Saturday, 12 November 2011

ಕವಿ ಬದರಿನಾಥ ಪಲವಲ್ಲಿ ಅವರ "ಸಾವಿಗೆ ಬಾರದ ನೆಂಟ,ವೈಕುಂಠ ಸಮಾರಾಧನೆಗೆ ಹಾಜರು!"ಕವಿತೆಯಲ್ಲಿ ನಂಟರ ಅಮಾನವೀಯತೆ ಅನಾವರಣ.

ಜೀವನ ಯಾತ್ರೆಯಲ್ಲಿ ಬಂಧು-ಬಾಂಧವರು,ಇಷ್ಟ ಮಿತ್ರರು,ಹಿತೈಷಿಗಳು,ನೆಂಟರು ಹೀಗೆ-ಹತ್ತಾರು ಮುಖಗಳು ಒಂದಿಲ್ಲೊಂದು ಸ್ತರಗಳಲ್ಲಿ ಸುಖ-ದುಃಖ,ಕಷ್ಟ-ನಷ್ಟ,ನೋವು-ನಲಿವುಗಳ ಸಂದರ್ಭಗಳಲ್ಲಿ ಬದುಕಿನ ಉತ್ಕರ್ಷಕ್ಕೆ ಹಲವು ಮೆಟ್ಟಿಲುಗಳಾಗಿ,ಆಧಾರ ಸ್ಥಂಭಗಳಾಗಿ ಆಸರೆಯಾಗುವುದುಂಟು.ಕೆಲವೊಮ್ಮೆ ಇದೇ ಬಂಧು-ಬಾಂಧವರೆನಿಸಿಕೊಳ್ಳುವ ಮಹಾಶಯರನೇಕರು ತಮ್ಮದೇ ನೆಂಟನ ಸಾವಿಗೆ ಹಿಡಿ ಮಣ್ಣು ಹಾಕಲು ಬರದಿದ್ದರೂ ಅವನ ಶ್ರಾದ್ಧದೂಟಕ್ಕೆ ಚಾಚೂ ತಪ್ಪದೇ ಹಾಜರಾಗಿ ಹೇಗೆ ಅಮಾನವೀಯತೆ,ಕ್ರೂರತೆಯಿಂದ ವರ್ತಿಸುತ್ತಾರೆ;ಮನೆ ಮುರುಕರಂತೆ ನಡೆದುಕೊಳ್ಳತ್ತಾರೆ ಎಂಬ ಇನ್ನೊಂದು ಮುಖದ ಅನಾವರಣವನ್ನು "ಸಾವಿಗೆ ಬಾರದ ನೆಂಟ,ವೈಕುಂಠ ಸಮಾರಾಧನಗೆ ಹಾಜರು!" ಎಂಬ ಸತ್ವಪೂರಿತ ಕವನದಲ್ಲಿ ಕವಿ ಬದರಿನಾಥ ಪಲವಲ್ಲಿಯವರು ಪರಿಚಯಿಸಿರುವರು.
'ಕೌರವ ಪ್ರಸೂತಿನಿ'ಎಂದು ಅತ್ಯಂತ ಮಾರ್ಮಿಕವಾದ ಪದ ಪ್ರಯೋಗದೊಂದಿಗೆ ಹೆಣ್ಣೊಬ್ಬಳನ್ನು ಗಾಂಧಾರಿಗೆ ಹೋಲಿಸಿರುವುದು ಔಚಿತ್ಯಪೂರ್ಣವಾಗಿದೆ.ಆಕೆ ನೂರಾರು ಮಕ್ಕಳನ್ನು ಹೆರಬಲ್ಲ ಮಹಾತಾಯಿಯಾಗಿದ್ದು ಈಗಲೂ ಬಸುರಿಯಾಗಿ ಪ್ರಸವಕ್ಕೆ ಸಿದ್ಧವಾಗಿದ್ದಾಳೆಂಬ ಸೋಜಿಗವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ.ಸಕಲೈಶ್ವರ್ಯ ಸಂಪನ್ನೆಯಾದ ನೂರೊಂದು ಮಕ್ಕಳ ಮಹಾತಾಯಿ ಗಾಂಧಾರಿಗೂ ಕವಿತೆಯಲ್ಲಿನ ನೆಂಟನ ಹೆಂಡತಿಗೂ ಅಜಗಜಾಂತರ ವ್ಯತ್ಯಾಸ.ಬಡತನದ ಬೇಗುದಿಯಲ್ಲಿ ಕಾಲ ನೂಕುವ ಈ ನೆಂಟನ ಸಂಸಾರವನ್ನು ಯಾರಾದರೂ ಮಾತಾ-ಪಿತರು-'ಏನಪ್ಪಾ ಇಷ್ಟೊಂದು ಮಕ್ಕಳೇ?' ಎಂದು ಪ್ರಶ್ನಿಸಿದರೆ " ಇವಾ,ಇವು ಶಿವ ಕೊಟ್ಟ ಪ್ರಸಾದ,ಶಿವನಿಚ್ಛೆ "ಎಂದು ಹೇಳಿ ನಯವಾಗಿ ಜಾರಿಕೊಳ್ಳುವ ಜಾಣ್ಮೆಯ ಮಾತನ್ನು ಸೊಗಸಾಗಿ ಸಂದರ್ಭೋಚಿತವಾಗಿ ಉಪಯೋಗಿಸಿಕೊಂಡು ಆ ನೆಂಟನ ಮಕ್ಕಳ ವಯೋಮಾನದ ಅಳತೆಗೆ ಉತ್ಪ್ರೇಕ್ಷೆ ಎನಿಸಿದರೂ ಅಲಂಕಾರಿಕವಾಗಿರದೇ ಹಳ್ಳಿ ಬದುಕಿನ ಜನರ ಆಡು ಭಾಷೆಯ ಸೊಗಸಿಗೆ ಚಟಾಕು,ಪಾವು,ಸೇರು ಪದಗಳು ಮಾನಗೊಂಡಿವೆ.
ನೆಂಟ,ಆತನ ಹೆಂಡತಿ,ಇವರ ಹತ್ತಾರು ಮಕ್ಕಳು ಇವರುಗಳೆಲ್ಲ ಇಡೀ ಕವಿತೆಯ ಮುಖ್ಯ ಭೂಮಿಕೆಯಲ್ಲಿ ಕಾಣುವ ಪಾತ್ರಧಾರಿಗಳು.ಇವರು ತಮ್ಮದೇ ನೆಂಟನೊಬ್ಬನ ಸಾವಿನ ಸುದ್ಧಿ ಬಂದಾಗ ಶವಯಾತ್ರೆಗೆ ಹೋಗುವ ಔದಾರ್ಯ ತೋರುವುದಿಲ್ಲ.ಸತ್ತರೆ ನಮಗೇನು ಲಾಭವೆನ್ನುವ ಲೆಕ್ಕಾಚಾರ ಹಾಕುವ ಅದೆಷ್ಟೋ ಮಹಾಶಯರ ಧಾಷ್ಟ್ಯತನವನ್ನು ನಾವು ಸಮಾಜದಲ್ಲಿ ಕಾಣುತ್ತೇವೆ.ಪಲವಲ್ಲಿಯವರ ಈ ಕವನವೂ ಇಂಥ ಮನೆ ಮುರುಕು ನೆಂಟರ ನಿಜ ಬಣ್ಣದ ಸತ್ಯ ದರ್ಶನಮಾಡಿಸಿದೆ.

