Tuesday, 8 January 2013

ಮೈಸೂರಿನಲ್ಲಿ 'ಫಕೀರ' ಅವರ " ಅಮ್ಮನ ಆಟೋಗ್ರಾಫ್ " ಕಥಾ ಸಂಕಲನ ಬಿಡುಗಡೆಗೊಳಿಸಿದ ಡಾ.ಸಿ.ಪಿ.ಕೆ.


ಮೈಸೂರಿನಲ್ಲಿ 'ಫಕೀರ' ಅವರ  "ಅಮ್ಮನ ಆಟೋಗ್ರಾಫ್" ಕಥಾ ಸಂಕಲನ ಬಿಡುಗಡೆಗೊಳಿಸಿದ ಡಾ.ಸಿ.ಪಿ.ಕೆ.
ಮೈಸೂರು .7.2013: ನಾಡಿನ ಪ್ರಖ್ಯಾತ ಕಥೆಗಾರ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಸಿದ್ಧ ಲೇಖಕ,ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳ ಜೊತೆಗೆ ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ (ಫಕೀರ) ಅವರ 'ಅಮ್ಮನ ಆಟೋ ಗ್ರಾಫ್'  ಎಂಬ ಕಥಾ ಸಂಕಲನ, ಮೂರು ಸತ್ವಪೂರ್ಣ ಕೃತಿಗಳ ಬಿಡುಗಡೆ ಸಮಾರಂಭವು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜನವರಿ 6,2013 ರಂದು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

ಬೆಂಗಳೂರಿನ ಪಂಚಮಿ ಮೀಡಿಯಾ ಪಬ್ಲಿಕೇಶನ್ ಸಂಸ್ಥೆಯು ಹೊರತಂದಿರುವ ಮೂರು ಕೃತಿಗಳನ್ನು ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹೆಸರಾಂತ ಸಾಹಿತ್ಯ ದಿಗ್ಗಜ,ಪಂಪ ಪ್ರಶಸ್ತಿ ಪುರಸ್ಕೃತ ಡಾ||ದೇಜಗೌ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ರತ್ನ ಡಾ|| ಸಿ.ಪಿ.ಕೆ.ಅವರು ಬಿಡುಗಡೆಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಗೈದರು.

ಫೇಸ್ ಬುಕ್ ಸಾಮಾಜಿಕ ಅಂತರ್ ಜಾಲ ತಾಣದಲ್ಲಿ ಸಕ್ರೀಯವಾಗಿದ್ದು ಸಾಹಿತ್ಯ ಸೇವೆಯಲ್ಲಿ ಅರ್ಥವತ್ತಾಗಿ ತೊಡಗಿಸಿಕೊಂಡಿರುವ "ಕನ್ನಡ ಬ್ಲಾಗ್" ವೇದಿಕೆಯ ಬಹುಪಾಲು ನಿರ್ವಾಹಕರು ಸ್ವತಃ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.ಶ್ರೀಧರ ಬನವಾಸಿ (ಫಕೀರ) ಅವರ ಚೊಚ್ಚಲ ಕೃತಿ ಲೋಕಾರ್ಪಣೆಗೊಳ್ಳುವ ಸುಸಂದರ್ಭದಲ್ಲಿ ಅವರ ಆತ್ಮೀಯ ವಲಯದ ಗೆಳೆಯನಾದ ನಾನು ಪಾಲ್ಗೊಳ್ಳವುದೆಂದು ಮೊದಲೇ ಸಂಕಲ್ಪವಾಗಿತ್ತು! ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಲ್ಲಿಯೇ ಪಾಲ್ಗೊಳ್ಳುವ ಆತ್ಮೀಯ ಕವಿ ಗೆಳೆಯರಾದ ಶ್ರೀ ಪುಷ್ಪರಾಜ್ ಚೌಟ ಅವರು ತಮ್ಮ ಫೇಸ್ ಬುಕ್ ಪ್ರೋಫೈಲ್ ಸ್ಟೇಟಸ್ ನಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಭಾಗವಹಿಸುವ ಇಚ್ಚೆ ಯಿಂದ ಪ್ರಕಟಣೆ ಭಿತ್ತರಿಸಿ ತಮ್ಮ ಗೆಳೆಯರನ್ನು ಸಹ ಪಾಲ್ಗೊಳ್ಲಲು ಪ್ರೇರೇಪಿಸಿದರು.ಅದರಂತೆ ನಾನೂ ಸಹ ಹೊರಟಿದ್ದೇನೆಂಬ ವಿಷಯ ತಿಳಿದೊಡನೆಯೇ ನಮ್ಮ ಬ್ಲಾಗಿನ ನಿರ್ವಾಹಕರೆಲ್ಲರೂ ಮೈಸೂರಿಗೆ ತೆರಳಲು ಅಣಿಯಾದರು. ಅಂದುಕೊಂಡಂತೆ ನಾನು ಮಂಗಳೂರಿನಿಂದ ಹೊರಟೆ.ಬೆಂಗಳೂರಿನಿಂದ ಗೆಳೆಯರಾದ ಪುಷ್ಪರಾಜ್ ಚೌಟ,ಸತೀಶ ಡಿ.ಆರ್.ರಾಮನಗರ,ಫರೇಶ್ ಸರಾಫ್ ಹೊರಟರು.ಮೈಸೂರಲ್ಲೇ ಇರುವ ಪ್ರಸಾದ್ ವಿ.ಮೂರ್ತಿ,ಪ್ರಮೋದ ಪಮ್ಮು ಮತ್ತು ಗಣೇಶ್  ಇವರುಗಳು ನಮ್ಮ ಜೊತೆಯಾದರು ಹಾಗೂ ನಮ್ಮ ಕನ್ನಡ ಬ್ಲಾಗಿನ ಕ್ರಿಯಾಶೀಲ ಸದಸ್ಯರಾದ ಮೈಸೂರಿನ ಸಹೋದರಿ ಸುನೀತಾ ಮಂಜುನಾಥ ಮತ್ತು  ಬೆಂಗಳೂರಿನ ಕೃಷ್ಣ ಮೂರ್ತಿ  ಎಮ್.ಎಸ್.ಅವರು ಸಹ ನಮ್ಮ ಕೈ ಜೋಡಿಸಿದರು.ನಾವೆಲ್ಲರೂ ಒಟ್ಟಾಗಿ ಸೇರಿ ಉಪಸ್ಥಿತರಿದ್ದು ಶುಭಕೋರಿದೆವು.

ಸಂದರ್ಭದಲ್ಲಿ ಮೂರೂ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ|| ಸಿ.ಪಿ.ಕೆ, ಫಕೀರ ಅವರ 'ಅಮ್ಮನ ಆಟೋಗ್ರಾಫ್' ಕಥಾ ಸಂಕಲನದ ಜೊತೆಗೆ ಬಿಡುಗಡೆಗೊಳಿಸುತ್ತಿರುವ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳು  ವಾಸ್ತವವಾಗಿ ಕಾವ್ಯಶಕ್ತಿಯನ್ನು ಪಡೆದುಕೊಂಡು ಸೊಗಸಾಗಿ ರಚಿತಗೊಂಡಿವೆ. ಕಾವ್ಯ ಮತ್ತು ಕಾದಂಬರಿ ಎರಡೂ ಪ್ರಕಾರದಲ್ಲಿ  ಒಂದು ಪ್ರತ್ಯೇಕ ಸಾಹಿತ್ಯ ರೂಪ ಪಡೆದು ಓದುಗ ವರ್ಗಕ್ಕೆ ಆಸಕ್ತಿಯನ್ನು ಕೆರಳಿಸುವಂತೆ ಮೂರು ಕೃತಿಗಳು ರಚನೆಗೊಂಡಿವೆ ಎಂದರು.ಕಾವ್ಯ ಎಂಬುದು ಒಂದು ಸರ್ವಾಂತರ್ಯಾಮಿ ಶಕ್ತಿಯಾಗಿದ್ದು 'ಕಾವ್ಯೇಷು  ನಾಟಕಂ ರಮ್ಯಂ' ಎಂಬಂತೆ ಎಲ್ಲ ರಚನೆಗಳಲ್ಲಿ ಕಾವ್ಯಾಂಶದ ಹರಿವು ದಟ್ಟವಾಗಿ ಹರಿದಾಡಿದೆ ಎಂದು  ಅವರು ಕೃತಿಗಳನ್ನು ಬಣ್ಣಿಸಿದರು.ಕಥೆ ಕವನಗಳು ಗದ್ಯರೂಪದಲ್ಲಿದ್ದರೂ ಭೇದ ಔಪಚಾರಿಕವಾಗಿದ್ದು ಕಾವ್ಯಶಕ್ತಿಯನ್ನು ಪಡೆದುಕೊಂಡು ಅಕ್ಷರ ರೂಪ ಪಡೆದಿರುವ ಮೂರು ಕತೃಗಳ ರಚನೆಗಳು ಸತ್ವಪೂರ್ಣವಾಗಿ ಹೊರಹೊಮ್ಮಿರುವುದಾಗಿ ಕೃತಿಗಳ ಕುರಿತು ವಿಷಧೀಕರಿಸಿದರು.

