Monday, 14 January 2013

ಕ್ಷಣ ಕತ್ತಲೆಯ ಭಯ: ಕರಿಬಸಪ್ಪನ ಕತ್ತಲಾದ ಬದುಕಿನ ಕಥೆ!


ಪ್ರಿಯ ಶ್ರೀಧರ್,

ನಿಮ್ಮ, ಅಮ್ಮನ ಆಟೋಗ್ರಾಫ್ ಕಥಾ ಸಂಕಲನದ ಮೊದಲ ಕಥೆ 'ಕ್ಷಣ ಕತ್ತಲೆಯ ಭಯ'ವನ್ನು ಓದಿದೆ.ಮೊದಲು ಕ್ಲೀನರ್ ಆಗಿ ನಂತರ ಲಾರಿಯೊಂದರ ಡ್ರೈವರ್ ಆಗಿದ್ದ ಕರಿಬಸಪ್ಪನ ಜೀವನ ಗಾಥೆಯನ್ನು ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಿಸಲಾಗಿದೆ.13-01-2013 ರ ರಾತ್ರಿ 10-30 ರಿಂದ 11-47 ರ ಅವಧಿಯಲ್ಲಿ ತದೇಕಚಿತ್ತದಿಂದ ಕಥಾ ಸಂಕಲನದ ಈ ಮೊದಲ ಕಥೆಯನ್ನು ಓದಿದೆ.ನಿಮ್ಮ ಪ್ರೀತಿಯ ಸ್ನೇಹಕ್ಕಾದರೂ ಚೊಚ್ಚಲ ಕೃತಿಯನ್ನು ಓದಿ ಅಭಿಪ್ರಾಯಿಸಬೇಕೆಂಬ ಹಂಬಲ ನನ್ನದು.ಕಥೆ ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಮೂಡಿಸಿ ಓದಿಸಿಕೊಳ್ಳುತ್ತದೆ.

ಪ್ರೀತಿಯ ಸುಖ ದಾಂಪತ್ಯದಲ್ಲಿ ಮೈಮರೆತ ಹೆಣ್ಣೊಬ್ಬಳು ಮುದುವೆಗೆ ಮುಂಚೆ ಪ್ರೀತಿಸಿದಾತನೊಂದಿಗಿದ್ದು ಅನುರಕ್ತರಾದ ಘಟನೆಯನ್ನು ಗಂಡನ ಬಳಿ  ಪ್ರಾಮಾಣಿಕವಾಗಿ ಹೇಳಿಕೊಂಡು ತನ್ನ  ಇಡೀ ಭವಿಷ್ಯವನ್ನೇ ಕತ್ತಲೆಯ ಕೂಪಕ್ಕೆ ತಳ್ಳಿಕೊಳ್ಳುತ್ತಾಳೆ.ಆಕೆಯ ಈ ಪ್ರಾಮಾಣಿಕತೆ ಯಾಕಾದರೂ ಬೇಕಿತ್ತೆಂದು ಪ್ರಶ್ನಿಸಿ ಕರುಳನ್ನು ಚುಚ್ಚುತ್ತದೆ.ಯಾವ ಅಭಲೆಯೂ ಇಂಥ ದುಃಸ್ಥಿತಿಗೆ ತನ್ನ ಸಂಸಾರ ಸುಖವನ್ನೇ ಬಲಿಕೊಟ್ಟುಕೊಳ್ಳುವ ಕಟು ಸತ್ಯಕ್ಕೆ ಶರಣಾಗದಿರಲೆಂದು ಕಥೆಯನ್ನು ಓದುವ ಸಹೃದಯಿಗೆ ಆಗದೇ ಇರಲಾರದು.ಕ್ಷಣ ಕತ್ತಲೆಯ ಭಯ,ಕಥೆಗೆ ಸೊಗಸಾದ ಶೀರ್ಷಿಕೆಯನ್ನು ಒದಗಿಸಿದ್ದು ಭಾವನೆಗಳಿಗೆ ತಕ್ಕಂತೆ ಪಾತ್ರಗಳನ್ನು ನಿರೂಪಿಸಿ ಅರ್ಥವಂತಿಕೆಯನ್ನು ಮೆರೆದಿದೆ.ಯಾರ ಬದುಕೂ ಹೀಗಾಗಬಾರದು.

