Monday 21 January 2013

ಶರಣರ ನೈತಿಕ ಮೌಲ್ಯಗಳು.

ಈ ಮಹಾ ಮನೆ, ಅನುಭವ ಮಂಟಪದಲ್ಲಿ ಆಸೀನರಾಗಿರುವ ಎಲ್ಲ ಶರಣರೇ ಮತ್ತು ಶರಣೆಯರೇ,
ನಿಮಗೆಲ್ಲ ಶರಣು ಶರಣಾರ್ಥಿಗಳು.

ಎನಗಿಂತ ಕಿರಿಯರಿಲ್ಲ
ಶಿವ ಭಕ್ತರಿಗಿಂತ ಹಿರಿಯರಿಲ್ಲ
ಎನ್ನ ಮನಸಾಕ್ಷಿ ನಿಮ್ಮ ಪಾದ ಸಾಕ್ಷಿ
ಕೂಡಲ ಸಂಗಮದೇವ ಎನಗಿದೇ ದಿಬ್ಯ!

ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಕನ್ನಡ ನಾಡು ಅನುಭಾವಿಗಳು,ಶರಣರು, ದಾರ್ಶನಿಕರು ಮತ್ತು ಸಾಧುಸಂತರು ನೆಲೆಸಿದ ಪಾವನ ಭೂಮಿಯಾಗಿತ್ತು.ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಅನುಭಾವವೇ ಪ್ರಧಾನವೆಂದು  ಈ ಬಸವಾದಿ ಪ್ರಮಥರು ಸಾರಿದರು.ವಚನಕಾರರು ಜನ ಸಾಮಾನ್ಯರಿಗೆ ನೈತಿಕ ಜೀವನ ದರ್ಶನ ಮಾಡಿಸಿದರು.ಸಂಸ್ಕೃತದಲ್ಲಿ ನಿಕ್ಷಿಪ್ತವಾಗಿದ್ದ ತತ್ತ್ವಶಾಸ್ತ್ರಗಳು ಕೇವಲ ಪಂಡಿತರು ಮಾತ್ರರಿಗೆ ಮೀಸಲಾಗಿತ್ತೇ ಹೊರತು ಸಾಮಾನ್ಯರಿಗೆ ಎಟಕುವಂತಿರಲಿಲ್ಲ.ಇಂಥ ಸನ್ನೀವೇಷದಲ್ಲಿ ಉದಯಿಸಿದ ವಚನ ಚಳುವಳಿಯ ಅನುಭಾವಿ ದಿಗ್ಗಜರು (ಶರಣರು) ಶಾಸ್ತ್ರ ಗ್ರಂಥಗಳ ಒಳ-ಹೊರ ತಿರುಳು ಮತ್ತು ಅವುಗಳಲ್ಲಿ ಅಡಗಿರುವ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ತಿಳಿಯಾದ ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೂ ತಲುಪಿಸುವ ಕೈಂಕರ್ಯಕ್ಕೆ ವಚನಗಳನ್ನು ಪ್ರಕ್ಷಿಪ್ತಗೊಳಿಸಿದರು.