ಸಂತೆಯೊಳಗೆ ಕಳೆದು ಹೋದ 'ಸಂತ'ಕವಿ ವೀರಭದ್ರ

'ಮಂಕು ಮಡೆಯನ ಕೊಂಕು ನುಡಿಗಳು' ಕೃತಿಯು ಕಾಲಾತೀತವಾಗಿದ್ದು ಮುವತ್ತು ವರ್ಷಗಳ ನಂತರ ಪ್ರಕಟಗೊಂಢಿದ್ದರೂ ಸಕಾಲಿಕ ಸ್ವರೂಪ ಪಡೆದಿದೆ.ಎಲ್ಲ ಕಾವ್ಯವೂ ಸಮಕಾಲೀನವಾಗುತ್ತವೆ ಎಂದು ತಿಳಿಸಿದ ಸಿ.ಪಿ.ಕೆ ವೀರಭದ್ರ ಅವರ ಕೃತಿಯಲ್ಲಿ ಇರುವುದೆಲ್ಲವೂ ವೀವೇಕದ ಅನುಭವ ಸಂಪನ್ನ ಉಕ್ತಿಗಳಾಗಿದ್ದು ವಕ್ರೋಕ್ತಿಗಳಂತೆ ಸುಂದರವಾಗಿ ಚಿತ್ರಿತಗೊಂಡಿವೆ ಎಂದು ವಿವರಿಸಿದರು.ಸಂತೆಯೊಳಗೆ ಕಳೆದು ಹೋದ ಒಬ್ಬ ಸಂತ ಕವಿ 'ವೀರಭದ್ರ' ಅವರಾಗಿದ್ದು ವ್ಯಾಖ್ಯೆ,ವಿಡಂಬನೆ,ಬೋಧೆಗಳನ್ನು ಸ್ವಂತಿಕೆಯೊಡನೆ,ಸರ್ವೋದಯದ ಆದರ್ಶ ತತ್ವಗಳನ್ನು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ಅತ್ಯಂತ ಮಾರ್ಮಿಕವಾಗಿ ನುಡಿದರು. ಇಂಥ ಕವಿ ಸಹೃದಯಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ   ಹುಚ್ಚು ಸಂತೆಯಲ್ಲಿ   ಸಂತ ಕವಿ ಕಳೆದು ಹೋಗಿದ್ದಾರೆಂದು ಸರ್ಕಾರದ ಕುರುಡು ವ್ಯವಸ್ಥೆಗೆ ಛಾಟಿ ಏಟು ನೀಡಿದರು.


ಸಾಮಾಜಿಕ ಧ್ವನಿ ಪ್ರಜ್ಞೆಯ ಸಂಖ್ಯೇತ 'ಭುವಿಬಾಲೆ'

ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ ಭುವಿಬಾಲೆ ಕೃತಿ ಕುರಿತು ಮಾತನಾಡಿದ ಸಿ.ಪಿ.ಕೆ, ಪ್ರೀತಿಯ ಕಾವ್ಯವಾಗಿ,ಬೆಳಕಿನ ಕಾವ್ಯವಾಗಿ ನವೋದಯ ಮತ್ತು ಬಂಡಾಯ ಸಾಹಿತ್ಯವೆಂಬ ಎರಡು ಪ್ರಧಾನ ಮಾರ್ಗಗಳಲ್ಲಿನ ಮೂಸೆಯಲ್ಲಿ ಈ ಕವನ ಸಂಕಲನವು ಮೂಡಿಬಂದಿದೆ ಎಂದರಲ್ಲದೇ  ಸಾಮಾಜಿಕ ಧ್ವನಿ ಪ್ರಜ್ಞೆಯನ್ನು ಮೆರೆದಿರುವ ಗಟ್ಟಿಕಾವ್ಯವಾಗಿದೆ ಹೊರಹೊಮ್ಮಿದೆ ಎಂದು ಸೊಗಸಾಗಿ ವಿವರಿಸಿದರು.ಹೃದಯಸ್ಪರ್ಷಿಯಾದ ಹೆಣ್ಣಿನ ಹಾಡಿನ ಕರುಣಾ ಜನಕ ಕವನವೇ ಭುವಿಬಾಲೆಯಾಗಿದೆ. ಹೂತು ಹೋದ ಮನುಷ್ಯ ಪ್ರೀತಿಯ ಸೆಲೆಯನ್ನು ಚಿತ್ತಾಕರ್ಷಕವಾಗಿ ಮನಮುಟ್ಟುವಂತೆ ವಿವರಿಸುವ ಕೃತಿ ಇದಾಗಿದ್ದು ಓದಿ ಆಸ್ವಾದನಗೊಳಿಸುವುದೆಂದು ಸಿ.ಪಿ.ಕೆ ತಿಳಿಸಿದರು.

ಮನಕಲುಕುವ ಕಥೆಗಳ ಸುಂದರ ನಿರೂಪಣೆಯೇ 'ಅಮ್ಮನ ಆಟೋಗ್ರಾಫ್'
ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ(ಫಕೀರ) ಅವರ ಕೃತಿ ಕುರಿತು ಅತ್ಯಂತ ಹರ್ಷಚಿತ್ತರಾಗಿ ಅನಿಸಿಕೆ ವ್ಯಕ್ತಪಡಿಸಿದ ಡಾ|| ಸಿ.ಪಿ.ಕೆ.ಅವರು ವಿಶಿಷ್ಟ ಗುಣವುಳ್ಳ ಅರ್ಥವತ್ತಾದ ಶೀರ್ಷಿಕೆ ಹೊತ್ತು ಹೊರಬಂದಿರುವ "ಅಮ್ಮನ ಆಟೋಗ್ರಾಫ್" ಕಥಾ ಸಂಕಲನವು ಮನಕಲುಕುವ ಕಥೆಗಳನ್ನು ಒಳಗೊಂಡಿರುವ ಸುಂದರ ನಿರೂಪಣೆಯಾಗಿದೆ ಎಂದರು.ತೀರ ಸರಳವಾಗಿಲ್ಲದ ಸಂಕೀರ್ಣ ಕಥೆಗಳನ್ನು ಹೆಣೆದಿರುವ ಶ್ರೀಧರ್ 'ಫಕೀರತ್ವ" ನೈಜ ತತ್ವವನ್ನು ಕೃತಿಯಲ್ಲಿಯೇ ನಿರೂಪಿಸಿದ್ದಾರೆಂದರು.ಸೌಧಾಮಿನಿ ಅಪಾರ್ಟಮೆಂಟ್ 'ಸೌಧಾಮಿನಿಯ ಕಥೆಯಂತೂ ವಾಸ್ತವವಾಗಿದೆ ಎಂದುಕೊಂಡೆ,ಆದರೆ ಅದು ಭ್ರಾಮಕ ಜಗತ್ತಿನ ರೋಚಕ ಹಾಗೂ ಕಾವ್ಯಾತ್ಮಕ ಕಥೆಯಾಗಿದೆ' ಎಂದು ಅರ್ಥಪೂರ್ಣವಾಗಿ ಬಣ್ಣಿಸಿದರು.ಫಕೀರನ ಬರಹ ಶಕ್ತಿಯಲ್ಲಿ ಹೊಸ ವಸ್ತು ನಾವಿನ್ಯತೆಯನ್ನೂ ನಿರೂಪಣೆಯ ನವ್ಯತೆಯನ್ನೂ ಕಾಣಬಹುದಾಗಿದ್ದು ಸತ್ವಯುತ ಶ್ರೀಮಂತ ಕವಿ ಕಥೆಗಾರನಾಗುವ ಲಕ್ಷಣವನ್ನು "ಅಮ್ಮನ ಆಟೋಗ್ರಾಫ್" ಕೃತಿಯಲ್ಲಿ ಮೂಡಿಸಿದ್ದು ಫಕೀರ ಕನ್ನಡ ನಾಡಿನ ಮನೆಮಾತಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಮೂರು ವಿಶಿಷ್ಟ ಕೃತಿಗಳ ಬಿಡುಗಡೆ ಜೊತೆಯಲ್ಲಿಯೇ ಅಧ್ಯಾಪಕ,ಅನುವಾದಕ,ಕವಿ,ಕಥೆಗಾರರಾಗಿ ಹೆಸರುವಾಸಿಯಾಗಿರುವ ಪ್ರೋ.ವೀರಭದ್ರ ಅವರಿಗೆ "ಸಮ್ಮಿಲನ ಸಾಹಿತ್ಯ ಪ್ರಶಸ್ತಿ"ನೀಡಿ ಗೌರವಿಸಲಾಯಿತು.ನಂತರ ಮೂರೂ ಕೃತಿಗಳ ಬಗ್ಗೆ ಪ್ರಸಿದ್ದ ಲೇಖಕರಾದ ಡಾ|| ಮಳಲಿ ವಸಂತ ಕುಮಾರ್, ಡಾ||ಕೆ.ಲೀಲಾ ಪ್ರಕಾಶ್ ಮತ್ತು ಪ್ರೋ.ಮಲೆಯೂರು ಗುರುಸ್ವಾಮಿ ಅರ್ಥಪೂರ್ಣವಾಗಿ ಮಾತನಾಡಿ ಪರಿಚಯಿಸಿದರು.ನಂತರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಇಡೀ ಸಮಾರಂಭಕ್ಕೆ ಕಳೆಯನ್ನು ನೀಡಿದ ಡಾ|| ದೇ.ಜವರೇ ಗೌಡ (ದೇಜಗೌ) ಅವರು ಸಮಾರೋಪ ಭಾಷಣ ಮಾಡಿದರು.ನಮ್ಮ ಸಮಯ ಮೀರಿದ್ದರಿಂದ ಸ್ವಸ್ಥಾನಗಳಿಗೆ ತೆರಳಬೇಕಿದ್ಗರಿಂದ ಹೊರಡುವುದು ಅನಿವಾರ್ಯವಾಯಿತು.ಹೀಗಾಗಿ ದೇಜಗೌ ಅವರ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಲಲು ನನಗೆ ಸಾಧ್ಯವಾಗಿಲ್ಲ.