ಕರಿಬಸಪ್ಪನ ವೈಯಕ್ತಿಕ ಬದುಕೇನು ಶುದ್ಧಹಸ್ತವಾಗಿರಲಿಲ್ಲ.ಒಳ್ಳೆಯ ವ್ಯಕ್ತಿಯಾಗಿದ್ದರೂ ಪರಸ್ತ್ರೀ ಸಂಗ,ಕುಡಿತಗಳ ದಾಸನಾಗಿದ್ದವನು!ಇಂಥ ವ್ಯಕ್ತಿತ್ವದ ಆತ ತನ್ನ ಜೀವನಕ್ಕೇ ತನ್ನನ್ನೇ ಅನ್ವಯಿಸಿಕೊಂಡು ಸಹಧರ್ಮಿಣ ಹೇಳಿದ ಪ್ರಾಮಾಣಿಕ ಸತ್ಯವನ್ನು ಅರಗಿಸಿಕೊಂಡು ಜೀವನ ಸಾಗಿಸುವ ಹೃದಯವಂತಿಕೆ ಆತನಲ್ಲಿ ಮೂಡಬೇಕಿತ್ತು.ಆದರಾತ ಮಾಡಿದ್ದೇನು? ಅರೆಕ್ಷಣದ ಕೋಪಕ್ಕೆ ಹೆಂಡತಿ ಮತ್ತು ತನ್ನ ಮುದ್ದಿನ ಹೆಣ್ಣು ಕೂಸನ್ನು ದಿಕ್ಕಾಪಾಲಾಗಿಸಿ  ಹೊರಟು ಹೋಗಿ ಬಿಟ್ಟಿದ್ದ.ಆದರೂ ಧೃತಿಗೆಡದೇ ಆ ತಾಯಿ ಮಗಳು ತಮ್ಮ  ಪಾಡಿಗೆ ತಾವಿದ್ದರಾದರೂ ಗಂಡನನ್ನು ಹುಡುಕಿಕೊಳ್ಳುವ ದಿಟ್ಟ ಪ್ರಯತ್ನವನ್ನಂತೂ ಬಿಟ್ಟಿರಲಿಲ್ಲ!ಬರಮಘಡದಲ್ಲಿ ತನ್ನ    ಗಂಡನಿರುವನೆಂಬ ಸುದ್ದಿ ಕೇಳಿ ತಿಳಿದಿದ್ದ ಅವಳು ಮಗಳೊಂದಿಗೆ ಭರಮಘಡಕ್ಕೆ ಹೊರಟಾಗ ವಿಧಿಯ ಅಟ್ಟಹಾಸವೂ ಎಂಬಂತೆ ಅರಿವಿಲ್ಲದೇ  ಗಂಡನ ಲಾರಿಯ ಗಾಲಿಗಳಿಗೆ ಆಹುತಿಯಾಗುವ ಆ ಕ್ಷಣದ ಘಟನೆ ಕರಿಬಸಪ್ಪನಿಗೂ ತಿಳಿಯದ ಹಾಗೆ ಈ ಕರುಣಾಜನಕ ಕಥೆಯನ್ನು ಚಿತ್ರಿಸಲಾಗಿದೆ.

ಕುಡಿದ ಅಮಲಿನ ಅರೆಗಳಿಗೆಯಲ್ಲಿ  ಹೆಂಡತಿ ಮತ್ತು ಮಗಳು ಇಬ್ಬರೂ ತನ್ನ ಲಾರಿಗೆ ಆಹುತಿಯಾಗುವ ಆಘಾತಕಾರಿ ಸನ್ನೀವೇಷ,ಕರಿಬಸಪ್ಪನ ಮುಂದಿನ ಇಡೀ ಜೀವಿತಕ್ಕೆ ಘೋರ ಶಿಕ್ಷೆಯನ್ನೇ ನೀಡಿ ಕಥೆಯನ್ನು ಕಟ್ಟಿದ ರೀತಿ ಮೆಚ್ಚುವಂತದ್ದು.ಆದಷ್ಟು ಬೇಗ ಹೆಂಡತಿಯನ್ನು ನೋಡಬೇಕು,ಮಗಳ ಮದುವೆ ಮಾಡಬೇಕು ಎಂಬ ಮಹದಾಸೆಯಿಂದ 20 ವರ್ಷಗಳ ನಂತರ ಕೈ ತುಂಬಾ ಹಣ ಹಿಡಿದುಕೊಂಡು ಮಗರಾಣಿಗೆ ಬರುವ ಡ್ರೈವರ್ ಕರಿಬಸಪ್ಪನನ್ನು ವಿಧಿ ಅತ್ಯಂತ ನಿಷ್ಕರುಣಿಯಂತೆ ನಡೆಸಿಕೊಂಡಿತು ಎನಿಸುತ್ತದೆ.ಕಥೆಯಲ್ಲಿನ ಪಾತ್ರ,ಸನ್ನೀವೇಷಗಳು ಕಾಲ್ಪನಿಕವೆನಿಸುವುದಿಲ್ಲ.ಇದೊಂದು ಸತ್ಯ ಘಟನೆಯೇ ಎಂಬುದು ಓದುತ್ತಾ ಹೋದ ಹಾಗೆ ವ್ಯಕ್ತವಾಗುತ್ತಾ ಮಮ್ಮಲ ಮರುಗುವಂತಾಗುವುದು.
ಒಂದು ಸುದೀರ್ಘವಾದ ಕಥೆಯನ್ನು ಅತ್ಯಂತ ಕರುಣಾಜನಕವಾಗಿ,ಅಂತಃಕರಣವನ್ನು ಚುರ್ ಗುಟ್ಟಿಸುವಂತೆ,ಮನೋವಿಶ್ಲೇಷಣೆಗೆ ಒಳಪಡಿಸಿ ಹೆಣೆದಿರುವಿರಿ.ಮಗರಾಣಿಯ ಹೆಣ್ಣನ್ನು (ಅವಳ ಹೆಸರನ್ನು ಪ್ರಸ್ತಾಪಿಸಿಲ್ಲ) ಮದುವೆಯಾದ ಕರಿಬಸಪ್ಪನ ಊರನ್ನು ಮಾತ್ರ ಕಥೆಯಲ್ಲಿ ನನಗೆ ಗುರುತಿಸಲಾಗಿಲ್ಲ! ಬಹುಶಃ ಆತ ನಮ್ಮೂರಿನವನೇ ಆಗಿರಬಹುದೇ?

ಪ್ರೀತಿಯಿಂದ,

ಬನವಾಸಿ ಸೋಮಶೇಖರ್.




Tuesday, 8 January 2013

ಮೈಸೂರಿನಲ್ಲಿ 'ಫಕೀರ' ಅವರ " ಅಮ್ಮನ ಆಟೋಗ್ರಾಫ್ " ಕಥಾ ಸಂಕಲನ ಬಿಡುಗಡೆಗೊಳಿಸಿದ ಡಾ.ಸಿ.ಪಿ.ಕೆ.