ಕ್ರಾಂತಿಯೋಗಿ, ಮಹಾನ್ ಸಮಾಜ ಸುಧಾರಣಾ ಚಳುವಳಿಯ ನೇತಾರನಾಗಿದ್ದ ಬಸವಣ್ಣನವರು 12 ನೇ ಶತಮಾನದಲ್ಲಿ  ಪ್ರಜಾಪ್ರಭುತ್ವದ ಕನಸು ಕಂಡು ಒಂದು ಹೊಸ ಪರಿವರ್ತನಾಶೀಲ ಆದರ್ಶ ಸಮಾಜವನ್ನು ಸರ್ವೋದಯ ತತ್ವದ ತಳಹದಿಯಲ್ಲಿ ನಿರ್ಮಾಣ ಮಾಡುವ ಪಣ ತೊಟ್ಟಿದ್ದರು. ವ್ಯಾಸ ಸಾಹಿತ್ಯ ಪ್ರಕಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಎಲ್ಲ ಶರಣರೂ ಈ ವಿಶ್ವಗುರು ಬಸವಣ್ಣನ ಹಿರಿತನದಲ್ಲಿ ಸಂಪ್ರದಾಯಬದ್ಧ  ಸಮಾಜದಲ್ಲೇ ಪ್ರಜಾಪ್ರಭುತ್ವವಾದಿ ಪರ್ಯಾಯ ಸಮಾಜ ರಚಿಸಿದರು. ಸಮಾಜದ ಸದಸ್ಯರೆಲ್ಲ ಭಕ್ತರೆನಿಸಿದರು, ಶರಣರೆನಿಸಿದರು. ಹೀಗೆ ಬಸವಣ್ಣನವರು 867 ವರ್ಷಗಳ ಹಿಂದೆಯೇ ಜಾತಿಭೇದ, ವರ್ಣಭೇದ,ಲಿಂಗ,ವರ್ಗ,ವರ್ಣ ಮತ್ತು ಕಾಯಕ ಭೇದಗಳಿಲ್ಲದ ಹೊಸ ಶೋಷಣೆ ರಹಿತ ಸರ್ವೋದಯ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ಸು ಸಾಧಿಸಿದರು, ಅವರ ಸರ್ವ ಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ, ಸರ್ವಕಾಲಕ್ಕೂ  ಹೇಗಿರಬೇಕು  ಎಂಬುದಕ್ಕೆ ದಿಕ್ಸೂಚಿಯಾಗಿದೆ.

ಶರಣರ ನೈತಿಕ ಮೌಲ್ಯಗಳು ಶರಣರುಗಳೆಲ್ಲ ಅನುಗ್ರಹಿಸಿರುವ ವಚನಗಳಲ್ಲೇ ಅಡಗಿವೆ.ಬಸವ ಪ್ರಜ್ಞೆಯು ನೈತಿಕ,ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಮತ್ತು ಆರ್ಥಿಕ ಮೌಲ್ಯಗಳನ್ನು ಸಾಕಾರಗೊಳಿಸಿದ ಮಾನವ ಹಕ್ಕುಗಳ ಪ್ರಜ್ಞೆಯಾಗಿದೆ. ಜಾಗತಿಕ ಸಂತ, ವ್ಯೋಮಕಾಯರಾದ ಅಲ್ಲಮ ಪ್ರಭು,ಚೆನ್ನ ಬಸವಣ್ಣ,ಸಿದ್ಧರಾಮ,ಮಾದಾರ ಚನ್ನಯ್ಯ,ಅಂಬಿಗರ ಚೌಡಯ್ಯ,ಡೋಹರ ಕಕ್ಕಯ್ಯ,ಮಡಿವಾಳ ಮಾಚಯ್ಯ,ಸತ್ಯಕ್ಕ,ಕುಂಬಾರ ಗುಂಡಣ್ಣ, ಮುಂತಾಗಿ ನೂರಾರು ಶರಣರು ಬಸವಣ್ಣನವರ ಜಾತ್ಯಾತೀತ, ಪ್ರಜಾ ಪ್ರಭುತ್ವವಾದಿ ಪ್ರಜ್ಞೆಯ ಚೇತನಗಳಾಗಿ ಮೈದುಂಬಿಸಿದರು.ಈ ಆಶಯಗಳೇ ಭಾರತೀಯ ಸಂವಿದಾನದ ನಿಜ ಆಶಯಗಳ ತತ್ವಶಃ ಸಮಾಜವಾದಿ, ಸಮತಾವಾದಿ ಪ್ರಜ್ಞೆಯಾಗಿ ರೂಪುಗೊಂಡಿರುವುದು ಸಾಕ್ಷಿಯಾಗಿದೆ.ಮಾದಾರ ಚನ್ನಯ್ಯನ ಮನೆಯಲ್ಲಿ ಅಂಬಲಿಯನ್ನು ಕುಡಿಯುವ ದೇವರು ಬಸವಣ್ಣನವರ ಕೂಡಲಸಂಗಮದೇವನಾಗಿದ್ದರ ಸಾಮಾಜಿಕ ಮೌಲ್ಯ ಅತ್ಯಂತ ಶ್ರೇಷ್ಠತಮವಾಗಿದೆ.

