Wednesday, 7 December 2011

"ಉರಿವ ನಾಲಿಗೆಯಾಗಬೇಡ" ವೆನ್ನುವ ಮೂರ್ನಾಡರ ಗಾಳಿಗೆ ಪ್ರಾರ್ಥನೆ ಎಂಬ ಕವಿತೆ.

"ಅದ್ಭುತವಾದ ಗಾಳಿಯ ಅಮೂರ್ತ ಪ್ರತಿಮೆಯನ್ನೇ ಒಂದು ಸುಂದರ ಕವನಕ್ಕೆ ವಿಷಯವಸ್ತುವಾಗಿ ಸಮರ್ಥವಾಗಿ ಬಳಸಿಕೊಂಡಿರುವ ಕವಿ ಮನಸ್ಸು ಘಾಸಿಗೊಂಡಂತೆ ಭಾಸವಾಗಿದೆ.ಅಂತಃಕರಣದಲ್ಲಿ ಅವ್ಯಕ್ತವಾಗಿ ಹೃದಯದಾಳಕ್ಕೆ ಲಗ್ಗೆ ಇಟ್ಟ ನೋವಿನ ಯಾತನೆ,ಆ ಮೂಲಕ ತನ್ನನ್ನೇ ಸಂತೈಸಿಕೊಳ್ಳುವ ರೀತಿಯಲ್ಲಿ ಉರಿವ ನಾಲಿಗೆಯಾಗಬೇಡವೆನ್ನುವ ಪರಿ ಹೃದಯ ಕಲುಕುತ್ತದೆ.ಕಪ್ಪಿಟ್ಟ ಮೋಡದ ಎದೆ ಸವರಿ ಚುಂಬಿಸು ಸುರಿಯಲಿ ಒಂದು ಹನಿ ಇಳೆಗೆ ಎನ್ನುವ ಕವಿಯ ಕೋರಿಕೆ ಭಾವವಂತೂ ಅತೀ ಮಧುರವಾಗಿದೆ.ಉರಿಯುತ್ತಿರುವ ಮನೋಜ್ವಾಲೆಗೆ ತಂಪೆರೆಯುವ ತಂಗಾಳಿಯಾಗಿ ಹೃದಯ ಸ್ಪರ್ಷಿಸಿ ವೇದನೆ ಅಳಿಯಲಿ ಎಂಬ ಮನದಿಂಗಿತ ಕವಿಯದಾಗಿದೆ.ದ್ವೇಷ,ಅಸೂಯೇ ಯಾವುದೂ ಮನಸ್ಸನ್ನು ಹಗುರಾಗಿಸದು,ಅಹಂಕಾರ,ಸೊಕ್ಕಿನಿಂದ ಏನನ್ನೂ ಸಾಧಿಸಲಾಗುವುದಿಲ್ಲ ಆದ್ದರಿಂದ ಎಲೆ ಗಾಳಿಯೇ ಇವೆಲ್ಲವನ್ನೂ ಇನ್ನಿಲ್ಲವಾಗುವಂತೆ ಮನವಪ್ಪಳಿಸಿ ಸ್ನೇಹ ಮಾಧುರ್ಯದ ಸವಿ ನೆನಪು ಸದಾ ಇರುವಂತೆ ಚುಂಬಿಸು,ಆಲಂಗಿಸು ಬಂಧುತ್ವದ ನಿರಂತರ ಸಾಂಗತ್ಯ ಉಳಿಯುವ ಹಾಗೆ ಮನವ ಸ್ಪರ್ಷಿಸು ಎನ್ನುವ ಕವಿ ಮನಸು ಕೋಮಲವಾಗಿದೆ.ಯಾರ ವೈರತ್ವವೂ ಬೇಡ,ಸ್ನೇಹವೇ ಸದಾ ಬೆಳಗಲಿ ಎಂಬ ಆಶಯ ಕವಿಯದಾಗಿದೆ.ಸುಂದರ ಮತ್ತು ಅರ್ಥಪೂರ್ಣ ಕವನ.ತುಂಬಾ ಇಷ್ಟವಾಯಿತು."


ಕವನ ಹೀಗಿದೆ
========
 
ಗಾಳಿಯೇ ಬೇಡ
ಬಿರುಗಾಳಿಯಾಗಬೇಡ  !
ಉಸಿರಾಡೋ ಎದೆಗೆ ನುಗ್ಗಿ
ಭುಸುಗುಟ್ಟಬೇಡ  !
ಬೇಗುದಿ ಬೆಂಕಿಗೆ
ಜೊತೆ ಸೇರಬೇಡ !

ಕಪ್ಪಿಟ್ಟ ಮೋಡದ
ಎದೆ ಸವರಿ ಚುಂಬಿಸು
ಸುರಿಯಲಿ ಒಂದು ಹನಿ ಇಳೆಗೆ !
ಆಗಸದ ಮೊಗಕೆ
ತಿಳಿ ಬಂದು ಅರಳಲಿ
ಸದಾ ಬೀಸು ನಿನ್ನ ತಂಪು !

ಶಾಂತಿಯ ಹೆಜ್ಜೆಗಳು
ಬೀದಿಗೆ ನಡೆಯಲಿ
ತೆರೆಯಲಿ ನಿನ್ನ ಸ್ನೇಹದ ಭಾಹು !
ಬೀದಿಯ ದೀಪಗಳು
ದಾರಿಯ ತೆರೆಯಲಿ
ಕಾಪಿಡಲಿ ನಿನ್ನದೇ ಉಸಿರು !

ಲೋಕದ ಮಾತಿಗೆ
ಭುಗಿಲೆದ್ದ ಜ್ವಾಲೆಗೆ
ಮೋಡಗಳ ಗುಡುಗಿಸಿ ಕರೆಯೇ !
ನಗುವಾಗಿ ಮಿಂಚಿಗೆ
ಮಳೆಯಾಗಿ ಜೊತೆಗೆ
ಉರಿ ಬೆಂಕಿ ಎದೆಗಳ ತಣಿಸೆ !

ಅಹಂ ಗೋಡೆಗಳ
ಮೇಲೊಂದು ದೀಪ
ಆರದಿರಲಿ ನಿನ್ನ ಬಿರುಸು ನುಡಿಗೆ !
ಬಿರುಕಿಟ್ಟ ಗೋಡೆಗಳ
ಬಿರುಕೊಳಗೆ ನುಗ್ಗಿ ಬಾ
ಬೆಸೆಯಲಿ ಬಂಧಗಳು ಜಗಕೆ !

ಗಾಳಿಯೇ ಬೇಡ
ಬೇಡವೇ ಬೇಡ
ಕಿಚ್ಚುಗಳ ಘರ್ಷಿಸಬೇಡ
ನೋವುಗಳ ತುಂಬಿಸಿ
ದ್ವೇಷಗಳ ಎಬ್ಬಿಸಿ
ಬೆಂಕಿಗೆ ನಾಲಗೆಯಾಗಬೇಡ..!
-ರವಿ ಮೂರ್ನಾಡು

1 comment:

  1. ಒಳ್ಳೆಯ ಕವನಕ್ಕೆ ಉತ್ತಮ ವ್ಯಾಖ್ಯಾನ ಕೊಟ್ಟಿದ್ದೀರಿ ಬನವಾಸಿಯವರೆ.

    ReplyDelete