ಮುಷ್ಠಿ ಮಣ್ಣಿಗೆ ಹೋಗದ ಮನೆಹಾಳು ನೆಂಟರು,ನೆಂಟನ ವೈಕುಂಠ ಸಮಾರಾಧನೆಗೆ ಹೇಳಿ ಕಳಿಸದಿದ್ದರೂ ಪತ್ರ ಬರೆಯದಿದ್ದರೂ ಮನಸ್ಸಲ್ಲೇ ಲೆಕ್ಕಹಾಕಿ ಚಾಚೂ ತಪ್ಪದೇ ಸಕುಟುಂಭ ಪರವಾರ ಸಮೇತ ಹಾಜರಾಗಿ ಬಗೆ ಬಗೆಯ ಭಕ್ಷ್ಯ ಭೋಜ್ಯಗಳನ್ನು ರಣ ಹದ್ದುಗಳಂತೆ ಬಕ ಬಕ ಮುಕ್ಕುತ್ತಾರೆ.ಗತಿಸಿದ ನೆಂಟನ ಹಿರಿಮಗ ತಂದೆಯ ಸಾವಿನ ದುಃಖದಿಂದ ಹೊರಬರಲಾರದ ನೋವಲ್ಲಿರುವಾಗ ಕೇವಲ ಕಣ್ಣೊರೆಸುವ ತಂತ್ರವಾಗಿ ಮಗನ ಕೈ ಹಿಚುಕುವ,ಮೈ ಸವರಿ ಬೂಟಾಟಿಕೆಗೆ ಸಾಂತ್ವನ ಹೇಳುವ ಆಷಾಢಭೂತಿ ವ್ಯಕ್ತಿಯ ನೈಜ ಮನೋಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿ ಪರಿಚಯಿಸಿರುವರು.
ಹರಕು ಬಾಯಿಯ ಬಿಡಾಡಿ ನೆಂಟನಿಗೆ  ಓಸಿರಾಯನೆಂದು ಜರಿದಿರುವುದು  ಸಿಕ್ಕಿದ್ದನ್ನು ಬಾಚಿಕೊಳ್ಳುವ ತಂತ್ರಗಾರಿಕೆ ಮನುಷ್ಯನ ಲಕ್ಷಣವನ್ನು ಸಮರ್ಥವಾಗಿ ಬಿಂಬಿಸಿದೆ.ಅನಾಯಾಸವಾಗಿ ಸಿಕ್ಕ ತಿಥಿಯೂಟವನ್ನು ಹೊಟ್ಟೆ ಬಿರಿಯುವಂತೆ ತಿಂದು ಲೊಚ ಲೊಚನೆ ಪಾಯಸ ನೆಕ್ಕುತ್ತಿದ್ದರೂ 'ವಡೆಯ ಗಾತ್ರ ಮಾತ್ರ ಇತ್ತಿತ್ತಲಾಗಿ ಸಣ್ಣ ಮಾಡುತ್ತಿದ್ದಾರಲ್ಲೋ ತಮ್ಮಾ.....!' ಎಂದು ಪಕ್ಕದಲ್ಲಿ ಕುಳಿತವನ ಕಿವಿಯಲ್ಲಿ ಹರಟುವ ಈ ಓಸಿರಾಯನ ಹರಾಮತನ  ಅತ್ಯಂತ ಹೇಸಿಗೆ ಮೂಡಿಸುವುದು.
ಉಂಡ ಮನೆಯ ಸೂರು ಗಳ ಎಣಿಸುವ ಈ ಮನೆ ಮುರುಕು ನೆಂಟ ಅಷ್ಟಕ್ಕೂ ಸುಮ್ಮನಾಗದೇ ಶೆಟ್ಟರು ಸತ್ತಾಗ ಅವರ ಮನೆಯಲ್ಲಿ ಅಂಗೈಯಗಲದಷ್ಟು ಗಾತ್ರದ ವಡೆ ಮಾಡಿದ್ದರೆಂದು ಹೇಳಿ ತಿಂದ ಮನೆಗೆರಡು ಬಗೆಯುವ ಮಾತನಾಡುತ್ತಾನೆ.ಇಂಥ ನೆಂಟರನ್ನು ಸತ್ತ ಹೆಣ ತಿನ್ನಲು ಮುತ್ತಿಕ್ಕಿ ಹಾತೊರೆಯುವ ರಣ ಹದ್ದುಗಳಿಗೆ ಹೋಲಿಸಿರುವ ಕವಿ ಅವರ ಅಮಾನವೀಯ ನಡವಳಿಕೆ,ಮನೆ ಮುರುಕುತನ,ಅಗಿದು ನುಂಗಲು ಹೂಡುವ ಹತ್ತಾರು ವೇಷಗಳ ಪಾತ್ರವನ್ನು ಹಸಿ ಹಸಿಯಾಗಿ ಚಿತ್ರಿಸುತ್ತಾ ಓದುಗರ ಸೂಕ್ಷ್ಮ ಮನಸ್ಥಿತಿಯನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿರುವರು.ಇಂಥ ಸುಂದರ ನಿರೂಪಣೆ " ಸಾವಿಗೆ ಬಾರದ ನೆಂಟ ವೈಕುಂಠ ಸಮಾರಾಧನೆಗೆ ಹಾಜರು!"ಕವಿತೆಯಲ್ಲಿ ಪಡಿ ಮೂಡಿದೆ.
   = ಬನವಾಸಿ ಸೋಮಶೇಖರ್.
http://banavasimaatu.blogspot.com/
ಕವಿ ಪಲವಲ್ಲಿರವರ ಕವಿತೆಯನ್ನು ಇಲ್ಲಿ ನೋಡಿರಿ.http://badari-poems.blogspot.com/