"ಲಿಂಗ ವ್ಯಸನಿ ಜಂಗಮ ಪ್ರೇಮಿ" ಎಂದು ಬಸವಣ್ಣನವರು ಹೇಳುವಲ್ಲಿ ಮೌಲ್ಯಗಳಿಂದ ತುಂಬಿದ ಒಳಜಗತ್ತು ಹೊರ ಜಗತ್ತನ್ನು ಆಳಬೇಕೆಂದು ಸೂಚಿಸುತ್ತಾರೆ. ಮಾನವೀಯ ಮೌಲ್ಯಗಳು ಜಗತ್ತನ್ನು ಆಳಬೇಕು. ಆದರೆ ಇಂದು ಮಾರುಕಟ್ಟೆ ಮೌಲ್ಯಗಳು ಜಗತ್ತನ್ನು ಆಳತೊಡಗಿರುವುದು ಅತ್ಯಂತ ದುರದೃಷ್ಠಕರವಾದ ಸಂಗತಿಯಾಗಿದೆ.

ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವವನು ಭಕ್ತ. ಸಕಲ ವಸ್ತುಗಳೆಲ್ಲ ಬೇಕೆಂಬುವವನು ಭವಿ. ಇಂದಿನ ಜಗತ್ತು ಭವಿಗಳ ಸಾಮ್ರಾಜ್ಯವಾಗಿದ್ದು ಅಟ್ಟಹಾಸಗೈಯುತ್ತಿರುವುದು ದುರಂತವಾಗಿದೆ.ಈ ಜಗತ್ತನ್ನು ಭಕ್ತರ ಸಾಮ್ರಾಜ್ಯ ಮಾಡಿದಾಗ ಮಾತ್ರ ಮೇಲು ಕೀಳಿಲ್ಲದ, ಸುಲಿಗೆ ಇಲ್ಲದ, ಘನತೆವೆತ್ತ ಸ್ವತಂತ್ರ ಮಾನವನ ಉದಯವಾಗುತ್ತದೆ. ಇಂಥ ಹೊಸ ಮನುಷ್ಯರ ಸಮಾಜವನ್ನು ಸೃಷ್ಟಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಶರಣಾಗುವುದೆಂದರೆ ಭವದಲ್ಲಿ ಯಾರಿಗೂ ಶರಣಾಗತರಾಗದೆ ಸ್ವತಂತ್ರಧೀರರಾಗಿ ಬದುಕುವುದು ಎಂಬುದಕ್ಕೆ ಬಸವಣ್ಣನವರ ಈ ವಚನ ಮಾರ್ಮಿಕವಾದ ಅರ್ಥವನ್ನು ಒದಗಿಸುತ್ತದೆ. 
                                                                                                                 
"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

"ಕೂಡಲಸಂಗನ ಶರಣರು ಸ್ವತಂತ್ರಧೀರರು" ಎಂದು ಬಸವಣ್ಣನವರು ಹೇಳುತ್ತಾರೆ. ಸ್ವತಂತ್ರಧೀರರ ಸಮಾಜದಲ್ಲಿ ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಾಗುತ್ತದೆ. ಇಲ್ಲದಿದ್ದರೆ ಅದು ಸ್ವಾರ್ಥಿಗಳ ಕಮ್ಮಟವಾಗುತ್ತದೆ.

"ದೇವನೊಬ್ಬ ನಾಮ ಹಲವು" ಎಂದು ಬಸವಣ್ಣನವರು ಹೇಳುತ್ತಾರೆ. ದೇವರು ಒಬ್ಬನೇ ಇದ್ದಾನೆ. ಆತ ಸೋಲುವುದೂ ಇಲ್ಲ, ಗೆಲ್ಲುವುದೂ ಇಲ್ಲ ಆದರೆ  ಆತ ಸೃಷ್ಟಿಯ ಸಮತೋಲನವನ್ನು ರಕ್ಷಿಸುತ್ತಾನೆಂಬುದು ಬಸವಣ್ಣನವರ ಪರಿಸರ ಪ್ರಜ್ಞೆ. ಭೌತಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ವಸ್ತುಗಳೊಂದಿಗೆ ಮತ್ತು ಆಂತರಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಹೆಚ್ಚು ಆನಂದಮಯವಾಗಿ ಬದುಕುವವನೇ ಶರಣನಾಗುತ್ತಾನೆಂಬುದಕ್ಕೆ ಈ ವಚನ ಆರ್ಥಿಕ ಮೌಲ್ಯದ ಶಕ್ತಿಯನ್ನು ತುಂಬಿದೆ;

ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದೆಳೆಯ,
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಿಮ್ಮ ಶರಣರಿಗಲ್ಲದೆ ಮತ್ತೊಂದಕಿಕ್ಕೆನಯ್ಯ
ಕೂಡಲಸಂಗಮದೇವ.