ಗಾಯಕಿ ಶಾಂತಾ ಜಗದೀಶ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಪಂಚಮಿ ಪ್ರಕಾಶನದ ಶ್ರೀಧರ್ ಬನವಾಸಿ ಎಲ್ಲರನ್ನೂ ಸ್ವಾಗತಿಸಿದರು.ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಮ್ ಶ್ರೀಧರ್ ಪ್ರಾಸ್ತಾವಿಕ ನುಡಿಗೈದರು.ಕುವಲ ಯಲ್ಲಪ್ಪ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಗಣ್ಯ ಸಾಹಿತಿಗಳು,ಚಿಂತಕರು,ಲೇಖಕರು ಮತ್ತು ಉದಯೋನ್ಮುಖ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಇಡೀ ಸಮಾರಂಭವನ್ನು ಶೋಭೆಗೊಳಿಸಿದರು.

ಬ್ಲಾಗ್ ಗೆಳೆಯ ಗಣೇಶ್ ಅವರು ನಮಗೆ ವಿಶೇಷವಾದ ಮಧ್ಯಾಹ್ನದ ಆದರಾತಿಥ್ಯ ನೀಡಿದರು.ರಾತ್ರಿ ಗೆಳೆಯ ಪುಷ್ಪರಾಜ್ ಅವರು ಔತಣ ನೀಡಿ ನೆನಪು ಚಿರವಾಗಿರುವಂತೆ ಮಾಡಿದರು.ಪ್ರಸಾದ ಮತ್ತು ಪಮ್ಮು ನಮ್ಮೊಂದಿಗೆ ಬೆರೆತುಕೊಂಡು ಪ್ರೀತಿಯಿಂದ ನೋಡಿಕೊಂಡರು.ಸತೀಶ,ಪುಷ್ಪರಾಜ್ ಮತ್ತು ಫರೇಶ ಅವರು ನನ್ನನ್ನು ನಕ್ಕು ನಲಿಸಿ ಸ್ನೇಹ ಹಸಿರಾಗಿಸಿದರು.ಗೆಳೆಯ ಶ್ರೀಧರ ಅವರ ಕಥಾ ಸಂಕಲನದ ಬಿಡುಗಡೆಯ ದಿನವು ನಮ್ಮ ಜೀವಮಾನದ ಅವಿಸ್ಮರಣೀಯ ದಿನವಾಯಿತೆಂದು ಬೇರೆ ಹೇಳ ಬೇಕೆ?
ವರದಿಬನವಾಸಿ ಸೋಮಶೇಖರ್.


Saturday, 13 October 2012

"...........ಆ ಮಹಾನ್ ವ್ಯಕ್ತಿ ಮಡಿದು ಆರು ವರ್ಷಗಳಾದವು" -ಪ್ರತಾಪ್ ಸಿಂಹ

ಸುಜ್ಞಾನವಂತರಾದ ಶ್ರೀಯುತ ಪ್ರತಾಪ್ ಸಿಂಹ ರವರಿಗೆ ಸಪ್ರೇಮ ನಮಸ್ಕಾರ.

ನಿಮ್ಮ ಈ ದಿನದ ಕನ್ನಡ ಪ್ರಭದಲ್ಲಿನ " ದಲಿತರ ಮತಗಳು ಮಾರಾಟಕ್ಕಿಲ್ಲ ಎಂದ ಆ ಮಹಾನ್ ವ್ಯಕ್ತಿ ಮಡಿದು ಆರು ವರ್ಷಗಳಾದವು" ಲೇಖನವನ್ನು ಓದಿ ಅತ್ಯಾನಂದವಾಯಿತು.ಮೊದಲಿನಿಂದಲೂ ನಿಮ್ಮ ಬರಹಗಳನ್ನೂ ಓದಿ ಆಸ್ವಾದಿಸಿರುವೆ.ಸಮಾಜಮುಖಿಯಾಗಿದ್ದು ಬದ್ಧತೆ ಹೊಂದಿ ಬರೆದ ಲೇಖನದಲ್ಲಿ ಎಲ್ಲಿಯೂ ಯಾವ ಪೂರ್ವಾಗ್ರಹಗಳೂ ಕಾಣ ಬರಲಿಲ್ಲ.ಈ ಸಾರ್ವಭೌಮ ಪರಮಾಧಿಕಾರದ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಒಂದು ವರ್ಗಕ್ಕೆ ನೀವು ಕನ್ನಡಿ ಹಿಡಿದಿದ್ದೀರಿ.ಜೊತೆಗೆ ಹೋರಾಟಗಾರನಿರಬೇಕಾದ ಉದ್ದೇಶವೇನು ಎಂಬುದನ್ನು ಸರ್ವರಿಗೂ ಮನಗಾಣಿಸಿದ್ದೀರಿ. 70 ರ ದಶಕದ ನಂತರ ಕನ್ನಡ ನಾಡಿನಲ್ಲಿ ಉದಯಿಸಿ ಹೋರಾಟದ ಕಿಚ್ಚು ಹಚ್ಚಿದ್ದ ದಲಿತ ಚಳುವಳಿ,ಸ್ವಾರ್ಥ-ಲಾಲಸೆಗಳಿಗೊಳಗಾಗಿ ದಿಕ್ಕೆಟ್ಟು ಹೋದ ಬಗ್ಗೆಯೂ,ಮುಂದೆ ಈ ಜನಾಂಗ ಒಗ್ಗೂಡಬೇಕಾದ ಅವಶ್ಯಕತೆಯ ಬಗ್ಗೆಯೂ ನಿಮ್ಮ  ಲೇಖನಿ ಬೆಳಕು ಚೆಲ್ಲಲೆಂದು ಆಶಿಸುತ್ತೇನೆ.ನಿಮ್ಮಲ್ಲಿರುವ ಹರಿತವಾದ ಲೇಖನಿಯು ಹೀಗೆ ಸರ್ವರನ್ನೂ ತಲುಪುವ ಮಾನದಂಡವಾಗಿ ನಮ್ಮನ್ನು ಪ್ರೇರಿಸಲಿ ಎಂದಷ್ಟೇ ಹೇಳಬಲ್ಲೆ.