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು!
ಹಿಂದೆಯೇ ಕೌರವ ಪ್ರಸೂತಿನಿ
ತುಂಬು ಗರ್ಭಿಣಿ ಹೆಂಡತಿ,ಶಿವ ಕೊಟ್ಟ ಮಕ್ಕಳದೇ ಸಾಲು
ಚಟಾಕು ಪಾವು ಅಚ್ಚೇರು ಸೇರು
ಸತ್ತವನ ಹಿರೀ ಮಗ
ಸಪ್ಪಗೆ ನಿಂತಿದ್ದ,ಅವನ ಕೈಯನೊಮ್ಮೆ ಹಿಚುಕಿ
ಸಾಂತ್ವನದ ಲೊಚಗುಟ್ಟಿ
ಒರೆಸೇ ಒರೆಸಿದ ಬಾರದ ಕಣ್ಣೀರ...
ಮುಂದೆ ರೈಲು ನಿಂತದ್ದು
ಎಲೆ ಹರವೋ ಮುಂಚೆಯೋ
ಮೊದಲ ಪಂಕ್ತಿಗೇ...
ಓಸಿರಾಯನಿಗೆ ಮೈಯೆಲ್ಲ ತೂತು
ತುಂಬಿಕೊಳ್ಳುತ್ತೆ ಪಂಚ ಭಕ್ಷ್ಯ!
ವಡೇ ಮೇಲೆ ವಡೇ ಪೋಣಿಸಿದ
ಲೊಚ ಲೊಚನೆ ನೆಕ್ಕಿದ ಪಾಯಸ.
ಹದಿನಾರನೇ ವಡೆ ಸಂಹಾರಕೆ ಮುನ್ನ
ಪಕ್ಕದವನ ಕಿವಿಗೆ ಪಿಸುರಿದ
ಇತ್ತಿತ್ತಲಾಗೆ ಸಣ್ಣ ಮಾಡುತಾರಲ್ಲೋ
ತಮ್ಮ ವಡೆಯ?ನೀನು ನೋಡಬೇಕಿತ್ತು
ಶೆಟ್ಟರು ಸತ್ತಾಗ ಅಂಗೈ ಅಗಲ ವಡೆ
ಅಲ್ಲೂ
ಪೊಗದಸ್ತು ಗೋಡಂಬಿ!

ಸಾವಿಗೆ ಬಾರದ ನೆಂಟ
ವೈಕುಂಟ ಸಮಾರಾಧನೆಗೆ ಹಾಜರು
ಕರೆದರೂ ಕರೆ ಓಲೆ ಮರೆತರೂ!
ಅಮೇಧ್ಯದಿ ನಾಣ್ಯಾನ್ವೇಷಕ
ಮಂದಿ ನೆಂಟರು,ಕಳೇಬರಕೆ ಸುತ್ತೋ ಹಸಿದ
ಹದ್ದುಗಳಂತವರು...


Monday, 7 November 2011

ಕವಿ ವಸಂತ್ ಕೋಡಿಹಳ್ಳಿಯವರ " ಪ್ರೀತಿಯೆಂದರೆ ಇದೇನಾ?" ಕವಿತೆ.

ಸಖಿಯ ಸವಿ ನೋಟದ ಮಧುರ ನೆನಪುಗಳೊಂದಿಗೆ ನವೀರಾದ ಪ್ರೀತಿ ಕಟ್ಟಿಕೊಂಡು ಆ ಸಖಿಯನ್ನೇ ಸಂಗಾತಿಯಾಗಿ
ಸ್ವೀಕರಿಸಬೇಕೆಂಬ ಹಂಬಲ,ಕಾತರ,ತವಕದಿಂದ ಹುಟ್ಟಿ ಬಂದಿರುವುದೇ ವಸಂತ್ ಕೋಡಿಹಳ್ಳಿ ಇವರ "ಪ್ರೀತಿಯೆಂದರೆ ಇದೇನಾ?" ಎಂಬ ಸುಂದರ ಕವಿತೆ.


ಕವನದ ನಾಯಕನಿಗೆ ಹೆಜ್ಜೆ ಹೆಜ್ಜೆಗೂ ನೆನಪಾಗಿ ಕಾಡುವ ಗೆಳತಿಯ ಮೇಲಿನ ಒಡಲಾಳದ ಪ್ರೀತಿಯು ಹುಚ್ಚು
ಹಿಡಿಸಿದಂತಾಗಿದೆ.ಹಗಲಿರುಳೆನ್ನದೇ ಅವಳ ಮಮಕಾರದಲ್ಲಿ ಬಂಧಿಯಾಗಿ ಮೈಮರೆತು ಹೋಗಿರುವ ನಾಯಕ ಇದು ನನಗೆ ನಿನ್ನ ಮೇಲೆ ಒಡಮೂಡಿರುವ ಪ್ರೀತಿಯಲ್ಲದೇ ಬೇರೇನೂ ಅಲ್ಲ ಎಂದು ಸ್ವಗತಿಸುತ್ತಾ ಪ್ರೀತಿಯೆಂದರೇ ಇದೇನಾ....?
ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ಮನೋಜ್ಞವಾಗಿದೆ.


ನಿನ್ನ ರೂಪ ಲಾವಣ್ಯ ನನ್ನ ಹೃದಯವ ಮನಸೂರೆಗೊಂಡಿರುವುದು.ನಿನ್ನಾ ಸೌಂದರ್ಯದ ಮುಂದೆ ನನಗೆ ಬೇರೇನೂ ಕಾಣದಾಗಿದೆ ಎನ್ನುವಾಗಿನ ಭಾವ ಆ ಸಖಿಗೆ ಇದು ನಿಜ ಪ್ರೀತಿಯೇ ಎಂಬರಿವಾಗಿ ಈ ಸಖನಿಗೆ ಬೇಗನೇ ಸಿಗಬಾರದೇ ಎಂದು ಮನ ಬಯಸುವಂತಾಗುತ್ತದೆ.ಕುಂತಲ್ಲಿ ನಿಂತಲ್ಲಿ ನಡೆದಲ್ಲಿ ಎಲ್ಲೆಲ್ಲಿಯೂ ಅವನಿಗೆ ಗೆಳತಿಯ ಪ್ರತಿ
ರೂಪವೇ ಕಾಣುವುದು.ಯಾರೊಂದಿಗೆ ಮಾತಾಡಿದರೂ ಅದು ಅವಳದೇ ಧ್ವನಿಯಂತೆ ಭಾಸವಾಗುವುದು.ಅವಳ ಹೆಜ್ಜೆ ಗುರುತುಗಳೆಲ್ಲ ಗೆಜ್ಜೆಯ ಸದ್ದುಗಳಂತಾಗಿ ಆಲಾಪಿಸುತ್ತಿವೆ.ಇದು ಪ್ರೀತಿಯೋ ಭಾಸವೋ ಅರ್ಥವಾಗುತ್ತಿಲ್ಲವಾದ್ದರಿಂದ ಮನ ಬಿಚ್ಚಿ ತಿಳಿಸಿ ಬಿಡು ಎಂದು ಅವಳನ್ನೇ ಕೇಳುವ ಕವಿತೆಯ ನಾಯಕ ಇದು ಪ್ರೀತಿಯೇ ಆಗಿದ್ದರೆ ತನ್ನಲ್ಲಿ ಮೂಡಿರುವ ಪ್ರೀತಿಯ ಕಾತರತೆಗೆ ತೆರೆ ಎಳೆದು ತನ್ನನ್ನು ಸ್ವೀಕರಿಸೆಂದು ಕೇಳುವ ಆರ್ದತೆ ಇಷ್ಟವಾಗುತ್ತದೆ.


