Monday, 7 November 2011

ಕವಿ ವಸಂತ್ ಕೋಡಿಹಳ್ಳಿಯವರ " ಪ್ರೀತಿಯೆಂದರೆ ಇದೇನಾ?" ಕವಿತೆ.

ಸಖಿಯ ಸವಿ ನೋಟದ ಮಧುರ ನೆನಪುಗಳೊಂದಿಗೆ ನವೀರಾದ ಪ್ರೀತಿ ಕಟ್ಟಿಕೊಂಡು ಆ ಸಖಿಯನ್ನೇ ಸಂಗಾತಿಯಾಗಿ
ಸ್ವೀಕರಿಸಬೇಕೆಂಬ ಹಂಬಲ,ಕಾತರ,ತವಕದಿಂದ ಹುಟ್ಟಿ ಬಂದಿರುವುದೇ ವಸಂತ್ ಕೋಡಿಹಳ್ಳಿ ಇವರ "ಪ್ರೀತಿಯೆಂದರೆ ಇದೇನಾ?" ಎಂಬ ಸುಂದರ ಕವಿತೆ.


ಕವನದ ನಾಯಕನಿಗೆ ಹೆಜ್ಜೆ ಹೆಜ್ಜೆಗೂ ನೆನಪಾಗಿ ಕಾಡುವ ಗೆಳತಿಯ ಮೇಲಿನ ಒಡಲಾಳದ ಪ್ರೀತಿಯು ಹುಚ್ಚು
ಹಿಡಿಸಿದಂತಾಗಿದೆ.ಹಗಲಿರುಳೆನ್ನದೇ ಅವಳ ಮಮಕಾರದಲ್ಲಿ ಬಂಧಿಯಾಗಿ ಮೈಮರೆತು ಹೋಗಿರುವ ನಾಯಕ ಇದು ನನಗೆ ನಿನ್ನ ಮೇಲೆ ಒಡಮೂಡಿರುವ ಪ್ರೀತಿಯಲ್ಲದೇ ಬೇರೇನೂ ಅಲ್ಲ ಎಂದು ಸ್ವಗತಿಸುತ್ತಾ ಪ್ರೀತಿಯೆಂದರೇ ಇದೇನಾ....?
ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ಮನೋಜ್ಞವಾಗಿದೆ.


ನಿನ್ನ ರೂಪ ಲಾವಣ್ಯ ನನ್ನ ಹೃದಯವ ಮನಸೂರೆಗೊಂಡಿರುವುದು.ನಿನ್ನಾ ಸೌಂದರ್ಯದ ಮುಂದೆ ನನಗೆ ಬೇರೇನೂ ಕಾಣದಾಗಿದೆ ಎನ್ನುವಾಗಿನ ಭಾವ ಆ ಸಖಿಗೆ ಇದು ನಿಜ ಪ್ರೀತಿಯೇ ಎಂಬರಿವಾಗಿ ಈ ಸಖನಿಗೆ ಬೇಗನೇ ಸಿಗಬಾರದೇ ಎಂದು ಮನ ಬಯಸುವಂತಾಗುತ್ತದೆ.ಕುಂತಲ್ಲಿ ನಿಂತಲ್ಲಿ ನಡೆದಲ್ಲಿ ಎಲ್ಲೆಲ್ಲಿಯೂ ಅವನಿಗೆ ಗೆಳತಿಯ ಪ್ರತಿ
ರೂಪವೇ ಕಾಣುವುದು.ಯಾರೊಂದಿಗೆ ಮಾತಾಡಿದರೂ ಅದು ಅವಳದೇ ಧ್ವನಿಯಂತೆ ಭಾಸವಾಗುವುದು.ಅವಳ ಹೆಜ್ಜೆ ಗುರುತುಗಳೆಲ್ಲ ಗೆಜ್ಜೆಯ ಸದ್ದುಗಳಂತಾಗಿ ಆಲಾಪಿಸುತ್ತಿವೆ.ಇದು ಪ್ರೀತಿಯೋ ಭಾಸವೋ ಅರ್ಥವಾಗುತ್ತಿಲ್ಲವಾದ್ದರಿಂದ ಮನ ಬಿಚ್ಚಿ ತಿಳಿಸಿ ಬಿಡು ಎಂದು ಅವಳನ್ನೇ ಕೇಳುವ ಕವಿತೆಯ ನಾಯಕ ಇದು ಪ್ರೀತಿಯೇ ಆಗಿದ್ದರೆ ತನ್ನಲ್ಲಿ ಮೂಡಿರುವ ಪ್ರೀತಿಯ ಕಾತರತೆಗೆ ತೆರೆ ಎಳೆದು ತನ್ನನ್ನು ಸ್ವೀಕರಿಸೆಂದು ಕೇಳುವ ಆರ್ದತೆ ಇಷ್ಟವಾಗುತ್ತದೆ.