ಮೈಸೂರಿನಲ್ಲಿ 'ಫಕೀರ' ಅವರ  "ಅಮ್ಮನ ಆಟೋಗ್ರಾಫ್" ಕಥಾ ಸಂಕಲನ ಬಿಡುಗಡೆಗೊಳಿಸಿದ ಡಾ.ಸಿ.ಪಿ.ಕೆ.
ಮೈಸೂರು ಜ.7.2013: ನಾಡಿನ ಪ್ರಖ್ಯಾತ ಕಥೆಗಾರ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಸಿದ್ಧ ಲೇಖಕ,ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳ ಜೊತೆಗೆ ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ (ಫಕೀರ) ಅವರ 'ಅಮ್ಮನ ಆಟೋ ಗ್ರಾಫ್'  ಎಂಬ ಕಥಾ ಸಂಕಲನ,ಈ ಮೂರು ಸತ್ವಪೂರ್ಣ ಕೃತಿಗಳ ಬಿಡುಗಡೆ ಸಮಾರಂಭವು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜನವರಿ 6,2013 ರಂದು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

ಬೆಂಗಳೂರಿನ ಪಂಚಮಿ ಮೀಡಿಯಾ ಪಬ್ಲಿಕೇಶನ್ ಸಂಸ್ಥೆಯು ಹೊರತಂದಿರುವ ಈ ಮೂರು ಕೃತಿಗಳನ್ನು ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹೆಸರಾಂತ ಸಾಹಿತ್ಯ ದಿಗ್ಗಜ,ಪಂಪ ಪ್ರಶಸ್ತಿ ಪುರಸ್ಕೃತ ಡಾ||ದೇಜಗೌ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ರತ್ನ ಡಾ|| ಸಿ.ಪಿ.ಕೆ.ಅವರು ಬಿಡುಗಡೆಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆ ಗೈದರು.

ಫೇಸ್ ಬುಕ್ ಸಾಮಾಜಿಕ ಅಂತರ್ ಜಾಲ ತಾಣದಲ್ಲಿ ಸಕ್ರೀಯವಾಗಿದ್ದು ಸಾಹಿತ್ಯ ಸೇವೆಯಲ್ಲಿ ಅರ್ಥವತ್ತಾಗಿ ತೊಡಗಿಸಿಕೊಂಡಿರುವ "ಕನ್ನಡ ಬ್ಲಾಗ್" ವೇದಿಕೆಯ ಬಹುಪಾಲು ನಿರ್ವಾಹಕರು ಸ್ವತಃ ಈ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.ಶ್ರೀಧರ ಬನವಾಸಿ (ಫಕೀರ) ಅವರ ಚೊಚ್ಚಲ ಕೃತಿ ಲೋಕಾರ್ಪಣೆಗೊಳ್ಳುವ ಸುಸಂದರ್ಭದಲ್ಲಿ ಅವರ ಆತ್ಮೀಯ ವಲಯದ ಗೆಳೆಯನಾದ ನಾನು ಪಾಲ್ಗೊಳ್ಳವುದೆಂದು ಈ ಮೊದಲೇ ಸಂಕಲ್ಪವಾಗಿತ್ತು! ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಲ್ಲಿಯೇ ಪಾಲ್ಗೊಳ್ಳುವ ಆತ್ಮೀಯ ಕವಿ ಗೆಳೆಯರಾದ ಶ್ರೀ ಪುಷ್ಪರಾಜ್ ಚೌಟ ಅವರು ತಮ್ಮ ಫೇಸ್ ಬುಕ್ ಪ್ರೋಫೈಲ್ ಸ್ಟೇಟಸ್ ನಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಭಾಗವಹಿಸುವ ಇಚ್ಚೆ ಯಿಂದ ಪ್ರಕಟಣೆ ಭಿತ್ತರಿಸಿ ತಮ್ಮ ಗೆಳೆಯರನ್ನು ಸಹ ಪಾಲ್ಗೊಳ್ಲಲು ಪ್ರೇರೇಪಿಸಿದರು.ಅದರಂತೆ ನಾನೂ ಸಹ ಹೊರಟಿದ್ದೇನೆಂಬ ವಿಷಯ ತಿಳಿದೊಡನೆಯೇ ನಮ್ಮ ಬ್ಲಾಗಿನ ನಿರ್ವಾಹಕರೆಲ್ಲರೂ ಮೈಸೂರಿಗೆ ತೆರಳಲು ಅಣಿಯಾದರು. ಅಂದುಕೊಂಡಂತೆ ನಾನು ಮಂಗಳೂರಿನಿಂದ ಹೊರಟೆ.ಬೆಂಗಳೂರಿನಿಂದ ಗೆಳೆಯರಾದ ಪುಷ್ಪರಾಜ್ ಚೌಟ,ಸತೀಶ ಡಿ.ಆರ್.ರಾಮನಗರ,ಫರೇಶ್ ಸರಾಫ್ ಹೊರಟರು.ಮೈಸೂರಲ್ಲೇ ಇರುವ ಪ್ರಸಾದ್ ವಿ.ಮೂರ್ತಿ,ಪ್ರಮೋದ ಪಮ್ಮು ಮತ್ತು ಗಣೇಶ್  ಇವರುಗಳು ನಮ್ಮ ಜೊತೆಯಾದರು ಹಾಗೂ ನಮ್ಮ ಕನ್ನಡ ಬ್ಲಾಗಿನ ಕ್ರಿಯಾಶೀಲ ಸದಸ್ಯರಾದ ಮೈಸೂರಿನ ಸಹೋದರಿ ಸುನೀತಾ ಮಂಜುನಾಥ ಮತ್ತು  ಬೆಂಗಳೂರಿನ ಕೃಷ್ಣ ಮೂರ್ತಿ  ಎಮ್.ಎಸ್.ಅವರು ಸಹ ನಮ್ಮ ಕೈ ಜೋಡಿಸಿದರು.ನಾವೆಲ್ಲರೂ ಒಟ್ಟಾಗಿ ಸೇರಿ ಉಪಸ್ಥಿತರಿದ್ದು ಶುಭಕೋರಿದೆವು.