ನಿನ್ನ ತಿಳಿಯುವ ಮನದ ಹಂಬಲವು ಅಕ್ಷರಗಳ ಚಿತ್ತಾರ ಬಿಡಿಸಬೇಕೆಂಬ ಬಯಕೆ ಮೂಡಿಸುತಿಹುದು. ಆದರೇ ಆ ಬಯಕೆಗಳೆಲ್ಲ ಶುಷ್ಕವಾಗಿ ಕನಸುಗಳು ಮಸುಕಾಗಿ ಬಿಡಬಹುದೆಂಬ ಆತಂಕದಿಂದ ಊಟ ನಿದ್ದೆ ಯಾವೊಂದೂ ರುಚಿಸುತ್ತಿಲ್ಲವಾಗಿದೆ ಎನ್ನುವ ಆತನ ಮನೋಭಿಲಾಷೆ ಮಧುರವಾದುದು ಅಂತನಿಸುವುದು.  ತನ್ನಕಾತರ,ಹಂಬಲ,ತವಕಗಳಿಗೆ ಉತ್ತರ ಸಿಗದೇ ಮಂಕಾಗಿಹೋಗಿರುವ ತನಗೆ ದಯಮಾಡಿ ನಿನ್ನಂತರಂಗದಲ್ಲಿರುವುದನ್ನು ಬಾಯ್ಬಿಟ್ಟು ಇದು ಪ್ರೀತಿಯೇ ಎಂದು ಹೇಳಿ ಬಿಡು, ಎಂದು ಅಂಗಲಾಚುತ್ತಾನೆ.ಈ ಕೋರಿಕೆಯ ಮನ ಸ್ಥಿತಿ ರಸವತ್ತಾಗಿ ಮೂಡಿದೆ.


ನಿನ್ನ ಮೇಲೆ ನಾನಿಟ್ಟಿರುವ ಪ್ರೀತಿ ನಿಜವೇ ಆಗಿದ್ದರೆ ನನ್ನ ಹೃದಯ ಶೂನ್ಯವಾಗುವುದಿಲ್ಲವೆಂಬ ದೃಢ ವಿಶ್ವಾಸ ನನ್ನದಾಗಿದೆ.
ಈ ಎದೆಯ ಬಾಂದಳವನ್ನು ಬರಿದಾಗಿಸದೇ ನೀನು ನನ್ನವಳಾಗಿ ಸುಖದ ಸೊದೆ ಹರಿಸುತ್ತೀ ಎಂಬ ಅಚಲವಾದ ನಂಬಿಕೆ ನನಗಿದೆ ಎನ್ನುವ ನಾಯಕ ನನ್ನ ಜೊತೆಗಾತಿಯಾಗಿ ಬಿದಿಗೆ ಚಂದ್ರಮನಂತೆ ತನ್ನ ಬಾಳ ಪಥಕ್ಕೆ ಅವಳು ಬೆಳಕಾಗುತ್ತಾಳೆಂಬ ವಿಶ್ವಾಸ ಹೊಂದಿರುತ್ತಾನೆ.ಆ ಹೆಬ್ಬಯಕೆಯೊಂದಿಗೆ ಬೆಳದಿಂಗಳ ರಾತ್ರಿಯಂತೆ ನಿತ್ಯ ನಿನ್ನ ನಿರೀಕ್ಷೆಯಲ್ಲಿಯೇ ನಿನಗಾಗಿ ಕಾಯುತ್ತರುತ್ತೇನೆ,ನನ್ನ ಕೈ ಹಿಡಿದು ಬಾಳಿಗೆ ಮನ್ನುಡಿ ಬರೆದು ದಾರಿ ದೀವಿಗೆಯಾಗೆಂದು ಅವಳನ್ನು ಕೋರುವ
ಕವಿತೆಯ ನಾಯಕನ ಅಭಿಲಾಷೆ,ಮನದಿಂಗಿತ'ಪ್ರೀತಿಯೆಂದರೆ ಇದೇನಾ...? "ಕವಿತೆಯಲ್ಲಿ ಮೋಹಕವಾಗಿ ಮೂಡಿಬಂದಿದೆ.ಈ ಸುಂದರ ಕವಿತೆಯನ್ನು ನೀವೂ ಓದಿ, ಆಸ್ವಾದಿಸಿ ನನ್ನೀ ಆಶಯದ ನುಡಿಗಳಿಗೆ ಪ್ರತಿಕ್ರಿಯಿಸಿರಿ.

= ಬನವಾಸಿ ಸೋಮಶೇಖರ್.

 ------ಕವಿತೆ ಹೀಗಿದೆ ನೋಡಿ.-------


ಪ್ರೀತಿಯೆಂದರೆ ಇದೇನಾ ?.
----------------------------

ಕತ್ತಲಾದರೆ ಸಾಕು
ಕಣ್ಣಮುಂದೆ ಬಂದು ಕಾಡುವೆ,
ಕಣ್ಣು ಮುಚ್ಚಿದೊಡನೆಯೆ
ನೆನಪಾಗಿ ಮುಂದೆ ನಿಲ್ಲುವೆ,
ನಿನ್ನದೇ ಯೋಚನೆಯಲ್ಲಿ ಹಗಳಿರುಳೂ
ಮಿಂದು ಮೀಯುವಂತಾಗುತ್ತಿದೆ.
ಗೊತ್ತಾಗುತ್ತಿಲ್ಲ ಹೇಳಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ರೂಪವೊಂದನ್ನು ಬಿಟ್ಟು
ಬೇರೇನು ಕಾಣದಾಗಿದೆ,
ನನ್ನ ಹೃದಯವ್ಯಾಕೊ ಸದಾ ?
ನಿನ್ನನ್ನೇ ಹಂಬಲಿಸುತ್ತದೆ,
ದಾರಿಯಲ್ಲಿ ಯಾರೇ ನಡೆದರೂ
ನಿನ್ನದೇ ಗೆಜ್ಜೆ ಸದ್ದು,
ಯಾರು ಮಾತನಾಡಿದರೂ
ನಿನ್ನದೇ ದ್ವನಿ.
ಇದರ ಅರ್ಥವನ್ನು
ಅರಿಯಾಲಾಗುತ್ತಿಲ್ಲ ತಿಳಿಸಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ಬಗ್ಗೆ ತಿಳಿಯುವ ಹುಚ್ಚಾಗುತ್ತಿದೆ,
ಕಥೆ ಕವನ ಬರೆಯುವ
ಮನಸ್ಸು ಹೆಚ್ಚಾಗುತ್ತಿದೆ
ಆಸೆಗಳು ಅತಿಯಾಗುತ್ತಿವೆ,
ಬಯಕೆಗಳು ಬಣಗುಡುತ್ತಿವೆ,
ಕನಸುಗಳು ಕತ್ತಲಾಗುತ್ತಿವೆ,
ಊಟವು ಬೇಕಿಲ್ಲ,
ನಿದ್ರೆಯು ಬರುತ್ತಿಲ್ಲ,
ನನಗೂ ತಿಳಿಯುತ್ತಿಲ್ಲ,
ದಯಮಾಡಿ ನುಡಿದುಬಿಡು,
ಪ್ರೀತಿಯೆಂದರೆ ಇದೇನಾ ?.