ಪ್ರೀತಿಯಿಂದ,

ತಮ್ಮ ಅಭಿಮಾನಿ.

ಬನವಾಸಿ ಸೋಮಶೇಖರ್.

Tuesday, 21 August 2012

ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ:ಸುಧಾ ಮೂರ್ತಿಯವರ ದೃಷ್ಠಿಯಲ್ಲಿ

'ಈ ಜಗತ್ತು ಕಂಡ ಅದ್ಭುತ ಹಾಗೂ ಜೀವಂತ ವ್ಯಕ್ತಿಯ ಹೋರಾಟದ ಕಥೆಯ ತಿರುಳನ್ನು ಕಣ್ಣಿಗೆ ಕಟ್ಟಿದ ನಮ್ಮ ಕನ್ನಡ ನಾಡಿನ ಹೆಮ್ಮೆಯ ಆದರ್ಶ ಮತ್ತು ಮಾದರಿ ಮಹಿಳೆ  ಹಿರಿಯ ಸಹೋದರಿ ಸುಧಾ ನಾರಾಯಣ ಮೂರ್ತಿ.'

ಈ ದಿನದ ಕನ್ನಡ ಪ್ರಭ (21-08-2012) ರ ಪತ್ರಿಕೆಯ ಮುಖ ಪುಟದ "ಸೂಚಿ ಯೊಂದಿಗೆ ಒಂದು ಸುಂದರ ಸಂಜೆ" ಎಂಬ ವಿಶಿಷ್ಟ ಹಾಗೂ ಮೌಲಿಕ ಚಿಂತನೆಯ ಅಮೋಘ ಅನುಭವವನ್ನು ಸುಧಾ ಮೂರ್ತಿಯವರ ಲೇಖನಿಯಿಂದ ಓದಿ ಪುಳಕಿತನಾದೆ.ಕಣ್ಣಾಲಿಗಳು ತೇವಗೊಂಡವಲ್ಲದೇ ಆ ಮಹಿಳೆಯ ಧೀರೋದಾತ್ತ ಧೀಃಶಕ್ತಿ ವ್ಯಕ್ತಿತ್ವ ಹಾಗೂ ಆ ಮಹಾ ತಾಯಿಯ ಹೋರಾಟದ ತಲಸ್ಪರ್ಷಿ ನಿರೂಪಣೆಯನ್ನು ತಿಳಿದು ರೋಮಾಂಚನವಾಯಿತು.

ಮಯನ್ ಮಾರ್ (ಬರ್ಮಾ) ದೇಶದ ಜನರಲ್ ಆನ್ ಸಾನ್ ಮತ್ತು ಸೂಚಿ ದಂಪತಿಗಳ ಪುತ್ರಿಯೇ ಈ 'ಆನ್ ಸೂಚಿ'.ಇವಳ ಜೀವನವೇ ಒಂದು ದೀರ್ಘ ಹೋರಾದ ಕಥೆಯಾದ ಬಗೆಯನ್ನು ಸುಧಾ ನಾರಾಯಣ ಮೂರ್ತಿಯವರು ತಮ್ಮ ಲೇಖನಿಯಿಂದ ಪಡೆಮೂಡಿಸಿ ಅವರ ಸ್ಪೂರ್ಥಿಯುತ ಬದುಕಿನ ಚಿತ್ತಾಕರ್ಷಕ ವ್ಯಕ್ತಿತ್ವದ ಘಮವನ್ನು ಕನ್ನಡ ಪ್ರಭ ಓದುಗರಿಗೆ ಉಣ ಬಡಿಸಿದ್ದಾರೆ.

14-08-2012 ರಂದು  "ನಿಪಿಡೋರ್ " ನಲ್ಲಿ ಸಂಜೆ 5-ಘಂಟೆಗೆ ತಮ್ಮ ಪತಿ ಭಾರತ ದೇಶದ ಹೆಮ್ಮೆಯ ಹಾಗೂ ಕನ್ನಡ ನಾಡಿನ ಕೀರ್ತಿಶಾಲಿ ಸಾಧಕ ಸಂಪನ್ನ ಡಾ|| ನಾರಾಯಣ ಮೂರ್ತಿ ಹಾಗೂ ತಮ್ಮ ಸಹೋದರಿಯರೊಂದಿಗೆ ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ ಯನ್ನು ಭೇಟಿಯಾಗಿ ಅವರೊಂದಿಗೆ ಕಳೆದ ಮಧು ಕ್ಷಣಗಳನ್ನು ಕಣ್ಣಿಗೆ ಕಟ್ಟಿದ್ದಾರೆ.ಈ ಅಪರೂಪದ ಹಾಗೂ ಅವಿಸ್ಮರಣೀಯವಾಗುವ ಲೇಖನವನ್ನು ಈ ದಿನದ ಕನ್ನಡ ಪ್ರಭದಲ್ಲಿ ಓದಿ ನಮ್ಮ ಹೋರಾಟದ ಬದುಕಿಗೆ ಸ್ಪೂರ್ಥಿ ಪಡೆಯಬಹುದು.

ಸೂಚಿಯವರು-ಸುಧಾ ಮೂರ್ತಿಯವರನ್ನು ಬೀಳ್ಕೊಡುವಾಗ ಸುಧಾ ಮ್ಯಾಡಮ್ ಅವರು ನಿವೇದಿಸಿಕೊಂಡ ಈ ಸಾಲುಗಳನ್ನು ಓಮ್ಮೆ ಓದಿ.
  " ಮ್ಯಾಡಮ್ ಭಾರತೀಯ ಸಂಸ್ಕೃತಿಯಲ್ಲಿ ನಮಗಿಂತ ಹಿರಿಯರಾದ,ಜ್ಞಾನದಿಂದಲೂ ಗುಣದಿಂದಲೂ ಶ್ರೇಷ್ಠರಾದ ವ್ಯಕ್ತಿಗಳಿಗೆ ಕಾಲು ಮುಟ್ಟಿ ನಮಸ್ಕರಿಸಿ ಗೌರವ ಸೂಚಿಸುವದು ಪದ್ಧತಿ.ಈ ಪದ್ಧತಿ ಅನೇಕ ಕಾಲದಿಂದಲೂ ನಡೆದು ಬಂದಿದೆ.ನೀವು ನನ್ನ ದೃಷ್ಠಿಯಲ್ಲಿ ಎಲ್ಲ ರೀತಿಯಿಂದಲೂ ಈ ನಮಸ್ಕಾರಕ್ಕೆ ಯೋಗ್ಯರು,ನನಗೆ ನೀವು 'ಬೇಡ' ಅನ್ನಕೂಡದು ಎಂದಾಗ ತುಂಬಾ ಸಂತೋಷ ಮತ್ತು ಅಂತಃಕರಣದಿಂದ ನನ್ನ ಎರಡೂ ಕೈ ಹಿಡಿದು ಈ ಪದ್ಧತಿ ನಮ್ಮ ಬೌದ್ಧ ಧರ್ಮದಲ್ಲಿಯೂ ಇದೆ ಎಂದರು,ನಾನು ಬಾಗಿ ಅವರ ಕಾಲಿಗೆ ನಮಸ್ಕರಿಸಿದೆ."

(ಜೀವನ ಸ್ಫರ್ಥಿಗೆ ಸೂಚಿಯ ಹೋರಾಟದ ಬದುಕು ನಮಗೆ ಆದರ್ಶಪ್ರಾಯವಾಗಲಿ ಎಂಬುದೇ ನನ್ನಾಶಯ)
   
=ಬನವಾಸಿ ಸೋಮಶೇಖರ್.





Tuesday, 5 June 2012

ಅಸಮಾನತೆ ಮತ್ತು ಮೌಢ್ಯತೆಗಳ ರುದ್ರ ನರ್ತನವಾಗುವುದು ಬೇಡ.