ಈ ಸಂದರ್ಭದಲ್ಲಿ ಮೂರೂ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ|| ಸಿ.ಪಿ.ಕೆ, ಫಕೀರ ಅವರ 'ಅಮ್ಮನ ಆಟೋಗ್ರಾಫ್' ಕಥಾ ಸಂಕಲನದ ಜೊತೆಗೆ ಬಿಡುಗಡೆಗೊಳಿಸುತ್ತಿರುವ ವೀರಭದ್ರ ಅವರ 'ಮಂಕು ಮಡೆಯನ ಕೊಂಕು ನುಡಿಗಳು' ಮತ್ತು ಪ್ರಕಾಶ್ ಅವರ 'ಭುವಿಬಾಲೆ' ಕವನ ಸಂಕಲನಗಳು  ವಾಸ್ತವವಾಗಿ ಕಾವ್ಯಶಕ್ತಿಯನ್ನು ಪಡೆದುಕೊಂಡು ಸೊಗಸಾಗಿ ರಚಿತಗೊಂಡಿವೆ. ಕಾವ್ಯ ಮತ್ತು ಕಾದಂಬರಿ ಎರಡೂ ಪ್ರಕಾರದಲ್ಲಿ  ಒಂದು ಪ್ರತ್ಯೇಕ ಸಾಹಿತ್ಯ ರೂಪ ಪಡೆದು ಓದುಗ ವರ್ಗಕ್ಕೆ ಆಸಕ್ತಿಯನ್ನು ಕೆರಳಿಸುವಂತೆ ಈ ಮೂರು ಕೃತಿಗಳು ರಚನೆಗೊಂಡಿವೆ ಎಂದರು.ಕಾವ್ಯ ಎಂಬುದು ಒಂದು ಸರ್ವಾಂತರ್ಯಾಮಿ ಶಕ್ತಿಯಾಗಿದ್ದು 'ಕಾವ್ಯೇಷು  ನಾಟಕಂ ರಮ್ಯಂ' ಎಂಬಂತೆ ಈ ಎಲ್ಲ ರಚನೆಗಳಲ್ಲಿ ಕಾವ್ಯಾಂಶದ ಹರಿವು ದಟ್ಟವಾಗಿ ಹರಿದಾಡಿದೆ ಎಂದು  ಅವರು ಕೃತಿಗಳನ್ನು ಬಣ್ಣಿಸಿದರು.ಕಥೆ ಕವನಗಳು ಗದ್ಯರೂಪದಲ್ಲಿದ್ದರೂ ಭೇದ ಔಪಚಾರಿಕವಾಗಿದ್ದು ಕಾವ್ಯಶಕ್ತಿಯನ್ನು ಪಡೆದುಕೊಂಡು ಅಕ್ಷರ ರೂಪ ಪಡೆದಿರುವ ಈ ಮೂರು ಕತೃಗಳ ರಚನೆಗಳು ಸತ್ವಪೂರ್ಣವಾಗಿ ಹೊರಹೊಮ್ಮಿರುವುದಾಗಿ ಕೃತಿಗಳ ಕುರಿತು ವಿಷಧೀಕರಿಸಿದರು.

ಸಂತೆಯೊಳಗೆ ಕಳೆದು ಹೋದ 'ಸಂತ'ಕವಿ ವೀರಭದ್ರ

'ಮಂಕು ಮಡೆಯನ ಕೊಂಕು ನುಡಿಗಳು' ಕೃತಿಯು ಕಾಲಾತೀತವಾಗಿದ್ದು ಮುವತ್ತು ವರ್ಷಗಳ ನಂತರ ಪ್ರಕಟಗೊಂಢಿದ್ದರೂ ಸಕಾಲಿಕ ಸ್ವರೂಪ ಪಡೆದಿದೆ.ಎಲ್ಲ ಕಾವ್ಯವೂ ಸಮಕಾಲೀನವಾಗುತ್ತವೆ ಎಂದು ತಿಳಿಸಿದ ಸಿ.ಪಿ.ಕೆ ವೀರಭದ್ರ ಅವರ ಕೃತಿಯಲ್ಲಿ ಇರುವುದೆಲ್ಲವೂ ವೀವೇಕದ ಅನುಭವ ಸಂಪನ್ನ ಉಕ್ತಿಗಳಾಗಿದ್ದು ವಕ್ರೋಕ್ತಿಗಳಂತೆ ಸುಂದರವಾಗಿ ಚಿತ್ರಿತಗೊಂಡಿವೆ ಎಂದು ವಿವರಿಸಿದರು.ಸಂತೆಯೊಳಗೆ ಕಳೆದು ಹೋದ ಒಬ್ಬ ಸಂತ ಕವಿ 'ವೀರಭದ್ರ' ಅವರಾಗಿದ್ದು ವ್ಯಾಖ್ಯೆ,ವಿಡಂಬನೆ,ಬೋಧೆಗಳನ್ನು ಸ್ವಂತಿಕೆಯೊಡನೆ,ಸರ್ವೋದಯದ ಆದರ್ಶ ತತ್ವಗಳನ್ನು ತಮ್ಮ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ಅತ್ಯಂತ ಮಾರ್ಮಿಕವಾಗಿ ನುಡಿದರು. ಇಂಥ ಕವಿ ಸಹೃದಯಿಗೆ ಈವರೆಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ  ಈ ಹುಚ್ಚು ಸಂತೆಯಲ್ಲಿ  ಈ ಸಂತ ಕವಿ ಕಳೆದು ಹೋಗಿದ್ದಾರೆಂದು ಸರ್ಕಾರದ ಕುರುಡು ವ್ಯವಸ್ಥೆಗೆ ಛಾಟಿ ಏಟು ನೀಡಿದರು.