ಇದು ನಿಜವಾಗವಾಗಿಯೂ
ಪ್ರೀತಿಯೇ ಆಗಿದ್ದರೆ ?.
ನಿನಗಾಗಿ ಹಂಬಲಿಸುತ್ತಿರುವ
ನನ್ನ ಹೃದಯಕ್ಕೆ
ಮುಕ್ತಿಯನ್ನಾದರೂ
ದೊರಕಿಸುತ್ತೀಯೆಂದು ನಂಬಿರುವೆ.

ನಿನಗಾಗಿ ಹುಣ್ಣಿಮೆಯ
ರಾತ್ರಿಯಂದು ಕಾಯುತ್ತಿರುತ್ತೇನೆ !
ಚಂದ್ರನಂತೆ ನನ್ನ ಬಾಳಿಗೆ ಬಂದು !..
ಬೆಳಕಂತೆ ಸೇರಿಕೋ …!..

----------------------
ವಸಂತ್ ಕೋಡಿಹಳ್ಳಿ

Sunday, 6 November 2011

ಕಂಬಾರರ ಬಗ್ಗೆ ಪಾಪು ಟೀಕೆ ಸರ್ವಥಾ ಯೋಗ್ಯವಾದುದಲ್ಲ!




" ಕನ್ನಡದ ಹೆಸರಾಂತ ಪತ್ರಿಕೋದ್ಯಮಿ,ಸಾಹಿತಿಯಾಗಿ ಮನೆಮಾತಾಗಿರುವ ಡಾ|| ಪಾಟೀಲ ಪುಟ್ಟಪ್ಪ (ಪಾಪು) ನವರು ಈ
 ನಾಡು ಕಂಡ ಹೆಮ್ಮೆಯ ಸಾಹಿತಿ ಡಾ||ಚಂದ್ರಶೇಖರ್ ಕಂಬಾರ ಅವರ ಬಗ್ಗೆ ಮಾಡಿದ ಟೀಕೆಯ ಧಾಟಿ ಕೇಳಿ ಸಖೇದಾಶ್ಚರ್ಯವಾಗುವುದು.ಕನ್ನಡ ನಾಡಿನ ಸಾಹಿತ್ಯ ಸರಸ್ವತಿಯ ಮುಕುಟ ಮಣಿಗಳಲ್ಲಿ ಪಾಪು ಹಾಗೂ ಕಂಬಾರರು ಶ್ರೇಷ್ಠವಾದುದನ್ನೇ ನೀಡಿ ಹೆಸರು ಮಾಡಿದವರು.ನಾವು ಪಾಪು ರವರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು.
ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಪಾಪುರವರಿಂದ "ಕಂಬಾರರಿಗಿಂತ ಬೈರಪ್ಪ ಅರ್ಹರು"(ಪ್ರಜಾವಾಣಿ 21-09-2011) ಎಂದು ಹೊರಹೊಮ್ಮಿದ ಅಭಿಪ್ರಾಯ ಕೇಳಲು ಅತೀವ ದುಃಖವಾಗುವುದು.ವ್ಯಕ್ತಿ ವ್ಯಕ್ತಿಗಳ ನಡುವೆ ಯೋಗ್ಯತೆಯ ವ್ಯತ್ಯಾಸ ಕಲ್ಪಿಸಿ ಅವರಿಗಿಂತ ಇವರು ಶ್ರೇಷ್ಠರು ಎನ್ನುವ ಮನದಿಂಗಿತ ಸರ್ವಥಾ ಯೋಗ್ಯವಾದುದಲ್ಲ.ಬೈರಪ್ಪನವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ! ಸಾಹಿತ್ಯ ವಾಗ್ದೇವಿಯ ಹಿರಿಮೆಯನ್ನು ಹೆಚ್ಚಿಸಿದ ಮಹಾನ್ ನಕ್ಷತ್ರ ಅವರು.ಅವರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ,ಹೆಮ್ಮೆಪಡುತ್ತಾರೆ.ಅವರೂ ಜ್ಞಾನ ಪೀಠಕ್ಕೆ ಅರ್ಹವಾದ ಶ್ರೇಷ್ಠತಮವಾದ ಸಾಹಿತ್ಯವನ್ನು ಈ ನಾಡಿಗೆ ಧಾರೆಎರೆದಿರುವರು.ಕನ್ನಡ ಸಾಹಿತ್ಯ ಸರಸ್ವತಿಯ ಮಕ್ಕಳಲ್ಲಿ ಭಿನ್ನಾಭಿಪ್ರಾಯವಿರಬಹುದು.ಆದರೆ ಅದು ತಾತ್ವಿಕ ಬದ್ಧತೆಯಿಂದ ಕೂಡಿ ವಿಧಾಯಕತೆಯನ್ನು ಹೊಂದಿರಬೇಕಾದುದು ಅತ್ಯಂತ ಅಗತ್ಯವಾದುದು.ನಾಡಿಗೆ ಇನ್ನೊಂದು ಜ್ಞಾನಪೀಠ ತಂದು ಕೊಟ್ಟ ಡಾ|| ಕಂಬಾರರಿಗೆ ಅಭಿನಂದನೆ ಸಲ್ಲಲೇಬೇಕು."

-ಬನವಾಸಿ ಸೋಮಶೇಖರ್,ಮಂಗಳೂರು.


Sunday, 30 October 2011

ರವಿ ಮೂರ್ನಾಡು ಅವರ " ಹೆಚ್ಚೆಂದರೆ ನಾನು.........." ಕವಿತೆ.

ಚಿಂದಿ ಆಯುವ ಹುಡುಗನ ಜೀವನ ಗಾಥೆಯನ್ನು ಭಾವಾತ್ಮಕವಾಗಿಯೂ ಚಿಂತನಾತ್ಮಕವಾಗಿಯೂ ಎಳೆ ಎಳೆಯಾಗಿ ಬಿಡಿಸಿ ಹೇಳುವ ಕವಿ ತನ್ನ ಮನಸ್ಸಿನಾಳದಲ್ಲಿ ಹುದುಗಿರುವ ದುಗುಡವನ್ನು ಹಗುರಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ಆಹುಡುಗನ ವಾಸ್ತವ ಬದುಕಿನ ನೈಜ ಚಿತ್ರಣವನ್ನು ವಿಷಧೀಕರಿಸುವ ರೀತಿ ಕವಿ ರವಿ ಮೂರ್ನಾಡು ಅವರ "ಹೆಚ್ಚೆಂದರೆ ನಾನು...." ಕವಿತೆಯಲ್ಲಿ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ.