ಬಸವಾದಿ ಪ್ರಮಥರು, ಶರಣನಾಗುವುದೆಂದರೆ ಅಹಂಕಾರದ ಮೇಲೆ ವಿಜಯ ಸಾಧಿಸಿದ ವೀರರಾಗಿರುವುದಷ್ಟೇ ಆಗಿರದೇ ನ್ಯಾಯನಿಷ್ಠುರಾಗಿದ್ದು ಪರಿಪೂರ್ಣ ಸತ್ಯಕ್ಕೆ ಮಾತ್ರ ತಲೆಬಾಗುವವರಾಗಿದ್ದಾರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಈ ವಚನ ಜೀವಂತಿಕೆಯನ್ನೊದಗಿಸುತ್ತವೆ.
ನ್ಯಾಯನಿಷ್ಠುರ!
ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ!
ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ!

ಕೇರಳದ ಮಾರ್ತಾಂಡಂ ರಾಜ್ಯವನ್ನಾಳುತ್ತಿದ್ದ ಮಾರ್ತಾಂಡವರ್ಮ ಮಹಾಶೂರನಾಗಿದ್ದನಲ್ಲದೇ ರಾಜ್ಯವಿಸ್ತಾರದ ಮಹತ್ವಾಕಾಂಕ್ಷಿಯಾಗಿದ್ದ.ಸುತ್ತಮುತ್ತಲಿನ ರಾಜ್ಯಗಳನ್ನೆಲ್ಲ ಗೆದ್ದುಕೊಂಡನಾದರೂ ಬದುಕಿನ ಅರ್ಥ ತಿಳಿಯದೇ ಗೊಂದಲಕ್ಕೀಡಾಗಿ ಗಾಬರಿಯಾದ. ಚಿತ್ತಶಾಂತಿಯಿಲ್ಲದೇ ಭೋಗಲಾಲಸೆ,ವೈಭೋಗದ ಜೀವನದ ಮಧ್ಯೆ ವಿಲವಿಲನೆ ಒದ್ದಾಡತೊಡಗಿದ. ಅಂತಿಮವಾಗಿ ಪದ್ಮನಾಭ ಮಂದಿರಕ್ಕೆ ಹೋಗಿ ತನ್ನ ನೆಚ್ಚಿನ ಖಡ್ಗವನ್ನು ಪದ್ಮನಾಭನ ಪಾದಕ್ಕರ್ಪಿಸಿ ಶರಣಾಗತನಾದ. "ಹೇ,ದೇವರೆ ನಾನು ನಿನಗೆ ಶರಣಾಗತನಾಗಿದ್ದೇನೆ,ನನ್ನೆಲ್ಲ ಆಸೆಗಳನ್ನು ಜಯಿಸಿ ಮಾನಸಿಕ ಕ್ಷೋಭೆ ಮತ್ತು ಒತ್ತಡಗಳಿಂದ ಹೊರಬರುವಂತೆ ಕೃಪೆ ದೋರಿ ರಕ್ಷಿಸೆಂದು ನಿರ್ಮಲ ಮನಸ್ಸಿಂದ ಬೇಡಿದ. ಚಿತ್ತಕ್ಕೆ ಸಮಾಧಾನ ಸಿಕ್ಕೊಡನೆಯೇ ಐಹಿಕ ಜಗತ್ತಿನ ಮೋಹಪಾಶದಿಂದ ಹೊರಬಂದು ಮಾತಾಂಡಂ ರಾಜಧಾನಿಯ ಹೆಸರನ್ನೇ ಬದಲಾಯಿಸಿ ಪದ್ಮನಾಭಪುರ ಎಂದು ಮರು ನಾಮಕರಣಗೊಳಿಸುತ್ತಾನೆ.ಹೀಹೆ ಐಹಿಕ ಜಗತ್ತನ್ನು ಗೆಲ್ಲದವ ಶರಣನಾಗಲಾರ. ದಾಸೋಹಂಭಾವ ತಾಳಲಾರ ಎಂಬುದಕ್ಕೆ ಈ ವಚನ ಸಾಂದರ್ಭಿಕ ಉದಾಹರಣೆಯಾಗಬಲ್ಲದು.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.
 ಹೀಗೆ ಶರಣರ ಅನುಭಾವ ಸಂಗಮದಿಂದ ಬದುಕು ಶ್ರೇಷ್ಠವಾಗುವುದೆಂಬುದಕ್ಕೆ ಈ ವಚನ ದಿವ್ಯಾನುಭೂತಿ ನೀಡುತ್ತದೆ.