ಸಾಮಾಜಿಕ ಧ್ವನಿ ಪ್ರಜ್ಞೆಯ ಸಂಖ್ಯೇತ 'ಭುವಿಬಾಲೆ'

ಪತ್ರಕರ್ತ ಕಗ್ಗೆರೆ ಪ್ರಕಾಶ್ ಅವರ ಭುವಿಬಾಲೆ ಕೃತಿ ಕುರಿತು ಮಾತನಾಡಿದ ಸಿ.ಪಿ.ಕೆ, ಪ್ರೀತಿಯ ಕಾವ್ಯವಾಗಿ,ಬೆಳಕಿನ ಕಾವ್ಯವಾಗಿ ನವೋದಯ ಮತ್ತು ಬಂಡಾಯ ಸಾಹಿತ್ಯವೆಂಬ ಎರಡು ಪ್ರಧಾನ ಮಾರ್ಗಗಳಲ್ಲಿನ ಮೂಸೆಯಲ್ಲಿ ಈ ಕವನ ಸಂಕಲನವು ಮೂಡಿಬಂದಿದೆ ಎಂದರಲ್ಲದೇ  ಸಾಮಾಜಿಕ ಧ್ವನಿ ಪ್ರಜ್ಞೆಯನ್ನು ಮೆರೆದಿರುವ ಗಟ್ಟಿಕಾವ್ಯವಾಗಿದೆ ಹೊರಹೊಮ್ಮಿದೆ ಎಂದು ಸೊಗಸಾಗಿ ವಿವರಿಸಿದರು.ಹೃದಯಸ್ಪರ್ಷಿಯಾದ ಹೆಣ್ಣಿನ ಹಾಡಿನ ಕರುಣಾ ಜನಕ ಕವನವೇ ಭುವಿಬಾಲೆಯಾಗಿದೆ. ಹೂತು ಹೋದ ಮನುಷ್ಯ ಪ್ರೀತಿಯ ಸೆಲೆಯನ್ನು ಚಿತ್ತಾಕರ್ಷಕವಾಗಿ ಮನಮುಟ್ಟುವಂತೆ ವಿವರಿಸುವ ಕೃತಿ ಇದಾಗಿದ್ದು ಓದಿ ಆಸ್ವಾದನಗೊಳಿಸುವುದೆಂದು ಸಿ.ಪಿ.ಕೆ ತಿಳಿಸಿದರು.

ಮನಕಲುಕುವ ಕಥೆಗಳ ಸುಂದರ ನಿರೂಪಣೆಯೇ 'ಅಮ್ಮನ ಆಟೋಗ್ರಾಫ್'
ಉದಯೋನ್ಮುಖ ಕವಿ,ಕಥೆಗಾರ ಶ್ರೀಧರ ಬನವಾಸಿ(ಫಕೀರ) ಅವರ ಕೃತಿ ಕುರಿತು ಅತ್ಯಂತ ಹರ್ಷಚಿತ್ತರಾಗಿ ಅನಿಸಿಕೆ ವ್ಯಕ್ತಪಡಿಸಿದ ಡಾ|| ಸಿ.ಪಿ.ಕೆ.ಅವರು ವಿಶಿಷ್ಟ ಗುಣವುಳ್ಳ ಅರ್ಥವತ್ತಾದ ಶೀರ್ಷಿಕೆ ಹೊತ್ತು ಹೊರಬಂದಿರುವ "ಅಮ್ಮನ ಆಟೋಗ್ರಾಫ್" ಕಥಾ ಸಂಕಲನವು ಮನಕಲುಕುವ ಕಥೆಗಳನ್ನು ಒಳಗೊಂಡಿರುವ ಸುಂದರ ನಿರೂಪಣೆಯಾಗಿದೆ ಎಂದರು.ತೀರ ಸರಳವಾಗಿಲ್ಲದ ಸಂಕೀರ್ಣ ಕಥೆಗಳನ್ನು ಹೆಣೆದಿರುವ ಶ್ರೀಧರ್ 'ಫಕೀರತ್ವ"ದ ನೈಜ ತತ್ವವನ್ನು ಕೃತಿಯಲ್ಲಿಯೇ ನಿರೂಪಿಸಿದ್ದಾರೆಂದರು.ಸೌಧಾಮಿನಿ ಅಪಾರ್ಟಮೆಂಟ್ ನ'ಸೌಧಾಮಿನಿಯ ಕಥೆಯಂತೂ ವಾಸ್ತವವಾಗಿದೆ ಎಂದುಕೊಂಡೆ,ಆದರೆ ಅದು ಭ್ರಾಮಕ ಜಗತ್ತಿನ ರೋಚಕ ಹಾಗೂ ಕಾವ್ಯಾತ್ಮಕ ಕಥೆಯಾಗಿದೆ' ಎಂದು ಅರ್ಥಪೂರ್ಣವಾಗಿ ಬಣ್ಣಿಸಿದರು.ಫಕೀರನ ಬರಹ ಶಕ್ತಿಯಲ್ಲಿ ಹೊಸ ವಸ್ತು ನಾವಿನ್ಯತೆಯನ್ನೂ ನಿರೂಪಣೆಯ ನವ್ಯತೆಯನ್ನೂ ಕಾಣಬಹುದಾಗಿದ್ದು ಸತ್ವಯುತ ಶ್ರೀಮಂತ ಕವಿ ಕಥೆಗಾರನಾಗುವ ಲಕ್ಷಣವನ್ನು "ಅಮ್ಮನ ಆಟೋಗ್ರಾಫ್" ಕೃತಿಯಲ್ಲಿ ಮೂಡಿಸಿದ್ದು ಫಕೀರ ಕನ್ನಡ ನಾಡಿನ ಮನೆಮಾತಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.