ಭಿಕ್ಷುಕನ ನೈಜ ಸ್ಥಿತಿಯನ್ನು ಅನಾವರಣ ಮಾಡುತ್ತಾ,ಕರುಣೆಯಿದ್ದರೆ ಕಣ್ಣೆತ್ತಿ ನೋಡಿ ಬಿಡಿಗಾಸು ಹಾಕಿ ನನಗೂ ಬದುಕನ್ನು ನೀಡಿರೆಂದು ಗೋಗರೆಯುವ ಮನೋಬಾವ ಕರುಣಾಜನಕವಾಗಿದೆ. ಒಪ್ಪೊತ್ತಿನ ತುತ್ತಿಗಾಗಿ ನೀವು ಬಿಸಾಕಿದ ಎಂಜಲೆಲೆಗೆ  ಹಕ್ಕಿಯಂತೆ ಹಾರಿ ಮುತ್ತಿಕ್ಕಲು ಬಂದಿದ್ದೇನೆ ಎನ್ನುವಾಗಿನ ಚಟಪಡಿಕೆ ಹೃದಯವಿದ್ರಾವಕವಾಗಿದೆ.ತನ್ನ ಕೆದರಿದ ಕೂದಲು,ಜಿಡ್ಡುಗಟ್ಟಿದ ಕೊಳೆ,ಕುರುಚಲು ಗಡ್ಡವನ್ನು ನೋಡಿ ಅಸಹ್ಯಪಡದೇ ಹ್ರದಯ ತುಂಬಿದರೆ ನನ್ನಬಗ್ಗೆ ಕರುಣೆದೋರಿ ತುತ್ತು ಹಾಕಿರೆನ್ನುವಾಗಿನ ದ್ರಶ್ಯ ಮನಕಲಕುವುದು.ಯಾರ ಮನ ಸಂತೋಷಕ್ಕೆ,ಅಸಹಾಯಕತೆಯ ಹಾದರಕ್ಕೆ ನನ್ನ ಜನ್ಮವಾಗಿಯೋ ನಾ ಕಾಣೆ;ಅಕ್ಕರೆ-ಕಕ್ಕುಲತೆಗಳಿಂದ ವಂಚಿತನಾದರೂ ಅನಾಥಾಶ್ರಮದ ನೆರಳಿನಲ್ಲಿ ಬೆಳೆಯುತ್ತಿರುವ ಬಾಲಕ ನಾನು ಎಂದು ತನ್ನ ಬಗ್ಗೆ ಪರಿಚಯಿಸಿಕೊಳ್ಳವ ಅನಾಥ ಬಾಲಕ,ತನ್ನನ್ನು ನಿರ್ಲಕ್ಷ್ಯ ಮಾಡದೇ ಸಹಾನುಭೂತಿ,ಅನುಕಂಪ ತೋರಿ ಕಾಪಾಡಿರೆನ್ನುವ ಕೂಗು ಹ್ರದಯ ಚುಚ್ಚುವುದು.ಹುಟ್ಟಿದ ತಪ್ಪಿಗೆ, ಹೊಟ್ಟೆಯ ಪಾಡಿಗಾಗಿ ನನ್ನ ಅಸಹಾಯಕತನವನ್ನೇ ಬಂಡವಾಳ ಮಾಡಿಕೊಂಡು ನಿಮ್ಮ ಬಳಿಸಾರಿದ್ದೇನೆ.ಈ ನನ್ನ ದೈನ್ಯೇಸಿ ಸ್ಥಿತಿಗಾಗಿ ಕೋಪಿಷ್ಠರಾಗದೇ,ಮನ ಬಂದಂತೆ ನನ್ನ ದೂಷಿಸದೇ ಪ್ರೀತಿ ತೋರಿ ನನ್ನನ್ನೂ ಮನುಷ್ಯನನ್ನಾಗಿ ನೋಡಿರೆಂದು ನಿವೇದಿಸುವ ಬಾಲಕನ ಕೂಗು ಅರಣ್ಯರೋದನವೆನಿಸುವದು.ಶೋಷಣೆ,ಅನ್ಯಾಯ,ದೌರ್ಜನ್ಯ ಮತ್ತು ತುಳಿತಕ್ಕೊಳಗಾದ ನಾನು 
ಕರುಣೆ,ಹ್ರದಯ,ಮನಸ್ಸಿದ್ದರೆ ಈ ಬದುಕು ಸಾರ್ಥಕಗೊಳ್ಳಲು ಕೈ ಹಿಡಿದು ಮುನ್ನಡೆಸಿ,ನನ್ನನ್ನು ನಿಮ್ಮಲೊಬ್ಬನ್ನಾಗಿ ಸ್ವೀಕರಿಸಿ ಎಂದು ಹೇಳುವಾಗ ಎಂಥ ಕಠೋರ ಮನಸ್ಸಾದರೂ ಕರಗಿ ನೀರಾಗುವುದು ಎಂಬ ಆಶಯವನ್ನು ಕವಿ ಮೂರ್ನಾಡರು ಅರ್ಥಗರ್ಭಿತವಾಗಿ,ಹ್ರದಯ ವಿದ್ರಾವಕವಾಗಿ 'ಹೆಚ್ಚೆಂದರೆ ನಾನು ...'ಕವಿತೆಯಲ್ಲಿ ಬಿಂಬಿಸಿರುವರು."ನನ್ನ ಈ ಎಲ್ಲಾ ಅನಿಸಿಕೆಗಳು ಅವರ ಆಶಯಕ್ಕೆ ಖಂಡಿತಾ ನ್ಯಾಯ ಒದಗಿಸುವುದಿಲ್ಲ.ನೀವೆ ಓದಿ ಆಸ್ವಾದಿಸಿ ಪ್ರತಿಕ್ರಿಯೆ ನೀಡಬಹುದು.

                    -ಬನವಾಸಿ ಸೋಮಶೇಖರ್.

ಕವಿತೆಯನ್ನು ಇಲ್ಲಿ ನೋಡಿರಿ

ಕೆದರಿದ ಕೂದಲು-ಕುರುಚಲು ಗಡ್ಡ
ಜಿಡ್ಡು-ಕೊಳೆ ಮೆತ್ತಿಕೊಂಡ
ಭಿಕ್ಷುಕನ ಬಗ್ಗೆ ಕವಿತೆ ಬರೆಯುತ್ತೇನೆಂದು
ಮುಖ ತಿರುಗಿಸಿಕೊಳ್ಳದಿರಿ ಹೃದಯಗಳೇ
ಕರುಣೆಯಿದ್ದರೆ ಕಣ್ಣೆತ್ತಿ ನೋಡಿ
ಚಿಲ್ಲರೆಯಿದ್ದರೆ ಪುಡಿಗಾಸು ಹಾಕಿ
ಹೆಚ್ಚೆಂದರೆ ನಾನೂ ಒಬ್ಬ ಭಿಕ್ಷುಕ !


ಒಂದು ಹೊತ್ತಿನ ಅನ್ನದ ಆಸೆಗೆ
ಗೂಡಿನಿಂದ ಹಾರಿಬಂದ ಹಕ್ಕಿಯತೆ
ನೀವು ಬಿಸಾಕಿದ ಎಂಜಲೆಲೆಗೆ ಮುತ್ತಿಕೊಂಡ
ಚಿಂದಿ ಆಯುವ ಹುಡುಗರ ಬಗ್ಗೆ ಕವಿತೆ ಬರೆಯುತ್ತೇನೆಂದು
ಅಸಹ್ಯ ಪಡದಿರಿ ಹೃದಯಗಳೇ
ಎದೆತುಂಬಿ ಬಂದರೆ ಕಣ್ಣೀರು ಸುರಿಸಿ
ಅನ್ನವಿದ್ದರೆ ಕರೆದು ತಿನ್ನಿಸಿ
ಹೆಚ್ಚೆಂದರೆ ನಾನೂ ಒಬ್ಬ ಚಿಂದಿ ಆಯುವ ಹುಡುಗ..!