ಜಾತಿ,ಅಸಮಾನತೆ,ಶೋಷಣೆ,ಪುರೋಹಿತಶಾಯಿಯಂಥ ಕಮಟು ಕಂಧಾಚಾರಗಳಿಗೆ ಸೆಡ್ಡು ಹೊಡೆದು ವಿಶ್ವಮಾನವತೆಯ ಸಂದೇಶ ಸಾರಿದ್ದ ಸಾಹಿತ್ಯ ದಿಗ್ಗಜ,ರಸ ಋಷಿ,ಮಾನವತಾವಾದಿ ಕುವೆಂಪು ಅವರನ್ನು ತಮ್ಮ ಜಾತಿ ಕುಲ ಬಾಂಧವನೆಂದು ಸಮಾವೇಷದಲ್ಲಿ ಮೆರೆದಾಡಿದ ನಮ್ಮ ಒಕ್ಕಲಿಗ ಬಂಧುಗಳ ಮನೋಸ್ಥಿತಿಯನ್ನು ನೋಡಿ ಮರುಕುಂಟಾಗುವುದು.
ಗುಡಿ,ಚರ್ಚು,ಮಸೀದಿಗಳನ್ನು ಬಿಟ್ಟು ಹೊರಬನ್ನಿ...ಎಂದು ಕರೆ ನೀಡಿ ಮನುಜ ಮತವೇ ವಿಶ್ವಮತವೆಂದು ಸಾರಿ ಹೇಳಿದ ಕುವೆಂಪು ಅವರನ್ನು ತಮ್ಮ ಜಾತಿ ನೆಲೆಯಲ್ಲಿ ಅನಾವರಣಗೊಳಿಸಿಕೊಂಡು ಅವರ ಶ್ರೀಮಂತ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಅಪಮಾನ ಮಾಡಿರುವುದು ಖೇದಕರ ಸಂಗತಿಯಾಗಿದೆ. ಯಾವ ಗೊಡ್ಡು ವ್ಯವಸ್ಥೆಯನ್ನು ಕುವೆಂಪು ಅವರು ವಿರೋದಿಸಿ ಅದರಂತೆ ಬಾಳಿದರೋ  ಅದೇ ವ್ಯವಸ್ಥೆಯನ್ನು ವೈಭವೀಕರಿಸಿ ಅವರ ಮಹಾನ್ ವ್ಯಕ್ತಿತ್ವಕ್ಕೆ ಅಕ್ಷರಶಃ ಮಸಿ ಬಳಿಯುವ ಮತ್ತು ಅವರನ್ನು ಒಕ್ಕಲಿಗ ಜಾತಿಗೆ ಸೀಮಿತಗೊಳಿಸುವ ಸಂಕುಚಿತ ಮನೋಭಾವದ ದರ್ಶನವೂ ಆಯಿತು.ಜ್ಞಾನ ಮತ್ತು ಸ್ವಾಭಿಮಾನಗಳೇ ತಮ್ಮ ತಮ್ಮ ಏಳಿಗೆಗೆ ಊರುಗೋಲಾಗಬೇಕು. ಧೀಮಂತ ವ್ಯಕ್ತಿಗಳ ಭಾವ ಚಿತ್ರ,ಹೆಸರುಗಳನ್ನು ಹೇಳಿಕೊಂಡು ಬೇಳೆ ಬೇಯಿಸಿಕೊಳ್ಳುವ ಜಾಣತನ ಬೇಡ.ಪುರೋಹಿತಶಾಯಿಯನ್ನು ವೈಭವೀಕರಿಸಿದಷ್ಟೂ ಅಸಮಾನತೆ ಮತ್ತು ಮೌಢ್ಯತೆಗಳ ರುದ್ರ ನರ್ತನವಾಗುವುದೆಂಬ ತಿಳುವಳಿಕೆ ನಮ್ಮ ಬಂಧುಗಳಲ್ಲಿ ಮೂಡಿ ಬರಲಿ.
= ಬನವಾಸಿ ಸೋಮಶೇಖರ್.
   05-06-2012

Sunday, 15 April 2012

ಎಲ್ಲಾ ನೀನೆ ನೀನೆ!.

ನನ್ನ ಹಾಡು ನನ್ನದಲ್ಲ
ನನ್ನ ಪಾಡು ನನ್ನದಲ್ಲ
ನನ್ನ ಹಾಡು ನನ್ನ ಪಾಡು
ಎಲ್ಲಾ ನೀನೆ ನೀನೆ!.
= ಬನವಾಸಿ ಸೋಮಶೇಖರ್.

Saturday, 14 April 2012

ಸಮಾನತೆ ಕನಸಿಗೆ ಬೆಳಕು ನೀಡಿದ ಪ್ರಜಾವಾಣಿ.

ಮಾನ್ಯ ಸಂಪಾದಕರು,ಪ್ರಜಾವಾಣಿ ಬೆಂಗಳೂರು.

ಮಾನ್ಯರೆ,ಇಂದಿನ ಪ್ರಜಾವಾಣಿ ಪತ್ರಿಕೆಯನ್ನು ನೋಡುತ್ತಲೇ ಆನಂದಿತನಾದೆ.ಅಮೋಘ ಮತ್ತು ಅದ್ವಿತೀಯ ಸೌಂದರ್ಯವನ್ನು ಆಸ್ವಾದಿಸಿದ ಅನುಭವವಾಯಿತು.ಪತ್ರಿಕೆಗೆ ಇರುವ ಸಾಮಾಜಿಕ ಬದ್ಧತೆ, ಶೋಷಿತ ಹಾಗೂ ತುಳಿತಕ್ಕೊಳಗಾದ ಜನವರ್ಗದ ಬಗ್ಗೆ ಇರುವ ಶ್ರದ್ಧಾ ಕಾಳಜಿಯನ್ನು ತಿಳಿದು ಹರ್ಷಿತನಾದೆ.ಪ್ರಜಾವಾಣಿಯನ್ನು ಕಳೆದ 20 ವರ್ಷಗಳಿಂದ ಒಂದಿನವೂ ತಪ್ಪದೇ ಓದುತ್ತಿದ್ದೇವೆ.ಅದರ ತತ್ವ,ನೀತಿ,ಸಿದ್ಧಾಂತಗಳಿಗೆ ಮಾರುಹೋಗಿದ್ದೇವೆ.ಪ್ರೋ.ರಾಬಿನ್ ಜೆಫ್ರಿ ಮಾತುಗಳಿಂದ ಪ್ರೇರಿತರಾಗಿ ದಲಿತರ ನೋವು ನಲಿವುಗಳಿಗೆ ಸ್ಪಂದಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಾಬಾ ಸಾಹೇಬರ ಜನ್ಮ ದಿನದಂದು ಈ ದಿನದ (14-04-2012) ಸಂಚಿಕೆಯನ್ನು ಚಿತ್ತಾಕರ್ಷಕವಾಗಿ ಹೊರ ತಂದಿದ್ದೀರಿ.ಕರ್ನಾಟಕ ಮಾಧ್ಯಮ ಕ್ಷೇತ್ರದ ಇತಿಹಾಸ ಪುಟಗಳಲ್ಲಿ ಪ್ರಜವಾಣಿಯ ಈ ಸಂಚಿಕೆ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿತೆಂದು ಹೇಳ ಬಯಸುತ್ತೇನೆ.ದೇವನೂರು ಮಹಾದೇವರನ್ನು ಅತಿಥಿ ಸಂಪಾದಕರನ್ನಾಗಿ ಗೌರವಿಸುವ ಮೂಲಕ ಪತ್ರಿಕೆ ಹಿರಿಮೆಯನ್ನೇ ಮೆರೆದಿದೆ.ಅವರ ಹಸ್ತಾಕ್ಷರಗಳುಳ್ಳ " ಸಮಾನತೆ ಕನಸನ್ನು ಮತ್ತೆ ಕಾಣುತ್ತ" ಲೇಖನವನ್ನು ಓದಿ ರೋಮಾಂಚನವಾಯಿತು.ಪತ್ರಿಕೆಯ  ಪ್ರತಿ ಪುಟಗಳಲ್ಲೂ ದಲಿತರ ಬದುಕಿನ ನೈಜ ಸ್ಥಿತಿಗಳನ್ನು ಅನಾವರಣಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಜಾಗ್ರತಗೊಳಿಸಲಾಗಿದೆಸುದೇಶ ದೊಡ್ಡಪಾಳ್ಯ,ಡಾ.ನಟರಾಜು ಹುಳಿಯಾರ್,ಎಚ್.ಎ.ಅನಿಲ್ ಕುಮಾರ್,ಸುಬ್ಬು ಹೊಲೆಯಾರ್,ಎನ್.ಕೆ.ಹನುಮಯ್ಯ,ಡಾ.ಎಲ್.ಹನುಮಂತಯ್ಯ,ಇಂದೂಧರ ಹೊನ್ನಾಪುರ,ಪ್ರೊ.ರಾಜೇಂದ್ರ ಜೆನ್ನಿ,ಪ್ರೊ.ಗೋಪಾಲ್ ಗುರು,ಆನಂದ ತೇಲ್ ತುಂಬ್ಡೆ,ಕೆ.ಎಲ್.ಚಂದ್ರಶೇಖರ್ ಐಜೂರ್ ಮತ್ತು ಪ್ರೊ.ರವಿವರ್ಮ ಕುಮಾರ್ ಅವರುಗಳ ಲೇಖನ,ಬರಹಗಳು ಪರಿಪೂರ್ಣ ಮಾಹಿತಿಯನ್ನು ಹೊರತೆಗೆದಿದ್ದು ದಲಿತ ಪ್ರಜ್ಞೆಗೆ ಬೆಳಕು ನೀಡಿವೆ.ಅತಿಥಿ ಸಂಪಾದಕರ 'ಸಾಮಾಜಿಕ ಪೊಲೀಸರು ಅಗತ್ಯ'ಸಂಪಾದಕೀಯ ಬರಹವು ಸರ್ಕಾರದ ಕಣ್ಣು ತೆರೆಸುವಲ್ಲಿ ಸಫಲವಾಗಬುದೆಂದು ಭರವಸೆ ಮೂಡಿಸಿದೆ.ಇಂಥ ವಿನೂತನವಾದ ಪ್ರಯತ್ನಕ್ಕೆ ಕೈ ಹಾಕಿ ಸಾಕಾರಗೊಳಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆತ್ಮಕ್ಕೆ ಅಕ್ಷರಶಃ ಗೌರವಾದರಗಳನ್ನು ಸಲ್ಲಿಸಿದ್ದೀರಿ.ಪತ್ರಿಕೆಗೂ ಅದರ ಸಂಪೂರ್ಣ ಬಳಗಕ್ಕೂ ಅಭಿನಂದನೆಗಳು ಸಲ್ಲುತ್ತವೆ.ಈ ಕಾಯಕ ನಿರಂತರವಾಗಿ ಸಾಗುತ್ತಿರಲಿ.
 