ಈ ಮೂರು ವಿಶಿಷ್ಟ ಕೃತಿಗಳ ಬಿಡುಗಡೆ ಜೊತೆಯಲ್ಲಿಯೇ ಅಧ್ಯಾಪಕ,ಅನುವಾದಕ,ಕವಿ,ಕಥೆಗಾರರಾಗಿ ಹೆಸರುವಾಸಿಯಾಗಿರುವ ಪ್ರೋ.ವೀರಭದ್ರ ಅವರಿಗೆ "ಸಮ್ಮಿಲನ ಸಾಹಿತ್ಯ ಪ್ರಶಸ್ತಿ"ನೀಡಿ ಗೌರವಿಸಲಾಯಿತು.ನಂತರ ಈ ಮೂರೂ ಕೃತಿಗಳ ಬಗ್ಗೆ ಪ್ರಸಿದ್ದ ಲೇಖಕರಾದ ಡಾ|| ಮಳಲಿ ವಸಂತ ಕುಮಾರ್, ಡಾ||ಕೆ.ಲೀಲಾ ಪ್ರಕಾಶ್ ಮತ್ತು ಪ್ರೋ.ಮಲೆಯೂರು ಗುರುಸ್ವಾಮಿ ಅರ್ಥಪೂರ್ಣವಾಗಿ ಮಾತನಾಡಿ ಪರಿಚಯಿಸಿದರು.ನಂತರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಇಡೀ ಸಮಾರಂಭಕ್ಕೆ ಕಳೆಯನ್ನು ನೀಡಿದ ಡಾ|| ದೇ.ಜವರೇ ಗೌಡ (ದೇಜಗೌ) ಅವರು ಸಮಾರೋಪ ಭಾಷಣ ಮಾಡಿದರು.ನಮ್ಮ ಸಮಯ ಮೀರಿದ್ದರಿಂದ ಸ್ವಸ್ಥಾನಗಳಿಗೆ ತೆರಳಬೇಕಿದ್ಗರಿಂದ ಹೊರಡುವುದು ಅನಿವಾರ್ಯವಾಯಿತು.ಹೀಗಾಗಿ ದೇಜಗೌ ಅವರ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಲಲು ನನಗೆ ಸಾಧ್ಯವಾಗಿಲ್ಲ.

ಗಾಯಕಿ ಶಾಂತಾ ಜಗದೀಶ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಪಂಚಮಿ ಪ್ರಕಾಶನದ ಶ್ರೀಧರ್ ಬನವಾಸಿ ಎಲ್ಲರನ್ನೂ ಸ್ವಾಗತಿಸಿದರು.ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಮ್ ಶ್ರೀಧರ್ ಪ್ರಾಸ್ತಾವಿಕ ನುಡಿಗೈದರು.ಕುವಲ ಯಲ್ಲಪ್ಪ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಗಣ್ಯ ಸಾಹಿತಿಗಳು,ಚಿಂತಕರು,ಲೇಖಕರು ಮತ್ತು ಉದಯೋನ್ಮುಖ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಇಡೀ ಸಮಾರಂಭವನ್ನು ಶೋಭೆಗೊಳಿಸಿದರು.

ಬ್ಲಾಗ್ ಗೆಳೆಯ ಗಣೇಶ್ ಅವರು ನಮಗೆ ವಿಶೇಷವಾದ ಮಧ್ಯಾಹ್ನದ ಆದರಾತಿಥ್ಯ ನೀಡಿದರು.ರಾತ್ರಿ ಗೆಳೆಯ ಪುಷ್ಪರಾಜ್ ಅವರು ಔತಣ ನೀಡಿ ನೆನಪು ಚಿರವಾಗಿರುವಂತೆ ಮಾಡಿದರು.ಪ್ರಸಾದ ಮತ್ತು ಪಮ್ಮು ನಮ್ಮೊಂದಿಗೆ ಬೆರೆತುಕೊಂಡು ಪ್ರೀತಿಯಿಂದ ನೋಡಿಕೊಂಡರು.ಸತೀಶ,ಪುಷ್ಪರಾಜ್ ಮತ್ತು ಫರೇಶ ಅವರು ನನ್ನನ್ನು ನಕ್ಕು ನಲಿಸಿ ಸ್ನೇಹ ಹಸಿರಾಗಿಸಿದರು.ಗೆಳೆಯ ಶ್ರೀಧರ ಅವರ ಕಥಾ ಸಂಕಲನದ ಬಿಡುಗಡೆಯ ದಿನವು ನಮ್ಮ ಜೀವಮಾನದ ಅವಿಸ್ಮರಣೀಯ ದಿನವಾಯಿತೆಂದು ಬೇರೆ ಹೇಳ ಬೇಕೆ?
ವರದಿ: ಬನವಾಸಿ ಸೋಮಶೇಖರ್.