ಯಾರದೋ ತೃಪ್ತಿಯ ಸ್ಪರ್ಶಕೆ
ಬದುಕು ಸವೆಸಿದ ಹಾದರಕೆ ಹುಟ್ಟಿದ
ಮಮತೆ-ವಾತ್ಸಲ್ಯ ವಂಚಿತ
ಅನಾಥಾಶ್ರಮದ ಮಗುವಿನ ಬಗ್ಗೆ ಕವಿತೆ ಬರೆಯುತ್ತೇನೆಂದು
ಮುಖ ಸಿಂಡರಿಸಿದರಿ ಹೃದಯಗಳೇ
ಮನಸ್ಸಿದ್ದರೆ ಪ್ರೀತಿ ನೀಡಿ
ನಿಮ್ಮಲ್ಲಿದ್ದರೆ ಮಮತೆ ಕೊಡಿ
ಹೆಚ್ಚೆಂದರೆ ನಾನೂ ಒಬ್ಬ ಅನಾಥಾಶ್ರಮದ ಬಾಲಕ ..!


ಹುಟ್ಟಿದ ತಪ್ಪಿಗೆ ಹೊಟ್ಟೆಯ ಚಿಂತೆ
ಅಸಹಾಯಕತೆಯೇ ಬಂಡವಾಳ
ಶ್ರೀಮಂತರ ಮುಂದೆ ಕೈಕಟ್ಟಿ ನಿಂತ
ಗುಲಾಮರ ಬಗ್ಗೆ ಕವಿತೆ ಬರೆಯುತ್ತೇನೆಂದು
ಹುಬ್ಬು ಗಂಟಿಕ್ಕದೀರಿ ಹೃದಯಗಳೇ
ಮಾನವರಾದರೆ ಮಾನವೀಯತೆ ಇರಲಿ
ಸಾಧ್ಯವಾದರೆ ಸಮಾನತೆ ಕೊಡಿ
ಹೆಚ್ಚೆಂದರೆ ನಾನೂ ಒಬ್ಬ ದೇವರ ಗುಲಾಮ..!

ಹದಿ ಹರೆಯದ ತುಡಿತಗಳ ಬಗ್ಗೆ
ಕಾಮ-ಪ್ರೇಮದ ಕನಸುಗಳ ಬಗ್ಗೆ
ಸ್ವಾರಸ್ಯಕರ ಕವಿತೆ ಕವಿತೆ ಬರೆಯುತ್ತೇನೆಂದು
ಬೆನ್ನ ತಟ್ಟದಿರಿ ಹೃದಯಗಳೇಹಾದಿ ತಪ್ಪದಂತೆ ಬೆಳಕ ನೀಡಿ
ಬದುಕ ಸಾರ್ಥಕತೆಗೆ ಹಿತನುಡಿಯಾಡಿ
ಹೆಚ್ಚೆಂದರೆ ನಾನೂ ನಿಮ್ಮವರಲ್ಲೊಬ್ಬ...!
http://www.ravimurnad.blogspot.com/

Sunday, 16 October 2011

" ಪ್ರಖ್ಯಾತಿ-ಕುಖ್ಯಾತಿ"



ಸಿಟ್ಟು ಆಕ್ರೋಶ ಕೋಪಾತಾಪಗಳೆಲ್ಲ
ನಿನ್ನ ಹೋರಾಟದ ಅಸ್ತ್ರಗಳಾಗಿದ್ದವು
ಬಾಯಲ್ಲಿ ಬೆಂಕಿಯುಗುಳುತ್ತಲೇ ಬಡಿದೆಬ್ಬಿಸಿ
ಸರ್ವರ ನೋವು ನಲಿವು ಭವಣೆಗಳಿಗೆಲ್ಲ
ಸದಾ ಸ್ಪಂದಿಸುವ ಧೀಃಶಕ್ತಿಯಾಗಿದ್ದವನು ನೀನು!

ತತ್ವ ನೀತಿ ಸಿದ್ಧಾಂತಗಳಾಗ ನಿನ್ನುಸಿರಾಗಿದ್ದವು
ಹಳ್ಳಿ ಪಟ್ಟಣ ರಾಜ ಬೀದಿ ಎಲ್ಲೆಲ್ಲೂ ನಿನ್ನಾ
ಹೋರಾಟದ ಕಾವು ಬಹುರೂಪ ಪಡೆದಿತ್ತು
ಭಲೇ ಚಳುವಳಿಗಾರ ನೀನೆಂದು ಪ್ರಖ್ಯಾತಿ!!

ನಿನ್ನ ದಿಟ್ಟ ನೇರ ನಿಷ್ಠುರ ನುಡಿಗಳಿಗೆ ಸೋತಾ
ಮಂದಿ ಮನ್ನಣೆ ನೀಡಿ ರತ್ನ ಸಿಂಹಾಸನ ಅರ್ಪಿಸಿದ್ದರು
ಮತ್ತಷ್ಟು ಮೊಗದಷ್ಟು ಗಟ್ಟಿಯಾಗ ಬಯಸಿದ್ದ ನೀ
ಮೌಲ್ಯಗಳಿಗೆ ತಿಲಾಂಜಲಿಯಿತ್ತು ಹೊಸ ಸಂಪ್ರದಾಯ ಸೃಷ್ಟಿಸಿದಿ!!!

ಬಾಳ ಬುದ್ಧಿವಂತನಾದ ನೀನು ಛಲದಂಕಮಲ್ಲ
ಚಾಣಾಕ್ಷತೆಯಲ್ಲಿ ಎತ್ತಿದ ಕೈಯಾಗಿದ್ದ ನೀ ಚಾಣಕ್ಯ
ಬಹುಫರಾಕು ಹೇಳುತ್ತಿದ್ದ ನಿನ್ನ ಬಂಟರು ಮಾತ್ರ
ನಗೆಪಾಟಲೀಗೀಡಾಗುತ್ತಾ ಜನಕೆ ವಿನೋದವಾದರು!!!!

ನಿನ್ನಾ ವಿವೇಕ ವಿಚಾರ ಲಹರಿ ಎಲ್ಲವೂ ಮಸುಕಾದವು
ಗುಡಿ ಗುಂಡಾರ ಜ್ಯೋತಿಷ್ಯವೆಂದೆಲ್ಲ ನಂಬಿ ಮೌಡ್ಯದ ದಾಸನಾದಿ
ಸ್ವಾರ್ಥಕ್ಕೆ ಜೋತು ಬಿದ್ದು ತಪ್ಪು ಮಾಡಲು ಹೊರಟಿ
ಅಂತಸ್ತಿನಮಲು ಮೈಮೇಲೇರಿ ನಿನ್ನತನವೆಲ್ಲ
ನಿಸ್ತೇಜವಾಗಿ ಕಳೆಗುಂದುತ್ತಾ ಪೇಲವಗೊಂಡಿತು!!!!!