 
        ತಮ್ಮ ಅಭಿಮಾನಿ

ಬನವಾಸಿ ಸೋಮಶೇಖರ.ಮ0ಗಳೂರು.
9480201994

Tuesday, 10 April 2012

ಕಪ್ಪು ಮೋಡ: ಕೆಂಪು ಚುಕ್ಕೆ! ಹಿಂದೂ ಸಮಾಜ ಚಿಕಿತ್ಸಕ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್.

ಕಪ್ಪು ಕಪ್ಪು ಮೋಡದಲಿ
ಕಗ್ಗತ್ತಲ ಬಾನಿನಲಿ
ಮೂಡಿತೊಂದು ಕೆಂಪು ಚುಕ್ಕೆಯೋ
ಓ.........ರಾಮಣ್ಣ ಬಡವರೆದೆಯ ಆಶಾಕಿರಣವೋ!

ಈಗ್ಗೆ ಒಂದು ನೂರಾ ಇಪ್ಪತ್ತೊಂದು ವರ್ಷಗಳ ಹಿಂದೆ ಕಬೀರ್ ಪಂಥದ ತೇಜಃಸ್ವರೂಪಿಯಾದ ಸಾಧುವರೇಣ್ಯರು ಮೋಹಿಗೆ ಭೇಟಿ ಇತ್ತ ಸಂದರ್ಭದಲ್ಲಿ ಅಲ್ಲಿಯೇ ಸೈನಿಕ ಶಾಲೆಯ ಮುಖ್ಯೋಪಾಧ್ಯಾಯ ವೃತ್ತಿಯಲ್ಲಿದ್ದ ರಾಮಜೀ ಸಕ್ಪಾಲ ಮತ್ತು ಕಬೀರ್ ಪಂಥಾನುಯಾಯಿ ದೈವ ಭಕ್ತೆ ಭೀಮಾಬಾಯಿ ದಂಪತಿಗಳಿಗೆ ದರ್ಶನ ಭಾಗ್ಯ ನೀಡಿ ಅವರ ಮೇಲೆ ಕೃಪಾವಲೋಕನ ಬೀರಿ ಹೃದಯ ತುಂಬಿ ಹರಸುತ್ತಾರೆ.ಹದಿಮೂರು ಮಕ್ಕಳನ್ನು ಪಡೆದಿದ್ದ ರಾಮಜೀ ಸಂಸಾರದ ತಾಪತ್ರಯಗಳನ್ನು ಆ ಸಾಧುಗಳ ಬಳಿ ಹೇಳಿಕೊಳ್ಳುತ್ತಾ ಬರುವ ಅಲ್ಪ ಸಂಬಳದಿಂದ ಮಕ್ಕಳನ್ನು ಸಾಕುವುದು ಕಷ್ಟವಾಗುವುದು ಎಂಬ ವಾಸ್ತವವನ್ನು,ಭಕ್ತಿ ಭಾವದಿಂದ ಅಂತರಂಗವನ್ನು ಬಿಚ್ಚಿಡುತ್ತಾರೆ.ಸಾಧುಗಳು ಅವರನ್ನು ಪ್ರೀತಿಯಿಂದ ಸಂತೈಸುತ್ತಾ ಆ ಬಗ್ಗೆ ಚಿಂತಿಸಬೇಡ,"ನೀನೂ ಮತ್ತು ನಿನ್ನ ಹೆಂಡತಿಯೂ ಪುಣ್ಯಶಾಲಿಗಳು.ಮಹಾ ಪುರುಷನೊಬ್ಬ ನಿಮಗೆ ಮಗನಾಗಿ ಜನಿಸುತ್ತಾನೆ.ನಿನ್ನ ವಂಶಕ್ಕವನು ಬೆಳಕಾಗುತ್ತಾನೆ.ಜಗತ್ತಿನಲ್ಲೆಲ್ಲ ಅವನ ಕೀರ್ತಿ ಪಸರಿಸಿ ಜಗದ್ವಿಖ್ಯಾತವಾಗುವುದು"ಎಂಬ ದಿವ್ಯವಾಣಿಯೊಂದಿಗೆ ಆಶೀರ್ವದಿಸಿ ಮರಳುತ್ತಾರೆ.