Saturday, 13 October 2012

"...........ಆ ಮಹಾನ್ ವ್ಯಕ್ತಿ ಮಡಿದು ಆರು ವರ್ಷಗಳಾದವು" -ಪ್ರತಾಪ್ ಸಿಂಹ

ಸುಜ್ಞಾನವಂತರಾದ ಶ್ರೀಯುತ ಪ್ರತಾಪ್ ಸಿಂಹ ರವರಿಗೆ ಸಪ್ರೇಮ ನಮಸ್ಕಾರ.

ನಿಮ್ಮ ಈ ದಿನದ ಕನ್ನಡ ಪ್ರಭದಲ್ಲಿನ " ದಲಿತರ ಮತಗಳು ಮಾರಾಟಕ್ಕಿಲ್ಲ ಎಂದ ಆ ಮಹಾನ್ ವ್ಯಕ್ತಿ ಮಡಿದು ಆರು ವರ್ಷಗಳಾದವು" ಲೇಖನವನ್ನು ಓದಿ ಅತ್ಯಾನಂದವಾಯಿತು.ಮೊದಲಿನಿಂದಲೂ ನಿಮ್ಮ ಬರಹಗಳನ್ನೂ ಓದಿ ಆಸ್ವಾದಿಸಿರುವೆ.ಸಮಾಜಮುಖಿಯಾಗಿದ್ದು ಬದ್ಧತೆ ಹೊಂದಿ ಬರೆದ ಲೇಖನದಲ್ಲಿ ಎಲ್ಲಿಯೂ ಯಾವ ಪೂರ್ವಾಗ್ರಹಗಳೂ ಕಾಣ ಬರಲಿಲ್ಲ.ಈ ಸಾರ್ವಭೌಮ ಪರಮಾಧಿಕಾರದ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಒಂದು ವರ್ಗಕ್ಕೆ ನೀವು ಕನ್ನಡಿ ಹಿಡಿದಿದ್ದೀರಿ.ಜೊತೆಗೆ ಹೋರಾಟಗಾರನಿರಬೇಕಾದ ಉದ್ದೇಶವೇನು ಎಂಬುದನ್ನು ಸರ್ವರಿಗೂ ಮನಗಾಣಿಸಿದ್ದೀರಿ. 70 ರ ದಶಕದ ನಂತರ ಕನ್ನಡ ನಾಡಿನಲ್ಲಿ ಉದಯಿಸಿ ಹೋರಾಟದ ಕಿಚ್ಚು ಹಚ್ಚಿದ್ದ ದಲಿತ ಚಳುವಳಿ,ಸ್ವಾರ್ಥ-ಲಾಲಸೆಗಳಿಗೊಳಗಾಗಿ ದಿಕ್ಕೆಟ್ಟು ಹೋದ ಬಗ್ಗೆಯೂ,ಮುಂದೆ ಈ ಜನಾಂಗ ಒಗ್ಗೂಡಬೇಕಾದ ಅವಶ್ಯಕತೆಯ ಬಗ್ಗೆಯೂ ನಿಮ್ಮ  ಲೇಖನಿ ಬೆಳಕು ಚೆಲ್ಲಲೆಂದು ಆಶಿಸುತ್ತೇನೆ.ನಿಮ್ಮಲ್ಲಿರುವ ಹರಿತವಾದ ಲೇಖನಿಯು ಹೀಗೆ ಸರ್ವರನ್ನೂ ತಲುಪುವ ಮಾನದಂಡವಾಗಿ ನಮ್ಮನ್ನು ಪ್ರೇರಿಸಲಿ ಎಂದಷ್ಟೇ ಹೇಳಬಲ್ಲೆ.


ಪ್ರೀತಿಯಿಂದ,

ತಮ್ಮ ಅಭಿಮಾನಿ.

ಬನವಾಸಿ ಸೋಮಶೇಖರ್.

Tuesday, 21 August 2012

ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ:ಸುಧಾ ಮೂರ್ತಿಯವರ ದೃಷ್ಠಿಯಲ್ಲಿ

'ಈ ಜಗತ್ತು ಕಂಡ ಅದ್ಭುತ ಹಾಗೂ ಜೀವಂತ ವ್ಯಕ್ತಿಯ ಹೋರಾಟದ ಕಥೆಯ ತಿರುಳನ್ನು ಕಣ್ಣಿಗೆ ಕಟ್ಟಿದ ನಮ್ಮ ಕನ್ನಡ ನಾಡಿನ ಹೆಮ್ಮೆಯ ಆದರ್ಶ ಮತ್ತು ಮಾದರಿ ಮಹಿಳೆ  ಹಿರಿಯ ಸಹೋದರಿ ಸುಧಾ ನಾರಾಯಣ ಮೂರ್ತಿ.'

ಈ ದಿನದ ಕನ್ನಡ ಪ್ರಭ (21-08-2012) ರ ಪತ್ರಿಕೆಯ ಮುಖ ಪುಟದ "ಸೂಚಿ ಯೊಂದಿಗೆ ಒಂದು ಸುಂದರ ಸಂಜೆ" ಎಂಬ ವಿಶಿಷ್ಟ ಹಾಗೂ ಮೌಲಿಕ ಚಿಂತನೆಯ ಅಮೋಘ ಅನುಭವವನ್ನು ಸುಧಾ ಮೂರ್ತಿಯವರ ಲೇಖನಿಯಿಂದ ಓದಿ ಪುಳಕಿತನಾದೆ.ಕಣ್ಣಾಲಿಗಳು ತೇವಗೊಂಡವಲ್ಲದೇ ಆ ಮಹಿಳೆಯ ಧೀರೋದಾತ್ತ ಧೀಃಶಕ್ತಿ ವ್ಯಕ್ತಿತ್ವ ಹಾಗೂ ಆ ಮಹಾ ತಾಯಿಯ ಹೋರಾಟದ ತಲಸ್ಪರ್ಷಿ ನಿರೂಪಣೆಯನ್ನು ತಿಳಿದು ರೋಮಾಂಚನವಾಯಿತು.