ನಿನ್ನ ತಿಳಿಯುವ ಮನದ ಹಂಬಲವು ಅಕ್ಷರಗಳ ಚಿತ್ತಾರ ಬಿಡಿಸಬೇಕೆಂಬ ಬಯಕೆ ಮೂಡಿಸುತಿಹುದು. ಆದರೇ ಆ ಬಯಕೆಗಳೆಲ್ಲ ಶುಷ್ಕವಾಗಿ ಕನಸುಗಳು ಮಸುಕಾಗಿ ಬಿಡಬಹುದೆಂಬ ಆತಂಕದಿಂದ ಊಟ ನಿದ್ದೆ ಯಾವೊಂದೂ ರುಚಿಸುತ್ತಿಲ್ಲವಾಗಿದೆ ಎನ್ನುವ ಆತನ ಮನೋಭಿಲಾಷೆ ಮಧುರವಾದುದು ಅಂತನಿಸುವುದು.  ತನ್ನಕಾತರ,ಹಂಬಲ,ತವಕಗಳಿಗೆ ಉತ್ತರ ಸಿಗದೇ ಮಂಕಾಗಿಹೋಗಿರುವ ತನಗೆ ದಯಮಾಡಿ ನಿನ್ನಂತರಂಗದಲ್ಲಿರುವುದನ್ನು ಬಾಯ್ಬಿಟ್ಟು ಇದು ಪ್ರೀತಿಯೇ ಎಂದು ಹೇಳಿ ಬಿಡು, ಎಂದು ಅಂಗಲಾಚುತ್ತಾನೆ.ಈ ಕೋರಿಕೆಯ ಮನ ಸ್ಥಿತಿ ರಸವತ್ತಾಗಿ ಮೂಡಿದೆ.


ನಿನ್ನ ಮೇಲೆ ನಾನಿಟ್ಟಿರುವ ಪ್ರೀತಿ ನಿಜವೇ ಆಗಿದ್ದರೆ ನನ್ನ ಹೃದಯ ಶೂನ್ಯವಾಗುವುದಿಲ್ಲವೆಂಬ ದೃಢ ವಿಶ್ವಾಸ ನನ್ನದಾಗಿದೆ.
ಈ ಎದೆಯ ಬಾಂದಳವನ್ನು ಬರಿದಾಗಿಸದೇ ನೀನು ನನ್ನವಳಾಗಿ ಸುಖದ ಸೊದೆ ಹರಿಸುತ್ತೀ ಎಂಬ ಅಚಲವಾದ ನಂಬಿಕೆ ನನಗಿದೆ ಎನ್ನುವ ನಾಯಕ ನನ್ನ ಜೊತೆಗಾತಿಯಾಗಿ ಬಿದಿಗೆ ಚಂದ್ರಮನಂತೆ ತನ್ನ ಬಾಳ ಪಥಕ್ಕೆ ಅವಳು ಬೆಳಕಾಗುತ್ತಾಳೆಂಬ ವಿಶ್ವಾಸ ಹೊಂದಿರುತ್ತಾನೆ.ಆ ಹೆಬ್ಬಯಕೆಯೊಂದಿಗೆ ಬೆಳದಿಂಗಳ ರಾತ್ರಿಯಂತೆ ನಿತ್ಯ ನಿನ್ನ ನಿರೀಕ್ಷೆಯಲ್ಲಿಯೇ ನಿನಗಾಗಿ ಕಾಯುತ್ತರುತ್ತೇನೆ,ನನ್ನ ಕೈ ಹಿಡಿದು ಬಾಳಿಗೆ ಮನ್ನುಡಿ ಬರೆದು ದಾರಿ ದೀವಿಗೆಯಾಗೆಂದು ಅವಳನ್ನು ಕೋರುವ
ಕವಿತೆಯ ನಾಯಕನ ಅಭಿಲಾಷೆ,ಮನದಿಂಗಿತ'ಪ್ರೀತಿಯೆಂದರೆ ಇದೇನಾ...? "ಕವಿತೆಯಲ್ಲಿ ಮೋಹಕವಾಗಿ ಮೂಡಿಬಂದಿದೆ.ಈ ಸುಂದರ ಕವಿತೆಯನ್ನು ನೀವೂ ಓದಿ, ಆಸ್ವಾದಿಸಿ ನನ್ನೀ ಆಶಯದ ನುಡಿಗಳಿಗೆ ಪ್ರತಿಕ್ರಿಯಿಸಿರಿ.