ಆಗ ಭಾರತ ದೇಶದ ಅಸಂಖ್ಯಾತ ಶೋಷಿತರು,ತುಳಿತಕ್ಕೊಳಗಾದವರ ಬದುಕಿನ ತುಂಬೆಲ್ಲ ಬರೀ ಕಗ್ಗತ್ತಲು ಆವರಿಸಿಕೊಂಡಿತ್ತು!ಜಾತೀಯತೆ,ಅಸಮಾನತೆ,ಅಸ್ಪೃಶ್ಯತೆ ಹಸಿ ಹಸಿಯಾಗಿ ತಾಂಡವಾಡುತ್ತಿತ್ತು.ಮಡಿ ಮೈಲಿಗೆಯ ಭಾವನೆಯು ವಿಸ್ತಾರವಾಗಿ ಚಾಚಿಕೊಂಡು ಪೆಡಂಭೂತವಾಗಿ ಕಾಡುತ್ತಿತ್ತು.ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ ಎಂಬ ಚಾತುರ್ವರ್ಣ ಪದ್ಧತಿಯು ಎಲ್ಲೆಡೆ ತನ್ನ ಛಾಪನ್ನು ಗಟ್ಟಿಯಾಗಿ ಭದ್ರಗೊಳಿಸಿಕೊಂಡಿತ್ತು.ಹೊಲೆಯ,ಮಹರ್,ಮಾದಿಗ,ಸಮಗಾರ,ಚಮಗಾರ,ಚಲವಾದಿ,ಚನ್ನಯ್ಯ,ಡೋಹರ,ಮೋಚಿ,ಮಚ್ಚೆಗಾರ,
ಭಂಗಿ,ಮಾಂಗ್,ಮಾಲಾ,ಮುಲ್ಲರ್,ಪರಯಾ,ಪುಲಯ,ಜಾತವ,ವಾಲ್ಮೀಕಿ,ದೋಮ್,ಮೌರ್ಯ,ಇತ್ಯಾದಿ ಇತ್ಯಾದಿ......ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ಹೆಸರುಗಳಿಂದ ಕರೆಯಲ್ಪಡುತ್ತಿರುವ 'ಅಸ್ಪೃಶ್ಯರು' (ಸವರ್ಣಿಯರು ಇಟ್ಟ ಹೆಸರು) ಎಂಬ 'ನಾಗಾ ಜನಾಂಗ' ಸಾಮಾಜಿಕ,ಆರ್ಥಿಕ,ಶೈಕ್ಷಣಿಕ,ಸಾಂಸ್ಕೃತಿಕ,ರಾಜಕೀಯ ಇತ್ಯಾದಿ ಎಲ್ಲಾ ರಂಗದಲ್ಲೂ ಶೋಷಣೆ-ಅಸಮಾನತೆಗೆ ತುತ್ತಾಗಿ ಶೋಚನೀಯ ಸ್ಥಿತಿಯನ್ನು ಅನುಭವಿಸುತ್ತಿತ್ತು.ಇಂಥ ಅನೀತಿ,ಅಜ್ಞಾನ,ಅನ್ಯಾಯ,ಮೌಢ್ಯಾಂಧಕಾರ ಕವಿದುಕೊಂಡ ಕಗ್ಗತ್ತಲ ಬಾನಿನಲ್ಲಿ ಬಂಡಾಯದ ಮತ್ತು ಕ್ರಾಂತಿಯ'ಕೆಂಪು'ದೃವತಾರೆಯಾಗಿ ದಲಿತರು-ದಮನಕ್ಕೊಳಗಾದವರ ಬದುಕಿನ ಹೊಸ ಆಶಾ ಕಿರಣವಾಗಿ ಭೀಮಾಬಾಯಿ ರಾಮಜೀ ದಂಪತಿಗಳಿಗೆ ಹದಿನಾಲ್ಕನೇ ಮಗನಾಗಿ 1891ರ ಏಪ್ರೀಲ್ 14 ರಂದು ಡಾ.ಭೀಮರಾವ್ ರಾಮಜೀ ಅಂಬೇಡ್ಕರ್ ಜನ್ಮ ತಾಳುವ ಮೂಲಕ ಸಾಧುವರೇಣ್ಯರು ಹೇಳಿದ ಭವಿಷ್ಯವಾಣಿ ಅಕ್ಷರಶಃ ದಿಟವಾಯಿತು.ಈ ಅರ್ಥದಲ್ಲಿ ನಾನು ಲೇಖನದ ಪ್ರಾಂಭದಲ್ಲಿ ಉಪಯೋಗಿಸಿಕೊಂಡಿರುವ ಕವಿ ಸಾಲುಗಳು ಅರ್ಥಪೂರ್ಣವಾಗಿದೆ.

ಚಿಕ್ಕಂದಿನಲ್ಲಿಯೇ ಅತ್ಯುತ್ತಮ ಸಂಸ್ಕಾರದ ಸುಸಂಸ್ಕೃತ ಮನೆತನದ ವಾತಾವರಣದಲ್ಲಿ ಬೆಳೆದ ಅಂಬೇಡ್ಕರ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ದಪೋಲಿ,ಸತಾರ,ಮುಂಬೈಗಳಲ್ಲಿ ಮುಗಿಸಿಕೊಂಡ ನಂತರ ಮುಂಬೈ,ಕೋಲಂಬಿಯಾ,ಲಂಡನ್ ಮತ್ತು ಬಾನ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗವನ್ನು ಪೂರೈಸಿಕೊಂಡು, ಅದ್ವಿತೀಯ ಆದರ್ಶ ಮತ್ತು ಮಹಾನ್ ಮುತ್ಸದ್ಧಿ,ಚಿಂತಕ,ಚಿಕಿತ್ಸಕ,ವಿದ್ವಾಂಸರಾಗಿ ಹೊರಹೊಮ್ಮಿದ್ದೊಂದು ಯಶೋಗಾಥೆ ಎನ್ನುವುದಕ್ಕಿಂತ ಸ್ವಾಭಿಮಾನ,ಸತತಾಭ್ಯಾಸದ ಮನೋವೃತ್ತಿಯೇ ಕಾರಣವೆನ್ನಬೇಕು.ನಂತರ ಬ್ಯಾರಿಷ್ಟರ್ ಪದವಿ ಪಡೆದು ಅವರು ಮುಂಬೈ ಉಚ್ಛ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಅಲ್ಲಿನ ಸರ್ಕಾರಿ ಕಾನೂನು ವಿಶ್ವವಿದ್ಯಾಲಯದ ಪ್ರಾಚಾರ್ಯರಾಗಿ ಹೆಗ್ಗಳಿಕೆಯ ಸೇವೆಗೈದರು.


ಹಿಂದು ಸಮಾಜದ ದುರ್ಬಲ, ಹಿಂದುಳಿದ,ಅಲ್ಪ ಸಂಖ್ಯಾತ ಮತ್ತು ಶೋಷಿತ-ನಿರ್ಲಕ್ಷಿತ ಅಸ್ಪೃಶ್ಯರ ಸಂಕಷ್ಟಕ್ಕೆ ನೋವಿಗೆ ಮುಖವಾಣಿಯಾಗಿ ನಿಂತವರು ಅಂಬೇಡ್ಕರ್. ತುಳಿತಕ್ಕೊಳಗಾದ ನೊಂದ ಜನಾಂಗಗಳ ಏಳಿಗೆಗಾಗಿ ಪರಿಶ್ರಮ ಪಟ್ಟು ಪರಮಸಾಧನೆಗೈದರು.ತಮ್ಮ ಇಡೀ ಜೀವಿತವನ್ನೇ ಅವರಿಗೆ ಅರಿವು,ತಿಳುವಳಿಕೆ ನೀಡುವುದಕ್ಕಾಗಿ ಮುಡಿಪಾಗಿಸಿಕೊಂಡರು.ವೇದ,ಶಾಸ್ತ್ರ,ಆಗಮ ಗ್ರಂಥಗಳನ್ನು,ಪೌರಾತ್ಯ-ಪಾಶ್ವಾತ್ಯ ವಿದ್ವತ್ಪೂರ್ಣ ಅಧ್ಯಯನ-ಅಧ್ಯಾಪನ ನಡೆಸಿ ಕರಗತಮಾಡಿಕೊಂಡ ಮಹಾ ಮೇಧಾವಿ ಅವರು.ದಲಿತ ಜನಾಂಗಕ್ಕೆ ನಾಗರಿಕ ಹಾಗೂ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡಲು ಜೀವನಪೂರ್ತಿ ಹೋರಾಟ ನಡೆಸಿದರು.ದುಂಡುಮೇಜಿನ ಪರಿಷತ್ತಿಗೆ ಹೋಗಿ ಬಂದರು.'ಹೋಂ ರೂಲ್ ' ಬೇಡಿಕೆಗೆ ಒಪ್ಪದೇ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕೆಂದೂ ಅದರಲ್ಲಿ ದಲಿತ ವರ್ಗಕ್ಕೆ ಪೂರ್ಣ ರಕ್ಷಣೆ ಬೇಕೆಂದೂ ಹಠಕ್ಕೆ ಬಿದ್ದು ವಾದಿಸಿದರು.'ಜಾತಿವಾರು ತೀರ್ಪು'ಹೊರ ಬಂದಾಗ ಅದನ್ನು ಬದ್ಧವಾಗಿ ವಿರೋಧಿಸಿ ಮಹಾತ್ಮ ಗಾಂಧಿಜೀಯವರು ಅಮರಣಾಂತ ಉಪವಾಸ ಸತ್ಯಾಗ್ರಹದ ನಾಟಕ ಹೂಡಿ ಬಿಟ್ಟರು! ನಿಮ್ನ ಜನಾಂಗಕ್ಕೆ ಅಂಬೇಡ್ಕರ್ ಗೆದ್ದುಕೊಟ್ಟಿದ್ದ ರಾಜಕೀಯ ಹಕ್ಕುಗಳ ಪ್ರಭಾವವನ್ನು ಸಂಪೂರ್ಣವಾಗಿ ಕುಗ್ಗಿಸುವುದೇ ಗಾಂಧಿಜೀಯವರ ಉದ್ದೇಶವಾಗಿತ್ತು ಎಂಬುದರಲ್ಲಿ ಅಕ್ಷರಶಃ ಹುರುಳಿದೆ ಎನಿಸುವುದು.ಇಡೀ ದೇಶದ ಮಹಾತ್ಮನ ಜೀವಕ್ಕೆ ಅಂಬೇಡ್ಕರರಿಂದ ಕುತ್ತು ಬಂದೀತೆಂಬ ಅಪವಾದ ಬರಬಾರದೆಂದೂ ಮತ್ತು ಗಾಂಧೀಜಿಯವರ ಸೇವೆಯು ದೇಶಕ್ಕೆ ಅಗತ್ಯವಾಗಿರುವುದರಿಂದಲೂ ಅವರ ಅಭಿಮಾನಿಯಾಗಿದ್ದ ಕಾರಣವಾಗಿ 1932 ರ 'ಪೂನಾ ಒಪ್ಪಂದ' ವೆಂಬ ಪ್ರಸಿದ್ಧ ಒಡಂಬಡಿಕೆಗೆ ಬಾಬಾ ಸಾಹೇಬ್ ಅಂಬೇಡ್ಕರರು ಒಲ್ಲದ ಮನಸ್ಸಿನ ಅಂಕಿತ ಹಾಕಿ ತಾನೂ ಒಬ್ಬ ಪರಮ ನಿಷ್ಠ ದೇಶಭಕ್ತನಾಗಿರುವುದನ್ನು ತೋರಿಸಿಕೊಟ್ಟರು.