ಮಯನ್ ಮಾರ್ (ಬರ್ಮಾ) ದೇಶದ ಜನರಲ್ ಆನ್ ಸಾನ್ ಮತ್ತು ಸೂಚಿ ದಂಪತಿಗಳ ಪುತ್ರಿಯೇ ಈ 'ಆನ್ ಸೂಚಿ'.ಇವಳ ಜೀವನವೇ ಒಂದು ದೀರ್ಘ ಹೋರಾದ ಕಥೆಯಾದ ಬಗೆಯನ್ನು ಸುಧಾ ನಾರಾಯಣ ಮೂರ್ತಿಯವರು ತಮ್ಮ ಲೇಖನಿಯಿಂದ ಪಡೆಮೂಡಿಸಿ ಅವರ ಸ್ಪೂರ್ಥಿಯುತ ಬದುಕಿನ ಚಿತ್ತಾಕರ್ಷಕ ವ್ಯಕ್ತಿತ್ವದ ಘಮವನ್ನು ಕನ್ನಡ ಪ್ರಭ ಓದುಗರಿಗೆ ಉಣ ಬಡಿಸಿದ್ದಾರೆ.

14-08-2012 ರಂದು  "ನಿಪಿಡೋರ್ " ನಲ್ಲಿ ಸಂಜೆ 5-ಘಂಟೆಗೆ ತಮ್ಮ ಪತಿ ಭಾರತ ದೇಶದ ಹೆಮ್ಮೆಯ ಹಾಗೂ ಕನ್ನಡ ನಾಡಿನ ಕೀರ್ತಿಶಾಲಿ ಸಾಧಕ ಸಂಪನ್ನ ಡಾ|| ನಾರಾಯಣ ಮೂರ್ತಿ ಹಾಗೂ ತಮ್ಮ ಸಹೋದರಿಯರೊಂದಿಗೆ ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ ಯನ್ನು ಭೇಟಿಯಾಗಿ ಅವರೊಂದಿಗೆ ಕಳೆದ ಮಧು ಕ್ಷಣಗಳನ್ನು ಕಣ್ಣಿಗೆ ಕಟ್ಟಿದ್ದಾರೆ.ಈ ಅಪರೂಪದ ಹಾಗೂ ಅವಿಸ್ಮರಣೀಯವಾಗುವ ಲೇಖನವನ್ನು ಈ ದಿನದ ಕನ್ನಡ ಪ್ರಭದಲ್ಲಿ ಓದಿ ನಮ್ಮ ಹೋರಾಟದ ಬದುಕಿಗೆ ಸ್ಪೂರ್ಥಿ ಪಡೆಯಬಹುದು.

ಸೂಚಿಯವರು-ಸುಧಾ ಮೂರ್ತಿಯವರನ್ನು ಬೀಳ್ಕೊಡುವಾಗ ಸುಧಾ ಮ್ಯಾಡಮ್ ಅವರು ನಿವೇದಿಸಿಕೊಂಡ ಈ ಸಾಲುಗಳನ್ನು ಓಮ್ಮೆ ಓದಿ.
  " ಮ್ಯಾಡಮ್ ಭಾರತೀಯ ಸಂಸ್ಕೃತಿಯಲ್ಲಿ ನಮಗಿಂತ ಹಿರಿಯರಾದ,ಜ್ಞಾನದಿಂದಲೂ ಗುಣದಿಂದಲೂ ಶ್ರೇಷ್ಠರಾದ ವ್ಯಕ್ತಿಗಳಿಗೆ ಕಾಲು ಮುಟ್ಟಿ ನಮಸ್ಕರಿಸಿ ಗೌರವ ಸೂಚಿಸುವದು ಪದ್ಧತಿ.ಈ ಪದ್ಧತಿ ಅನೇಕ ಕಾಲದಿಂದಲೂ ನಡೆದು ಬಂದಿದೆ.ನೀವು ನನ್ನ ದೃಷ್ಠಿಯಲ್ಲಿ ಎಲ್ಲ ರೀತಿಯಿಂದಲೂ ಈ ನಮಸ್ಕಾರಕ್ಕೆ ಯೋಗ್ಯರು,ನನಗೆ ನೀವು 'ಬೇಡ' ಅನ್ನಕೂಡದು ಎಂದಾಗ ತುಂಬಾ ಸಂತೋಷ ಮತ್ತು ಅಂತಃಕರಣದಿಂದ ನನ್ನ ಎರಡೂ ಕೈ ಹಿಡಿದು ಈ ಪದ್ಧತಿ ನಮ್ಮ ಬೌದ್ಧ ಧರ್ಮದಲ್ಲಿಯೂ ಇದೆ ಎಂದರು,ನಾನು ಬಾಗಿ ಅವರ ಕಾಲಿಗೆ ನಮಸ್ಕರಿಸಿದೆ."

(ಜೀವನ ಸ್ಫರ್ಥಿಗೆ ಸೂಚಿಯ ಹೋರಾಟದ ಬದುಕು ನಮಗೆ ಆದರ್ಶಪ್ರಾಯವಾಗಲಿ ಎಂಬುದೇ ನನ್ನಾಶಯ)
   
=ಬನವಾಸಿ ಸೋಮಶೇಖರ್.