= ಬನವಾಸಿ ಸೋಮಶೇಖರ್.

 ------ಕವಿತೆ ಹೀಗಿದೆ ನೋಡಿ.-------


ಪ್ರೀತಿಯೆಂದರೆ ಇದೇನಾ ?.
----------------------------

ಕತ್ತಲಾದರೆ ಸಾಕು
ಕಣ್ಣಮುಂದೆ ಬಂದು ಕಾಡುವೆ,
ಕಣ್ಣು ಮುಚ್ಚಿದೊಡನೆಯೆ
ನೆನಪಾಗಿ ಮುಂದೆ ನಿಲ್ಲುವೆ,
ನಿನ್ನದೇ ಯೋಚನೆಯಲ್ಲಿ ಹಗಳಿರುಳೂ
ಮಿಂದು ಮೀಯುವಂತಾಗುತ್ತಿದೆ.
ಗೊತ್ತಾಗುತ್ತಿಲ್ಲ ಹೇಳಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ರೂಪವೊಂದನ್ನು ಬಿಟ್ಟು
ಬೇರೇನು ಕಾಣದಾಗಿದೆ,
ನನ್ನ ಹೃದಯವ್ಯಾಕೊ ಸದಾ ?
ನಿನ್ನನ್ನೇ ಹಂಬಲಿಸುತ್ತದೆ,
ದಾರಿಯಲ್ಲಿ ಯಾರೇ ನಡೆದರೂ
ನಿನ್ನದೇ ಗೆಜ್ಜೆ ಸದ್ದು,
ಯಾರು ಮಾತನಾಡಿದರೂ
ನಿನ್ನದೇ ದ್ವನಿ.
ಇದರ ಅರ್ಥವನ್ನು
ಅರಿಯಾಲಾಗುತ್ತಿಲ್ಲ ತಿಳಿಸಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ಬಗ್ಗೆ ತಿಳಿಯುವ ಹುಚ್ಚಾಗುತ್ತಿದೆ,
ಕಥೆ ಕವನ ಬರೆಯುವ
ಮನಸ್ಸು ಹೆಚ್ಚಾಗುತ್ತಿದೆ
ಆಸೆಗಳು ಅತಿಯಾಗುತ್ತಿವೆ,
ಬಯಕೆಗಳು ಬಣಗುಡುತ್ತಿವೆ,
ಕನಸುಗಳು ಕತ್ತಲಾಗುತ್ತಿವೆ,
ಊಟವು ಬೇಕಿಲ್ಲ,
ನಿದ್ರೆಯು ಬರುತ್ತಿಲ್ಲ,
ನನಗೂ ತಿಳಿಯುತ್ತಿಲ್ಲ,
ದಯಮಾಡಿ ನುಡಿದುಬಿಡು,
ಪ್ರೀತಿಯೆಂದರೆ ಇದೇನಾ ?.

ಇದು ನಿಜವಾಗವಾಗಿಯೂ
ಪ್ರೀತಿಯೇ ಆಗಿದ್ದರೆ ?.
ನಿನಗಾಗಿ ಹಂಬಲಿಸುತ್ತಿರುವ
ನನ್ನ ಹೃದಯಕ್ಕೆ
ಮುಕ್ತಿಯನ್ನಾದರೂ
ದೊರಕಿಸುತ್ತೀಯೆಂದು ನಂಬಿರುವೆ.

ನಿನಗಾಗಿ ಹುಣ್ಣಿಮೆಯ
ರಾತ್ರಿಯಂದು ಕಾಯುತ್ತಿರುತ್ತೇನೆ !
ಚಂದ್ರನಂತೆ ನನ್ನ ಬಾಳಿಗೆ ಬಂದು !..
ಬೆಳಕಂತೆ ಸೇರಿಕೋ …!..

----------------------
ವಸಂತ್ ಕೋಡಿಹಳ್ಳಿ

No comments:

Post a Comment