ರಾಜ್ಯಾಂಗ ರಚನಾ ಸಭೆಗೆ ಮುಂಬೈ ವಿಧಾನ ಸಭೆಗೆ ಸ್ಪರ್ಧಿಸಿ ಸೋತ ಅಂಬೇಡ್ಕರ್ 1946ರಲ್ಲಿ ಬಂಗಾಳ ವಿಧಾನ ಸಭೆಯಿಂದ ಆಯ್ಕೆಯಾದರು.ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿಯೂ ರಾಜ್ಯಾಂಗ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿಯೂ 1947ರಲ್ಲಿ ಆಯ್ಕೆಯಾದರು.ಹಿಂದುಗಳಿಗೆಲ್ಲ ಸಮಾನ ಕಾನೂನುಕ್ರಮವನ್ನು ಒದಗಿಸುವುದಕ್ಕಾಗಿ ಅವರು 'ಹಿಂದು ಕೋಡ್ 'ಬಿಲ್ಲನ್ನು ತಯಾರಿಸಿದರು.ಆದರೆ ದುರ್ದೈವದಿಂದ ಭಾರತ ಪ್ರಧಾನಿ ನೆಹರುರವರ ಬೆಂಬಲ ದೊರಕದ್ದರಿಂದ ಆ ಮಸೂದೆ ಪಾಸಾಗಲೇ ಇಲ್ಲ.ಈ ಕಾರಣದಿಂದಲೇ ಅವರು ದಲಿತ ವರ್ಗದವರ ಬಗ್ಗೆ ಸರ್ಕಾರವು ಹೊಂದಿದ್ದ ನಿಷ್ಕಾಳಜಿ,ನಿರಾಸಕ್ತಿಯನ್ನು ಅತ್ಯುಘ್ರವಾಗಿ ಖಂಡಿಸಿ ತಮ್ಮ ಸಚಿವ ಪದವಿಗೆ ರಾಜೀನಾಮೆ ಇತ್ತು ಹೊರಬಂದು ಸ್ವಾಭಿಮಾನವನ್ನು ಮೆರೆಯುತ್ತಾರೆ.

ಅವರ ಬದುಕು-ಭಾಷಣ.ಬರಹ-ಹೋರಾಟ,ಪ್ರಕಾಂಡ ಪಾಂಡಿತ್ಯ,ವ್ಯಕ್ತಿತ್ವದ ಕುರಿತು ಹೇಳಿದಷ್ಟೂ ಕಡಿಮೆ.ಇಂಥ ಒಬ್ಬ ಅಸಾಧರಣ,ನಿರ್ಭೀತ,ನಿರ್ಭೀಡೆಯ ಮಹಾನ್ ವ್ಯಕ್ತಿಯು ಧೀಃಶಕ್ತಿಯಾಗಿ ಮನುಕುಲದ ಇತಿಹಾಸದಲ್ಲಿ ಹುಟ್ಟಿ ಬಂದದ್ದೇ ಸರ್ವ ಶೋಷಣೆಯಿಂದಲೂ ಮುಕ್ತವಾದ ನವ ಸಮಾಜ ನಿರ್ಮಾಣ ಮಾಡಲು ಎನ್ನಲೇಬೇಕು.1935ರಲ್ಲಿ ನಾಸಿಕ್ ಜಿಲ್ಲೆಯ ಯಾವೋಲಾದಲ್ಲಿ ನಡೆದ ದಲಿತ ವರ್ಗಗಳ ಮಹಾ ಸಮ್ಮೇಳನದಲ್ಲಿ ಅವರು ಎಲ್ಲ ದಲಿತರೂ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸುವಂತೆ ಬಹಿರಂಗ ಕರೆ ನೀಡಿದರು."ನಾನು ಹಿಂದುವಾಗಿ ಹುಟ್ಟಿರುವೇನಾದರೂ ಹಿಂದುವಾಗಿ ಸಾಯಲಾರೆ" ಎಂಬ ಕ್ರಾಂತಿಕಾರಕ ಘೋಷಣೆ ಹೊರಹೊಮ್ಮಿದಾಗ ಎಲ್ಲ ಭಾರತೀಯರ ಹೃದಯ ಒಮ್ಮೆ ತಲ್ಲಣಗೊಂಡಿರಲೇ ಬೇಕು.ತಮ್ಮ ಅಂತರಾಳದ ಕೂಗಿಗೆ ಕಟಿಬದ್ಧರಾಗಿದ್ದ ಅವರು 1956 ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು.ಈ ಮೂಲಕ ಮಹಾ ಧಾರ್ಮಿಕ ಧುರೀಣರೂ  ದೇವನಾಂಪ್ರಿಯ ಚಕ್ರಚರ್ತಿ ಅಶೋಕ ಮಹಾಶಯನ ತರುವಾಯ ಭಾರತದಲ್ಲಿ ಬೌದ್ಧ ಮತದ ಪುನರುದ್ಧಾರಕರೂ ಆಗಿ ಬೋಧೀಸತ್ವ ಅಂಬೇಡ್ಕರಾದರು.

ದೀನದಲಿತರು,ವಂಚಿತರು,ದಬ್ಬಾಳಿಕೆಗೊಳಗಾದ ಸ್ತ್ರೀಯರು......ಇವರೆಲ್ಲರ ವಿಮೋಚನೆಗಾಗಿಯೇ ಅಂಬೇಡ್ಕರ ಬದುಕಿದರು,ದುಡಿದರು.ಭಾರತದ ಐಕ್ಯ ಹಾಗೂ ಪುನರ್ ಘಟನೆಗಾಗಿ ಹೋರಾಡಿದಿ ಈ ವಿಶ್ವಮಾನವ,ಸಾಮಾಜಿಕ ನ್ಯಾಯದ ಹರಿಕಾರ ಹೊಸದಿಲ್ಲಿಯ ಅಲಿಪೋರ್ ರಸ್ತೆಯಲ್ಲಿಯ ತಮ್ಮ 26 ನೇ ಕ್ರಮ ಸಂಖ್ಯೆಯ ನಿವಾಸದಲ್ಲಿ 1956 ನೇ ಡಿಸೆಂಬರ್ 6 ರಂದು ನಿರ್ವಾಣ ಹೊಂದಿದರು.

 = ಬನವಾಸಿ ಸೋಮಶೇಖರ್,ಮಂಗಳೂರು.