ರತ್ನ ಸಿಂಹಾಸನ ಉರುಳಿ ಬಿದ್ದು ನ್ಯಾಯದೇವಿಗೆ
ನಿನ್ನಹವಾಲು ಮುಟ್ಟಿದಾಗ ಕಣ್ಮುಚ್ಚಿಕುಳಿತಿದ್ದಾಕೆಯೊಳ
ಗಣ್ತೆರೆದು ನೋಡಿ ತೂಕ ಮಾಡಿ ಹೇಳಿಯೇ ಬಿಟ್ಟಳು
ಕೃಷ್ಣಾಶ್ರಮಕ್ಕೆ ನೀ ಹೋಗುವುದನ್ನಾಕೆಗೆ ತಪ್ಪಿಸಲಾಗಲೇ ಇಲ್ಲ
ಮಹಾಪತನ ಹೊಂದಿ ನೀ ಲೋಕ ಕುಖ್ಯಾತಿ ಪಡೆದು ಬಿಟ್ಟಿ
ಹೇಳು ನೀ ! ಇದಕೆ ವಿಧಿಯಾಟ ಎನ್ನಲೇ ? ವಿಪರ್ಯಾಸ ಎನ್ನಲೇ ?
ಬನವಾಸಿ ಸೋಮಶೇಖರ್.
http://banavasimaathu.blogspot.com/

Saturday, 15 October 2011

"ಬಾಳ ದೀಪಿಕೆ"

ಎದೆಯಾಳದಿಂದ ಬಂದಿತು ಪ್ರೀತಿ
ಮನಸಾಗಿ ಸೇರಿತು ಆರದ ಜ್ಯೋತಿ
ಹೊನಲಾಗಿ ಹರಿಯಿತು ಬಾಳಿನ ರೀತಿ
ಒಲವಾಗಿ ಗೆಲುವಾತು ಜೀವಕ್ಕೆ ನೀತಿ!

ಮಾಗಿಯ ಬಿಸಿಲಿಗೆ ಮಲ್ಲಿಗೆಯ ಕಂಪು
ಗಗನದ ತಾರೆಗೆ ಮಿನುಗುವ ಸೊಂಪು
ಎನ್ನೊಡಲಿನೊಲವಿಗೆ ನೀನೇ ತಂಪು
ಪ್ರಭೆಯ ಬೀರುತ ಎನ್ನೆದೆಗೆರೆದೆ ವಾತ್ಸಲ್ಯದ ಇಂಪು.!!



  = ಬನವಾಸಿ ಸೋಮಶೇಖರ್.

Thursday, 8 September 2011

"ಗೆಳೆಯನ ಬಂಗಾರದ ಬಟ್ಟಲು ಜೈಲು ತಟ್ಟೆಯಾದ ಕಥೆ"

ಗೆಳೆಯಾ........!
ಕಡುಕಷ್ಟದಲಿ ನೀ ಬದುಕ ಪ್ರಾರಂಭಿಸಿದಿ
ಪಡಬಾರದ ಪಾಡು ಪಟ್ಟಿ
ಹಗಲಿರುಳೆನ್ನದೆ ಪರದಾಡುತ್ತಲೇ ಇದ್ದಿ
ಸುಖದ ಬಾಳಿಗಾಗಿ;ಕಂಡ ಕನಸಿಗಾಗಿ!


ಅಂದುಕೊಂಡದ್ದೆಲ್ಲ ಮಾಡಲು ಹೊರಟಿ
ಆಡು ಮುಟ್ಟದ ಸೊಪ್ಪುಂಟೇ,ನೀನು ಮಾಡದ ದಂಧೆಯುಂಟೇ
ಹಿರಿಮೆ-ಗರಿಮೆ-ಮಹಿಮೆ ನಿನ್ನ ಮೈಗೂಡಿದವು
ಭೂರಮೆ ನಿನ್ನ ಕೈ ಬೀಸಿ ಕರೆದು
ಮಡಿಲು ತುಂಬಿಕೊಂಡು ಉತ್ತುಂಗಕ್ಕೆ
ಕರೆದೊಯ್ದು ಬಾನಕ್ಕಿ ಮಾಡಿದಳು,
ಗೆಳೆಯಾ....ನೀ ಮಟ್ಟಿದ್ದೆಲ್ಲ ಚಿನ್ನ!

ಆದರೇ ನೀನು ಮಾಡಿದ್ದೇನು ಗೆಳೆಯಾ..?
ನಗುಮುಖದ ನೀ ಅರಿಪಡೆಯನ್ನೂ ಅವಚಿಕೊಂಡೆ
ನಿನ್ನ ಆಸೆಯಾಮಿಷ ದುರಾಸೆ ನೂರ್ಮಡಿಯಾಗುತ್ತಾ
ಭೂತಾಯ ಬಸಿರನ್ನು ಬಗೆಬಗೆಯುತ್ತಲೇ ಇತ್ತು
ನಿನ್ನೊಡಲ ದಾಹವೂ ತಣಿಯದಾಯಿತು
ಅವನಿಯ ಅಡಿಯಿಂದ ಮುಡಿಯನೆಲ್ಲ ವ್ಯಾಪಿಸಿತು
ಅವಳ ಮೈಮನವೆಲ್ಲವೂ ಕೆಂಪಾಯಿತು!

ಆದರೀಗ ಏನಾಯಿತು ಗೆಳೆಯಾ...?
ಭೂತಾಯವ್ವನ ಒಡಲ ದಳ್ಳುರಿ ತಟ್ಟೇಬಿಟ್ಟಿತು ನಿನಗೆ
ನಿನ್ನಾ ಕಸವರವೆಲ್ಲ ಕಸಬರಿಕೆಯಾಯಿತು
ಮೀಸೆಯೂ ಮಣ್ಣುಪಾಲಾಯಿತು
ವಜ್ರಖಚಿತ ಕಿರೀಟವೂ ಕಳಚಿ ಬಿತ್ತು
ವೈಭೋಗದರಮನೆ ನಿನ್ನವಸ್ಥೆಗೆ ಮರುಕ ಪಡುತಿಹುದು
ಬಂಗಾರದ ಬಟ್ಟಲು ಜೈಲು ತಟ್ಟೆಯಾಯಿತು !!

ಗೆಳೆಯಾ.....!
ನಿನ್ನ ಜೀವನಗಾಥೆ ಯಾರಿಗೂ ಮಾದರಿಯಲ್ಲ
ನಿನ್ನ ಹಾಗೆ ಜೀವಿಸಬೇಕು ಎನ್ನುವರಿಗೆ
ನಿನ್ನ ಕಥೆ ಭೂತವಾಗಿ ಕಾಡದೇ ಬಿಡಲ್ಲ
ನಿನ್ನ ಮೇಲಾಣೆ!! ಇದು ಸತ್ಯ ಸತ್ಯ ಸತ್ಯ!!!

      --ಬನವಾಸಿ ಸೋಮಶೇಖರ್.