ಸಾರ ಸಜ್ಜನರ ಸಂಗವೇ ಲೇಸು ಕಂಡಯ್ಯ!
ದೂರ ದುರ್ಜನರ ಸಂಗವದು ಭಂಗವಯ್ಯ!
ಸಂಗವೆರಡುಂಟು-ಒಂದ ಬಿಡು, ಒಂದ ಹಿಡಿ
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣ.

  ಶರಣರು ಸಾರಿದ ನೈತಿಕ ಮೌಲ್ಯಗಳು ವಚನ ಸಾಹಿತ್ಯದ ಮೂಲಕ ಇಡೀ ಜಗತ್ತಿನ ಗೌರವ ಕಾಪಾಡುತ್ತದೆ. ಭೂಮಿಯ ಮಹತ್ವ ಸಾರುತ್ತದೆ. ಲೋಕದ ಜನರ ಹಿತಚಿಂತನೆ ಮಾಡುತ್ತದೆ. ಮಾನವರ ಹಿತ ಕಾಪಾಡುವುದೇ ವಚನ ಸಾಹಿತ್ಯದ ಮುಖ್ಯ ಮೌಲ್ಯವಾಗಿದೆ. ವಚನ ಸಾಹಿತ್ಯವು ವಿಶ್ವಸಾಹಿತ್ಯಕ್ಕೆ ಮಾರ್ಗದರ್ಶಕವಾಗಿದೆ. ಇಲ್ಲಿಯ ವರೆಗೆ ಲಭ್ಯವಾದ 20 ಸಾವಿರದಷ್ಟು ವಚನಗಳು ಜಗತ್ತಿನ ಎಲ್ಲ ಜನ ಸಮುದಾಯಗಳ ಆಸ್ತಿಯಾಗಿದ್ದು ಬದುಕಿನ ಮೌಲ್ಯಗಳನ್ನು ಬಿತ್ತರಿಸಿವೆ.

ಹೀಗೆ ಎಲ್ಲ ಶರಣರು ಬಸವಣ್ಣನವರ ತತ್ವಾದರ್ಶಗಳನ್ನು ಎತ್ತಿಹಿಡಿದಿದ್ದಾರೆ. ಬಸವತತ್ತ್ವ, ಕಾಯಕತತ್ತ್ವ ಮತ್ತು ಇಷ್ಟಲಿಂಗತತ್ತ್ವಗಳೆಲ್ಲ ಬದುಕಿನ ಮೌಲ್ಯಗಳಾಗಿದ್ದು ಸಮಾನತೆಯನ್ನು ಸಾರಿದ ಶ್ರೇಷ್ಠ ತತ್ವಗಳಾಗಿವೆ.


