ಯಕ್ರಮದ ಭಾಗವಾಗಿ ನೀವು ಕಾರ್ಯಕ್ರಮದ ಸೂಕ್ಷ್ಮ ವಿಚಾರಗಳನ್ನು ಗ್ರಹಿಸಿ ಸಾಹಿತಿಗಳ ಮಾತುಗಳನ್ನು ಕೇಳಿ ವರದಿ ಮಾಡಿದ ನಿಮ್ಮಮಾತುಗಳು ತುಂಬಾ ತುಂಬಾ ಚೆನ್ನಾಗಿದೆ.
ReplyDeleteಈಗಿರುವ ವೃತ್ತಿಗಿಂತ ಮುಂಚೆ ನಮ್ಮ ಶಿರಸಿ ತಾಲೂಕಿನ ದಿನಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡಿದ ನಿಮ್ಮ ವೃತ್ತಿಗಾರಿಕೆ ನಿಮ್ಮಲ್ಲೂ ಇನ್ನೂ ಇದೆ ಎಂಬುವುದನ್ನು ನಾನು ಬಲ್ಲೆ. ಇಡೀ ಕಾರ್ಯಕ್ರಮವನ್ನು ನಿಮ್ಮ ಪದಗಳಲ್ಲಿ ಕಟ್ಟಿಕೊಟ್ಟ ರೀತಿ ಅಭಿನಂದನೀಯ. ಧನ್ಯವಾದಗಳು.
ಪ್ರತ್ಯಾದರಗಳೊಂದಿಗೆ
ಶ್ರೀಧರ