" ಕನ್ನಡದ ಹೆಸರಾಂತ ಪತ್ರಿಕೋದ್ಯಮಿ,ಸಾಹಿತಿಯಾಗಿ ಮನೆಮಾತಾಗಿರುವ ಡಾ|| ಪಾಟೀಲ ಪುಟ್ಟಪ್ಪ (ಪಾಪು) ನವರು ಈ
ನಾಡು ಕಂಡ ಹೆಮ್ಮೆಯ ಸಾಹಿತಿ ಡಾ||ಚಂದ್ರಶೇಖರ್ ಕಂಬಾರ ಅವರ ಬಗ್ಗೆ ಮಾಡಿದ ಟೀಕೆಯ ಧಾಟಿ ಕೇಳಿ ಸಖೇದಾಶ್ಚರ್ಯವಾಗುವುದು.ಕನ್ನಡ ನಾಡಿನ ಸಾಹಿತ್ಯ ಸರಸ್ವತಿಯ ಮುಕುಟ ಮಣಿಗಳಲ್ಲಿ ಪಾಪು ಹಾಗೂ ಕಂಬಾರರು ಶ್ರೇಷ್ಠವಾದುದನ್ನೇ ನೀಡಿ ಹೆಸರು ಮಾಡಿದವರು.ನಾವು ಪಾಪು ರವರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು.
ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿರುವ ಪಾಪುರವರಿಂದ "ಕಂಬಾರರಿಗಿಂತ ಬೈರಪ್ಪ ಅರ್ಹರು"(ಪ್ರಜಾವಾಣಿ 21-09-2011) ಎಂದು ಹೊರಹೊಮ್ಮಿದ ಅಭಿಪ್ರಾಯ ಕೇಳಲು ಅತೀವ ದುಃಖವಾಗುವುದು.ವ್ಯಕ್ತಿ ವ್ಯಕ್ತಿಗಳ ನಡುವೆ ಯೋಗ್ಯತೆಯ ವ್ಯತ್ಯಾಸ ಕಲ್ಪಿಸಿ ಅವರಿಗಿಂತ ಇವರು ಶ್ರೇಷ್ಠರು ಎನ್ನುವ ಮನದಿಂಗಿತ ಸರ್ವಥಾ ಯೋಗ್ಯವಾದುದಲ್ಲ.ಬೈರಪ್ಪನವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ! ಸಾಹಿತ್ಯ ವಾಗ್ದೇವಿಯ ಹಿರಿಮೆಯನ್ನು ಹೆಚ್ಚಿಸಿದ ಮಹಾನ್ ನಕ್ಷತ್ರ ಅವರು.ಅವರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ,ಹೆಮ್ಮೆಪಡುತ್ತಾರೆ.ಅವರೂ ಜ್ಞಾನ ಪೀಠಕ್ಕೆ ಅರ್ಹವಾದ ಶ್ರೇಷ್ಠತಮವಾದ ಸಾಹಿತ್ಯವನ್ನು ಈ ನಾಡಿಗೆ ಧಾರೆಎರೆದಿರುವರು.ಕನ್ನಡ ಸಾಹಿತ್ಯ ಸರಸ್ವತಿಯ ಮಕ್ಕಳಲ್ಲಿ ಭಿನ್ನಾಭಿಪ್ರಾಯವಿರಬಹುದು.ಆದರೆ ಅದು ತಾತ್ವಿಕ ಬದ್ಧತೆಯಿಂದ ಕೂಡಿ ವಿಧಾಯಕತೆಯನ್ನು ಹೊಂದಿರಬೇಕಾದುದು ಅತ್ಯಂತ ಅಗತ್ಯವಾದುದು.ನಾಡಿಗೆ ಇನ್ನೊಂದು ಜ್ಞಾನಪೀಠ ತಂದು ಕೊಟ್ಟ ಡಾ|| ಕಂಬಾರರಿಗೆ ಅಭಿನಂದನೆ ಸಲ್ಲಲೇಬೇಕು."
-ಬನವಾಸಿ ಸೋಮಶೇಖರ್,ಮಂಗಳೂರು.
No comments:
Post a Comment