Ø  ಅನುಭಾವಿ:ಬನವಾಸಿ ಸೋಮಶೇಖರ್,ಎಂ.ಎ.,ಬಿ.ಇಡಿ
               (ಆಕರ: ವಿವಿಧ ಮೂಲಗಳಿಂದ)

(ಬೆಂಗಳೂರಿನ, ಮಹಾಜಗದ್ಗುರು ಬಸವಣ್ಣ ಧರ್ಮಾರ್ಥ ದತ್ತಿ ಸಂಸ್ಥೆಯು ದಿನಾಂಕ:20-01-2013 ರಂದು ಉಡುಪಿ ಜಿಲ್ಲೆಯ ಹಿರಿಯಡ್ಕ-ಕೊಂಡಾಡಿ ಜಂಗಮ ಮಠದಲ್ಲಿ ನಡೆಸಿದ “53 ನೇ ತಿಂಗಳ ಬೆಳಕಿನ ಅಂಗಳದ ಅನುಭಾವ ಸಂಗಮ” ಕಾರ್ಯಕ್ರಮದಲ್ಲಿ ನೀಡಿದ ಅನುಭಾವ ನುಡಿ.)








4 comments:

  1. ನುಡಿದಂತೆ ನಡೆದವರು ಶರಣರು..... ಶರಣರ ವಚನಗಳು ವಿಶ್ವದ ಪ್ರತಿಯೊಂದು ಜನಾಂಗಕ್ಕೂ ಒಪ್ಪುವಂತದ್ದು... ಒಳ್ಳೆಯ ಲೇಖನ ಸೋಮಶೇಕರ್ ಅವರೆ...

    ReplyDelete
    Replies
    1. ನನ್ನ ಈ ಮನದಾಳದ ಭಾವನೆಗಳನ್ನು ಹರಿಬಿಡುವ ಬ್ಲಾಗಂಗಳಕ್ಕೆ ಬಂದು ಅಭಿಪ್ರಾಯಿಸುವ ಔದಾರ್ಯ ತೋರಿದ್ದಕ್ಕಾಗಿ ನಾ ಆಭಾರಿ.ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ............

      Delete
  2. ಸಮಾನತೆಯ ಮೊದಲ ಗುರುವಾದ ಬಸವಾದಿ ಶರಣರ ಔಚಿತ್ಯಪೂರ್ಣ ವಚನಗಳನ್ನೆಲ್ಲಾ ಒಟ್ಟುಗೂಡಿಸಿ, ಅವುಗಳನ್ನು ಬಿಡಿಸಿ, ಸಾರವನ್ನು ಓದುಗರೆದೆಗೆ ನುಗ್ಗಿಸಿರುವ ನಿಮ್ಮ ಬರಹ ಉತ್ಕೃಷ್ಟವಾಗಿದೆ ಸೋಮಣ್ಣ. ವಚನಗಳು ಸಾರಿಟ್ಟ ಸಾರಗಳು ನಮ್ಮ ಇಂದಿನ ಜೀವನಕ್ಕೂ ಮೌಲ್ಯಾಧಾರಿತವಾಗಿವೆ. ಶರಣರ ಪ್ರತಿಯೊಂದು ವಚನಗಳೂ ತಾರ್ಕಿಕವಾಗಿಯೇ ಬೆಳೆದು ನಿಂತವು. ವಚನಗಳು ಅನ್ಯಾಯದ, ಅಸಮಾನತೆಯ ವಿರುದ್ಧದ ಸಾತ್ವಿಕ, ಧ್ವನಿಪೂರ್ಣ ಪ್ರತಿಭಟನೆಯ ಪ್ರಸ್ತುತಿಗಳಾಗಿದ್ದವು. ಅವರು ಬೂಟಾಟಿಕೆಯ ಶರಣರನ್ನೂ ಅಣಕಿಸಿದ್ದರು! ’ಶಿವಶರಣರಿಗೆ ಶರಣೆಂಬುದ ಕರುಣಿಸೋ ಕೂಡಲ ಸಂಗಮದೇವಾ’ ಎಂಬ ಸಿ.ಅಶ್ವತ್ ಸಂಗೀತ ಸಂಯೋಜನೆಯ ಹಾಡು ಈ ಕಾರಣಕ್ಕೇ ನನಗೆ ಬಹಳಾ ಹಿಡಿಸುತ್ತದೆ. :)

    ReplyDelete
    Replies
    1. ಅರ್ಥವತ್ತಾದ ವಿಶ್ಲೇಷಣೆ ಪ್ರಸಾದು.ನಿಮ್ಮ ಮಾತಿನಿಂದ ಸಂತಸವಾಯಿತು.ಧನ್ಯವಾದಗಳು.

      Delete